ಸೊರಬ ಮತ್ತು ಸಾಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ವಪಕ್ಷೀಯರಿಂದ ಎದ್ದಿರುವ ಬಂಡಾಯದ ಬಿಸಿಯನ್ನು ಶಮನ ಮಾಡಲು ಬಿಜೆಪಿ ತನ್ನ ಅಭ್ಯರ್ಥಿಗಳ ಕ್ಷೇತ್ರ ಬದಲಾಯಿಸುವ ತಂತ್ರಕ್ಕೆ ಮುಂದಾಗಿದೆಯೇ? ಆ ಮೂಲಕ ಹರತಾಳು ಹಾಲಪ್ಪ, ಕುಮಾರ ಬಂಗಾರಪ್ಪ ಅವರನ್ನು ಕಣಕ್ಕಿಳಿಸುವ ತಂತ್ರಗಾರಿಕೆ ಬಿಜೆಪಿ ಹೈಕಮಾಂಡ್‌ನಲ್ಲಿ ನಡೆಯತ್ತಿದೆಯೇ?
ಎಚ್.ಕೆ.ಬಿ. ಸ್ವಾಮಿ
ಸೊರಬ (ಏ.03): ಸೊರಬ ಮತ್ತು ಸಾಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ವಪಕ್ಷೀಯರಿಂದ ಎದ್ದಿರುವ ಬಂಡಾಯದ ಬಿಸಿಯನ್ನು ಶಮನ ಮಾಡಲು ಬಿಜೆಪಿ ತನ್ನ ಅಭ್ಯರ್ಥಿಗಳ ಕ್ಷೇತ್ರ ಬದಲಾಯಿಸುವ ತಂತ್ರಕ್ಕೆ ಮುಂದಾಗಿದೆಯೇ? ಆ ಮೂಲಕ ಹರತಾಳು ಹಾಲಪ್ಪ, ಕುಮಾರ ಬಂಗಾರಪ್ಪ ಅವರನ್ನು ಕಣಕ್ಕಿಳಿಸುವ ತಂತ್ರಗಾರಿಕೆ ಬಿಜೆಪಿ ಹೈಕಮಾಂಡ್‌ನಲ್ಲಿ ನಡೆಯತ್ತಿದೆಯೇ? ಇಂಥ ಮಾತುಗಳು ರಾಜಕೀಯ ವಲಯದಲ್ಲಿ ಸುಳಿದಾಡುತ್ತಿವೆ. ಇತ್ತೀಚೆಗೆ ನಡೆದ ಸಭೆಯೊಂದರಲ್ಲಿ ಕುಮಾರ್ ಬಂಗಾರಪ್ಪ ಅವರನ್ನು ಗೆಲ್ಲಿಸಿ ಎಂದು ಬಹಿರಂಗವಾಗಿಯೇ ಬಿ.ಎಸ್.ಯಡಿಯೂರಪ್ಪ ತಾಕೀತು ಮಾಡಿದ್ದರು, ಸಹ ಕುಮಾರ ಬಂಗಾರಪ್ಪ ಅವರ ಅಭಿಮಾನಿ ಬಳಗದಲ್ಲಿ ಸದ್ಯದ ಮಟ್ಟಿಗೆ ರಾಜಕೀಯ ವಲಯದಲ್ಲಿ ನಡೆಯುತ್ತಿರುವ ನಿಗೂಢ ಬೆಳವಣಿಗೆಗಳು ಆತಂಕ ತಂದಿದೆ.
undefined
ಸೊರಬ ಮತ್ತು ಸಾಗರದಲ್ಲಿ ಟಿಕೆಟ್ ಆಕಾಂಕ್ಷಿಗಳಾದ ಹಾಲಿ ಶಾಸಕರ ವಿರುದ್ಧ ಬಹಿರಂಗ ಹೇಳಿಕೆಗಳು ಪಕ್ಷಕ್ಕೆ ಮುಜುಗರಕ್ಕೀಡು ಮಾಡಿದೆ. ಹಾಗಾಗಿ ಹೈಕಮಾಂಡ್ ಚಿತ್ತ ಕ್ಷೇತ್ರ ಬದಲಾವಣೆಗೆ ಕಡೆ ಹರಿದಿದೆ ಎನ್ನಲಾಗಿದೆ. 3 ವರ್ಷಗಳಿಂದ ಶಾಸಕ ಕುಮಾರ ಬಂಗಾರಪ್ಪ ವರ್ತನೆಯಿಂದ ಸಿಡಿದೆದ್ದು ನಮೋ ವೇದಿಕೆ ಹುಟ್ಟುಹಾಕಿರುವ ಮೂಲ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಇತ್ತೀಚೆಗೆ ಸೊರಬ ಮತ್ತು ಆನವಟ್ಟಿಪಟ್ಟಣದಲ್ಲಿ ಬೃಹತ್ ಬೈಕ್ ರಾರಯಲಿ ನಡೆಸಿ, ಕುಮಾರ ಬಂಗಾರಪ್ಪ ಅವರಿಗೆ ಬಿಜೆಪಿ ಟಿಕೆಟ್ ನೀಡಿದರೆ ನಮೋ ವೇದಿಕೆಯಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು ಎಂದು ಬಹಿರಂಗವಾಗಿಯೇ ಪಕ್ಷದ ವರಿಷ್ಠರಿಗೆ ಸಂದೇಶ ರವಾನಿಸಿದ್ದಾರೆ.
ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ
ಸೊರಬ ಕ್ಷೇತ್ರದ ಈ ಸಮಸ್ಯೆ ಒಂದೆಡೆಯಾದರೆ ಪಕ್ಕದ ಸಾಗರ ಕ್ಷೇತ್ರದಲ್ಲೂ ಬಂಡಾಯದ ಬೆಳವಣಿಗೆ ನಡೆಯುತ್ತಿದೆ. ಕಳೆದೆರಡು ತಿಂಗಳಿನಿಂದ ಶಾಸಕ ಹರತಾಳು ಹಾಲಪ್ಪ ಅವರು ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದ್ದಾರೆ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಕೆಲ ಮುಖಂಡರು ಆರೋಪಿಸಿ, ಅಭ್ಯರ್ಥಿ ಬದಲಾವಣೆಗೆ ಒತ್ತಾಯಿಸಿದ್ದಾರೆ. ಅಲ್ಲದೇ ಬ್ರಾಹ್ಮಣ ಸಮಾಜದವರ ಮೇಲೆ ಎಚ್.ಹಾಲಪ್ಪ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಬ್ರಾಹ್ಮಣ ಸಮಾಜ ಅವರ ವಿರುದ್ಧ ತಿರುಗಿಬಿದ್ದಿದೆ. ಈ ಕಾರಣದಿಂದ ಹಾಲಿ ಶಾಸಕರಿಗೆ ಟಿಕೆಟ್ ನೀಡಬಾರದು ಎಂದು ಹೈಕಮಾಂಡ್‌ಗೆ ಸೂಚಿಸಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.
ವಿಶೇಷವೆಂದರೆ ಕುಮಾರ ಬಂಗಾರಪ್ಪ ಮತ್ತು ಎಚ್.ಹಾಲಪ್ಪ ಅವರಿಗೆ ಪಕ್ಷ ಟಿಕೆಟ್ ನೀಡದಿರುವಂತೆ ಬಹಿರಂಗ ಹೇಳಿಕೆ ನೀಡಿ ಪಟ್ಟುಹಿಡಿದಿರುವುದು ಬಿಜೆಪಿ ಹಿರಿಯ ಧುರೀಣ ಎ.ಎಸ್. ಪದ್ಮನಾಭ ಭಟ್ ಎನ್ನುವುದು ಗಮನಾರ್ಹ. ಈ ಹಿನ್ನೆಲೆ ಸೊರಬ-ಸಾಗರ ಕ್ಷೇತ್ರಗಳ ಹಾಲಿ ಶಾಸಕರಿಗೆ ಟಿಕೆಟ್ ನೀಡುವುದೇ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ. ಅಭ್ಯರ್ಥಿ ಬದಲಾವಣೆಗೆ ಮುಂದಾದರೆ ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿಗೆ ಈಡಿಗ ಸಮುದಾಯವೇ ನಿರ್ಣಾಯಕವಾಗಲಿದ್ದು, ಕುಮಾರ ಬಂಗಾರಪ್ಪ ಮತ್ತು ಎಚ್. ಹಾಲಪ್ಪ ಈಡಿಗ ಸಮುದಾಯದ ಪ್ರಭಾವಿ ನಾಯಕರು. ಹಾಗಾಗಿ ಆ ಸಮುದಾಯವನ್ನು ಎದುರು ಹಾಕಿಕೊಳ್ಳುವ ದುಸ್ಸಾಹಸಕ್ಕೆ ಪಕ್ಷ ಮುಂದಾಗುವುದಿಲ್ಲ ಎನ್ನುವುದು ರಾಜಕೀಯ ಪರಿಣಿತರ ಲೆಕ್ಕಾಚಾರ. ಅಲ್ಲದೇ ಮುಂಬರುವ ಲೋಕಸಭಾ ಚುನಾವಣೆ ದೃಷ್ಠಿಯಿಂದ ಕುಮಾರ್ ಮತ್ತು ಹಾಲಪ್ಪ ಟಿಕೆಟ್ ನೀಡುವುದು ಅನಿವಾರ್ಯವೂ ಆಗಿದೆ.
ಕುಮಾರ ಬಂಗಾರಪ್ಪ ಬಿ.ಎಸ್. ಯಡಿಯೂರಪ್ಪ ಜೊತೆ ಹೆಚ್ಚಿನ ವಿಶ್ವಾಸ ಬೆಳೆಸಿಕೊಂಡಿದ್ದಾರೆ. ಆದರೆ, ಸಂಸದ ಬಿ.ವೈ.ರಾಘವೇಂದ್ರ ಅವರೊಂದಿಗೆ ಸಂಬಂಧ ಅಷ್ಟಕಷ್ಟೇ ಎನ್ನುವುದು ಇತ್ತೀಚಿನ ಸಭೆ-ಸಮಾರಂಭಗಳಲ್ಲಿ ಒಟ್ಟಿಗೆ ವೇದಿಕೆ ಹಂಚಿಕೊಳ್ಳದಿರುವುದೇ ಸಾಕ್ಷಿಯಾಗಿದೆ. ಬಿ.ವೈ.ರಾಘವೇಂದ್ರ ನಮೋ ವೇದಿಕೆಯ ಆಕ್ಸಿಜನ್ ಕೂಡ ಅವರೇ ಆಗಿದ್ದಾರೆ ಎನ್ನುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಹಾಗಾಗಿ ಡಾ.ಜ್ಞಾನೇಶ್ ಮತ್ತು ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜು ಎಂ. ತಲ್ಲೂರು ಅವರನ್ನು ಕುಮಾರ ಬಂಗಾರಪ್ಪ ವಿರುದ್ಧ ಛೂ ಬಿಟ್ಟಿದ್ದಾರೆ ಎನ್ನುವುದು ಪಕ್ಷದಲ್ಲಿ ನಡೆಯುತ್ತಿರುವ ಹೊಸ ಬೆಳವಣಿಗೆಯಾಗಿದೆ. ಸೊರಬ ಶಾಸಕರ ಬೆನ್ನ ಹಿಂದೆ ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಹೈಕಮಾಂಡ್ ಕುಮಾರ ಬಂಗಾರಪ್ಪ ಅವರಿಗೆ ಸ್ಪರ್ಧಿಸಲು ಕ್ಷೇತ್ರ ನೀಡುವುದು ಅನಿವಾರ್ಯ ಆಗಿದೆ.
ಶಿರಸಿಗೆ ಕುಮಾರ ಬಂಗಾರಪ್ಪ, ಸೊರಬಕ್ಕೆ ಹರತಾಳು ಹಾಲಪ್ಪ?: ಸೊರಬ-ಸಾಗರದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಂದ ವಿರೋಧವನ್ನು ಎದುರಿಸುತ್ತಿರುವ ಇಬ್ಬರು ಶಾಸಕರಿಗೆ ಕ್ಷೇತ್ರವನ್ನು ಬದಲಾವಣೆ ಮಾಡುವ ವಿಷಯ ಪಕ್ಷದ ಉನ್ನತ ಮಟ್ಟದಲ್ಲಿದೆ. ಹಾಗೇನಾದರೂ ಆದರೆ ಸೊರಬ ತಾಲೂಕಿನ ಪಕ್ಕದ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕು ಒಳಗೊಂಡ ಶಿರಸಿ ಕ್ಷೇತ್ರಕ್ಕೆ ಕುಮಾರ ಬಂಗಾರಪ್ಪ ಅವರಿಗೆ ಪಕ್ಷ ಗ್ರೀನ್ ಸಿಗ್ನಲ್ ನೀಡುವುದು ಅನಿವಾರ್ಯವಾಗುತ್ತದೆ. ಶಿರಸಿ ಕ್ಷೇತ್ರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಲಿ ಶಾಸಕರಾಗಿದ್ದು, ಮುಂದಿನ ದಿನಗಳಲ್ಲಿ ಅವರನ್ನು ಕಾರವಾರ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಂಭವ ಇರುವ ಕಾರಣ ಮತ್ತು ಕಾಂಗ್ರೆಸ್‌ನಿಂದ ಸ್ಪರ್ಧಿಸಲು ತಯಾರಿ ನಡೆಸುತ್ತಿರುವ ಕುಮಾರ ಬಂಗಾರಪ್ಪ ಅವರ ಕಡುವೈರಿ, ಸಂಬಂಧಿ ಭೀಮಣ್ಣ ನಾಯ್ಕ ಅವರನ್ನು ನಿರಾಯಾಸವಾಗಿ ಮಣಿಸಬಹುದು ಎನ್ನುವ ತಂತ್ರಗಾರಿಕೆ ಅಡಗಿದೆ.
ಕಾಂಗ್ರೆಸ್‌ನಿಂದ ಮಾತ್ರ ಬಡವರ ಏಳ್ಗೆ: ಮಾಜಿ ಸಚಿವ ಮೇಟಿ
ಸೊರಬ ಕ್ಷೇತ್ರದಲ್ಲಿ ತನ್ನದೇ ಪ್ರಭಾವ ಮತ್ತು ಅಭಿಮಾನಿ ಬಳಗವನ್ನು ಹೊಂದಿರುವ ಎಚ್.ಹಾಲಪ್ಪ ಅವರನ್ನು ಜಿಲ್ಲೆಯ ಗಡಿ ತಾಲೂಕು ಸೊರಬದಿಂದ ಕಣಕ್ಕಿಳಿಸಿದರೆ ನಮೋ ವೇದಿಕೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಸುಲಭವಾಗಿ ಹಣಿಯಬಹುದು ಎನ್ನುವ ವ್ಯೂಹವನ್ನು ಪಕ್ಷ ಹೆಣೆಯುತ್ತಿದೆ. ಸಾಗರ ಕ್ಷೇತ್ರಕ್ಕೆ ಟಿ.ಡಿ. ಮೇಘರಾಜ್, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ ಅವರ ಹೆಸರು ಮುನ್ನಲೆಯಲ್ಲಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಶಿವಮೊಗ್ಗ ಜಿಲ್ಲೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಉದ್ಭವಿಸಿರುವ ಸಮಸ್ಯೆಯನ್ನು ಕ್ಷೇತ್ರ ಬದಲಾವಣೆ ಮಾಡುವ ಮೂಲಕ ಬಗೆಹರಿಸಬಹುದು ಎಂದು ಅರಿತಿರುವ ಪಕ್ಷದ ವರಿಷ್ಠರು ಇದು ಸಾಧ್ಯ ಎಂದು ತೋರಿಸಬೇಕಿದೆ.
ಬಿ.ಎಸ್.ಯಡಿಯೂರಪ್ಪ, ಸಂಸದ ರಾಘವೇಂದ್ರ, ಬಿ.ವೈ. ವಿಜಯೇಂದ್ರ ಅವರು ಜಿಲ್ಲೆಯ ಎಲ್ಲಾ ಕ್ಷೇತ್ರಗಳನ್ನು ಗೆದ್ದು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ತಂತ್ರಗಾರಿಕೆ ಇದಾಗಿದೆ ಎನ್ನುವುದು ರಾಜಕೀಯ ಗುಸುಗುಸು ಪ್ರಾರಂಭವಾಗಿದೆ. ಇದನ್ನು ತಿಳಿದ ಕುಮಾರ ಬಂಗಾರಪ್ಪ ಅಭಿಮಾನಿ ಬಳಗದವರು ಮತ್ತು ಕೆಲವು ಮುಖಂಡರ ನಿಯೋಗ ಇತ್ತೀಚೆಗೆ ಶಿವಮೊಗ್ಗಕ್ಕೆ ತೆರಳಿ ಕುಮಾರ ಬಂಗಾರಪ್ಪ ಅವರಿಗೆ ಸೊರಬ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಟಿಕೆಟ್ ನೀಡುವಂತೆ ಬಿ.ಎಸ್. ಯಡಿಯೂರಪ್ಪನವರ ಬಳಿ ಒತ್ತಡ ತಂದಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.