
ಶಹಾಪುರ (ಏ.29): ಧಮ್ಮು, ತಾಕತ್ತು ಇದ್ದರೆ ಬಿಜೆಪಿಯನ್ನು ಸೋಲಿಸಿ ನೋಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಪಕ್ಷಗಳಿಗೆ ಸವಾಲು ಹಾಕಿದ್ದಾರೆ. ಶುಕ್ರವಾರ ಬಿಜೆಪಿ ಅಭ್ಯರ್ಥಿ ಅಮೀನ್‌ರೆಡ್ಡಿ ಪಾಟೀಲ್ ಯಾಳಗಿ ಅವರ ಪರ ಚುನಾವಣಾ ಪ್ರಚಾರಕ್ಕಾಗಿ ಶಹಾಪುರ ನಗರಕ್ಕೆ ಆಗಮಿಸಿದ್ದ ಅವರು, ಇಲ್ಲಿನ ಸಿ.ಬಿ.ಕಮಾನದಿಂದ ಬಸವೇಶ್ವರ ವೃತ್ತದವರೆಗೆ ರೋಡ್ ಶೋ ನಡೆಸಿ ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ಕೇಸರಿ ಅಲೆ : ರಾಹುಲ್ ಗಾಂಧಿ, ಖರ್ಗೆ ಸೇರಿದಂತೆ ಯಾರೇ ಬರಲಿ ಕರ್ನಾಟಕದಲ್ಲಿ ಕೇಸರಿ ಅಲೆ ತಡೆಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ಸಿಗೆ ಸವಾಲು ಹಾಕಿದ ಅವರು, ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಕಾರ್ಡ್‌ಗಳ ವಾಯಿದೆ ಮೇ 10ರ ತನಕ ಮಾತ್ರ. ನಂತರ ಅದು ಗ್ಯಾರಂಟಿಯಲ್ಲ, ಗಳಗಂಟಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಲೇವಡಿ ಮಾಡಿದರು.
ಕಾಂಗ್ರೆಸ್‌ಗೆ ನೀಡುವ ಮತ ಪಿಎಫ್‌ಐನಂತಹ ಉಗ್ರಗಾಮಿ ಸಂಘಟನೆಗಳಿಗೆ ಪ್ರೋತ್ಸಾಹ ನೀಡಿದಂತೆ: ಜೆ.ಪಿ.ನಡ್ಡಾ
ಹೇಡಿಯಲ್ಲ: ನಾನು ಇಲ್ಲೇ ಇದ್ದು ತಾಕತ್ತು ತೋರಿಸುವೆ, ಓಡಿ ಹೋಗುವ ಹೇಡಿಯಲ್ಲ ಎಂದು ಗುಡುಗಿದ ಅವರು, ಲಿಂಗಾಯಿತರ ಮುಖ್ಯಮಂತ್ರಿಗಳು ಭ್ರಷ್ಟರೆಂದು ಹೇಳುವ ಕಾಂಗ್ರೆಸ್ಸಿನವರು ತಾವು ಸಾಚಾ ಎಂದು ಹೇಳಲಿ ನೋಡೋಣ ಎಂದು ಸವಾಲೆಸೆದರು.ವೀರಶೈವ ಲಿಂಗಾಯತ ಸಮಾಜವನ್ನು ಹಿಡಿಯಲು ಹೋಗಿ ಮಣ್ಣು ಮುಕ್ಕಿದ್ದೀರಿ. ಇಷ್ಟುದಿನ ಸುಳ್ಳಿನಿಂದ, ಮೋಸದಿಂದ ಆಡಳಿತ ನಡೆಸಿದ್ದೀರಿ, ಇನ್ನು ಮುಂದೆ ನಿಮ್ಮ ಆಟ ನಡೆಯುವುದಿಲ್ಲ ಎಂದು ಕಿಡಿಕಾರಿದರು.
ನಾವು ಶ್ರದ್ಧೆ, ನಿಷ್ಠೆಯಿಂದ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡುವ ಕೆಲಸ ಮಾಡಿದ್ದೇವೆ. ಈ ಮೂಲಕ ನೊಂದ ಹಿಂದುಳಿದ, ದೀನ ದಲಿತರಿಗೆ ಶಾಶ್ವತ ಪರಿಹಾರ ಕೊಡುವ ಕೆಲಸವನ್ನು ಮಾಡಿದ್ದೇವೆ. ಇದನ್ನು ಸಹಿಸದ ಕಾಂಗ್ರೆಸ್ ಹತಾಶೆಯಿಂದ ಮೀಸಲಾತಿಯನ್ನು ವಿರೋಧಿಸುತ್ತಿದ್ದಾರೆ. ಅವರು ವಿರೋಧದಲ್ಲಿ ಯಾವುದೇ ಹುರುಳಿಲ್ಲ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಬೈದಾಗಲೆಲ್ಲ ಮೋದಿ ಶಕ್ತಿ ಹೆಚ್ಚಾಗಿದೆ: ಕಾಂಗ್ರೆಸ್‌ನವರು ಬೈದಾಗಲೆಲ್ಲ ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿ ಹೆಚ್ಚಾಗಿದೆ. ಅದರ ಪರಿಣಾಮವನ್ನು ಕಾಂಗ್ರೆಸ್ ಎದುರಿಸುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಖರ್ಗೆಯವರು ಮೋದಿ ವಿಷ ಸರ್ಪ ಎಂಬ ಪದ ಬಳಕೆಗೆ ಶುಕ್ರವಾರ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಮೋದಿ ಸಿಎಂ ಇದ್ದಾಗ ಬೈದರು, ಆಗ ಮೂರು ಬಾರಿ ಮುಖ್ಯಮಂತ್ರಿಗಳಾದರು. ಪ್ರಧಾನಿ ಆದ ಮೇಲೆ ಬೈಯುತ್ತಿದ್ದಾರೆ. ಈಗಾಗಲೇ ಎರಡು ಬಾರಿ ಪ್ರಧಾನಿ ಆಗಿದ್ದಾರೆ. ಮುಂದೆಯೂ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ ಎಂದರು.
ಖರ್ಗೆ 50 ವರ್ಷ ಸಾರ್ವಜನಿಕ ಜೀವನದಲ್ಲಿ ಇದ್ದವರು. ದೇಶದ ಪ್ರಧಾನಿಗೆ ಈ ರೀತಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಇನ್ನಾದರೂ ಗೌರವಯುತವಾಗಿ ನಡೆದುಕೊಳ್ಳುವುದನ್ನು ಕಲಿತುಕೊಳ್ಳಬೇಕು. ಇಲ್ಲವಾದರೆ, ಇಷ್ಟುವರ್ಷ ಇವರು ಮಾಡಿದ್ದಾದರೂ ಏನು ಎಂಬ ಪ್ರಶ್ನೆಯನ್ನು ಜನರೇ ಕೇಳಲಿದ್ದಾರೆ ಎಂದರು. ನೂರು ವರ್ಷದ ಸಂಸ್ಕೃತಿಯನ್ನು ಗಾಳಿಗೆ ತೂರಿರುವ ಕಾಂಗ್ರೆಸ್‌ನವರು ಇನ್ನೂ ಅಧಿಕಾರದ ಮದದಲ್ಲಿದ್ದಾರೆ. ಜನರ ಬಗ್ಗೆ ಚಿಂತಿಸದೇ ಅವರನ್ನು ವೋಟ್ ಬ್ಯಾಂಕ್‌ನಂತೆ ತಿಳಿದುಕೊಂಡು ಏನು ಮಾಡಿದರೂ ನಡೆಯುತ್ತದೆ ಎನ್ನುವ ಅಮಲಿನಲ್ಲಿದ್ದಾರೆ. ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ: ಜಮೀರ್ ಅಹಮದ್ ಖಾನ್
ಮಾಜಿ ಸಿಎಂ ಸಿದ್ದರಾಮಯ್ಯ ಸಹ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಆದರೆ, ಅವರ ಮೇಲೆಯೇ .8 ಸಾವಿರ ಕೋಟಿ ಅವ್ಯವಹಾರ ಆರೋಪವಿದೆ. ಅದಕ್ಕೆ ಉತ್ತರ ಕೊಡುವುದನ್ನು ಬಿಟ್ಟು, ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ನನ್ನದೇನಾದರೂ ಭ್ರಷ್ಟಾಚಾರದ ದಾಖಲೆಗಳಿದ್ದರೇ ಕೊಡಲಿ ಎಂದು ಸವಾಲು ಹಾಕಿದರು. ಕಾಂಗ್ರೆಸ್ ವೋಟ್ ಬ್ಯಾಂಕ್ ಛಿದ್ರವಾಗಿದೆ. ಯಾವುದು ತಮ್ಮ ವೋಟ್ ಬ್ಯಾಂಕ್ ಎಂದು ತಿಳಿದುಕೊಂಡಿದ್ದರೋ ಆ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ವೋಟ್‌ಗಳು ಆ ಪಕ್ಷ ಬಿಟ್ಟು ಹೋಗಿವೆ ಎಂದ ಅವರು, ಸಿದ್ದರಾಮಯ್ಯ ಬಿಜೆಪಿಗೆ ಪೈಪೋಟಿ ನೀಡುತ್ತಿಲ್ಲ. ಅವರು ಡಿ.ಕೆ. ಶಿವಕುಮಾರಗೆ ಪೈಪೋಟಿ ನೀಡುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.