ಕಾಂಗ್ರೆಸ್‌ಗೆ ನೀಡುವ ಮತ ಪಿಎಫ್‌ಐನಂತಹ ಉಗ್ರಗಾಮಿ ಸಂಘಟನೆಗಳಿಗೆ ಪ್ರೋತ್ಸಾಹ ನೀಡಿದಂತೆ: ಜೆ.ಪಿ.ನಡ್ಡಾ

By Kannadaprabha News  |  First Published Apr 29, 2023, 1:30 AM IST

ಜೆಡಿಎಸ್‌ಗೆ ಮತ ನೀಡಿದರೆ ಕಾಂಗ್ರೆಸ್‌ಗೆ ನೀಡಿದಂತೆ. ಕಾಂಗ್ರೆಸ್‌ಗೆ ನೀಡುವ ಮತ ಪಿಎಫ್‌ಐನಂತಹ ಉಗ್ರಗಾಮಿ ಸಂಘಟನೆಗಳಿಗೆ ಪ್ರೋತ್ಸಾಹ ನೀಡಿದಂತೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ನೀಡುವ ಮತ ದೇಶದ ಅಭಿವೃದ್ಧಿ ಮತ್ತು ಜನಹಿತಕ್ಕಾಗಿ ಸದ್ಬಳಕೆ ಆಗುತ್ತದೆ. 


ಸೊರಬ (ಏ.29): ಜೆಡಿಎಸ್‌ಗೆ ಮತ ನೀಡಿದರೆ ಕಾಂಗ್ರೆಸ್‌ಗೆ ನೀಡಿದಂತೆ. ಕಾಂಗ್ರೆಸ್‌ಗೆ ನೀಡುವ ಮತ ಪಿಎಫ್‌ಐನಂತಹ ಉಗ್ರಗಾಮಿ ಸಂಘಟನೆಗಳಿಗೆ ಪ್ರೋತ್ಸಾಹ ನೀಡಿದಂತೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ನೀಡುವ ಮತ ದೇಶದ ಅಭಿವೃದ್ಧಿ ಮತ್ತು ಜನಹಿತಕ್ಕಾಗಿ ಸದ್ಬಳಕೆ ಆಗುತ್ತದೆ. ಆದ್ದರಿಂದ ಮತದಾರರು ತಾವು ನೀಡುವ ಮತವನ್ನು ಪೂರ್ವಾಪರ ಯೋಚಿಸಿ ನೀಡಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು. ಪಟ್ಟಣದ ಬಿಜೆಪಿ ಕಚೇರಿ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ವಿಧಾನಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಉಗ್ರಗಾಮಿ ಆರೋಪದಲ್ಲಿ ಬಂಧಿಸಲ್ಪಟ್ಟಪಿಎಫ್‌ಐ ಉಗ್ರ ಸಂಘಟನೆಯ 700ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಮುಕ್ತ ಆಗಿಸುವ ಮೂಲಕ ರಾಜ್ಯದಲ್ಲಿ ಅರಾಜಕತೆ ಸೃಷ್ಠಿ ಮಾಡಿದ್ದರು. ಇಂಥವರಿಂದ ದೇಶ ಮತ್ತು ರಾಜ್ಯ ಪ್ರಗತಿ ಹೊಂದಲು ಸಾಧ್ಯವಿಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜನಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಕರ್ನಾಟಕ ಕಾಂಗ್ರೆಸ್‌ಮುಕ್ತ ರಾಜ್ಯವಾಗಬೇಕು. ಇದಕ್ಕೆ ಮೋದಿ ಅವರನ್ನು ಬೆಂಬಲಿಸುವಂತೆ ಕರೆ ನೀಡಿದರು. ಭಾರತದ ಅಭಿವೃದ್ಧಿಯಲ್ಲಿ ಪ್ರಪಂಚದಲ್ಲಿಯೇ 5ನೇ ಸ್ಥಾನದಲ್ಲಿದ್ದು, 200 ವರ್ಷ ನಮ್ಮನ್ನಾಳಿದ ಬ್ರಿಟಿಷರಿಗಿಂತ ಮುಂದಿದ್ದೇವೆ. ಆಟೋಮೊಬೈಲ್‌ ಕ್ಷೇತ್ರದಲ್ಲಿ ಜಪಾನ್‌ ದೇಶವನ್ನು ಹಿಂದಿಕ್ಕಿ 3ನೇ ಸ್ಥಾನದಲ್ಲಿದ್ದೇವೆ. 

Tap to resize

Latest Videos

ಜೆಡಿಎಸ್‌-ಬಿಜೆಪಿ ಒಂದೇ ನಾಣ್ಯದ ಎರಡು ಮುಖ: ಚಲುವರಾಯಸ್ವಾಮಿ

ಬಹುರಾಷ್ಟ್ರೀಯ ಕಂಪನಿಗಳ ಹೂಡಿಕೆಯಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ. 29 ಸಾವಿರ ಕಿ.ಮೀ. ರಸ್ತೆ ನಿರ್ಮಾಣ ಮೊದಲಾದ ಅಭಿವೃದ್ಧಿ ಕಾರ್ಯಗಳು ಸಾಗಿದ್ದು, ಶಿವಮೊಗ್ಗದಲ್ಲಿ ನಿರ್ಮಾಣ ಆಗಿರುವ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ಹಿಂದೆ ಸಿದ್ದರಾಮಯ್ಯ ತಡೆಯೊಡ್ಡಿದ್ದರು. ಅನಂತರ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರ ವಿಮಾನ ನಿಲ್ದಾಣವನ್ನು ಪ್ರಾರಂಭಿಸುವುದರ ಜೊತೆಗೆ ರಾಜ್ಯದಲ್ಲಿ ಏಳು ವಿಮಾನ ನಿಲ್ದಾಣಗಳ ಉದ್ಘಾಟನೆ ನೆರವೇರಿಸಿದ್ದಾರೆ ಎಂದರು. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ .5 ಸಾವಿರ ಕೋಟಿ ಅನುದಾನ ನೀಡುವ ಮೂಲಕ ರಾಜ್ಯದ ನೀರಾವರಿ ಯೋಜನೆಗೆ ಆದ್ಯತೆ ನೀಡಿದೆ. ಡಬಲ್‌ ಎಂಜಿನ್‌ ಸರ್ಕಾರ ಅಸ್ತಿತ್ವದಲ್ಲಿದ್ದರೆ, ದೇಶ ಸಮಗ್ರ ಅಭಿವೃದ್ಧಿ ಆಗಬಲ್ಲದು ಎನ್ನುವುದನ್ನು ಬಿಜೆಪಿ ಸಾಬೀತುಪಡಿಸಿದೆ ಎಂದರು.

ಕೋಟ್ಯಂತರ ರು. ಭ್ರಷ್ಟಾ​ಚಾ​ರ: ಎಸ್‌.ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌ ಅವರಂಥ ಲಿಂಗಾಯತ ನಾಯಕರನ್ನು ನಿಕೃಷ್ಟವಾಗಿ ಕಂಡಿರುವ ಕಾಂಗ್ರೆಸ್‌ ಇಂದು ಲಿಂಗಾಯತ ಜಪ ಮಾಡುತ್ತಿದೆ. ಲಿಂಗಾಯತ, ಪರಿಶಿಷ್ಟಹಾಗೂ ಪರಿಶಿಷ್ಟಜಾತಿಗೆ ಹೆಚ್ಚಿಸಿರುವ ಮೀಸಲಾತಿಯನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರು ತಾವು ಅಧಿಕಾರಕ್ಕೆ ಬಂದರೆ ಮೀಸಲಾತಿ ವಾಪಸು ಪಡೆಯುವುದಾಗಿ ಹೇಳಿದ್ದಾರೆ. ಇದು ರಾಜನೀತಿಗೆ ವಿರೋಧಿಯಾಗಿದ್ದು, ಕಾಂಗ್ರೆಸ್‌ ನಾಯಕರಿಗೆ ಜನಹಿತಕ್ಕಿಂತ ಭ್ರಷ್ಟಾಚಾರವೇ ಮುಖ್ಯವಾಗಿದೆ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಬೃಹತ್‌ ಬೆಂಗಳೂರು ಪ್ರಾಧಿಕಾರ ಹಾಗೂ ಕೊಳಚೆ ನಿಗಮ ಮಂಡಳಿಯಲ್ಲಿ ಕೋಟ್ಯಂತರ ರು. ಭ್ರಷ್ಟಾಚಾರ ನಡೆದಿದೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ಅಭ್ಯರ್ಥಿ ಕುಮಾರ ಬಂಗಾರಪ್ಪ ಮಾತನಾಡಿ, ಸಾಮಾನ್ಯ ಜನರ ಬದುಕನ್ನು ಉನ್ನತಮಟ್ಟದಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರಕ್ಕೆ ಮಾತ್ರ ಸಾಧ್ಯವಾಗಿದ್ದು, ಈ ಬಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. .900 ಕೋಟಿ ವೆಚ್ಚದಲ್ಲಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗಿದ್ದು, ಮುಂದಿನ 5 ವರ್ಷಗಳಲ್ಲಿ .5 ಸಾವಿರ ಕೋಟಿ ಅನುದಾನದಲ್ಲಿ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗುವುದು ಎಂದು ತಿಳಿಸಿದರು.

ಎಲೆಕ್ಷನ್‌ ಬಂದರೆ ಕಾಂಗ್ರೆಸ್‌ ಕಲೆಕ್ಷನ್‌: ಇಲ್ಲಿನ ಕಾಂಗ್ರೆಸ್‌ ಅಭ್ಯರ್ಥಿ ತಾಲೂಕಿನ ಬಗರ್‌ಹುಕುಂ ಸಾಗುವಳಿದಾರರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮತ್ತೆ ಬಗರ್‌ಹುಕುಂ ಹಕ್ಕುಪತ್ರ ನೀಡಲು ಅವ್ಯವಹಾರ ನಡೆಸಲು ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ. ಎಲೆಕ್ಷನ್‌ ಬಂದರೆ ಸಾಕು ಕಲೆಕ್ಷನ್‌ ಮಾಡಿಕೊಳ್ಳಲು ಮುಂದಾಗುವ ಮಧು ಬಂಗಾರಪ್ಪ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಎಂದು ಪರೋಕ್ಷವಾಗಿ ಹೆಸರು ಹೇಳದೆ ವ್ಯಂಗ್ಯವಾಡಿದರು. ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಉತ್ತರಾಖಂಡದಲ್ಲಿ ನಕ್ಸಲ್‌ರ ಅಟ್ಟಹಾಸಕ್ಕೆ ಪೊಲೀಸರು ದುರ್ಮರಣ ಹೊಂದಿದ್ದಾರೆ. ಶಾಂತಿ, ಸುವ್ಯವಸ್ಥೆಗೆ ಹಾಗೂ ಅಭಿವೃದ್ಧಿಗೆ ಡಬಲ್‌ ಎಂಜಿನ್‌ ಸರ್ಕಾರ ಅಧಿಕಾರಕ್ಕೆ ಬರುವುದು ಅವಶ್ಯಕತೆ ಇದೆ. 

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 150 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಪ್ರಪಂಚದಲ್ಲಿ 20 ಕೋಟಿಗೂ ಅಧಿಕ ಸದಸ್ಯರನ್ನು ಹೊಂದಿರುವ ಬಿಜೆಪಿ ಮೊದಲನೇ ಸ್ಥಾನದಲ್ಲಿದ್ದು, ಪ್ರಧಾನಿ ಮೋದಿ ಅವರನ್ನು ಪ್ರಪಂಚವೇ ಹಾಡಿ ಹೊಗಳುತ್ತಿದೆ ಎಂದರು. ತಾಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ್‌ ತಲಕಾಲಕೊಪ್ಪ, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ, ವಿಧಾನ ಪರಿಷತ್ತು ಸದಸ್ಯ ಡಿ.ಎಸ್‌. ಅರುಣ್‌, ಕುಂದನ್‌ ಪರಿವಾರ್‌, ಮಂಡಲ ಅಧ್ಯಕ್ಷೆ ಶರಾವತಿ ರಾವ್‌, ಸುಧಾ ಶಿವಪ್ರಸಾದ್‌, ಪ್ರಧಾನ ಕಾರ್ಯದರ್ಶಿ ಶಿವಕುಮಾರ್‌ ಕಡಸೂರು, ಎಂ.ಡಿ.ಉಮೇಶ್‌, ಮಲ್ಲಿಕಾರ್ಜುನ ವೃತ್ತಿಕೊಪ್ಪ, ದೇವೇಂದ್ರಪ್ಪ ಚನ್ನಾಪುರ, ಅಶೋಕ ಶೇಟ್‌, ರಾಜು ಕೆಂಚಿಕೊಪ್ಪ,ಈಶ್ವರ ಚನ್ನಪಟ್ಟಣ, ಗುರುಕುಮಾರ್‌ ಪಾಟೀಲ್‌ ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!