Latest Videos

ಸೇಡಂ ಕ್ಷೇತ್ರಕ್ಕೆ ಹೊಸ ಮುಖ ಹುಡುಕುತ್ತಿರುವ ಬಿಜೆಪಿ: ಹಾಲಿ ಶಾಸಕ ತೇಲ್ಕೂರಗೆ ಸಿಗುತ್ತಾ ಶಾಕ್?

By Govindaraj SFirst Published Apr 16, 2023, 10:32 PM IST
Highlights

ಕಲ್ಬುರ್ಗಿ ಜಿಲ್ಲೆಯ ಸೇಡಂ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಟಿಕೆಟ್ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಬಿಜೆಪಿಯ ಹಾಲಿ ಶಾಸಕ ರಾಜ್‌ಕುಮಾರ್ ಪಾಟೀಲ್ ತೇಲ್ಕೂರ ಇಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. 

ಕಲಬುರಗಿ (ಏ.16): ಕಲ್ಬುರ್ಗಿ ಜಿಲ್ಲೆಯ ಸೇಡಂ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಟಿಕೆಟ್ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಬಿಜೆಪಿಯ ಹಾಲಿ ಶಾಸಕ ರಾಜ್‌ಕುಮಾರ್ ಪಾಟೀಲ್ ತೇಲ್ಕೂರ ಇಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಬಾರಿ ಅವರಿಗೇ ಟಿಕೆಟ್ ಸಿಗುವುದು ಬಹುತೇಕ ಪಕ್ಕ ಎನ್ನಲಾಗಿತ್ತು. ಇದೇ ನಿರೀಕ್ಷೆಯಲ್ಲಿ ರಾಜಕುಮಾರ್ ಪಾಟೀಲ್ ತೇಲ್ಕೂರು ಮತ್ತು ಕುಟುಂಬ ವರ್ಗ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಸಹ ಶುರು ಮಾಡಿದ್ದರು. ಆದರೆ ಬಿಜೆಪಿಯ ಮೊದಲ ಎರಡು ಪಟ್ಟಿಗಳಲ್ಲಿ ಸೇಡಂ ಕ್ಷೇತ್ರದ ಅಭ್ಯರ್ಥಿ ಘೋಷಿಸದಿರುವುದು ರಾಜಕುಮಾರ್ ಪಾಟೀಲ್ ತೇಲ್ಕೂರ ಅವರ ನಿದ್ದೆಗೆಡಿಸಿದೆ. 

ಪತ್ನಿ ಹೆಸರೂ ಕೇಳಿ ಬಂದಿತ್ತು: ಈ ನಡುವೆ ರಾಜಕುಮಾರ ಪಾಟೀಲ್ ತೆಲ್ಕೂರನ್ನು ಈ ಬಾರಿ ಚುನಾವಣಾ ಕಣದಿಂದ ಕೈ ಬಿಟ್ಟು, ಅವರ ಪತ್ನಿ ಸಂತೋಷ್ ರಾಣಿ ಅವರನ್ನ ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ ಎನ್ನಲಾಗಿತ್ತು. ಆದರೆ ಇದೀಗ ಆ ಭರವಸೆಗಳು ಕೂಡ ಕ್ಷೀಣಿಸುತ್ತಿವೆ. 

ಗೆಲ್ಲಿಸಿದರೇ ತಲೆ ಎತ್ತಿ ನಡೆಯುವ ಹಾಗೆ ನೋಡಿಕೊಳ್ಳುತ್ತೇನೆ: ರಮೇಶ ಕತ್ತಿ

ಇದ್ದ ಮೂವರ ಪೈಕಿ ವರಷ್ಠರ ಮನ ಕದ್ದವರಾರು?: ಸೇಡಂ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಮೂವರ ಹೆಸರು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಹಾಲಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಹೆಸರು ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು. ಆದರೂ ಬಿಜೆಪಿಯ ಎರಡೂ ಪಟ್ಟಿಗಳಲ್ಲಿ ರಾಜಕುಮಾರ್ ಪಾಟೀಲ್ ತೇಲ್ಕೂರ್ ಹೆಸರು ಬಂದಿಲ್ಲ. ಹಾಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಲಾದ ಮೂವರು ಹೆಸರುಗಳಲ್ಲಿ ಎರಡನೇ ಸ್ಥಾನದಲ್ಲಿರುವ ಶರಣಪ್ಪ ತಳವಾರ ಹೆಸರು ಮುನ್ನಲೆಗೆ ಬಂದಿದೆ. 

ಕೋಲಿ ಸಮುದಾಯಕ್ಕೆ ಮಣೆ: ಕೃಷ್ಣಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿರುವ ಶರಣಪ್ಪ ತಳವಾರ್, ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡವರು. ಇವರ ಪತ್ನಿ ಜಿಲ್ಲಾ ಪಂಚಾಯತ್ ಸದಸ್ಯರಾಗಿಯೂ ಕೆಲಸ ಮಾಡಿರುವ ಅನುಭವ ಹೊಂದಿದವರು. ಮೇಲಾಗಿ ಈ ಭಾಗದಲ್ಲಿನ ಬಲಿಷ್ಠ ಕೋಲಿ ಕಬ್ಬಲಿಗ ಸಮಾಜದ ಮುಖಂಡರು. ಹಾಗಾಗಿ ಈ ಬಾರಿ ಶರಣಪ್ಪ ತಳವಾರ್ ಗೆ ಟಿಕೆಟ್ ಕೊಡಲು ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. 

ತಳವಾರ ಅತ್ತ ಒಲವಿಗೆ ಕಾರಣ: ಶರಣಪ್ಪ ತಳವಾರ್ ಅವರ ಬಗ್ಗೆ ಬಿಜೆಪಿ ವರಿಷ್ಠರು ಒಲವು ತೋರಿಸಲು ಪ್ರಭಲ ಕಾರಣವೂ ಇದೆ. ಈ ಭಾಗದಲ್ಲಿ ಬಲಿಷ್ಠ ಸಮುದಾಯವಾಗಿರುವ ಕೂಲಿ ಕಬ್ಬಲಿಗ ಸಮುದಾಯದ ಮುಖಂಡರು ಶರಣಪ್ಪ ತಳವಾರ್. ಬಾಬುರಾವ್ ಚಿಂಚನ್ಸೂರ್ ಬಿಜೆಪಿಗೆ ಕೈ ಕೊಟ್ಟು ಕಾಂಗ್ರೆಸ್ ಸೇರಿದ ನಂತರ ಬಿಜೆಪಿಯಲ್ಲಿ ಕೋಲಿ ಕಬ್ಬಲಿಗ ಸಮುದಾಯದ ನಾಯಕರ ಅವಶ್ಯಕತೆ ಇದೆ. ಬೇರೆ ಪಕ್ಷದಿಂದ ಈ ಸಮುದಾಯದ ಮುಖಂಡರನ್ನು ಸೆಳೆಯುವ ಬದಲು ತಮ್ಮ ಪಕ್ಷದಲ್ಲಿಯೇ ಇರುವ ಮುಖಂಡರನ್ನು ಬೆಳೆಸಲು ಬಿಜೆಪಿ ತಂತ್ರ ರೂಪಿಸುತ್ತಿದೆ. ಇದರಿಂದ ಪ್ರಸಕ್ತ ವಿಧಾನಸಭಾ ಚುನಾವಣೆಯ ಎರಡು ಮೂರು ಕ್ಷೇತ್ರಗಳಲ್ಲಿ ಕಬ್ಬಲಿಗ ಸಮುದಾಯದ ಮತ ಗಳಿಸಲು ಸಹಾಯವಾಗುತ್ತದೆ. ಅಲ್ಲದೆ ಮುಂಬರುವ ಲೋಕಸಭಾ ಕ್ಷೇತ್ರದಲ್ಲಿಯೂ ಇದರಿಂದ ಬಿಜೆಪಿಗೆ ಪೂರಕ ಪರಿಣಾಮ ಆಗಲಿದೆ ಎನ್ನುವ ಚಿಂತನೆ ಬಿಜೆಪಿ ನಾಯಕರು ನಡೆಸುತ್ತಿದ್ದಾರೆ. 

ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ ಜನತೆ ರೋಸಿ ಹೋಗಿದೆ: ಎಚ್.ಡಿ.ಕುಮಾರಸ್ವಾಮಿ

ಲಭ್ಯವಾಗಿರುವ ಮಾಹಿತಿಯ ಪ್ರಕಾರ ಇಂದು ರಾತ್ರಿ ಅಥವಾ ನಾಳೆ ಬಿಜೆಪಿಯ ಮೂರನೇ ಪಟ್ಟಿ ಬಿಡುಗಡೆಯಾಗಲಿದ್ದು ಅದರಲ್ಲಿ ಸೇಡಂ ಮತಕ್ಷೇತ್ರದಿಂದ ಶರಣಪ್ಪ ತಳವಾರ್ ಹೆಸರು ಪ್ರಕಟವಾಗುವ ಸಾಧ್ಯತೆ ದಟ್ಟವಾಗಿದೆ. ಅದಾಗ್ಯೂ ಇನ್ನೊಂದೆಡೆ ರಾಜಕುಮಾರ್ ಪಾಟೀಲ್ ತೆಲ್ಕೂರ್ ಸಹ ಟಿಕೆಟ್ ಗಾಗಿ ಪ್ರಬಲ ಲಾಭಿ ನಡೆಸುತ್ತಿದ್ದಾರೆ. ಹಾಗಾಗಿ ಈ ಬಾರಿ ಸೇಡಂ ಬಿಜೆಪಿ ಟಿಕೆಟ್ ಯಾರ ಪಾಲಾಗಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ. ಕಲ್ಬುರ್ಗಿ ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರಗಳ ಪೈಕಿ ಎಂಟು ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. 

ಸೇಡಂ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹೆಸರು ಮಾತ್ರ ಬಾಕಿ ಉಳಿದಿದ್ದು, ಇಂದು ರಾತ್ರಿ ಅಥವಾ ನಾಳೆಯೊಳಗೆ  ಮೂರನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!