ಕೊರೋನಾದಿಂದ ತಾಲೂಕಿನ ಜನತೆ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದ ಸಂದರ್ಭದಲ್ಲಿ ಜನರ ಬಳಿಗೆ ಬಾರದ ಕಾಂಗ್ರೆಸ್ ಅಭ್ಯರ್ಥಿ ಚುನಾವಣಾ ಕಾಲದಲ್ಲಿ ಯಾವ ಮುಖ ಹೊತ್ತು ಮತ ಕೇಳುತ್ತಾರೆ ಎಂದು ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಪ್ರಶ್ನಿಸಿದರು.
ಸೊರಬ (ಏ.15): ಕೊರೋನಾದಿಂದ ತಾಲೂಕಿನ ಜನತೆ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದ ಸಂದರ್ಭದಲ್ಲಿ ಜನರ ಬಳಿಗೆ ಬಾರದ ಕಾಂಗ್ರೆಸ್ ಅಭ್ಯರ್ಥಿ ಚುನಾವಣಾ ಕಾಲದಲ್ಲಿ ಯಾವ ಮುಖ ಹೊತ್ತು ಮತ ಕೇಳುತ್ತಾರೆ ಎಂದು ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಪ್ರಶ್ನಿಸಿದರು. ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ನಾಮಪತ್ರ ಸಲ್ಲಿಕೆ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಸಂದರ್ಭ ಕಮಿಷನ್ ಆಸೆಗೆ ಬಂದ ಕಾಂಗ್ರೆಸ್ಸಿಗರು ಈಗಾಗಲೇ ತಾಲೂಕಿನಲ್ಲಿ ಗೆಲುವು ಸಾಧಿಸಿದ್ದೇವೆ ಎಂದು ಬೀಗುತ್ತಾ ಹಗಲುಗನಸು ಕಾಣುತ್ತಿದ್ದಾರೆ. ಕಾಂಗ್ರೆಸ್‌ನವರು ಚುನಾವಣಾ ಕಾಲದ ಅತಿಥಿಗಳು. ಅವರಿಗೆ ಅಭಿವೃದ್ಧಿ ಎನ್ನುವ ಗಂಧಗಾಳಿ ತಿಳಿದಿಲ್ಲ. ಮೇ 13ರಂದು ಮತದಾರರು ಯಾರ ಗೆಲುವು ಎಂಬುದನ್ನು ನಿರ್ಧರಿಸಲಿದ್ದಾರೆ ಎಂದು ಹೇಳಿದರು.
ಏ.18ರಿಂದ ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದು, ಕಳೆದ ಅವಧಿಯಲ್ಲಿ ಹೇಗೆ ಅಭಿವೃದ್ಧಿಪರ ಮತ ನೀಡಿದ್ದೀರಿ. ಹಾಗೆಯೇ ಈ ಬಾರಿಯೂ ತಮ್ಮನ್ನು ಬೆಂಬಲಿಸುವಂತೆ ಶಾಸಕ ಕುಮಾರ್ ಬಂಗಾರಪ್ಪ ಕೋರಿದರು. ಸೊರಬ ಚುನಾವಣಾ ಉಸ್ತುವಾರಿ ಪ್ರಭಾರಿ ವಿಧಾನ ಪರಿಷತ್ತು ಸದಸ್ಯ ಡಿ.ಎಸ್.ಅರುಣ್, ತಾಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ ತಲಕಾಲಕೊಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್ ಕಡಸೂರು, ಮಲ್ಲಿಕಾರ್ಜುನ್, ದೇವೇಂದ್ರಪ್ಪ, ಈಶ್ವರ ಚನ್ನಪಟ್ಟಣ, ರಾಜು ಕೆಂಚಿಕೊಪ್ಪ, ಪರಶುರಾಮ, ಪ್ರಸನ್ನಕುಮಾರ, ನಂದೀಶ್ ಕಕ್ಕರಿಸಿ, ಪರಮೇಶ್ವರ ಮಣ್ಣತ್ತಿ ಇದ್ದರು.
ವಿರೋಧದ ಅಲೆ ಮಧ್ಯೆಯೂ ಕುಮಾರ್ ಬಂಗಾರಪ್ಪಗೆ ಬಿಜೆಪಿ ಟಿಕೆಟ್: ನಮೋ ವೇದಿಕೆ ಆಶಯಕ್ಕೆ ಹಿನ್ನಡೆ
ಕುಮಾರ್ ಬಂಗಾರಪ್ಪ ಸೋಲು ನಮೋ ವೇದಿಕೆ ಗುರಿ: ಕುಮಾರ ಬಂಗಾರಪ್ಪ ಅವರನ್ನು ವಿರೋಧಿಸಿ, ಸೋಲಿಸುವುದು ನಮ್ಮ ಅಚಲ ನಿರ್ಧಾರವಾಗಿದೆ. ಸಂಧಾನಕ್ಕೆ ಯಾರೇ ಬಂದರೂ ಮಣಿಯುವುದಿಲ್ಲ. ಹಾಗೆಯೇ ಯಾವುದೇ ಪಕ್ಷದೊಂದಿಗೆ ಮೈತ್ರಿಗೆ ಮುಂದಾಗುವುದಿಲ್ಲ. ಇದು ನಮ್ಮ ಕೊನೆಯ ನಿರ್ಧಾರವಾಗಿದೆ. ಭ್ರಷ್ಟಮತ್ತು ದುರಹಂಕಾರಿ ಶಾಸಕರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ನಮೋ ವೇದಿಕೆ ಅಧ್ಯಕ್ಷ ಪಾಣಿ ರಾಜಪ್ಪ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ನಮೋ ವೇದಿಕೆ ಕಾರ್ಯಾಲಯದಲ್ಲಿ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಿ, ಅನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ ಐದು ವರ್ಷಗಳಿಂದ ಶಾಸಕ ಕುಮಾರ್ ಬಂಗಾರಪ್ಪ ಅವರ ಗೆಲುವಿಗಾಗಿ ಶ್ರಮಿಸಿ ಅಭೂತಪೂರ್ವ ಸೇವೆ ಸಲ್ಲಿಸಿದ ಮೂಲ ಕಾರ್ಯಕರ್ತರನ್ನು ಕಡೆಗಣಿಸಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತ ಬಂದಿದ್ದೇ ನಮೋ ವೇದಿಕೆ ಹುಟ್ಟಿಕೊಳ್ಳಲು ಕಾರಣವಾಯಿತು. ಇದಕ್ಕೆ ಕುಮಾರ್ ಬಂಗಾರಪ್ಪ ಅವರ ವರ್ತನೆ ನೇರ ಕಾರಣವಾಗಿದೆ ಎಂದರು. ಬಿಜೆಪಿ ತತ್ವ- ಸಿದ್ಧಾಂತಗಳಿಗೆ ಅನುಗುಣವಾಗಿ ಸ್ವಾಭಿಮಾನಿ ಕಾರ್ಯಕರ್ತರ ಪರಿಶ್ರಮದಿಂದ ಸಂಘಟನೆಗೊಂಡ ನಮೋ ವೇದಿಕೆ ವತಿಯಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು. ನಮ್ಮ ಶಕ್ತಿ ಏನು ಎಂಬುದನ್ನು ಚುನಾವಣೆಯಲ್ಲಿ ತೋರಿಸಲಿದ್ದೇವೆ. ಇನ್ನೆರಡು ದಿನಗಳಲ್ಲಿ ನಮೋ ವೇದಿಕೆಯ ಅಭ್ಯರ್ಥಿಯನ್ನು ಘೋಷಿಸಲಾಗುವುದು ಎಂದರು.
ಜನವಿರೋಧಿ ಶಾಸಕನಿಗೆ ಬಿಜೆಪಿ ಟಿಕೆಟ್: ಮಧು ಬಂಗಾರಪ್ಪ
ನಮೋ ವೇದಿಕೆ ಕಾರ್ಯದರ್ಶಿ ದಿವಾಕರ ಭಾವೆ, ಜಿ.ಪಂ. ಮಾಜಿ ಸದಸ್ಯ ರಾಜಶೇಖರ್ ಗಾಳಿಪುರ, ಎ.ಎಲ್. ಅರವಿಂದ್, ಗಜಾನನ ರಾವ್, ಅರುಣ್‌ಕುಮಾರ ಪುಟ್ಟನಹಳ್ಳಿ, ನಿರಂಜನ ಕುಪ್ಪಗಡ್ಡೆ, ಗುರುಪ್ರಸನ್ನ ಗೌಡ, ಮಲ್ಲಿಕಾರ್ಜುನ ಗುತ್ತೇರ್, ಆನಂದಪ್ಪ, ವಿಜೇಂದ್ರಕುಮಾರ್ ತಲಗುಂದ, ಡಿ.ಶಿವಯೋಗಿ, ಕುಸುಮಾ ಪಾಟೀಲ್, ಎಂ.ಕೆ. ಯೋಗೇಶ್, ಮಂಜಣ್ಣ ಮೊದಲಾದವರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.