ಚುನಾ​ವ​ಣೆ​ಯಲ್ಲಿ ಐದನೇ ಬಾರಿಗೆ ಸಹೋ​ದ​ರರ ಸವಾ​ಲ್‌: ಕುಮಾರ್‌ ಬಂಗಾರಪ್ಪ ನಾಮಪತ್ರ

By Kannadaprabha News  |  First Published Apr 18, 2023, 2:40 AM IST

ಕುಮಾರ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಐದನೇ ಬಾರಿಗೆ ಪರಸ್ಪರ ಎದುರಾಳಿಗಳಾಗಿ ಸ್ಪರ್ಧೆ ಮಾಡಲು ಇಂದು ಸಹೋದರರು ಒಂದೇ ದಿನ ನಾಮಪತ್ರ ಸಲ್ಲಿಸುತ್ತಿರುವುದು ವಿಶೇಷ.
 


ಸೊರಬ (ಏ.18): ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರ ಪುತ್ರದ್ವಯರ ಜಿದ್ದಾಜಿದ್ದಿನ ಸೊರಬ ವಿಧಾನಸಭಾ ಕ್ಷೇತ್ರದ ರಾಜಕೀಯ ಅಖಾಡ ಸಜ್ಜುಗೊಂಡಿದ್ದು, ಕುಮಾರ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಐದನೇ ಬಾರಿಗೆ ಪರಸ್ಪರ ಎದುರಾಳಿಗಳಾಗಿ ಸ್ಪರ್ಧೆ ಮಾಡಲು ಇಂದು ಸಹೋದರರು ಒಂದೇ ದಿನ ನಾಮಪತ್ರ ಸಲ್ಲಿಸುತ್ತಿರುವುದು ವಿಶೇಷವಾಗಿದ್ದು, ಈ ಕಾರಣದಿಂದ ಸೊರಬ ಪಟ್ಟಣದಲ್ಲಿ ಜನಸಾಗರವೇ ನೆರೆದಿತ್ತು.

ಸೋಮವಾರ ಬೆಳಗ್ಗೆ ಚಂದ್ರಗುತ್ತಿ ಶ್ರೀ ರೇಣುಕಾಂಬೆ, ಮಂಚಿ ಶ್ರೀ ಆಂಜನೇಯಸ್ವಾಮಿ, ಕೋಣನಮನೆ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಬೆಳಗ್ಗೆ 11 ಗಂಟೆ ಸುಮಾರಿಗೆ ಕುಮಾರ ಬಂಗಾರಪ್ಪ ಪಟ್ಟಣದ ಅಧಿದೇವತೆ ಶ್ರೀ ರಂಗನಾಥಸ್ವಾಮಿಗೆ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿ, ಸಹಸ್ರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಬಿಜೆಪಿ ಕಾರ್ಯಕರ್ತರು, ಮುಖಂಡರು ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ಮೆರವಣಿಗೆ ಮೂಲಕ ಬಿಜೆಪಿಯಿಂದ ಉಮೇದುವಾರಿಕೆ ಸಲ್ಲಿಸಲು ಸಜ್ಜುಗೊಂಡರು.

Latest Videos

undefined

ಕನ​ಕ​ಪುರ ಕ್ಷೇತ್ರದವರ ಬದ​ಲಾ​ವ​ಣೆ ಆಸೆ ನನ​ಸಾ​ಗ​ಲಿದೆ: ಸಚಿ​ವ ಆರ್‌.ಅಶೋಕ್‌

ಜನರ ವಿಶ್ವಾ​ಸಕ್ಕೆ ಚ್ಯುತಿ ತಂದಿ​ಲ್ಲ: ಮೆರವಣಿಗೆ ಮೊದಲು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕುಮಾರ ಬಂಗಾರಪ್ಪ, ಕಳೆದ ಐದು ವರ್ಷಗಳ ಅವಧಿಯಲ್ಲಿ ತಾಲೂಕಿನಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಿದ್ದೇನೆ. ಜನತೆ ಇನ್ನಷ್ಟುಅಭಿವೃದ್ಧಿಯ ದಾಹದಲ್ಲಿದ್ದಾರೆ. ಕಳೆದ ಬಾರಿ ಗೆಲುವು ತಂದುಕೊಟ್ಟಮತದಾರರಿಗೆ ಯಾವುದೇ ರೀತಿಯಿಂದಲೂ ಮೋಸ ಮಾಡಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಸಂಸದ ಬಿ.ವೈ. ರಾಘವೇಂದ್ರ ಮೂಲಕ ತಾಲೂಕಿಗೆ ಸುಮಾರು .2 ಸಾವಿರ ಕೋಟಿಯಷ್ಟುಅನುದಾನವನ್ನು ಮಂಜೂರು ಮಾಡಿಸಿಕೊಂಡು ನೀರಾವರಿ ಯೋಜನೆ, ರಸ್ತೆ, ಚರಂಡಿ, ವಿದ್ಯುತ್‌ನಂತಹ ಮೂಲಭೂತ ಸಮಸ್ಯೆಗಳಿಗೆ ವಿನಿಯೋಗಿಸಿ, ಜನರ ವಿಶ್ವಾಸಕ್ಕೆ ಚ್ಯುತಿತಂದಿಲ್ಲ ಎಂದರು.

ಮುಂದಿನ ದಿನಗಳಲ್ಲಿಯೂ 25 ವರ್ಷಗಳ ಮುಂದಾಯೋಚನೆ ಇಟ್ಟುಕೊಂಡು ತಾಲೂಕಿನ ಅಭಿವೃದ್ಧಿಯನ್ನು ಮಾಡುವ ಎಲ್ಲ ರೀತಿಯ ತಯಾರಿ ನಡೆಸಿದ್ದು, ನಂಜುಂಡಪ್ಪ ವರದಿಯಲ್ಲಿ ಅತ್ಯಂತ ಹಿಂದುಳಿದ ತಾಲೂಕೆಂದು ಗುರುತಿಸಿಕೊಂಡಿರುವ ಸೊರಬವನ್ನು ರಾಜ್ಯದಲ್ಲಿಯೇ ಮಾದರಿ ತಾಲೂಕನ್ನಾಗಿಸುವ ಗುರಿ ಹೊಂದಲಾಗಿದೆ. ಈ ಹಿಂದೆ ನೀಡಿದ ಸಹಕಾರವನ್ನು ಮುಂದೆಯೂ ನೀಡುವ ಮೂಲಕ ಕಮಲಕ್ಕೆ ಮತ ನೀಡಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರಲು ಕಾರಣರಾಗಬೇಕು ಎಂದು ಕರೆ ನೀಡಿದರು.

ಕುಮಾರ್‌ ಪರಿ​ಶ್ರ​ಮವೇ ಕಾರ​ಣ: ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ತಾಲೂಕು ಅಭಿವೃದ್ಧಿ ಕಂಡಿದೆ ಎಂದರೆ ಅದಕ್ಕೆ ಕುಮಾರ ಬಂಗಾರಪ್ಪ ಅವರ ಮುಂದಾಲೋಚನೆಯ ಚಿಂತನೆ ಮತ್ತು ಪರಿಶ್ರಮವೇ ಕಾರಣವಾಗಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಸಮಸ್ಯೆಗಳ ಸುಳಿಯಲ್ಲಿದ್ದ ಸೊರಬ ಅಭಿವೃದ್ಧಿ ಕಂಡಿದೆ. ಈವರೆಗಿನ ಅವರ ಅಭಿವೃದ್ಧಿಯೇ ಗೆಲುವಿನ ಹಾದಿ ತೋರಿಸುತ್ತದೆ. ಆದ್ದರಿಂದ ಅಭಿವೃದ್ಧಿ ರಾಜಕಾರಣಕ್ಕೆ ತಮ್ಮ ಮತ ಎಂದಿಗೂ ಮೀಸಲಿಡುವ ಮೂಲಕ ಬೆಂಬಲಿಸಬೇಕು ಎಂದರು.

ನಂತರ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗದಿಂದ ಮುಖ್ಯರಸ್ತೆಯ ಮೂಲಕ ತಹಸೀಲ್ದಾರ್‌ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಪ್ರವೀಣ್‌ ಜೈನ್‌ ಅವರಿಗೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಾಮಪತ್ರ ಸಲ್ಲಿಸಿದರು. ಮೆರವಣಿಗೆಯಲ್ಲಿ ಸುಮಾರು ಎಂಟು ಸಾವಿರದಷ್ಟುಅಭಿಮಾನಿಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಚುನಾವಣಾ ಉಸ್ತುವಾರಿ ಡಿ.ಎಸ್‌. ಅರುಣ್‌, ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ, ಮಂಡಲ ಪ್ರಭಾರಿ ಶ್ರೀನಾಥ, ಸೊರಬ ಮಂಡಲ ಅಧ್ಯಕ್ಷ ಪ್ರಕಾಶ ತಲಕಾಲುಕೊಪ್ಪ, ಉಪಾಧ್ಯಕ್ಷ ದೇವೇಂದ್ರಪ್ಪ ಚನ್ನಾಪುರ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು ಮೊದಲಾದವರು ಇದ್ದರು.

ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ 10 ಸೀಟು ಹೆಚ್ಚು ಗೆಲುವು: ಡಿ.ಕೆ.ಶಿವಕುಮಾರ್

ಭಾವುಕರಾದ ಕುಮಾರ ಬಂಗಾರಪ್ಪ: ನಾಮಪತ್ರ ಸಲ್ಲಿಕೆಗೂ ಮೊದಲು ಬೆಳಗ್ಗೆ ಕುಮಾರ ಬಂಗಾರಪ್ಪ ತಮ್ಮ ಮನೆಯಲ್ಲಿರುವ ತಂದೆ ಎಸ್‌.ಬಂಗಾರಪ್ಪ ಮತ್ತು ತಾಯಿ ಶಕುಂತಲಾ ಬಂಗಾರಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ನಾಮಪತ್ರದ ಕಡತವನ್ನು ಅವರ ಪಾದಗಳಿಗೆ ಅರ್ಪಿಸಿ, ಕೈ ಮುಗಿದರು. ರಾಜಕಾರಣದ ಪಟ್ಟುಗಳನ್ನು ಕಲಿಸಿ, ಮೊದಲ ಬಾರಿಗೆ ಶಾಸಕರನ್ನಾಗಿ ಮಾಡಲು ಕಾರಣರಾದ ಎಸ್‌.ಬಂಗಾರಪ್ಪ ಅವರನ್ನು ನೆನೆದು ಕುಮಾರ ಬಂಗಾರಪ್ಪ ಭಾವುಕರಾದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!