ಚುನಾವಣೆ ಘೋಷಣೆ ಆಗುತ್ತಿದ್ದಂತೇ ಮತದಾರರನ್ನು ಓಲೈಸಿಕೊಳ್ಳಲು ಪಕ್ಷಗಳ ನಾಯಕರು ಆಮಿಷ ನೀಡುತ್ತಲೇ ಇದ್ದಾರೆ. ಆದರೆ ಗಡಿ ಜಿಲ್ಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಚುನಾವಣೆ ಘೋಷಣೆ ಬೆನ್ನಲ್ಲೇ ಅಧಿಕಾರಿಗಳು ಭರ್ಜರಿಯಾಗಿ ಫೀಲ್ಡಿಗಿಳಿದಿದ್ದಾರೆ.
ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರ ಕನ್ನಡ (ಮಾ.29): ಚುನಾವಣೆ ಘೋಷಣೆ ಆಗುತ್ತಿದ್ದಂತೇ ಮತದಾರರನ್ನು ಓಲೈಸಿಕೊಳ್ಳಲು ಪಕ್ಷಗಳ ನಾಯಕರು ಆಮಿಷ ನೀಡುತ್ತಲೇ ಇದ್ದಾರೆ. ಆದರೆ ಗಡಿ ಜಿಲ್ಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಚುನಾವಣೆ ಘೋಷಣೆ ಬೆನ್ನಲ್ಲೇ ಅಧಿಕಾರಿಗಳು ಭರ್ಜರಿಯಾಗಿ ಫೀಲ್ಡಿಗಿಳಿದಿದ್ದಾರೆ. ಈ ಹಿಂದೆಯೇ ಕಾರ್ಯಾಚರಣೆ ಪ್ರಾರಂಭಿಸಿರುವ ಅಧಿಕಾರಿಗಳು, ಇಲ್ಲಿಯವೆರೆಗೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಬರೋಬ್ಬರಿ 69,82,383ರೂ.ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ. ಹೌದು! ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೇ ರಾಜಕೀಯ ಪಕ್ಷಗಳ ಚಟುವಟಿಕೆಗಳು ಮತ್ತಷ್ಟು ಹೆಚ್ಚಾಗಿದೆ.
ಮತದಾರರನ್ನು ಸೆಳೆಯಲು ಪಕ್ಷಗಳು ಹೆಂಡ, ಹಣದ ಹೊಳೆ ಹರಿಸಲು ಪ್ರಾರಂಭಿಸಿವೆ. ಇವುಗಳನ್ನು ತಡೆಯಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದು, ಪ್ರತಿಯೊಂದೆಡೆಯೂ ತನಿಖೆ, ಪರಿಶೀಲನೆ ಆರಂಭಿಸಿದ್ದಾರೆ. ಕಳೆದ ಎರಡು ವಾರಗಳಲ್ಲಿ ಎರಡು ಪ್ರಕರಣಗಳಲ್ಲಿ ಮಾಜಾಳಿ ಹಾಗೂ ಇತರೆಡೆಯಿಂದ ದಾಖಲೆ ರಹಿತ 10 ಲಕ್ಷ ರೂ. ನಗದು, ಹಲವು ಪ್ರಕರಣಗಳಲ್ಲಿ 40 ಲಕ್ಷ ರೂ. ಮೌಲ್ಯದ ಮದ್ಯ, 7.50 ಲಕ್ಷ ರೂ. ಮೌಲ್ಯದ ಬೆಳ್ಳಿ ಹಾಗೂ ಗಾಂಜಾ, ಚರಸ್‌ಗಳು ಸೇರಿ ಒಟ್ಟು 69,82,383ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ನನ್ನ ರಾಜಕೀಯ ಜೀವನ ಉತ್ತುಂಗಕ್ಕೆ ಏರಿದ್ದನ್ನು ಕೆಲವರಿಗೆ ಸಹಿಸಲಾಗುತ್ತಿಲ್ಲ: ಸಚಿವ ಸಿ.ಸಿ.ಪಾಟೀಲ್
ಚೆಕ್‌ಪೋಸ್ಟ್‌ಗಳಲ್ಲಂತೂ ರಾಜ್ಯ ಪೊಲೀಸರು, ಅಬಕಾರಿ ಇಲಾಖೆ ಭಿಗಿ ಬಂದೋಬಸ್ತ್ ಕೈಗೊಂಡಿದ್ದು, ಕರ್ನಾಟಕಕ್ಕೆ ಆಗಮಿಸುವ ಹಾಗೂ ಬೇರೆ ಜಿಲ್ಲೆ, ರಾಜ್ಯಗಳಿಗೆ ತೆರಳುವ ವಾಹನಗಳ ಕಟ್ಟುನಿಟ್ಟಿನ ತಪಾಸಣೆ ಕೂಡಾ ನಡೆಸಲಾಗುತ್ತಿದೆ. ಚಿನ್ನ, ಬೆಳ್ಳಿಗೆ ಸರಿಯಾದ ದಾಖಲೆಗಳಿದ್ದರೆ ಮಾತ್ರ ಸಾಗಾಟ ಮಾಡಲು ಅವಕಾಶಗಳಿದ್ದು, ದಾಖಲೆಯಿಲ್ಲದಿದ್ದರೆ, ಅನುಮಾನವಿದ್ದರೆ ಸೊತ್ತುಗಳನ್ನು ಸೀಝ್ ಮಾಡಲಾಗುತ್ತದೆ. ಇನ್ನು ಕಾಮಗಾರಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕೂಡಾ ಸಂಗ್ರಹಿಸಿ ಚುನಾವಣಾ ಆಯೋಗಕ್ಕೆ ಸಲ್ಲಿಸುವ ವ್ಯವಸ್ಥೆ ಒಂದೆಡೆ ಮಾಡಲಾಗಿದ್ದು, ಮತ್ತೊಂದೆಡೆ 80 ವರ್ಷ ಹಾಗೂ ಅಂಗವಿಕಲತೆ ಹೊಂದಿರುವ ವ್ಯಕ್ತಿಗಳಿಗೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡುವ ಅವಕಾಶ ಕೂಡಾ ನೀಡಲಾಗಿದೆ.
ಅಂದಹಾಗೆ, ಉತ್ತರಕನ್ನಡ ಜಿಲ್ಲೆಯಲ್ಲಿನ್ನೂ ಹಲವು ಪಕ್ಷಗಳ ಅಭ್ಯರ್ಥಿಗಳ ಹೆಸರುಗಳು ಘೋಷಣೆ ಆಗಬೇಕಿದೆ. ಆದ್ರೆ ಸಂಭಾವ್ಯ ಅಭ್ಯರ್ಥಿಗಳು ಚುನಾವಣಾ ಕಣಕ್ಕಿಳಿದು ಜನರ ಮುಂದೆ ಮತ ಭಿಕ್ಷೆ ಮುಂದುವರಿಸಿದ್ದಾರೆ. ಇದರ ಜತೆಗೆ ಮತದಾರರಿಗೆ ಹೆಂಡ, ಹಣವನ್ನು ಕೂಡಾ ಪೂರೈಸುತ್ತಿದ್ದು, ಚುನಾವಣಾ ನೀತಿ ಸಂಹಿತೆಯ ಘೋಷಣೆಯೊಂದಿಗೆ ಅಧಿಕಾರಿಗಳು ಫೀಲ್ಡಿಗಿಳಿದಿರೋದು ರಾಜಕೀಯ ಪಕ್ಷಗಳ ಮುಖಂಡರಿಗೆ ಕೊಂಚ ನಡುಕ ಹುಟ್ಟಿಸಿದೆ. ನೆರೆಯ ಗೋವಾದಿಂದ ಅಕ್ರಮ ಮದ್ಯ, ಹಣ ರಾಜ್ಯದ ಭಾಗಕ್ಕೆ ಹರಿದು ಬರುವುದನ್ನು ತಡೆಯಲು ರಾಜ್ಯದ ಗಡಿ ಭಾಗದ 3 ಪ್ರದೇಶಗಳಲ್ಲಿ ಹಾಗೂ ಅಂತರ್ ಜಿಲ್ಲೆಯಲ್ಲಿ ಒಟ್ಟು 25 ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ.
ಇಂದಿನಿಂದಲೇ ನೀತಿ ಸಂಹಿತೆ ಜಾರಿ: ಚಿಕ್ಕಮಗಳೂರು ಜಿಲ್ಲಾಡಳಿತ ಹೈ ಅಲರ್ಟ್
ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿದ್ದ 2626 ಹಾಗೂ ಖಾಸಗಿ ಜಮೀನಿನಲ್ಲಿದ್ದ 1388 ಪೋಸ್ಟರ್, ಬ್ಯಾನರ್, ವಾಲ್ ಪೋಸ್ಟರ್‌ಗಳನ್ನು ತೆರವುಗೊಳಿಸಲಾಗಿದೆ. ಇದರ ಜತೆ ಸೂಕ್ಷ್ಮ ವಲಯಗಳಲ್ಲೂ ಪೊಲೀಸರ ನಿಯೋಜನೆ ಸಹ ಮಾಡಲಾಗಿದೆ. ಒಟ್ಟಿನಲ್ಲಿ ಚುನಾವಣೆ ಘೋಷಣೆಯಾಗುತ್ತಿದ್ದಂತೇ ಕರಾವಳಿಯಲ್ಲಿ ರಾಜಕೀಯದ ಕಾವು ಏರತೊಡಗೊಗಿದ್ದು, ಅಧಿಕಾರಿಗಳು ಕೂಡಾ ಬೇಟೆ ನಡೆಸಲಾರಂಭಿಸಿದ್ದಾರೆ. ಇದು ರಾಜಕೀಯ ಮುಖಂಡರಲ್ಲಿ ನಡುಕ ಹುಟ್ಟಿಸಿದ್ದು, ಯಾವ ಪಕ್ಷಗಳ, ಯಾವ ರಾಜಕಾರಣಿಗಳ, ಯಾವ ಸೊತ್ತುಗಳು ಅಧಿಕಾರಿಗಳ ಜಾಲದಲ್ಲಿ ಬೀಳಲಿದೆ ಎಂದು ಕಾದು ನೋಡಬೇಕಷ್ಟೇ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.