ಜೆಡಿಎಸ್ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಭಾನುವಾರ ಅಥವಾ ಸೋಮವಾರ ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರ (ಏ.08): ಜೆಡಿಎಸ್ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಭಾನುವಾರ ಅಥವಾ ಸೋಮವಾರ ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಡೂರು ಮತ್ತು ಹಾನಗಲ್ನ ಕಾರ್ಯಕ್ರಮ ಮುಗಿದ ಬಳಿಕ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರೊಂದಿಗೆ ಚರ್ಚಿಸಿ ಜೆಡಿಎಸ್ ಅಭ್ಯರ್ಥಿಗಳ ಅಂತಿಮ ಪಟ್ಟಿಸಿದ್ಧಪಡಿಸುವುದಾಗಿ ತಿಳಿಸಿದರು. ಅಂತಿಮ ಪಟ್ಟಿಯಲ್ಲಿ ಹಾಸನ ಕ್ಷೇತ್ರದ ಟಿಕೆಟ್ ವಿಚಾರವನ್ನು ಕ್ಲಿಯರ್ ಮಾಡುತ್ತೇವೆ. ವರುಣಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ನಾಪತ್ತೆಯಾಗಿದ್ದು, ಎಲ್ಲಿ ಕಾಣೆಯಾಗಿದ್ದಾರೋ ಹುಡುಕಿಸುತ್ತೇನೆ.
ಆ ಕ್ಷೇತ್ರದ ಅಭ್ಯರ್ಥಿ ಬದಲಾವಣೆ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜೆಡಿಎಸ್ ಈ ಹಿಂದೆಯೇ ಮೊದಲ ಹಂತದಲ್ಲಿ 93 ಅಭ್ಯರ್ಥಿಗಳ ಪಟ್ಟಿಬಿಡುಗಡೆ ಮಾಡಿದೆ. ನಂತರ ಹಾಸನದಲ್ಲಿ ಟಿಕೆಟ್‌ಗಾಗಿ ಭವಾನಿ ರೇವಣ್ಣ ಪಟ್ಟು ಹಿಡಿದಿದ್ದು, ಕುಮಾರಸ್ವಾಮಿ ಅವರು ಎಚ್.ಪಿ.ಸ್ವರೂಪ್ ಅವರಿಗೆ ಟಿಕೆಟ್ ನೀಡಲು ಹಟ ಹಿಡಿದಿರುವುದರಿಂದ ಕಗ್ಗಂಟಾಗಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಪಂಚರತ್ನ ಯೋಜನೆ ಜಾರಿಯಾದರೆ ರಾಜ್ಯ ಸ್ವರ್ಗ ಸದೃಶ್ಯವಾಗಲಿದೆ: ಎಚ್.ಡಿ.ಕುಮಾರಸ್ವಾಮಿ
ನನ್ನನ್ನು ಕಟ್ಟಿ ಹಾಕಲು ಯಾರಿಂದಲೂ ಆಗುವುದಿಲ್ಲ: ನನ್ನನ್ನು ಕಟ್ಟಿಹಾಕಲು ಯಾರಿಂದಲೂ ಆಗುವುದಿಲ್ಲ. ಯಾರು ಏನೇ ಅಪಪ್ರಚಾರ ಮಾಡಿದರು ಜನರು ಕಿವಿಗೊಡದೆ ನನಗೆ ರಕ್ಷಣೆ ಕೊಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು. ತಾಲೂಕಿನ ಜಾಲಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಕ್ಷೇತ್ರದ ಜನರು ನನಗೆ ರಾಜ್ಯ ಕಟ್ಟುವ ಕೆಲಸ ಕೊಟ್ಟಿದ್ದಾರೆ. ರಾಮನಗರ, ಚನ್ನಪಟ್ಟಣ ಹಾಗೂ ಮಾಗಡಿ ಜನರು ನನ್ನನ್ನು ಮನೆ ಮಗನಂತೆ ನೋಡುತ್ತಿದ್ದಾರೆ. ಯಾರು ಎಷ್ಟೇ ಅಪಪ್ರಚಾರ ಮಾಡಿದರು ಜನರು ಕಿವಿಕೊಡುವುದಿಲ್ಲ.
ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರೇ ಸ್ಪರ್ಧೆ ಮಾಡಿದರು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲವನ್ನೂ ಕ್ಷೇತ್ರದ ಜನರಿಗೆ ಬಿಟ್ಟು ನಾನು ರಾಜ್ಯ ಪ್ರವಾಸ ಮಾಡುತ್ತಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸಚಿವರು ಹಾಗೂ ಶಾಸಕರು ಉದ್ಘಾಟನೆ ಮಾಡುವ ಕಾರ್ಯಕ್ರಮಗಳಿಗೆ ಪ್ರಧಾನಿ ಮೋದಿ ಅವರನ್ನು ಕರೆಸುತ್ತಿದ್ದಾರೆ. ಮೋದಿ ಬಂದು ಶಂಕುಸ್ಥಾಪನೆ ಮಾಡಿ ಹೋಗುತ್ತಿದ್ದಾರೆ. ಕೋವಿಡ್ ಹಾಗೂ ಪ್ರವಾಹ ಬಂದಾಗ ಕರ್ನಾಟಕಕ್ಕೆ ಬರಲು ಪ್ರಧಾನಿಯವರಿಗೆ ಸಮಯ ಇರಲಿಲ್ಲ. ಈಗ ಕರ್ನಾಟಕದ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದೆ. ಅವರು ಬರುತ್ತಾರೆ, ಹೋಗುತ್ತಾರೆ ಅಷ್ಟೇ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ಯಾರೇ ಸ್ಪರ್ಧಿಸಿದರೂ ಕಣಕ್ಕಿಳಿಯಲು ತಯಾರು: ರಾಮನಗರ ಕ್ಷೇತ್ರದಲ್ಲಿ ನಮ್ಮ ವಿರುದ್ಧ ಯಾರೇ ಅಭ್ಯರ್ಥಿಯಾದರು ಕಣಕ್ಕಿಳಿಯಲು ತಯಾರಿದ್ದೇವೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು. ತಾಲೂಕಿನ ಜಾಲಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಕ್ಷೇತ್ರಕ್ಕೆ ಸಂಸದ ಡಿ.ಕೆ.ಸುರೇಶ್ ಹೆಸರು ಪ್ರಸ್ತಾಪಿಸಿ ಇಕ್ಬಾಲ್ ಹುಸೇನ್ ಅವರಿಗೆ ಟಿಕೆಟ್ ಘೋಷಣೆ ಮಾಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟವಿಚಾರ. ರಾಮನಗರ ಜಿಲ್ಲೆ ಜನರು ದೇವೇಗೌಡರ ಮೇಲೆ ಇಟ್ಟಿರುವ ಗೌರವವನ್ನು ಯಾರಿಂದಲೂ ಕಟ್ಟಿಹಾಕಲು ಸಾಧ್ಯವಿಲ್ಲ.
ಕಾಂಗ್ರೆಸ್ ಬಂಡಾಯ ತೀವ್ರ: 2ನೇ ಟಿಕೆಟ್ ಪಟ್ಟಿ ಪ್ರಕಟ ಬೆನ್ನಲ್ಲೇ ತಲೆನೋವು
ಕುಮಾರಸ್ವಾಮಿ ಹಾಗೂ ನನ್ನನ್ನು ಕಟ್ಟಿ ಹಾಕಲು ಯಾರಿಂದಲೂ ಸಾಧ್ಯವಿಲ್ಲ. ಚನ್ನಪಟ್ಟಣ ಜೆಡಿಎಸ್ ಕಾರ್ಯಕರ್ತರು ಸಹ ಸಜ್ಜಾಗಿದ್ದಾರೆ ಎಂದು ಹೇಳಿದರು. ಇತಿಹಾಸದಲ್ಲಿ ಯಾರು ಕೂಡ ಚನ್ನಪಟ್ಟಣಕ್ಕೆ ಒಂದೂವರೆ ಸಾವಿರ ಕೋಟಿ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿರಲಿಲ್ಲ. ಕುಮಾರಸ್ವಾಮಿರವರು ಆ ಕೆಲಸ ಮಾಡಿ ತೋರಿಸಿದ್ದಾರೆ. ಜನರು ನಮಗೆ ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ನಿಖಿಲ್ ತಿಳಿಸಿದರು.