ಮುಂದಿನ ಅಧಿವೇಶನದಲ್ಲಿ ರಾಜ್ಯದ ಮೀಸಲಿಗೆ ಒಪ್ಪಿಗೆ: ಬಿ.ಎಲ್‌.ಸಂತೋಷ್‌

By Kannadaprabha NewsFirst Published May 4, 2023, 6:23 AM IST
Highlights

ರಾಜ್ಯದಲ್ಲಿ ಮೀಸಲು ಹೆಚ್ಚಿಸುವ ನಿರ್ಧಾರವನ್ನು ಕೇಂದ್ರದ ನಾಯಕರೊಂದಿಗೆ ಚರ್ಚಿಸಿಯೇ ಕೈಗೊಳ್ಳಲಾಗಿದೆ. ಮುಂದಿನ ಸಂಸತ್‌ ಅಧಿವೇಶನದಲ್ಲಿ ಈ ಮೀಸಲಾತಿ ಹೆಚ್ಚಳ ನಿರ್ಧಾರಕ್ಕೆ ಒಪ್ಪಿಗೆಯೂ ಸಿಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಹೇಳಿದರು. 

ಹಾವೇರಿ (ಮೇ.04): ರಾಜ್ಯದಲ್ಲಿ ಮೀಸಲು ಹೆಚ್ಚಿಸುವ ನಿರ್ಧಾರವನ್ನು ಕೇಂದ್ರದ ನಾಯಕರೊಂದಿಗೆ ಚರ್ಚಿಸಿಯೇ ಕೈಗೊಳ್ಳಲಾಗಿದೆ. ಮುಂದಿನ ಸಂಸತ್‌ ಅಧಿವೇಶನದಲ್ಲಿ ಈ ಮೀಸಲಾತಿ ಹೆಚ್ಚಳ ನಿರ್ಧಾರಕ್ಕೆ ಒಪ್ಪಿಗೆಯೂ ಸಿಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಹೇಳಿದರು. ಈ ಮೂಲಕ ಮೀಸಲು ನಿರ್ಧಾರ ಹೆಚ್ಚಿಸುವ ರಾಜ್ಯ ಸರ್ಕಾರದ ಕ್ರಮ ಕೇವಲ ಚುನಾವಣೆ ಸಂದರ್ಭದ ಕಣ್ಣೊರೆಸುವ ತಂತ್ರ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಬುಧವಾರ ಪ್ರಬುದ್ಧರ ಗೋಷ್ಠಿಯಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು.

ಒಳಮೀಸಲಾತಿ ಕುರಿತು ಕೇಂದ್ರ ನಾಯಕರೊಂದಿಗೆ ಚರ್ಚಿಸಿ ಕೊನೇ ಕ್ಷಣದಲ್ಲಿ ಆದೇಶ ನೀಡಲಾಗಿದೆ. ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಿಸಿ ಕೇಂದ್ರದ ಒಪ್ಪಿಗೆಗೆ ಕಳುಹಿಸಿ ಕೊಟ್ಟಿದೆ. ಒಳಮೀಸಲಾತಿ ನೀಡುವ ಮುನ್ನ ಕೇಂದ್ರದ ನಾಯಕರೊಂದಿಗೆ ಚರ್ಚಿಸಿಯೇ ಈ ನಿರ್ಣಯ ಕೈಗೊಳ್ಳಲಾಗಿದೆ. ನರೇಂದ್ರ ಮೋದಿ, ಅಮಿತ್‌ ಶಾ, ಜೆ.ಪಿ.ನಡ್ಡಾ ಗಮನಕ್ಕೆ ತಂದೇ ಈ ನಿರ್ಣಯ ಕೈಗೊಳ್ಳಲಾಗಿದೆ. ಮುಂದಿನ ಅಧಿವೇಶನದಲ್ಲಿ ಚರ್ಚಿಸಿ 9ನೇ ಶೆಡ್ಯೂಲ್‌ನಲ್ಲಿ ಮೀಸಲಾತಿ ಹೆಚ್ಚಳ ವಿಚಾರ ಸೇರ್ಪಡೆ ಮಾಡಲಾಗುತ್ತದೆ. 

ಕಾಂಗ್ರೆಸ್‌ ವಿರುದ್ಧ ಇಂದು ಸಂಜೆ ಹನುಮಾನ್‌ ಚಾಲೀಸಾ ಪಠಣ ಅಭಿಯಾನ

ಕೇಂದ್ರ ನಾಯಕರ ಗಮನಕ್ಕೆ ತರದೆ ಯಾವುದೇ ಪ್ರಮುಖ ನಿರ್ಣಯ ಕೈಗೊಳ್ಳುವುದಿಲ್ಲ. ಬಿಜೆಪಿ ಯಾವತ್ತೂ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನಾವು ರಾಜಕೀಯ ವ್ಯವಸ್ಥೆಯನ್ನು ಬದಲಾವಣೆ ಮಾಡಿ ತೋರಿಸುತ್ತೇವೆ. ಕಲುಷಿತ ವ್ಯವಸ್ಥೆಯನ್ನು ಸ್ವಚ್ಛಗೊಳಿಸುತ್ತೇವೆ. ಅದಕ್ಕಾಗಿ ಮೊದಲು ಬಿಜೆಪಿಯನ್ನು ಶುದ್ಧ ಮಾಡುತ್ತಿದ್ದೇವೆ. ಇನ್ನೊಂದು ಮೂರು ನಾಲ್ಕು ಸಲ ನಮಗೆ ವೋಟ್‌ ಹಾಕಿ ಬೆಂಬಲಿಸಿದರೆ ಪಂಚಾಯ್ತಿ ಮಟ್ಟದಲ್ಲೂ ದೊಡ್ಡ ಬದಲಾವಣೆ ತರುತ್ತೇವೆಂದು ಸಂತೋಷ್‌ ಭರವಸೆ ನೀಡಿದರು.

ಸಂತೋಷ್‌ ಕುರಿತು ಹಗುರ ಮಾತು ಸಹಿಸಲ್ಲ: ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ನಮ್ಮ ನಾಯಕರು. ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ಸಹಿಸಲು ಸಾಧ್ಯವಿಲ್ಲ ಎಂದು ನಿಕಟಪೂರ್ವ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಿ.ಎಸ್‌.ಯಡಿಯೂರಪ್ಪ ಗುಡುಗಿದರು. ಪತ್ರಕರ್ತರೊಂದಿಗೆ ಮಾತನಾಡಿ, ಸಂತೋಷ್‌ ಅವರನ್ನು ಟೀಕೆ ಮಾಡುವ ಯೋಗ್ಯತೆ ಕೂಡ ಯಾರಿಗೂ ಇಲ್ಲ. ಸಂಘಟನೆಗಾಗಿ ಅವರು ಕೆಲಸ ಮಾಡುತ್ತಿದ್ದಾರೆ ಎಂದರು. ಚುನಾವಣಾ ಪ್ರಚಾರ ಈಗಾಗಲೇ ಆರಂಭವಾಗಿದೆ. 

ಇಡೀ ರಾಜ್ಯದಲ್ಲಿ ಬಿಜೆಪಿಗೆ ಒಳ್ಳೆಯ ವಾತಾವರಣವಿದೆ. ಪ್ರಧಾನಿ ಮೋದಿ ಅಮಿತ್‌ ಶಾ ಸೇರಿ ಕೇಂದ್ರ ಮತ್ತು ವಿವಿಧ ರಾಜ್ಯಗಳ ಬಿಜೆಪಿ ಮುಖಂಡರು ರಾಜ್ಯಕ್ಕೆ ಚುನಾವಣಾ ಪ್ರಚಾರಕ್ಕಾಗಿ ಬರಲಿದ್ದಾರೆ. ನಾನೂ ಈಗಾಗಲೇ ಪ್ರಚಾರ ಆರಂಭಿಸಿದ್ದೇನೆ. ಕೊನೇ ಎರಡು ದಿನಗಳಿರುವಾಗ ಶಿವಮೊಗ್ಗದಲ್ಲಿ ಪ್ರಚಾರ ಕೈಗೊಳ್ಳುವೆ ಎಂದು ತಿಳಿಸಿದರು. ಶಿವಮೊಗ್ಗ ಕ್ಷೇತ್ರದಲ್ಲಿ ಶೇ.90ರಷ್ಟುವೀರಶೈವರು ಬಿಜೆಪಿ ಬೆಂಬಲಿಸುತ್ತಾರೆ. ಇಲ್ಲಿ ಬಿಜೆಪಿ ಗೆಲ್ಲುವುದು ನೂರಕ್ಕೆ ನೂರರಷ್ಟು ಶತಸಿದ್ಧ. ರಾಜ್ಯದಲ್ಲಿ 130ರಿಂದ 140 ರವರೆಗೆ ಸೀಟು ಪಡೆದು ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು. 

ಹನುಮ ದೇಗುಲಗಳ ಕೆಡವಿಸಿದ ಬಿಜೆಪಿ: ರಣದೀಪ್‌ ಸುರ್ಜೇವಾಲಾ ಕಿಡಿ

ಇದೇ ವೇಳೆ ವೀರಶೈವ ಸಮಾಜದ ಕುರಿತು ಸಿದ್ದರಾಮಯ್ಯ ಮತ್ತು ರಾಹುಲ್‌ ಗಾಂಧಿಗೆ ಏನು ಗೊತ್ತಿದೆ ಎಂದು ಖಾರವಾಗಿ ಪ್ರಶ್ನಿಸಿದ ಅವರು, ಮಾಜಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇಂಥ ಹಗುರ ಮಾತು ಸಹಿಸಲು ಸಾಧ್ಯವಿಲ್ಲ. ಈ ರೀತಿ ಮಾತನಾಡಬಾರದಿತ್ತು ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!