ಕಾಂಗ್ರೆಸ್ ಪಾಲಿಗೆ ತಲೆನೋವಾಗಿರುವ ಮುಂಬರುವ ವಿಧಾನಸಭಾ ಚುನಾವಣೆ ಅಭ್ಯರ್ಥಿಗಳ ಎರಡನೇ ಪಟ್ಟಿಬಿಡುಗಡೆ ಕಸರತ್ತು ಅಂತಿಮ ಹಂತಕ್ಕೆ ಬಂದಿದ್ದು, ಗುರುವಾರ ಬೆಳಗ್ಗೆ 11 ಗಂಟೆಗೆ ಸುಮಾರು 40ರಿಂದ 45 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಬಿಡುಗಡೆಯಾಗಲಿದೆ.
ನವದೆಹಲಿ/ಬೆಂಗಳೂರು (ಏ.06): ಕಾಂಗ್ರೆಸ್ ಪಾಲಿಗೆ ತಲೆನೋವಾಗಿರುವ ಮುಂಬರುವ ವಿಧಾನಸಭಾ ಚುನಾವಣೆ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಕಸರತ್ತು ಅಂತಿಮ ಹಂತಕ್ಕೆ ಬಂದಿದ್ದು, ಗುರುವಾರ ಬೆಳಗ್ಗೆ 11 ಗಂಟೆಗೆ ಸುಮಾರು 40ರಿಂದ 45 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಬಿಡುಗಡೆಯಾಗಲಿದೆ. ಬಾಕಿ ಉಳಿದಿರುವ 100 ಕ್ಷೇತ್ರಗಳಿಗೆ ಅಭ್ಯರ್ಥಿ ಪಟ್ಟಿಅಖೈರುಗೊಳಿಸಲು ಬುಧವಾರ ಇಡೀ ದಿನ ನಡೆದ ಕಸರತ್ತಿನ ನಂತರ ಸುಮಾರು 40ರಿಂದ 45 ಕ್ಷೇತ್ರಗಳಿಗೆ ಒಂಟಿ ಹೆಸರು ಅಂತಿಮಗೊಳಿಸಲಾಯಿತು. ಈ ಅಖೈರುಗೊಳಿಸಿದ ಅಂತಿಮ ಪಟ್ಟಿಯನ್ನು ತಡರಾತ್ರಿಯೇ ಬಿಡುಗಡೆ ಮಾಡಲು ಸಕಲ ಸಿದ್ಧತೆ ನಡೆಸಲಾಯಿತು. ಅಂತಿಮವಾಗಿ ಗುರುವಾರ ಬೆಳಗ್ಗೆ 11 ಗಂಟೆಗೆ ಪಟ್ಟಿಬಿಡುಗಡೆ ಮಾಡಲು ನಾಯಕರು ತೀರ್ಮಾನಿಸಿದರು ಎಂದು ಮೂಲಗಳು ಹೇಳಿವೆ.
ಬಾಕಿ ಉಳಿದಿರುವುದರಲ್ಲಿ ಶೇ.50ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಎರಡಕ್ಕಿಂತ ಹೆಚ್ಚು ಹೆಸರುಗಳು ಚುನಾವಣಾ ಸಮಿತಿ ಸಭೆ ಮುಂದೆ ಚರ್ಚೆಗೆ ಬಂದ ಹಿನ್ನೆಲೆಯಲ್ಲಿ ಮಂಗಳವಾರವೇ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರು ಗರಂ ಆಗಿದ್ದರು. ಒಂದು ಅಥವಾ ಎರಡು ಹೆಸರುಗಳಿರುವ ಪಟ್ಟಿಯನ್ನಷ್ಟೇ ಚುನಾವಣಾ ಸಮಿತಿ ಮುಂದೆ ತನ್ನಿ ಎಂದು ಖಡಕ್ ಸೂಚನೆ ನೀಡಿದ್ದರು. ಅದರಂತೆ ಮತ್ತೊಮ್ಮೆ ಸಭೆ ಸೇರಿದ ಸ್ಕ್ರೀನಿಂಗ್ ಕಮಿಟಿಯು ಎರಡಕ್ಕಿಂತ ಹೆಚ್ಚು ಹೆಸರುಗಳಿರುವ ಕ್ಷೇತ್ರಗಳಲ್ಲಿ ಸಂಭಾವ್ಯರ ಸಂಖ್ಯೆಯನ್ನು ಎರಡಕ್ಕಿಳಿಸುವ ಕಾರ್ಯವನ್ನು ಬುಧವಾರ ಮಧ್ಯಾಹ್ನದ ವೇಳೆಗೆ ಪೂರ್ಣಗೊಳಿಸಿದೆ.
ಸುದೀಪ್ ರಾಜಕೀಯ ಪ್ರವೇಶ ಇಲ್ಲ: ಬಿಜೆಪಿಯ ಪರ ಪ್ರಚಾರ
ಆ ಬಳಿಕ ಕಾಂಗ್ರೆಸ್ ಚುನಾವಣಾ ಸಮಿತಿಯು ಸಂಜೆ 4.30ರಿಂದ ಸುಮಾರು 2 ಗಂಟೆಗಳ ಕಾಲ ಎರಡನೇ ಪಟ್ಟಿಕುರಿತು ಚರ್ಚೆ ನಡೆಸಿದೆ. ಸದ್ಯಕ್ಕೆ ಸಭೆ ಅಪೂರ್ಣಗೊಂಡಿದ್ದು, ಗುರುವಾರ ಮಧ್ಯಾಹ್ನ 2.30 ವೇಳೆಗೆ ಮತ್ತೆ ಸಮಿತಿ ಸಭೆ ಸೇರಲಿದೆ. ಈ ಸಭೆಯಲ್ಲಿ ತೀವ್ರ ಗೊಂದಲ ಇರುವ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಯಲಿದೆ. ಮೂಲಗಳ ಪ್ರಕಾರ ಎರಡನೇ ಪಟ್ಟಿಗುರುವಾರ ಬಿಡುಗಡೆಯಾದರೂ ಅನಂತರದ ಪಟ್ಟಿಯೇನಿದ್ದರೂ ಬಿಜೆಪಿಯ ಪಟ್ಟಿಪ್ರಕಟವಾದ ನಂತರವೇ ಬಿಡುಗಡೆಯಾಗುವ ಸಾಧ್ಯತೆಯಿದೆ.
ಮತ್ತೊಂದು ಸಭೆ: ಚುನಾವಣಾ ಸಮಿತಿ ಸಭೆ ಬಳಿಕ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆದಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಡಿಸಿಎಂ ಪರಮೇಶ್ವರ್, ಕಾಂಗ್ರೆಸ್‌ನ ಚುನಾವಣಾ ತಂತ್ರಗಾರ ಸುನಿಲ್ ಕನಗೋಲು ಪಾಲ್ಗೊಂಡಿದ್ದರು. ಚುನಾವಣಾ ಸಮಿತಿ ಅಖೈರುಗೊಳಿಸಿರುವ ಪಟ್ಟಿಬಿಡುಗಡೆ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ನಿನ್ನೆ ಆಗಿದ್ದೇನು?
- 100 ಕ್ಷೇತ್ರಗಳ ಪಟ್ಟಿಅಂತಿಮಕ್ಕೆ ಇಡೀ ದಿನ ಕಾಂಗ್ರೆಸ್ ಕಸರತ್ತು
- ಒಂದೊಂದು ಕ್ಷೇತ್ರಕ್ಕೆ 3 ಹೆಸರು ನೋಡಿ ಗರಂ ಆಗಿದ್ದ ರಾಹುಲ್
- 1 ಅಥವಾ 2 ಹೆಸರಿರುವ ಪಟ್ಟಿಮಾತ್ರ ತನ್ನಿ ಎಂದಿದ್ದ ‘ಕೈ’ ವರಿಷ್ಠ
- ಅದರಂತೆ ಬುಧವಾರ ಮತ್ತೊಮ್ಮೆ ಸಭೆ ನಡೆಸಿದ ಸ್ಕ್ರೀನಿಂಗ್ ಕಮಿಟಿ
- 3-4 ಸಂಭಾವ್ಯ ಇದ್ದ ಕ್ಷೇತ್ರದಲ್ಲಿ ಸ್ಪರ್ಧಿಗಳ ಹೆಸರು ಎರಡಕ್ಕೆ ಇಳಿಕೆ
- ನಂತರ ಚುನಾವಣೆ ಸಮಿತಿ ಸಭೆ: ಅರ್ಧದಷ್ಟು ಹೆಸರುಗಳು ಅಂತಿಮ
- ನಂತರ ಮತ್ತೆ ರಾಜ್ಯ ನಾಯಕರ ಸಭೆ: ಪಟ್ಟಿಬಿಡುಗಡೆ ಬಗ್ಗೆ ಚರ್ಚೆ
ಒಂದೇ ಕ್ಷೇತ್ರಕ್ಕೆ ಸಿದ್ದು ಕಟ್ಟಿಹಾಕಲು ಯತ್ನ: ಕೆಲವು ನಾಯಕರಿಂದ ಹೈಕಮಾಂಡ್ ಮೇಲೆ ಒತ್ತಡ
ಕಾಂಗ್ರೆಸ್‌ನ 2ನೇ ಪಟ್ಟಿಗುರುವಾರ ಬೆಳಗ್ಗೆ 11ರೊಳಗೆ ಬಿಡುಗಡೆ ಆಗಲಿದೆ. ಸಿದ್ದರಾಮಯ್ಯ 2 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಾರೋ ಇಲ್ವೋ ಅನ್ನುವುದು ಪಟ್ಟಿಬಿಡುಗಡೆ ಬಳಿಕ ಗೊತ್ತಾಗಲಿದೆ. ಬಿಜೆಪಿ ನಾಯಕರು ಸ್ಪರ್ಧೆಗೆ ಹೆದರುತ್ತಿದ್ದಾರೆ. ಅವರಿಗೆ ಒಂದೇ ಒಂದು ಹೆಸರು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ.
-ರಣದೀಪ್ ಸಿಂಗ್ ಸುರ್ಜೇವಾಲಾ, ರಾಜ್ಯ ಕಾಂಗ್ರೆಸ್ ಉಸ್ತುವಾರಿ
ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಮುಕ್ತಾಯ ಆಗಿದೆ. ಅಭ್ಯರ್ಥಿಗಳ ಎರಡನೇ ಪಟ್ಟಿಕುರಿತು ಅರ್ಧ ಕೆಲಸ ಆಗಿದೆ. ಗುರುವಾರ ಇನ್ನರ್ಧ ಕೆಲಸ ಆಗಲಿದೆ.
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ