ಐದು ನಿಮಿಷದಲ್ಲಿ ಮೇಕೆದಾಟು ಯೋಜನೆಗೆ ಪ್ರಧಾನಿಯಿಂದ ಅನುಮತಿ ಕೊಡಿಸುತ್ತೇನೆ ಎಂದವರು ನೀವು. ಆದರೆ ಈಗ ನಾನು ಆ ರೀತಿ ಹೇಳಿಲ್ಲ ಅಂತಿದ್ದೀರಿ. ಮಂಡ್ಯದ ಗಂಡು ಭೂಮಿ ಜನ ನಿಮ್ಮನ್ನು ಗೆಲ್ಲಿಸಿದ್ದಾರೆ, ನೀವು ಇಲ್ಲಿ ಬಂದು ಅದಕ್ಕೆಲ್ಲ ಉತ್ತರ ಕೊಡಬೇಕು. ಈ ಹಿಂದೆ 10 ಸಾವಿರ ಮಂದಿಗೆ ಉದ್ಯೋಗ ಕೊಡುತ್ತೇನೆ ಅಂದಿದ್ರಿ, ನೀವೀಗ ಕೇಂದ್ರ ಕೈಗಾರಿಕಾ ಸಚಿವ. ನಿಮಗೆ ಏನು ಸಹಕಾರ ಬೇಕಿದ್ದರೂ ಕೊಡುತ್ತೇನೆ. ನಮ್ಮ ಯುವಕರಿಗೆ ಉದ್ಯೋಗ ಕೊಡಿಸಿದರೆ ಸಾಕು ಎಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಮಂಡ್ಯ(ಆ.07): ಕೇಂದ್ರ ಭಾರೀ ಕೈಗಾರಿಕೆಗಳ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಯೂ ಟರ್ನ್ ಕುಮಾರ, ಅವರದು ಕ್ಷಣಕ್ಕೊಂದು ಮಾತು, ಕ್ಷಣಕ್ಕೊಂದು ಬಣ್ಣ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ನಗರದ ಡಾ.ರಾಜ್‌ಕುಮಾರ್ ಬಡಾವಣೆಯ ಮೈಷುಗರ್ ಸ್ಥಳದಲ್ಲಿ ಮಂಗಳವಾರ ಕಾಂಗ್ರೆಸ್ ಆಯೋಜಿಸಿದ್ದ ಜನಾಂದೋಲನ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕುಮಾರಸ್ವಾಮಿ ಅವರು ನುಡಿದಂತೆ ನಡೆಯಬೇಕು. ಉಲ್ಟಾ ಹೊಡೆಯಬಾರದು ಎಂದು ಕಾಲೆಳೆದರು.
ಐದು ನಿಮಿಷದಲ್ಲಿ ಮೇಕೆದಾಟು ಯೋಜನೆಗೆ ಪ್ರಧಾನಿಯಿಂದ ಅನುಮತಿ ಕೊಡಿಸುತ್ತೇನೆ ಎಂದವರು ನೀವು. ಆದರೆ ಈಗ ನಾನು ಆ ರೀತಿ ಹೇಳಿಲ್ಲ ಅಂತಿದ್ದೀರಿ. ಮಂಡ್ಯದ ಗಂಡು ಭೂಮಿ ಜನ ನಿಮ್ಮನ್ನು ಗೆಲ್ಲಿಸಿದ್ದಾರೆ, ನೀವು ಇಲ್ಲಿ ಬಂದು ಅದಕ್ಕೆಲ್ಲ ಉತ್ತರ ಕೊಡಬೇಕು. ಈ ಹಿಂದೆ 10 ಸಾವಿರ ಮಂದಿಗೆ ಉದ್ಯೋಗ ಕೊಡುತ್ತೇನೆ ಅಂದಿದ್ರಿ, ನೀವೀಗ ಕೇಂದ್ರ ಕೈಗಾರಿಕಾ ಸಚಿವ. ನಿಮಗೆ ಏನು ಸಹಕಾರ ಬೇಕಿದ್ದರೂ ಕೊಡುತ್ತೇನೆ. ನಮ್ಮ ಯುವಕರಿಗೆ ಉದ್ಯೋಗ ಕೊಡಿಸಿದರೆ ಸಾಕು ಎಂದರು.
ಅಮಿತ್ ಶಾ ಬೆದರಿಕೆಗೆ ಹೆದರಿದ ಕುಮಾರಸ್ವಾಮಿ ಪಾದಯಾತ್ರೆಯಲ್ಲಿ ಭಾಗಿ: ಭಂಡಾರಿ
ಕುಮಾರಸ್ವಾಮಿ ನನ್ನ ಬಗ್ಗೆ ಏನು ಬೇಕಾದರೂ ಮಾತನಾಡಲಿ. ಅದಕ್ಕೆಲ್ಲ ಉತ್ತರ ಕೊಡಲು ನಾನು ಸಿದ್ಧ. ಎಲ್ಲಿಗೆ ಕರೆದರೂ ಚರ್ಚೆಗೆ ಬರುತ್ತೇನೆ. ವೇದಿಕೆ ಸರಿಯಾಗಿರಬೇಕು ಅಷ್ಟೆ ಎಂದು ಇದೇ ವೇಳೆ ಹೇಳಿದರು.
ಕಾಂಗ್ರೆಸ್ ಕೃಪಾಕಟಾಕ್ಷ:
ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕೃಪಾಕಟಾಕ್ಷದಿಂದ ವಿಜಯೇಂದ್ರ ಗೆಲುವು ಸಾಧಿಸಿದರು ಎಂದು ಪರೋಕ್ಷವಾಗಿ ಹೇಳಿದ ಡಿ.ಕೆ.ಶಿವಕುಮಾರ್, ಅಲ್ಲಿ ಕಾಂಗ್ರೆಸ್‌ನಿಂದ ನಾಗರಾಜೇಗೌಡಗೆ ಟಿಕೆಟ್ ಕೊಡಬೇಕಿತ್ತು. ಆದರೆ ಅವರಿಗೆ ಟಿಕೆಟ್ ಸಿಗದ ಕಾರಣ ವಿಜಯೇಂದ್ರ ಗೆದ್ದರು. ಇಲ್ಲದಿದ್ದರೆ ಅವರು ಅಸೆಂಬ್ಲಿಗೆ ಬರಲೂ ಸಾಧ್ಯವಾಗುತ್ತಿರಲಿಲ್ಲ ಎಂದರು.
ವಿಡಿಯೋ ಪ್ರದರ್ಶನ:
ಭಾಷಣದ ನಡುವೆ ಮೈತ್ರಿ ಪಕ್ಷಗಳ ನಾಯಕರ ಭಿನ್ನಾಭಿಪ್ರಾಯದ ಹೇಳಿಕೆಗಳು, ಪರಸ್ಪರ ವಿರೋಧದ ಮಾತುಗಳನ್ನೊಳಗೊಂಡ ವಿಡಿಯೋವನ್ನು ಬಹಿರಂಗ ಸಭೆಯಲ್ಲಿ ವೇದಿಕೆಯ ಮೇಲಿನ ಎಲ್‌ಇಡಿ ಪರದೆಯಲ್ಲಿ ಪ್ರದರ್ಶಿಸಿದ ಡಿ.ಕೆ.ಶಿವಕುಮಾರ್, ನೀವು ನಮ್ಮನ್ನು ನಂಬಬೇಡಿ, ಬಿಜೆಪಿ-ಜೆಡಿಎಸ್ ನಾಯಕರನ್ನು ನಂಬಿ. ನಾನೇನು ಭಾಷಣ ಮಾಡಬೇಕಿಲ್ಲ ಈ ವಿಡಿಯೋಗಳೇ ಎಲ್ಲಾ ಹೇಳುತ್ತಿವೆ ಎಂದು ಪ್ರತಿಪಕ್ಷಗಳ ನಾಯಕರ ಕುರಿತು ವ್ಯಂಗ್ಯವಾಡಿದರು.