ಹೊಸ ಹೋರಾಟಕ್ಕೆ ಕೈ ಹಾಕಿದ ಎಸ್‌ಆರ್ ಪಾಟೀಲ್, ಕಾಂಗ್ರೆಸ್‌ಗೆ ಸೆಡ್ಡು ಹೊಡೆದ್ರಾ ಹಿರಿಯ ನಾಯಕ?

By Suvarna NewsFirst Published Apr 10, 2022, 6:52 PM IST
Highlights

* ರಾಹುಲ್ ಕಾರ್ಯಕ್ರಮಕ್ಕೂ ಬರಲಿಲ್ಲ, ಸಿದ್ದು, ಡಿಕೆಶಿ ಕಡೆಗೂ ಮುಖ ಮಾಡಲಿಲ್ಲ.
* ಪಕ್ಷಾತೀತ ಹೋರಾಟದ ನೆಪದಲ್ಲಿ ಮತ್ತೇ ಶುರುವಾಯ್ತು ಮಾಜಿ ಸಚಿವ ಎಸ್.ಆರ್.ಪಾಟೀಲ್ ನೇತೃತ್ವದಲ್ಲಿ ಹೋರಾಟ
* ಕೈ ನಾಯಕರಿಗೆ ಇರುಸು ಮುರುಸು ಉಂಟು ಮಾಡ್ತಿದೆ ಪಾಟೀಲರ ಹೋರಾಟ

ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವಣ೯ನ್ಯೂಸ್, ಬಾಗಲಕೋಟೆ.
 

ಬಾಗಲಕೋಟೆ, (ಏ.10): ಕರ್ನಾಟಕ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಪಾದಯಾತ್ರೆಗಳು, ಪ್ರತಿಭಟನೆಗಳು, ಹೋರಾಟಗಳು, ಸಮಾವೇಶಗಳು ನಡೆಯುತ್ತಿರುವುದರ ಮಧ್ಯೆ ಬಿಜೆಪಿಗೆ ಸೆಡ್ಡು ಹೊಡೆಯಲು ಅತ್ತ ಕಾಂಗ್ರೆಸ್ ಪಕ್ಷ ಇನ್ನಿಲ್ಲದ ಹೋರಾಟದ ರೂಪರೇಷೆಯ ರಣತಂತ್ರ ಹೆಣೆಯುತ್ತಿದ್ದರೆ ಇತ್ತ ಕಾಂಗ್ರೆಸ್ನಿಂದಲೇ ಅಂತರ ಕಾಯ್ದುಕೊಂಡಿರುವ ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಎಸ್.ಆರ್.ಪಾಟೀಲ್ ಪಕ್ಷಾತೀತ ಹೋರಾಟವೊಂದಕ್ಕೆ ಕೈ ಹಾಕಿದ್ದು, ಇದೀಗ ಕಾಂಗ್ರೆಸ್ ಪಕ್ಷಕ್ಕೆ ಇರುಸು ಮುರುಸು ತಂದೊಡ್ಡಿದೆ. 

ಉತ್ತರ ಕರ್ನಾಟಕದ ಸ್ವಾಭಿಮಾನ ವೇದಿಕೆ ಹೆಸರಲ್ಲಿ ಮತ್ತೊಂದು ಹೋರಾಟಕ್ಕೆ ಸಜ್ಜಾಗಿರುವ ಕೈ ನಾಯಕ ಎಸ್.ಆರ್.ಪಾಟೀಲ್, ಕೈ ನಾಯಕನ ಪಕ್ಷಾತೀತ ಹೋರಾಟಕ್ಕೆ ಸಾಥ್ ನೀಡಿರುವ ರೈತ ಮುಖಂಡರು, ಹೋರಾಟಗಾರರು, ಚುನಾವಣೆ ಒಂದು ವರ್ಷ ಬಾಕಿ ಇರೋವಾಗ ಸ್ವಪಕ್ಷ ನಾಯಕನ ಪಕ್ಷಾತೀತ ಹೋರಾಟದಿಂದ ಇರುಸು ಮುರುಸುಗೊಂಡಿರುವ ಕಾಂಗ್ರೆಸ್. ಅಂದಹಾಗೆ ಇಂತಹವೊಂದು ರಾಜಕೀಯ ಬೆಳವಣಿಗೆಗಳು ಕಂಡು ಬಂದಿರುವುದು ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ. 

"

Bagalkot: ಏ.13 ರಿಂದ ಕೃಷ್ಣಾ-ಮಹದಾಯಿ ಸಂಕಲ್ಪ ಯಾತ್ರೆ: ಎಸ್‌.ಆರ್‌.ಪಾಟೀಲ

ಹೌದು. ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ನಾಯಕನೆಂದೆ ಹೆಸರು ಗಳಿಸಿದ್ದ ವಿಧಾನ ಪರಿಷತ್ ಮಾಜಿ ವಿಪಕ್ಷ ನಾಯಕ, ಮಾಜಿ ಸಚಿವ ಎಸ್.ಆರ್.ಪಾಟೀಲಗೆ ವಿಧಾನ ಪರಿಷತ್ ಟಿಕೆಟ್ ಕೈ ತಪ್ಪಿದ್ದೇ ತಡ ಅವರು ಅಂದಿನಿಂದ ಬಹುತೇಕ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಂದ ಅಂತರವನ್ನೇ ಕಾಯ್ದುಕೊಂಡು ಬಂದಿದ್ರು. ಈ ಮಧ್ಯೆ ರಾಜ್ಯಕ್ಕೆ ಸ್ವತ: ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಸಹ ಬಂದಿದ್ದರೂ ಆ ಕಾರ್ಯಕ್ರಮದಿಂದಲೂ ಎಸ್.ಆರ್.ಪಾಟೀಲ ದೂರವೇ ಉಳಿದರು. 

ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವುಕುಮಾರ ಅವರ ಕಡೆಗೂ ಮುಖ ಮಾಡಲಿಲ್ಲ, ಆದರೆ ಇದೀಗ ಚುನಾವಣೆಗೆ ಇನ್ನೇನು ಒಂದು ವರ್ಷ ಬಾಕಿ ಇರೋವಾಗ ಪಕ್ಷ ಮತ್ತೇ ಅಧಿಕಾರಕ್ಕೆ ಬರಲು ಪಾದಯಾತ್ರೆ, ಸಮಾವೇಶಗಳನ್ನ ನಡೆಸುವ ಮೂಲಕ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರೆ, ಇವುಗಳ ಮಧ್ಯೆ ಇದೀಗ ಎಸ್.ಆರ್.ಪಾಟೀಲ ಉತ್ತರ ಕರ್ನಾಟಕದ ಸ್ವಾಭಿಮಾನ ವೇದಿಕೆ ಅಡಿಯಲ್ಲಿ ಎಪ್ರಿಲ್ 13ರಿಂದ 17ರವರೆಗೆ ಕೃಷ್ಣಾ-ಮಹಾದಾಯಿ-ನವಲಿ ಸಂಕಲ್ಪ ಯಾತ್ರೆಯೊಂದನ್ನು ಶುರು ಮಾಡಲಿದ್ದು, ಟ್ರ್ಯಾಕ್ಟರ ಯಾತ್ರೆ ನಡೆಯಲಿದೆ.  ಪಕ್ಷಾತೀತವಾಗಿರೋ ಈ ಹೋರಾಟದಲ್ಲಿ ಎಲ್ಲರ ಬೆಂಬಲದೊಂದಿಗೆ ನಡೆಯಲಿದ್ದು, ಇದು ಯಾರ ವಿರುದ್ದವೂ ಅಲ್ಲ ಎಂದಿರುವ ಎಸ್.ಆರ್.ಪಾಟೀಲ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳನ್ನ ಪೂರ್ಣಗಳಿಸಲು ನಡೆಯುತ್ತಿರುವ ಹೋರಾಟವಿದು ಎಂದಿದ್ದಾರೆ. 

 ಇನ್ನು ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತ, ಮಹಾದಾಯಿ ಮತ್ತು ನವಲಿ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ನಡೆಯೋ ಈ ಟ್ರ್ಯಾಕ್ಟರ್ ಯಾತ್ರೆ 400 ಕಿಮೀ ದೂರ ಕ್ರಮಿಸಲಿದ್ದು, ಎಪ್ರಿಲ್ 13ರಂದು ನರಗುಂದದಿಂದ ಆರಂಭವಾಗಲಿದ್ದು, ಅಲ್ಲಿಂದ ಬಾದಾಮಿ, ಬಾಗಲಕೋಟೆ, ಕೂಡಲಸಂಗಮ, ನಿಡಗುಂದಿ, ಕೋಲ್ಹಾರ, ಬೆಳ್ಳುಬ್ಬಿ, ಜಮಖಂಡಿ, ಮುಧೋಳ ಮಾರ್ಗವಾಗಿ ಬಂದು ಎಪ್ರಿಲ್ 17ರಂದು ಬೀಳಗಿಯ ಬಾಡಗಂಡಿಯಲ್ಲಿ ಸಮಾರೋಪಗೊಳ್ಳಲಿದೆ. 

ಇನ್ನು ಈ ಯಾತ್ರೆಯು ಮಾಜಿ ಸಿಎಂ ಸಿದ್ದರಾಮಯ್ಯನವರ ಸ್ವಕ್ಷೇತ್ರ ಬಾದಾಮಿಯಲ್ಲೂ ಮುನ್ನಡೆಯಲಿದ್ದು, ಉಳಿದಂತೆ ವಿವಿಧ ಮತಕ್ಷೇತ್ರಗಳಲ್ಲಿ ತಮ್ಮದೇ ಪಕ್ಷದ ನಾಯಕನ ಈ ಪಕ್ಷಾತೀತ ಹೋರಾಟಕ್ಕೆ ಕೈ ನಾಯಕರು ಯಾವ ರೀತಿ ಸ್ಪಂದಿಸ್ತಾರೆ ಅನ್ನೋದು ಕುತೂಹಲ ಮೂಡಿಸುವುದರೊಂದಿಗೆ ಈ ಹೋರಾಟ ಇದೀಗ ಬಾಗಲಕೋಟೆ , ಗದಗ, ವಿಜಯಪುರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇರುಸು ಮುರುಸಾಗುವಂತೆ ಮಾಡಲಿದ್ದು, ಇದರಲ್ಲಿ ಕೈ ಪಕ್ಷದ ನಾಯಕರು ಯಾರು ಭಾಗವಹಿಸ್ತಾರೆ ಅನ್ನೋ ಕುತೂಹಲ ಮೂಡಿದೆ. 

ಎಸ್.ಆರ್.ಪಾಟೀಲರ ಹೋರಾಟಕ್ಕೆ ಆಮ್ ಆದ್ಮಿ ಪಾರ್ಟಿ ಸೇರಿದಂತೆ ಮಹಾದಾಯಿ ಹೋರಾಟ ಸಮಿತಿ, ಕನಾ೯ಟಕ ರಾಜ್ಯ ರೈತ ಸಂಘಟ‌ನೆ, ಬಾಗಲಕೋಟೆ ನಡುಗಡ್ಡೆ ಹೋರಾಟ ಸಮಿತಿ, ಕೃಷ್ಣಾ ಮೇಲ್ದಂಡೆ ಯೋಜನೆ ಹಿತ ರಕ್ಷಣಾ ಸಮಿತಿ, ಕರವೇ, ಉತ್ತರ ಕನಾ೯ಟಕ ನಿರ್ಮಾಣ ವೇದಿಕೆ, ಗುತ್ತಿ ಬಸವಣ್ಣ ಹೋರಾಟ ಸಮಿತಿ, ಕೃಷ್ಣಾ ತೀರ ಮುಳುಗಡೆ ಕ್ಷೇಮಾಭಿವೃದ್ಧಿ ಸಂಸ್ಥೆ ಸೇರಿದಂತೆ ವಿವಿಧ ಜನಪರ ಹೋರಾಟ ಸಂಘಟನೆಗಳು, ರೈತ ಸಂಘಟನೆಗಳು ಸಹ ಬೆಂಬಲ ನೀಡಿವೆ. 
                                                                           
ಒಟ್ಟಿನಲ್ಲಿ ಮಾಜಿ ವಿಧಾನ ಪರಿಷತ್ ವಿಪಕ್ಷ ನಾಯಕ, ಮಾಜಿ ಸಚಿವ ಎಸ್.ಆರ್.ಪಾಟೀಲರು ಈ ಹಿಂದೆ ಗಾಂಧಿ ನಡಿಗೆ ಕೃಷ್ಣೆಯ ಕಡೆಗೆ ಅಂತ ಪಾದಯಾತ್ರೆ ಮಾಡಿದ್ದರು ಆದರೆ ಈಗ ಮತ್ತೇ ಕೃಷ್ಣೆ-ಮಹಾದಾಯಿ-ನವಲಿ ಸಂಕಲ್ಪಯಾತ್ರೆಗಾಗಿ  ನೂತನ ಟ್ರ್ಯಾಕ್ಟರ್ ಯಾತ್ರೆ ಹಮ್ಮಿಕೊಂಡಿದ್ದು, ಇದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮೇಲೆ ಎಷ್ಟರ ಮಟ್ಟಿಗೆ ಎಫೆಕ್ಟ್ ಆಗುತ್ತೆ ಎಂದು  ಕಾದು ನೋಡಬೇಕಿದೆ...

click me!