* ಹಿಂದೂಪರ ಸಂಘಟನೆ ಕಾರ್ಯರ್ತರಿಂದ ಮುಸ್ಲಿಂ ವ್ಯಾಪಾರಿಗಳ ಕಲ್ಲಂಗಡಿ ನಾಶ
* ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ
*ಹಿಂದೂಪರ ಸಂಘಟನೆ ಕಾರ್ಯರ್ತರ ಕೆಲಸ ಸಮರ್ಥಿಸಿಕೊಂಡ ಸಿಟಿ ರವಿ
ಚಿಕ್ಕಮಗಳೂರು, (ಏ.10): ಧಾರವಾಡದಲ್ಲಿ ಹಿಂದೂಪರ ಸಂಘಟನೆ ಕಾರ್ಯರ್ತರು ಮುಸ್ಲಿಂ ವ್ಯಾಪಾರಿಗಳ ಕಲ್ಲಂಗಡಿ ನಾಶ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪರ-ವಿರೋಧಗಳ ಚರ್ಚೆಗಳು ಜೋರಾಗಿವೆ. ಕೆಲವರು ಇದನ್ನು ಖಂಡಿಸಿದ್ರೆ, ಇನ್ನೂ ಕೆಲವರು ಇದನ್ನು ಸಮರ್ಥಿಸಿಕೊಂಡಿದ್ದಾರೆ.
ಹಿಂದೂಪರ ಸಂಘಟನೆ ಕಾರ್ಯರ್ತರಿಂದ ಮುಸ್ಲಿಂ ವ್ಯಾಪಾರಿಗಳ ಕಲ್ಲಂಗಡಿ ನಾಶ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ಕಿಡಿಕಾರಿರುವ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು, ಭಯೋತ್ಪಾದಕರಿಗೂ, ಇವರಿಗೂ ವ್ಯತ್ಯಾಸವಿಲ್ಲ ಎಂದು ಹೇಳಿದ್ದಾರೆ.
ಹಿಂದೂಪರ ಸಂಘಟನೆ ಕಾರ್ಯರ್ತರಿಂದ ಕಲ್ಲಂಗಡಿ ನಾಶ: ನಬೀಸಾಬ್ ಕುಟುಂಬಕ್ಕೆ ಎಚ್‌ಡಿಕೆ ನೆರವು
ಇನ್ನು ಈ ಬಗ್ಗೆ ಇಂದು(ಭಾನುವಾರ) ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರತಿಕ್ರಿಯಿಸಿದ್ದು, ಯಾರೇ ಕಾನೂನನ್ನ ಕೈಗೆತ್ತಿಕೊಂಡರೂ ಅದು ತಪ್ಪು. ಕಲ್ಲಂಗಡಿ ಹಣ್ಣಿನ ಬಗ್ಗೆ ಕನಿಕರ ತೋರಿಸುವವರು, ತಲೆ ಒಡೆದಾಗ ಯಾಕೆ ಕನಿಕರ ತೋರಿಸಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಪ್ರಶ್ನಿಸಿದರು.
ಕಲ್ಲಂಗಡಿ ಹಣ್ಣಿನ ಅಂಗಡಿ ಧ್ವಂಸ ವಿಚಾರದ ಕುರಿತು ಮಾತನಾಡಿದ ಅವರು, ಕುಮಾರಸ್ವಾಮಿ, ಸಿದ್ದರಾಮಯ್ಯ ಇಬ್ಬರ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಅಖಂಡ ಶ್ರೀನಿವಾಸ್ ಅವರ ಮನೆಗೆ ಬೆಂಕಿ ಬಿದ್ದಾಗ ಎಲ್ಲರೂ ಸುಮ್ಮನಿದ್ದರು. ಕಲ್ಲಂಗಡಿ ಹಣ್ಣಿನ ಬಗ್ಗೆ ತೋರಿಸುವ ಕಳಕಳಿ, ಸಂಕಟವನ್ನ ತಲೆ ಒಡೆದಾಗಲೂ ತೋರಿಸಲಿ. ತಲೆ ಒಡೆದಾಗ ಯಾಕೆ ಎಲ್ಲರೂ ಸುಮ್ಮನಿರುತ್ತಾರೆ. ನಾವು ಖಂಡಿಸಿದರೆ ವೋಟು ಹೋಗುತ್ತೆ ಅನ್ನೋ ಸಂಕಟನಾ? ಆದರೆ, ಕಾನೂನನ್ನ ಯಾರು ಕೈಗೆತ್ತಿಕೊಳ್ಳುವುದನ್ನ ನಾವು ಸಮರ್ಥಿಸುವುದಿಲ್ಲ ಎಂದರು.
ಚಂದ್ರು ಹತ್ಯೆ ಬಗ್ಗೆ ಸಚಿವರು ಮತ್ತು ಪೊಲೀಸರು ಪ್ರತ್ಯೇಕ ಹೇಳಿಕೆ ಕುರಿತು ಮಾತನಾಡಿ, ಚಂದ್ರು ಹತ್ಯೆ ಕುರಿತು ಆತನ ತಾಯಿ, ಪ್ರತ್ಯಕ್ಷದರ್ಶಿ ಹೇಳಿಕೆ ಕೊಟ್ಟಿದ್ದಾರೆ. ಆದರೆ, ಹತ್ಯೆ ಮೂಲ ಬಿಟ್ಟು ಬೇರೆಲ್ಲ ವಿಚಾರಗಳು ಚರ್ಚೆಯಾಗುತ್ತಿದೆ. ಹತ್ಯೆ ಮಾಡಿದ್ದೇ ಒಂದು ಅಪರಾಧ, ಅಂತಹ ಮನಸ್ಥಿತಿ ಯಾಕೆ ಬಂತು? ಈ ಬಗ್ಗೆ ಎಲ್ಲರೂ ಯೋಚನೆ ಮಾಡಬೇಕು. ಸಣ್ಣ-ಸಣ್ಣ ವಿಚಾರಗಳಿಗೆ ಅವರು ಯಾಕೆ ಕೆರಳುತ್ತಾರೆ. ಅಖಂಡ ಶ್ರೀನಿವಾಸ್ ಮನೆಗೆ ಯಾಕೆ ಎಲ್ಲರೂ ಸೇರಿ ಬೆಂಕಿ ಹಾಕಿದ್ದರು. ಅವರಿಗೆ ಮಾತ್ರ ರಕ್ತ ಕೆಂಪಗೆ ಇರೋದಾ, ನಮಗೆ ಇಲ್ವಾ? ಹರ್ಷನ ಹತ್ಯೆ ಮಾಡುವ ಮನಸ್ಥಿತಿ ಯಾಕೆ ಬಂತು? ಈ ಎಲ್ಲದರ ಬಗ್ಗೆ ಗಂಭೀರವಾಗಿ ಯೋಚನೆ ಮಾಡಲಿ ಎಂದು ಹೇಳಿದರು.
ಎಚ್‌ಡಿಕೆ ಆರ್ಥಿಕ ನೆರವು
ಹಿಂದೂಪರ ಸಂಘಟನೆ ಕಾರ್ಯರ್ತರಿಂದ ಮುಸ್ಲಿಂ ವ್ಯಾಪಾರಿಗಳ ಕಲ್ಲಂಗಡಿ ನಾಶ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಂಗಡಿ ಮಾಲೀಕ ನಬಿಸಾಬ್‌ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಆರ್ಥಿಕ ನೆರವು ನೀಡಿದ್ದಾರೆ. ತಮ್ಮ ಆಪ್ತರ ಮೂಲಕ ಹತ್ತು ಸಾವಿರ ರೂ. ನೆರವು ನೀಡಿದ್ದಾರೆ.
ಧಾರವಾಡ ತಾಲೂಕಿನ ನುಗ್ಗಿಕೇರಿ ಹನುಮಂತ ದೇವಸ್ಥಾನದ ಆವರಣದಲ್ಲಿದ್ದ ಹಿಂದೂಯೇತರ ಅಂಗಡಿ ಮೇಲೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನಿನ್ನೆ ದಾಳಿ ನಡೆಸಿದ್ದರು. ನಿನ್ನೆ (ಶನಿವಾರ) ನಡೆದ ಗಲಾಟೆಯಲ್ಲಿ ವ್ಯಾಪಾರಿ ನಬೀಸಾಬ್ ಅವರ 5 ರಿಂದ 6 ಕ್ವಿಂಟಾಲ್ ಕಲ್ಲಂಗಡಿ ಹಣ್ಣು ಹಾನಿಯಾಗಿತ್ತು. ಇದರಿಂದ ವ್ಯಾಪಾರಿ ನಬೀಸಾಬ್ ನಷ್ಟ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಎಚ್‌ಡಿಕೆ ಆರ್ಥಿಕ ಸಹಾಯ ಮಾಡಿದ್ದಾರೆ. ಇನ್ನು ಘಟನೆ ಬಗ್ಗೆ ಪ್ರಕ್ರಿಯಿಸಿದ್ದು, ತಿನ್ನುವ ಅನ್ನವನ್ನು ಕಿತ್ತುಕೊಂಡು ಏನ್ ಮಾಡ್ತೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.