ಪಂಚರಾಜ್ಯ ಎಲೆಕ್ಷನ್‌ಗೆ ಕಾಂಗ್ರೆಸ್‌ನಿಂದ 1,700 ಕೋಟಿ ಕಳಿಸಲು ಸಂಚು: ಬಿಜೆಪಿ

By Kannadaprabha News  |  First Published Oct 15, 2023, 6:24 AM IST

ಹಣ ಪತ್ತೆಯಾಗಿರುವ ಪ್ರಕರಣದ ಮೂಲ ಪತ್ತೆಯಾಗಬೇಕಾದರೆ ತನಿಖೆಯಾಗಬೇಕು. ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಯಾವುದೇ ಪಾತ್ರ ಇಲ್ಲದಿದ್ದರೆ ತನಿಖೆಗೊಳಪಡಿಸಬೇಕು. ಐದು ರಾಜ್ಯದ ಚುನಾವಣೆಗೆ ಎಟಿಎಂ ರೀತಿ ಕೆಲಸ ಮಾಡಲಾಗುತ್ತಿರುವ ಸರ್ಕಾರವು ಭ್ರಷ್ಟಾಚಾರ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ


ಬೆಂಗಳೂರು(ಅ.15):  ಗುತ್ತಿಗೆದಾರ ನಿವಾಸದಲ್ಲಿ ಐಟಿ ಅಧಿಕಾರಿಗಳು ಪತ್ತೆ ಮಾಡಿದ 42 ಕೋಟಿ ರು. ನಗದು ವಿಚಾರ ಸಂಬಂಧ ಸಿಬಿಐ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಶನಿವಾರ ನಗರದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರ್‌.ಅಶೋಕ್‌, ವಿಧಾನಪರಿಷತ್‌ ಸದಸ್ಯ ರವಿಕುಮಾರ್‌ ಪ್ರತ್ಯೇಕವಾಗಿ ಮಾತನಾಡಿ, ಸರ್ಕಾರ ವಿರುದ್ಧ ಟೀಕಾಪ್ರಹಾರ ನಡೆಸಿದರು. ಗುತ್ತಿಗೆದಾರ ಮನೆಗಳ ಮೇಲೆ ಐಟಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ 42 ಕೋಟಿ ರು. ಪತ್ತೆಯಾಗಿರುವ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಮತ್ತು ಒತ್ತಾಯಿಸಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯ ಸರ್ಕಾರ ಮತ್ತು ಗುತ್ತಿಗೆದಾರರು ಜೊತೆಯಾಗಿ ಲೂಟಿ ಮಾಡುತ್ತಿದ್ದು, ಕಂಟ್ರಾಕ್ಟರ್ ಅಸೋಸಿಯೇಷನ್ ಸರ್ಕಾರದ ಕಮಿಷನ್ ಕಲೆಕ್ಷನ್ ಸೆಂಟರ್ ಆಗಿದೆ. ಅಕ್ರಮ ಹಣ ಪತ್ತೆಯಾಗಿರುವ ಕುರಿತು ಇಡಿ ಹಾಗೂ ಸಿಬಿಐ ಎರಡೂ ತನಿಖೆಯಾಗಬೇಕು. ರಾಜ್ಯ ಸರ್ಕಾರ ಬಂದಾಗಿನಿಂದ ವರ್ಗಾವಣೆಯಿಂದ ಹಿಡಿದರು. ಎಲ್ಲದರಲ್ಲಿಯೂ ಭ್ರಷ್ಟಾಚಾರ ಇದೆ. ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಯಾದ ಕ್ಷಣವೇ ಗುತ್ತಿಗೆದಾರನ ಮನೆಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣ ಸಿಕ್ಕಿರುವುದು ಇದೇ ಮೊದಲು. ಸರ್ಕಾರ 10 ಪರ್ಸೆಂಟ್ ಕಮಿಷನ್ ಪಡೆದಿರುವುದು ಸಾಬೀತಾಗಿದೆ ಎಂದು ವಾಗ್ದಾಳಿ ನಡೆಸಿದರು.

Tap to resize

Latest Videos

ಸಿಎಂ, ಡಿಕೆಶಿಯಿಂದ ರಾಜ್ಯದ ಹಣ ಲೂಟಿ ಮಾಡ್ತಿ: ಕೆ.ಎಸ್‌.ಈಶ್ವರಪ್ಪ ಆರೋಪ

ಹಣ ಪತ್ತೆಯಾಗಿರುವ ಪ್ರಕರಣದ ಮೂಲ ಪತ್ತೆಯಾಗಬೇಕಾದರೆ ತನಿಖೆಯಾಗಬೇಕು. ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಯಾವುದೇ ಪಾತ್ರ ಇಲ್ಲದಿದ್ದರೆ ತನಿಖೆಗೊಳಪಡಿಸಬೇಕು. ಐದು ರಾಜ್ಯದ ಚುನಾವಣೆಗೆ ಎಟಿಎಂ ರೀತಿ ಕೆಲಸ ಮಾಡಲಾಗುತ್ತಿರುವ ಸರ್ಕಾರವು ಭ್ರಷ್ಟಾಚಾರ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದ್ದಾರೆ.

ಮಾಜಿ ಸಚಿವ ಆರ್‌.ಅಶೋಕ್‌ ಮಾತನಾಡಿ, ಗುತ್ತಿಗೆದಾರನ ಮನೆಯಲ್ಲಿ 42 ಕೋಟಿ ಹಣ ಲಭಿಸಿದ ವಿಚಾರವನ್ನು ಸಿಬಿಐ ತನಿಖೆಗೆ ಒಪ್ಪಿಸಿದರೆ ಮಾತ್ರ ನಿಜಾಂಶ ಹೊರಬರಲಿದೆ. ಕರ್ನಾಟಕವು ಭ್ರಷ್ಟಾಚಾರದ ಕೂಪವಾಗಿದೆ. ಕಾಂಗ್ರೆಸ್ಸಿಗರು ಒಂದೆಡೆ ಕತ್ತಲೆ ಭಾಗ್ಯ ನೀಡಿದ್ದಾರೆ. ಕತ್ತಲಲ್ಲಿ ಕಾಂಚಾಣದ ಮಾಯೆ ನಡೆಯುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರವು ಪಂಚರಾಜ್ಯ ಚುನಾವಣೆಗೆ ಹಣ ಕೊಡುವುದಾಗಿ ಕೇಂದ್ರ ಕಾಂಗ್ರೆಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಮಧ್ಯಪ್ರದೇಶಕ್ಕೆ 600 ಕೋಟಿ ರು., ರಾಜಸ್ಥಾನಕ್ಕೆ 200 ಕೋಟಿ ರು., ಛತ್ತೀಸಗಡಕ್ಕೆ 200 ಕೋಟಿ ರು., ತೆಲಂಗಾಣಕ್ಕೆ 600 ಕೋಟಿ ರು. ಮತ್ತು ಮಿಜೋರಾಂಗೆ 100 ಕೋಟಿ ರು. ಕೊಟ್ಟು ಸೋನಿಯಾ ಗಾಂಧಿಯವರ ಶಹಬ್ಬಾಸ್‌ಗಿರಿ ಪಡೆಯಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

ವಿಧಾನಪರಿಷತ್‌ ಸದಸ್ಯ ರವಿಕುಮಾರ್‌ ಮಾತನಾಡಿ, ಐಟಿ ದಾಳಿ ವೇಳೆ ಪತ್ತೆಯಾದ 42 ಕೋಟಿ ರು. ನಗದು ಪಂಚ ರಾಜ್ಯಗಳ ಚುನಾವಣೆಗೆ ಸಂಗ್ರಹವಾಗಿರುವ ಮೊತ್ತವಾಗಿದೆ. ಶಿವರಾಮ್‌ ಕಾರಂತ ಬಡಾವಣೆ ಗುತ್ತಿಗೆದಾರರಿಂದ 60 ಕೋಟಿ ರು.ಗಿಂತ ಹೆಚ್ಚು ಹಣ ಸಂಗ್ರಹಿಸಿ ಕಳುಹಿಸಲಾಗಿದೆ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ರಾಜ್ಯದ ಜನತೆಯ ಮೇಲೆ ಸರ್ಕಾರಕ್ಕೆ ಗೌರವ ಇದ್ದರೆ ಸಿಬಿಐ ತನಿಖೆಗೆ ಕೊಡಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹಿಂದೂಗಳ ಹತ್ಯೆ ಕಂಡು ಹೊಟ್ಟೆ ಉರಿಯುತ್ತಿದೆ: ಕೆ.ಎಸ್‌.ಈಶ್ವರಪ್ಪ

ಕರ್ನಾಟಕವು ಐದು ರಾಜ್ಯಗಳ ಚುನಾವಣೆಗೆ ಹಣ ಸಂಗ್ರಹ ಮಾಡುವ ಕಲೆಕ್ಷನ್‌ ಸೆಂಟರ್‌ ಅಲ್ಲ. ನೈತಿಕತೆ ಇದ್ದರೆ ಮುಖ್ಯಮಂತ್ರಿಗಳು ತಕ್ಷಣ ರಾಜೀನಾಮೆ ನೀಡಬೇಕು. ಅಲ್ಲದೇ, ಬೇರೆ ರಾಜ್ಯಗಳಿಗೆ ಹಣವನ್ನು ಯಶಸ್ವಿಯಾಗಿ ಕಳುಹಿಸಿದ್ದೇವೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಈ ಬಗ್ಗೆಯೂ ತನಿಖೆಯಾಗಬೇಕು ಎಂದು ಹೇಳಿದರು.

ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ಇತಿಹಾಸದಲ್ಲಿ ಇದೇ ಮೊದಲು ಒಬ್ಬ ಗುತ್ತಿಗೆದಾರನ ಮನೇಲಿ ₹42 ಕೋಟಿ ಹಣ ಸಿಕ್ಕಿದೆ! ಈ ಹಣ ಯಾರದ್ದು, ಇನ್ನು ಯಾವ ಯಾವ ಇಲಾಖೆಗೆ ವಸೂಲಿ ಮಾಡಲು ಹೊರಟಿದ್ದರು? ಈ ಹಣ ಸಿಎಂ ಅಥವಾ ಡಿಸಿಎಂಗೆ ಹೋಗುತ್ತಿತ್ತಾ? ಎಲ್ಲಾ ಹೊರಗೆ ಬರಬೇಕು ಅಂದ್ರೆ ಸಿಬಿಐ ತನಿಖೆ ಆಗಬೇಕು. ಇನ್ನು, ಕೆಂಪಣ್ಣ ಕಾಂಗ್ರೆಸ್‌ ಏಜೆಂಟ್‌ ಅನ್ನೋದು ಹಿಂದೆಯೇ ಸಾಬೀತಾಗಿತ್ತು. ಕೂಡಲೇ ಕೆಂಪಣ್ಣನ ಬಂಧಿಸಿ ತನಿಖೆಗೊಳಪಡಿಸಲಿ ಎಂದು ಆಗ್ರಹಿಸಿದರು.

click me!