ಕಾಂಗ್ರೆಸ್ಸಿನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ: ಸಿದ್ರಾಮೋತ್ಸವ ಮಾದರಿಯಲ್ಲೇ ದಲಿತೋತ್ಸವ..!

By Suvarna News  |  First Published Sep 4, 2022, 4:19 PM IST

ಕಾಂಗ್ರೆಸ್ಸಿನಲ್ಲಿ ಜೋರಾಯ್ತು ದಲಿತ ನಾಯಕತ್ವ ‘ಕೈ’ಪೋಟಿ..! ಸಿದ್ದು ಹಿಂದೆ ‘ಅವರು’ ಪರಂ ಜೊತೆಗೆ ಇವರು.. ಎಡ ಬಲದ ಫೈಟ್ ಫಿಕ್ಸ್..? ಶುರುವಾಗಿದೆ ಸೈಲೆಂಟ್ ಸಂಘರ್ಷ..ಮತ್ತೆ ಕೇಳಿ ಬರುತ್ತಾ ..ದಲಿತ ಸಿಎಂ ಕೂಗು..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ದಲಿತ ನಾಯಕತ್ವಕ್ಕೆ ‘ಕೈ’ಪೋಟಿ..!


ಬೆಂಗಳೂರು, (ಸೆಪ್ಟೆಂಬರ್.04): ಇನ್ನೊಂದು ವರ್ಷದ ಒಳಗೆ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.. ಎಲ್ಲಾ ಪಕ್ಷಗಳಿಂದ ಯುದ್ಧ ತಾಲೀಮು ಶುರುವಾಗಿದೆ. ಈ ಕ್ಷೇತ್ರದಲ್ಲಿ ನಿಲ್ಲೋರು ಯಾರು ಆ ಕ್ಷೇತ್ರದಲ್ಲಿ ಗೆಲ್ಲೋರು ಯಾರು ಅನ್ನೋ ಪ್ರಶ್ನೆಗಳೊಂದಿಗೆ ಉತ್ತರ ಹುಡುಕೋ ಕೆಲಸವೂ ಆಗ್ತಾ ಇದೆ. ಅದರ ಜೊತೆಯಲ್ಲೇ ಜಾತಿ ಲೆಕ್ಕಾಚಾರವೂ ಕೂಡ ಸೇರಿದೆ. ಕಾಂಗ್ರೆಸ್ ಪಕ್ಷದಲ್ಲಿ ಸದ್ಯ ದಲಿತ ನಾಯಕತ್ವಕ್ಕಾಗಿ ಪೈಪೋಟಿ ಜೋರಾಗೋ ಲಕ್ಷಣಗಳು ಕಾಣಿಸ್ತಾ ಇದಾವೆ. ಬನ್ನಿ ಹಾಗಾದ್ರೆ ಕೈ ಪಕ್ಷದಲ್ಲಿ ಶುರುವಾಗಿರೋ ಶೀತ ಸಂಘರ್ಷ ಎಂಥದ್ದು..? ಇದು ಮಾಡಬಲ್ಲ ಪರಿಣಾಮ ಗಂಭೀರವಾ..? ಇದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

Tap to resize

Latest Videos

ಕಾಂಗ್ರೆಸ್ಸಿನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!
ಚುನಾವಣೆಗೆ ದಿನಗಳು ಹತ್ತಿರ ಆಗ್ತಾ ಇದ್ದ ಹಾಗೇ ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗ್ತಾ ಇದಾವೆ..ಅದ್ರಲ್ಲೂ ಈಗ ಒಕ್ಕಲಿಗ ನಾಯಕ ಅಂತ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಇದ್ದಾರೆ, ಕುರುಬರ ಲೀಡರ್ ಅಂತ ವಿಪಕ್ಷ ನಾಯಕ ಸಿದ್ರಾಮಯ್ಯನವರು ಸಿಕ್ತಾರೆ, ಮುಸ್ಲಿಂ ಮುಖಂಡ ಅಂತ ಜಮೀರ್ ಅಹ್ಮದ್ ಖಾನ್ ಇದ್ದಾರೆ.. ದಲಿತ ನಾಯಕತ್ವ ಅನ್ನೋದಕ್ಕೆ ಮುಂಚೂಣಿಯಲ್ಲಿ ಯಾವ ಹೆಸರೂ ಇಲ್ಲಾ.. ಈಗ ಅದೇ ವಿಚಾರಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಕೋಲಾಹಲ ಶುರುವಾಗೋ ಲಕ್ಷಣಗಳು ಕಾಣಿಸ್ತಾ ಇದಾವೆ.

Karnataka Assembly Poll 2023 ಕಾಂಗ್ರೆಸ್ ಪಾಳಯದಲ್ಲಿ 'ದಲಿತೋತ್ಸವ' ಪೈಪೋಟಿ

ರಾಜಕೀಯ ಮತ್ತು ಜಾತಿ ಲೆಕ್ಕಾಚಾರ ಅನ್ನೋದು ಒಂದೇ ನಾಣ್ಯದ ಎರಡು ಮುಖ.. ಅದು ಎಲ್ಲಾ ಪಕ್ಷಗಳಲ್ಲೂ ಕೂಡ ಸರ್ವೇ ಸಾಮಾನ್ಯ..ಜಾತಿ , ಸಮುದಾಯದ ಲೆಕ್ಕಾಚಾರವಿಲ್ಲದೇ ರಾಜಕೀಯವನ್ನ ಮಾಡೋಕೆ ಆಗೋದಿಲ್ಲಾ.. ಅದ್ರಲ್ಲೂ ಇಡೀ ಕರ್ನಾಟಕದಲ್ಲಿ ದಲಿತ ಸಮುದಾಯ ದೊಡ್ಡ ಗಾತ್ರದಲ್ಲೇ ಇದೆ.. ದಲಿತರ ಒಲವು ಸಿಕ್ಕವರು ಅಧಿಕಾರಕ್ಕೆ ಬರೋದು ಪಕ್ಕಾ ಅಂತಲೇ ವಿಶ್ಲೇಷಿಸಲಾಗುತ್ತೆ. ಆದ್ರೆ ಕಾಂಗ್ರೆಸ್ನಲ್ಲಿ ದಲಿತ ನಾಯಕ ಯಾರು..? ತಮ್ಮ ಸಮುದಾಯದ ವಿಶ್ವಾಸ ಗಳಿಸಿಕೊಂಡು , ಪಕ್ಷಕ್ಕೆ ಆಸ್ತಿಯಾಗಬಲ್ಲ ವ್ಯಕ್ತಿ ಯಾರು ಅನ್ನೋದಕ್ಕೆ ಸಮರ್ಪಕ ಉತ್ತರವೇ ಸಿಗೋದಿಲ್ಲಾ..

ಚುನಾವಣೆ ಹತ್ತಿರ ಬರ್ತಾ ಇದ್ದ ಹಾಗೇ ಕಾಂಗ್ರೆಸ್ ಪಕ್ಷದಲ್ಲಿ ದಲಿತ ನಾಯಕತ್ವಕ್ಕಾಗಿ ಪೈಪೋಟಿ ಸದ್ದಿಲ್ಲದೇ ಶುರುವಾಗಿದೆ. ಮುಂದಿನ ಬಾರಿ ಕಾಂಗ್ರೆಸ್ ಭರ್ಜರಿ ವಿಜಯದೊಂದಿಗೆ ಅಧಿಕಾರಕ್ಕೆ ಏರುವ ತಯಾರಿ ಮಾಡಿಕೊಂಡಿದೆ..ಗೆಲ್ಲುವ ವಿಶ್ವಾಸವೂ ಅಮಿತವಾಗಿದೆ. ಈಗ ದಲಿತ ಮುಂದಾಳತ್ವಕ್ಕಾಗಿ ರೇಸ್ ಶುರುವಾಗಿದೆ.. ಆ ರೇಸಿನಲ್ಲಿ ಪ್ರಮುಖವಾಗಿ ಇರೋದೇ , ಮುನಿಯಪ್ಪ, ಜಿ ಪರಮೇಶ್ವರ್ , ಮಹದೇವಪ್ಪ ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರರು.

ದಲಿತ ಮತಗಳ ಕ್ರೋಢಿಕರಣಕ್ಕೆ ಕಾಂಗ್ರೆಸ್ ಮೆಗಾ ಪ್ಲ್ಯಾನ್
ಮೊನ್ನೆ ಮೊನ್ನೆ ತಾನೆ ಕಾಂಗ್ರೆಸ್ ಪಕ್ಷದ ರಾಜಕೀಯ ಉತ್ಸಾಹ ಸಿದ್ರಾಮೋತ್ಸವ ಅನ್ನೋ ಅಮೋಘ ಕಾರ್ಯಕ್ರಮದಿಂದ ಇಮ್ಮಡಿಯಾಗಿದೆ. ಸಿದ್ದರಾಮಯ್ಯನವರ ಜನ್ಮದಿನಕ್ಕಾಗಿ ಸೇರಿದ್ದ ಲಕ್ಷೋಪಲಕ್ಷ ಅಭಿಮಾನಿಗಳನ್ನ ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನ ಕಂಡು ಕಾಂಗ್ರೆಸ್ ಹೈಕಮಾಂಡ್ ಕೂಡ ನಿಬ್ಬೆರಗಾಗಿದೆ. ಅಭೂತಪೂರ್ವ ಸ್ಪಂದನೆ ಕಂಡು ಸಿದ್ರಾಮೋತ್ಸವ ಮಾದರಿಯಲ್ಲೇ ದಲಿತೋತ್ಸವ ಸಂಭ್ರಮಕ್ಕೆ ಸಿದ್ಧತೆಗಳು ಶುರುವಾಗಿದೆ.

ಯಾಕಾಗಿ ದಲಿತೋತ್ಸವ ಮಾಡೋಕೆ ತಯಾರಿ ಮಾಡ್ಲಾಗ್ತಾ ಇದೆ..? ಅದರ ಹಿಂದೆ ಇರೋ ಉದ್ದೇಶವೇನು ಅನ್ನೋ ಪ್ರಶ್ನೆ  ಮೂಡಬಹುದು. ದಲಿತ ಸಮುದಾಯದಲ್ಲಿ ಪ್ರಮುಖ ನಾಲ್ಕು ವರ್ಗ ಇದೆ.. ಅದು ಎಡಗೈ ಹಾಗೂ ಬಲಗೈ, ಲಂಬಾಣಿ, ಬೋವಿ.. ಬೋವಿ, ಮತ್ತು ಲಂಬಾಣಿ ಸಮುದಾಯ ಎರಡೂ ಪಕ್ಷದ ಜೊತೆಯಲ್ಲಿ ಗುರುತಿಸಿಕೊಂಡಿದ್ದಾರೆ.. ಅಂದ್ರೆ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಕಡೆಗಳಲ್ಲಿ ಬೋವಿ ಮತ್ತು ಲಂಬಾಣಿ ಸಮುದಾಯದ ಮತದಾರರು ಕಾಣ ಸಿಕ್ತಾರೆ.. ಆದ್ರೆ ಕಾಂಗ್ರೆಸ್ಸಿಗೆ ಮರಿಚಿಕೆ ಆಗಿರೋದೇ ದಲಿತ ಎಡಗೈ ಮತಗಳು.

ದಲಿತ ಎಡಗೈ ಮೊದಲಿಂದಲೂ ಬಿಜೆಪಿ ಜೊತೆ ಹೆಚ್ಚು ಗುರುತಿಸಿಕೊಂಡಿದೆ..ಅವರ ಮತಗಳನ್ನ ಸೆಳೆದರೆ ಮುಂದಿನ ಬಾರಿ ಅಧಿಕಾರಕ್ಕೇ ಏರೋದು ತುಂಬಾನೇ ಸುಲಭ ಅನ್ನೋ ಲೆಕ್ಕವನ್ನ ಕಾಂಗ್ರೆಸ್ ಹಾಕಿಕೊಂಡಿದೆ. ಹೀಗಾಗಿ ದಲಿತ ನಾಯಕರು ನಾಯಕತ್ವದ ಸೀಟಿಗಾಗಿ ಪಕ್ಷದಲ್ಲಿ ಲಾಬಿ ಮಾಡ್ತಾ ಇದಾರೆ..ಆದ್ರೆ ಕಾಂಗ್ರೆಸ್ ಪಕ್ಷಕ್ಕೆ ತಲೆ ನೋವಾಗಿರೋದು ಏನು ಅಂದ್ರೆ ಪಕ್ಷದಲ್ಲಿನ ಭಿನ್ನಮತ

ಕಾಂಗ್ರೆಸ್ಸಿಗೆ ಕಂಟಕವಾಗುತ್ತಾ ಮುನಿಯಪ್ಪನವರ ಮುನಿಸು..?
ಕೆ ಎಚ್ ಮುನಿಯಪ್ಪ.. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ..ಮುನಿಯಪ್ಪನವರು ಕೋಲಾರ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರೋರು, 1960ರಿಂದ ಸಕ್ರಿಯ ರಾಜಕಾರಣದಲ್ಲಿ ಇರೋರು. ಕೋಲಾರ ಕ್ಷೇತ್ರದಲ್ಲಿ ಅದೆಂತಾ ಹವಾ ಇಟ್ಟಿದ್ರು ಅಂದ್ರೆ ಸತತ 7 ಬಾರಿ ಗೆದ್ದು ಸಂಸದರಾಗಿ ಸೋಲರಿಯದ ನಾಯಕರಾಗಿ ಬೆಳೆದವರು. ಆದ್ರೆ ಮುನಿಯಪ್ಪ ಎಡಗೈ ದಲಿತ ಸಮುದಾಯಕ್ಕೆ ಸೇರಿದವರು.

ಕೊನೆಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರಿಂದಲೇ ಒಳ ಏಟು ತಿಂದು ಸೋಲನ್ನ ಕಂಡ್ರು ಅಂತಲೇ ಹೇಳಲಾಗುತ್ತೆ. ಸತತ 7 ಬಾರಿ ಕಾಂಗ್ರೆಸ್ ನಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಮುನಿಯಪ್ಪ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲುಕಂಡಿದ್ರ ಹಿಂದೆ ಮಾಜಿ ಸಿಎಂ ಸಿ್ದರಾಮಯ್ಯನವರ ದಾಳ ಇದೆ ಅನ್ನಲಾಗುತ್ತೆ.. ಅದ್ರಲ್ಲೂ  ಇತ್ತೀಚೆಗೆ ಪಕ್ಷದಲ್ಲಿ ಕಡೆಗಣಿಸಲಾಗ್ತಿದೆ ಅನ್ನೋ ಮುನಿಸು ಮುನಿಯಪ್ಪನವರದ್ದಯ..ಈ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು ಮಾಜಿ ಕೇಂದ್ರ ಸಚಿವ ಮುನಿಯಪ್ಪ.

ಎಲ್ಲಾ ಹಿರಿಯ ನಾಯಕರಿಗೆ ಒಂದು ಗುಣ ಇರುತ್ತೆ.. ನಮ್ಮ ಸಲಹೆ ಸೂಚನೆ ಕೇಳಬೇಕು, ಪಾಲಿಸಬೇಕು ಅನ್ನೋದು. ಆದರೆ ಸೋತ ಮೇಲೆ ಕಾಂಗ್ರೆಸ್ಸಿನಲ್ಲಿ ಮುನಿಯಪ್ಪನವರನ್ನ್ನ ಮಾತಾಡಿಸೋರೇ ಇಲ್ಲ ಅನ್ನೋ ಥರ ಆಗಿದೆ. ಡಾ. ಎಂ.ಸಿ ಸುಧಾಕರ್, ಕೊತ್ತನೂರು ಮಂಜುನಾಥ್ ರನ್ನ ಪಕ್ಷಕ್ಕೆ ಸೇರಿಸಿಕೊಂಡಿರುವುದ್ಕೆ ಆಕ್ರೋಶಗೊಂಡಿದ್ದಾರೆ ಕೆ ಎಚ್ ಮುನಿಯಪ್ಪ. ರಮೇಶ್ ಕುಮಾರ್ ಜೊತೆಗೆ ಬಹಿರಂಗವಾಗಿ ಜಗಳ ಮಾಡಿಕೊಂಡಿದ್ರು. ಪಕ್ಷವನ್ನ ತೊರೆಯುವ ಸೂಚನೆ ಕೊಟ್ಟಿದ್ದರು..  ಜೆಡಿಎಸ್ ಸೇರ್ತಾರಂತೆ ಮುನಿಯಪ್ಪ ಅನ್ನೋ ಗುಸುಗುಸು ಶುರುವಾಗಿತ್ತು.. ಆದ್ರೆ ಪಕ್ಷ ಬಿಡೋದಿಲ್ಲ ಅನ್ನೋದು ಮುನಿಯಪ್ಪನವರ ಮಾತು.

ಒಂದು ಕಡೆ ಮುನಿಯಪ್ಪನವರ ಸೋಲಿಗೆ ಕಾಂಗ್ರೆಸ್ ಕಾರಣ ಅನ್ನೋ ಮಾತು ಇನ್ನೊಂದು ಕಡೆ ಬಲಗೈ ದಲಿತ ಸಮುದಾಯಕ್ಕೆ ಸೇರಿದ ಪರಮೇಶ್ವರ್ ಅವರ ಅಸಮಾಧಾನ..ಅಲ್ಲಿಯೂ ಕೂಡ ಕಾಂಗ್ರೆಸ್ ಒಳ ಏಟೇ ಪರಂ ಸೋಲಿಗೆ ಕಾರಣ ಅನ್ನಲಾಗ್ತಾ ಇತ್ತು.. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಅನೇಕ ಬಾರಿ ಅದೇ ವಿಚಾರವನ್ನ ಇಟ್ಕೊಂಡು ಟೀಕೆಯನ್ನೂ ಮಾಡಿದ್ರು.

ಬಲಗೈ ಪ್ರಮುಖ ನಾಯಕರು ಅಂತ ಬಂದರೆ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಮಹದೇವಪ್ಪ ಮುಂಚೂಣಿ ನಾಯಕರು, ಹಲವು ನಾಯಕರು ಇದ್ದಾರೆ..ಎಡಗೈ ಅಂತ ಬಂದಾಗ ಕಾಂಗ್ರೆಸ್ ನಲ್ಲಿ ಇರುವುದೇ ಮೂವರು ಪ್ರಮುಖ ನಾಯಕರು..ಅವರೇ ಮುನಿಯಪ್ಪ, ಆರ್ ಬಿ ತಿಮ್ಮಾಪುರ ಹಾಗೂ ಹೆಚ್ ಆಂಜನೇಯ
ಫ್ಲೋ: 

ಎಡಗೈ ದಲಿತರು ಹೆಚ್ಚು ಬಿಜೆಪಿ ಜೊತೆ ಒಲವನ್ನ ತೋರಿಸ್ತಾರೆ..ಮೊದಲಿನಿಂದಲೂ ಕೂಡ ಬಿಜೆಪಿಗೆ ಬೆಂಬಲಿಸಿಕೊಂಡು ಬಂದಿದ್ದಾರೆ. ಅವರನ್ನು ಕಾಂಗ್ರೆಸ್ ಗೆ ಕರೆ ತರುವುದು ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯವಾಗಿದೆ.  ಅದರ ಪ್ರಯತ್ನವೇ ದಲಿತೋತ್ಸವ.. ಸಿದ್ರಾಮೋತ್ಸವ ಮಾದರಿಯಲ್ಲೇ ದಲಿತೋತ್ಸವ.

ಈಗ ಮುನಿಯಪ್ಪ ಕಾಂಗ್ರೆಸ್ ಪಕ್ಷದ ವಿರುದ್ಧ ಮುನಿಸಿಕೊಂಡಿರುವುದರಿಂದ ಅವರಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡುವ ಮೂಲಕ ಪಕ್ಷದಲ್ಲಿ ಅವರನ್ನು ಉಳಿಸಿಕೊಳ್ಳುವುದು ಹಾಗೂ ಎಡಗೈ ದಲಿತ ಸಮುದಾಯವನ್ನು ಕಾಂಗ್ರೆಸ್ ನತ್ತ ಸೆಳೆಯುವುದು ಕಾಂಗ್ರೆಸ್ ಪಕ್ಷದ ತಂತ್ರಗಾರಿಕೆ ಆಗಿದೆ..ಇದಕ್ಕಾಗಿ ಮುನಿಯಪ್ಪ ವಿರುದ್ಧ ಹರಿಹಾಯ್ತಾ ಇರೋ ಉಳಿದ ನಾಯಕರ ಬಾಯನ್ನ ಮುಚ್ಚಿಸಲೇ ಬೇಕಾದ ಅನಿವಾರ್ಯತೆ ರಾಜ್ಯ ಕಾಂಗ್ರೆಸ್ಸಿನದ್ದು.. ಒಂದು ವೇಳೆ ಮುನಿಯಪ್ಪನವರಿಗೆ ಸೂಕ್ತ ಸ್ಥಾನ ಮಾನ ಸಿಗದೇ ಇದ್ದಲ್ಲಿ ಪಕ್ಷ ತೊರೆದು ಇನ್ನೊಂದು ಕಡೆ ಗಮನ ಹರಿಸಬಹುದು.. ಅಥವಾ ಪಕ್ಷದಲ್ಲೇ ಇದ್ಕೊಂಡು ಪ್ರತಿಕಾರಕ್ಕಾಗಿ ಕಾಯಬಹುದು.. ಎರಡೂ ಕುಡ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಮಾಡೋದ್ರಲ್ಲಿ ಅನುಮಾನವಿಲ್ಲಾ. 

ಆಗಲೇ ಹೇಳಿದ ಹಾಗೇ ಕಾಂಗ್ರೆಸ್ ನಲ್ಲಿ ಎಡಗೈ ದಲಿತ ಲೀಡರ್ ಅಂತ ಬಂದಾಗ ಪ್ರಮುಖವಾಗಿ ಮುನಿಯಪ್ಪ, ಮಾಜಿ ಸಚಿವ ಹೆಚ್ ಆಂಜನೇಯ ಆರ್ ಬಿ ತಿಮ್ಮಾಪುರ ಪ್ರಮುಖವಾದವರು.. ಆದ್ರೆ ಈಗಾಗಲೇ ತಮ್ಮ ಜೊತೆಗೆ ಇರೋ ದಲಿತ ಎಡಗೈ ಮತಗಳ ಜೊತೆಗೆ ದಲಿತ ಬಲಗೈ ವೋಟುಗಳನ್ನ ಸೆಳೆಯೋ ತಂತ್ರಕ್ಕೆ ಭಾರತೀಯ ಜನತಾ ಪಾರ್ಟಿ ಮುಂದಾಗಿದೆ. ಬಿಜೆಪಿ ಎಡಗೈ ದಲಿತರ ಬಳಿಕ ಬಲಗೈ ದಲಿತ ಸಮುದಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದಕ್ಕೆ ಶುರುಮಾಡಿದೆ.. ಇದು ಕಾಂಗ್ರೆಸ್ ಪಾಲಿಗೆ ಅಸಲಿ ತಲೆನೋವು ಅನ್ನೋದ್ರಲ್ಲಿ ಅನುಮಾನವಿಲ್ಲಾ.

ದಲಿತೋತ್ಸವ ಮಾಡುವ ಮೂಲಕ ಸಮುದಾಯವನ್ನು ಹಿಡಿದಿಟ್ಟುಕೊಳ್ಳುವುದು ಕಾಂಗ್ರೆಸ್ಗೆ ಅನಿವಾರ್ಯ, ಯಾಕೆಂದ್ರೆ ಮತ ಸಮರಕ್ಕೆ ಹೆಚ್ಚು ದಿನ ಉಳಿದಿಲ್ಲಾ. ಈಗಿನಿಂದಲೇ ಸಮರ ತಂತ್ರಗಳನ್ನ ಹೆಣೆಯಲೇ ಬೇಕು, ಸಿದ್ದರಾಮಯ್ಯೋತ್ಸವದ ಮೂಲಕ ಕುರುಬರ ವೋಟ್ ಬ್ಯಾಂಕ್ ಅನ್ನು ಕಾಂಗ್ರೆಸ್ ನಲ್ಲಿ ಉಳಿಸಿಕೊಳ್ಳುವ ಪ್ಲಾನ್ ಸಕ್ಸಸ್ ಆದ ಸೂಚನೆ ಸಿಕ್ಕಿದೆ.. ಕುರುಬ ನಾಯಕ ಸಿದ್ರಾಮಯ್ಯನವರಿಂದ ಒಂದು ಸಮುದಾಯ ಕೈ ಪಕ್ಷದ ಕೈ ಹಿಡಿಯೋದು ಪಕ್ಕಾ ಅನ್ನೋದು ಕಾಂಗ್ರೆಸ್ ಲೆಕ್ಕ..ಹೀಗಾಗಿ ಸಿ್ದರಾಮೋತ್ಸವ ಬೆನ್ನಲ್ಲೇ ದಲಿತ ಸಮುದಾಯವನ್ನು ಕಾಂಗ್ರೆಸ್ ನಲ್ಲಿ ಉಳಿಸಿಕೊಳ್ಳುವ ಸಲುವಾಗಿ ದಲಿತೋತ್ಸವ ನಡೆಸಲು ಚಿಂತನೆ ನಡೆಸಲಾಗಿದೆ. ಬಿಜೆಪಿ ಪಕ್ಷ ಬಲಗೈ ದಲಿತ ಸಮುದಾಯದ ವೋಟ್ ಬ್ಯಾಂಕಿಗೆ ಕೈ ಹಾಕಿರುವುದು ಕಾಂಗ್ರೆಸ್ನ ದಲಿತೋತ್ಸವಕ್ಕೆ ಕಾರಣವಾಗುತ್ತಿದೆ .

ಚುನಾವಣೆ ವರ್ಷದಲ್ಲಿ ಜಾತಿ ಸಮಾವೇಶಗಳು ಸಹಜವಾಗಿ ನಡೆಯುವಂತ ಪ್ರಕ್ರಿಯೆ. ಆಯಾ ಜಾತಿಯ ನಾಯಕರು ತಮ್ಮ ಶಕ್ತಿ ಪ್ರದರ್ಶನವನ್ನ ಮಾಡಿಕೊಳ್ತಾರೆ, ತಮ್ಮ ಮತಗಳನ್ನ ಭದ್ರ ಮಾಡಿಕೊಳ್ಳೋ ಕೆಲಸ ಮಾಡ್ತಾರೆ.. ಇದು ಪ್ರತಿ ರಾಜಕೀಯ ಪಕ್ಷದ ಲೆಕ್ಕ..ಹೀಗಾಗಿ ಕಾಂಗ್ರೆಸ್ ದಲಿತೋತ್ಸವದ ಮೂಲಕ ದಲಿತ ನಾಯಕರಿಗೆ ಯಾವೆಲ್ಲ ಅವಕಾಶಗಳನ್ನು ಮಾಡಿಕೊಟ್ಟಿದ್ದೇವೆ, ದಲಿತರ ಪರವಾಗಿ ನಾವು ಕೊಡುಗೆ ಕೊಟ್ಟಿದ್ದೇನು..? ದಲಿತ ಸಮುದಾಯಕ್ಕೆ ಯಾವೆಲ್ಲ ಅನುಕೂಲಗಳನ್ನು ಮಾಡಿಕೊಟ್ಟಿದ್ದೇವೆ ಎಂಬುದನ್ನು ತಿಳಿಸುವುದು ದಲಿತೋತ್ಸವದ ಮುಖ್ಯ ಅಜೆಂಡ ಆಗಿದೆ.
ಈ ಮೂಲಕ ದಲಿತ ಮತ ಬ್ಯಾಂಕನ್ನು ಕಾಂಗ್ರೆಸ್ ಸೆಳೆಯುವುದು ಜೊತೆಗೆ ಇರುವ ಮತ ಬ್ಯಾಂಕನ್ನು ಉಳಿಸಿಕೊಳ್ಳುವಂತಹ ತಂತ್ರಕ್ಕೆ ಮೊರೆ ಹೋಗಿದೆ.

ದಲಿತ ಸಮುದಾಯದ ಮತಗಳು ಪ್ರತಿ ಕ್ಷೇತ್ರದಲ್ಲೂ ಕೂಡ ನಿರ್ಣಾಯಕ ಅನ್ನೋದ್ರಲ್ಲಿ ಅನುಮಾನವಿಲ್ಲಾ. ಬಿಜೆಪಿ ಈ ಹಿಂದಿನಿಂದಲೂ ಕೂಡ ಕೇಂದ್ರ ಮಟ್ಟದಲ್ಲಿ ನಮ್ಮದು ದಲಿತರ ಪರವಾದ ಪಕ್ಷ ಅಂತ ಆಗಾಗ ಸಾಬೀತು ಮಾಡಿಕೊಂಡೇ ಬಂದಿದೆ.. ಉದಾಹರಣೆಗೆ ದಲಿತ ಸಮುದಾಯದ ರಾಷ್ಟ್ರಪತಿಯಾಗಿ ನರೇಂದ್ರ ಮೋದಿಯವರು ರಾಮನಾಥ ಕೋವಿಂದ್ ಅವರನ್ನ ಆಯ್ಕೆ ಮಾಡಿದ್ದರು..ಈಗ ಬುಡಕಟ್ಟು ಜನಾಂಗದ ಮಹಿಳೆ ದ್ರೌಪದಿ ಮುರ್ಮು ಅವರನ್ನ ಪ್ರಥಮ ಪ್ರಜೆ ಮಾಡಿದ್ದಾರೆ. ಹೀಗಾಗಿ ಬಿಜೆಪಿಗೆ ದಲಿತರ ಮತವನ್ನ ಸೆಳೆಯೋದು ಕಷ್ಟವಾಗೋದಿಲ್ಲ..

ಆದ್ರೆ ಕಾಂಗ್ರೆಸ್ ಸ್ಥಿತಿ ಭಿನ್ನವಾಗಿದೆ. ಎಡಗೈ ಬಲಗೈ ಸಂಘರ್ಷಗಳು ಪಕ್ಷದಲ್ಲೇ ನಡೀತಾ ಇದೆ. ದಲಿತರಲ್ಲೇ ಇರೋ ಉಪಜಾತಿಗಳಿಂದ ಪಕ್ಷದಲ್ಲಿ ಒಗ್ಗಟ್ಟು ಸ್ಥಾಪಿಸೋದೇ ಸವಾಲಾಗಿದೆ. ಹೀಗಾಗಿ ದಲಿತೋತ್ಸವ ಕಾರ್ಯಕ್ರಮ ಮಾಡಿ ಒಂದೇ ಸೂರಿನಡಿಯಲ್ಲಿ ದಲಿತ ಸಮುದಾಯದ ಎಲ್ಲಾ ನಾಯಕರನ್ನ ಸೇರಿಸಿ ಒಗ್ಗಟ್ಟು ಪ್ರದರ್ಶನ ಮಾಡೋದೇ ಕಾಂಗ್ರೆಸ್ ಗುರಿ.

ಕರ್ನಾಟಕ ಕಾಂಗ್ರೆಸ್ನಲ್ಲಿ  ‘ದಲಿತ’ ಪಾಲಿಟಿಕ್ಸ್ ಜೋರಾಗ್ತಾ ಇದೆ. ಆದ್ರೆ ಈ ಹಿಂದೆ ದಲಿತ ಬಲಗೈ ನಾಯಕರಿಗೆ ಕಾಂಗ್ರೆಸ್ ಮಣೆ ಹಾಕುತ್ತಿದೆ ಅನ್ನೋ ಅಸಮಾಧಾನವನ್ನ ದಲಿತ ಎಡಗೈ ನಾಯಕರು ಮಾಡಿದ್ದರು.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ಗೆ ಪಕ್ಷದಲ್ಲಿ ದೊಡ್ಡ ಹುದ್ದೆಯನ್ನ ನೀಡಿದ್ದಾರೆ, ದಲಿತ ಬಲಗೈ ನಾಯಕ ಧ್ರುವನಾರಾಯಣ್ಗೆ ಕಾರ್ಯಾಧ್ಯಕ್ಷ ಸ್ಥಾನ ಕೊಡಲಾಗಿದೆ, ಇದೀಗ ಕಾರ್ಯಾಧ್ಯಕ್ಷ ಸ್ಥಾನವೂ ಬಲಗೈ ಅವರಿಗೆ ನೀಡಿದ್ಯಾಕೆ..? ಅನ್ನೋ ವಿಚಾರವನ್ನ ಇಟ್ಕೊಂಡು ಆರ್ ಬಿ ತಿಮ್ಮಾಪುರ , ಹನುಂತಯ್ಯ ಹಾಗೂ ಹೆಚ್ ಆಂಜನೇಯ ಹೈಕಮಾಂಡಿಗೆ ದೂರು ಸಲ್ಲಿಸೋಕೆ ತಯಾರಿಯನ್ನೂ ಮಾಡಿದ್ದರು..

ದಲಿತ ಎಡಗೈ ನಾಯಕರಿಗೆ ಕಾರ್ಯಾಧ್ಯಕ್ಷ ಸ್ಥಾನ ‌ನೀಡಿ ಅನ್ನೋ ಮನವಿಯನ್ನ ಈ ಮೂವರು ದಲಿತ ಎಡಗೈ ನಾಯಕರು ಸಿದ್ದರಾಮಯ್ಯ, ಡಿಕೆಶಿ ಭೇಟಿ ಮಾಡಿ ತಿಳಿಸಿದ್ದರು..ಖರ್ಗೆ, ಪರಂ ಹಸ್ತಕ್ಷೇಪದಿಂದ ದಲಿತ ಎಡಗೈ ನಾಯಕರು ಸೈಡ್ಲೈನ್ ಆಗ್ತಿದ್ದಾರೆ ಅನ್ನೋ ಮಾತಿಗೆ ಪುಷ್ಟಿ ಕೊಡೋ ಥರ ಇತ್ತು. ಅದಾದ ಮೇಲೆ ಸಿದ್ರಾಮಯ್ಯ ದಲಿತ ಎಡಗೈ ಸಮುದಾಯದ ಪರ ನಿಂತಿದ್ದರು. ಧ್ರುವ ನಾರಾಯಣ್ ಜತೆಗೆ ದಲಿತ ಎಡಗೈ ನಾಯಕರಿಗೆ ಮಣೆ ಹಾಕಿ ಎಂದು ಸಿದ್ದು ಹೇಳಿದ್ದರು.

ಚುನಾವಣಾ ಸಮಯದಲ್ಲಿ ಇದೇ ವಿಚಾರ ದೊಡ್ಡದಾಗಿ ಪಕ್ಷದಲ್ಲಿ ಸ್ಫೋಟವಾದರೂ ಅಚ್ಚರಿಯಿಲ್ಲಾ.. ಹಾಗೇ ದಲಿತ ಸಿಎಂ ಅನ್ನೋ ಕೂಗು ಪ್ರತಿ ಬಾರಿ ಚುನಾವಣೆ ಬಂದಾಗ ಶುರುವಾಗುತ್ತೆ, ಆನಂತರ ಕಾಣದಂತೆ ಮಾಯವಾಗುತ್ತೆ.. ಆದ್ರೆ ಈ ಬಾರಿ ಸಿದ್ರಾಮೋತ್ಸದ ಎಫೆಕ್ಟ್ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಸಿದ್ದುವೇ ಎರಡನೇ ಬಾರಿ ಸಿಎಂ ಆಗ್ತಾರೆ ಅನ್ನೋದು ನಿರ್ವಿವಾದ.. ಒಟ್ಟಿನಲ್ಲಿ ದಲಿತರ ಮತಗಳ ಮೇಲೆ ಕಣ್ಣಿಟ್ಟಿರೋ ಕಾಂಗ್ರೆಸ್ ಲೆಕ್ಕಚಾರಗಳ ಫಲಿತಾಂಶ ಚುನಾವಣೆ ನಂತರವಷ್ಟೇಗೊತ್ತಾಗಲಿದೆ.

click me!