ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ರೈತವಿರೋಧಿ ನೀತಿ ಜತೆಗೆ ಸುಳ್ಳು ಆಶ್ವಾಸನೆಗಳ ಮೂಲಕ ಜನಸಾಮಾನ್ಯರನ್ನು, ರೈತರನ್ನು ದಿಕ್ಕು ತಪ್ಪಿಸುತ್ತಿದೆ. ಈ ಹಿನ್ನೆಲೆ ಸಂಸದರು ಹಾಗೂ ಶಾಸಕರ ನಿರ್ಲಕ್ಷ್ಯ ವರ್ತನೆ ಖಂಡಿಸಿ ರೈತರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಶಿಕಾರಿಪುರ (ಸೆ.4) : ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ರೈತವಿರೋಧಿ ನೀತಿ ಜತೆಗೆ ಸುಳ್ಳು ಆಶ್ವಾಸನೆಗಳ ಮೂಲಕ ಜನಸಾಮಾನ್ಯರನ್ನು, ರೈತರನ್ನು ದಿಕ್ಕು ತಪ್ಪಿಸುತ್ತಿದೆ. ಈ ಹಿನ್ನೆಲೆ ಸಂಸದರು ಹಾಗೂ ಶಾಸಕರ ನಿರ್ಲಕ್ಷ್ಯ ವರ್ತನೆ ಖಂಡಿಸಿ ಮುಗ್ದ ರೈತರನ್ನು ಜಾಗೃತಗೊಳಿಸುವ ದಿಸೆಯಲ್ಲಿ 12ರಂದು ತಾಲೂಕಿನ ವಿವಿಧ ಗ್ರಾಮದ ರೈತರು, ರೈತ ಸಂಘಗಳ ಜತೆಗೂಡಿ ತಾಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಪುರಸಭೆ ಸದಸ್ಯ ಎಸ್.ಪಿ. ನಾಗರಾಜಗೌಡ ಹೇಳಿದರು.
ಪಟ್ಟಣದ ಸುದ್ದಿಮನೆಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 8 ವರ್ಷಗಳಿಂದ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷ ರೈತವಿರೋಧಿ ನೀತಿ ಜತೆಗೆ ಸುಳ್ಳು ಆಶ್ವಾಸನೆ ಮೂಲಕ ಮುಗ್ದ ರೈತರನ್ನು ನಿರಂತರವಾಗಿ ಶೋಷಣೆ ಮಾಡುತ್ತಿದೆ. ಬಗರ್‌ಹುಕುಂ ಸಾಗುವಳಿದಾರರಿಗೆ, ಇನಾಂ ಭೂಮಿ ರೈತರಿಗೆ, ಅರಣ್ಯ ಭೂಮಿ ಸಾಗುವಳಿದಾರರಿಗೆ, ಶರಾವತಿ ನದಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ದೊರಕಿಸುವುದಾಗಿ ಸುಳ್ಳು ಆಶ್ವಾಸನೆ ನೀಡಿ, ಇದುವರೆಗೂ ಒಬ್ಬ ರೈತರಿಗೆ ಹಕ್ಕುಪತ್ರ ನೀಡದೇ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು.
ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಸೇರಿಸಿ ಭೂಮಿಯನ್ನು ಉಳುಮೆ ಮಾಡುತ್ತಿರುವ ರೈತರಿಗೆ ನೋಟಿಸ್ ನೀಡಲಾಗುತ್ತಿದೆ. ಕ್ಷೇತ್ರದ ಶಾಸಕರು 4 ಬಾರಿ ಮುಖ್ಯಮಂತ್ರಿಯಾಗಿ ಹಕ್ಕುಪತ್ರ ವಿತರಿಸಿಲ್ಲ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ವಿರೋಧ ಪಕ್ಷದವರು ತಮ್ಮ ತಪ್ಪುಗಳನ್ನು ಎತ್ತಿಹಿಡಿಯುವರೆಂದು ತಿಳಿದು ಪ್ರವಾಸಿ ಮಂದಿರದಲ್ಲಿ, ಸಭೆ- ಸಮಾರಂಭಗಳಲ್ಲಿ ರೈತರನ್ನು ಒಗ್ಗೂಡಿಸಿಕೊಂಡು ಎಂತಹ ಸಂದರ್ಭದಲ್ಲಿಯೂ ಸಾಗುವಳಿದಾರರನ್ನು ಕೈ ಬಿಡುವುದಿಲ್ಲ ಎಂದು ಸುಳ್ಳು ಮತ್ತು ತಪ್ಪು ಮಾಹಿತಿಗಳನ್ನು ನೀಡುತಿದ್ದಾರೆ ಎಂದು ದೂರಿದರು.
ರೈತ ವಿರೋಧಿ ಬಿಜೆಪಿಯನ್ನು ಸೋಲಿಸಿ: ಎಸ್.ಆರ್. ಹಿರೇಮಠ
ಮುಖಂಡ ಮಾರವಳ್ಳಿ ಉಮೇಶ್ ಮಾತನಾಡಿ, ರೈತರಿಗೆ ಪದೇಪದೇ ನೀಡುವ ಸುಳ್ಳು ಆಶ್ವಾಸನೆಗೆ ಅಂತ್ಯ ಕಾಣಿಸಲು ತಾಲೂಕಿನ ರೈತ ಸಂಘ, ಹಸಿರು ಸೇನೆ, ಸುವರ್ಣ ಕರ್ನಾಟಕ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಕಾಂಗ್ರೆಸ್ ಪಕ್ಷದ ಹೋರಾಟಕ್ಕೆ ಬೆಂಬಲ ಸೂಚಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿವೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಭಂಡಾರಿ ಮಾಲತೇಶ್, ತಾಲೂಕು ಎಸ್‌ಸಿ ಘಟಕದ ಅಧ್ಯಕ್ಷ ತಿಮ್ಮಣ್ಣ, ಬಂಜಾರ ಹಾಗೂ ಕಾಂಗ್ರೆಸ್ ಮುಖಂಡ ಶೇಖರ್ ನಾಯ್ಕ…, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕ್ ನಾಯ್ಕ… ಮತ್ತಿತರರು ಉಪಸ್ಥಿತರಿದ್ದರು.