*ಜನರನ್ನು ಕಾಂಗ್ರೆಸ್ಸಿಗರು ಪದೇ ಪದೇ ಮರುಳು ಮಾಡಲು ಆಗದು
*ಕಾನೂನಾತ್ಮ ಅಂಶ ಗಮನಿಸಿದ್ದರೆ ಅವರು ಈ ಯಾತ್ರೆ ಮಾಡ್ತಿರಲಿಲ್ಲ
*ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ಕಾಂಗ್ರೆಸ್ ಸಲ್ಲಿಸಲಿಲ್ಲ
ಬೆಂಗಳೂರು (ಜ. 10): ಕಾಂಗ್ರೆಸ್ ಪಕ್ಷದ ಮುಖಂಡರಿಗೆ (Congress Leaders) ಪಾಪ ಪ್ರಜ್ಞೆ ಕಾಡುತ್ತಿದೆ. ಹೀಗಾಗಿ, ಜನರನ್ನು ಮರುಳು ಮಾಡಲು ರಾಜಕೀಯ ಪ್ರೇರಿತ ಪಾದಯಾತ್ರೆ ಕೈಗೊಂಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕಿಡಿಕಾರಿದ್ದಾರೆ. ಭಾನುವಾರ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜನರನ್ನು ಪದೇ ಪದೇ ಮರುಳು ಮಾಡಲು ಆಗುವುದಿಲ್ಲ. ಮೇಕೆದಾಟು ಯೋಜನೆಯಲ್ಲಿ ಅಂತಾರಾಜ್ಯ ಜಲ ವಿವಾದದಲ್ಲಿನ ಕಾನೂನಾತ್ಮಕ ವಿಷಯಗಳು, ಕಾವೇರಿ ಟ್ರಿಬ್ಯುನಲ… ತೀರ್ಪು, ನ್ಯಾಯಾಲಯದ ಆದೇಶಗಳನ್ನು ಗಮನಿಸಿದ್ದರೆ ಕಾಂಗ್ರೆಸ್‌ನವರು ಈ ಪಾದಯಾತ್ರೆ ಕೈಗೊಳ್ಳುತ್ತಿರಲಿಲ್ಲ. ಆದರೆ ಕಾಂಗ್ರೆಸ್‌ನವರಿಗೆ ಬೇಕಿರುವುದು ರಾಜಕೀಯ. ಈ ಬಗ್ಗೆ ಜನತೆ ತೀರ್ಮಾನ ಕೈಗೊಳ್ಳುತ್ತಾರೆ’ ಎಂದರು.
ಡಿಪಿಆರ್ ಸರಿ ಇಲ್ಲ: ಬೊಮ್ಮಾಯಿ
undefined
‘ಹಿಂದಿನ ಕಾಂಗ್ರೆಸ್ ಸರ್ಕಾರದ ಐದು ವರ್ಷದ ಅವಧಿಯಲ್ಲಿ ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಸಮರ್ಪಕವಾಗಿ ಸಲ್ಲಿಸಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಬದ್ಧತೆ ಇಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಇದೇ ಡಿ.ಕೆ.ಶಿವಕುಮಾರ್ ಅವರು ನೀರಾವರಿ ಸಚಿವರಾಗಿದ್ದರು. ಆಗಲೂ ಈ ಯೋಜನೆ ಬಗ್ಗೆ ಕ್ರಮ ವಹಿಸಲಿಲ್ಲ. ಕಳೆದ ಮೂರು ವರ್ಷಗಳಿಂದಲೂ ಇದರ ಬಗ್ಗೆ ಚಕಾರ ಎತ್ತಿರಲಿಲ್ಲ. ಈಗ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ರಾಜಕೀಯ ಪಾದಯಾತ್ರೆ ಕೈಗೊಂಡಿದ್ದಾರೆ’ ಎಂದು ಲೇವಡಿ ಮಾಡಿದರು.
‘ಕಾಂಗ್ರೆಸ್ ಪಕ್ಷ ಯಾವುದೇ ನೀರಾವರಿ ಯೋಜನೆಗಳ ಬಗ್ಗೆ ಬದ್ಧತೆಯಿಂದ ಕೆಲಸ ಮಾಡಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿವರ್ಷ 10 ಸಾವಿರ ಕೋಟಿ ಅನುದಾನ ನೀಡುವುದಾಗಿ ಕೃಷ್ಣೆ ಪಾದಯಾತ್ರೆ ಕೈಗೊಂಡು ಪ್ರಮಾಣ ಮಾಡಿದರು. ಆದರೆ 5 ವರ್ಷದ ಅವಧಿಯಲ್ಲಿ ಒಟ್ಟು 7 ಸಾವಿರ ಕೋಟಿ ರು.ಗಳಷ್ಟೂಬಿಡುಗಡೆ ಮಾಡಲಿಲ್ಲ’ ಎಂದರು.
ಇದನ್ನೂ ಓದಿ: Mekedatu padayatra ಪಾದಯಾತ್ರೆ ಮಾಡದಂತೆ ಸಿದ್ದರಾಮಯ್ಯಗೆ ಹೇಳಿದ್ಯಾಕೆ? ಸ್ಪಷ್ಟನೆ ಕೊಟ್ಟ ಡಿಕೆಶಿ
‘ಆದರೆ, ಬಿಜೆಪಿ ಸರ್ಕಾರ ಮೇಕೆದಾಟು ಯೋಜನೆಯ ಬಗ್ಗೆ ಬದ್ಧತೆ ಪ್ರದರ್ಶಿಸಿದೆ. ನಾನು ಮುಖ್ಯಮಂತ್ರಿಯಾದ ನಂತರ ಡಿಪಿಆರ್ ಅನ್ನು ಅನುಮೋದನೆಗಾಗಿ ಕೇಂದ್ರ ಜಲ ಆಯೋಗದಿಂದ ಕಾವೇರಿ ನಿರ್ವಹಣಾ ಮಂಡಳಿಗೆ ಈಗಾಗಲೇ ಕಳುಹಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಸಭೆಯನ್ನು ಈ ತಿಂಗಳಲ್ಲಿ ನಡೆಸಲಾಗುತ್ತಿದ್ದು, ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ. ಸುಪ್ರೀಂ ಕೋರ್ಟಲ್ಲಿ ಈ ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತಿರುವುದು ಸರ್ಕಾರದ ಗಮನದಲ್ಲಿದೆ’ ಎಂದು ತಿಳಿಸಿದರು.ಕೋವಿಡ್ ನಿಯಮ ಉಲ್ಲಂಘಿಸಿ ಪಾದಯಾತ್ರೆ ಕೈಗೊಳ್ಳುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈಗಾಗಲೇ ನೋಟೀಸ್ ನೀಡಲಾಗಿದೆ. ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಮುಖ್ಯಮಂತ್ರಿಗಳು ಹೇಳಿದರು.
ನನ್ನನ್ನು ಮತ್ತೆ ಜೈಲಿಗೆ ಹಾಕಿಸಲು ಷಡ್ಯಂತ್ರ: ಡಿಕೆಶಿ
ನನ್ನನ್ನು ಮತ್ತೆ ಜೈಲಿಗೆ ಹಾಕಿಸಬೇಕೆಂದು ಷಡ್ಯಂತ್ರ ಮಾಡ್ತಿದ್ದಾರೆ. ಆದ್ರೆ ನಾನು ಷಡ್ಯಂತ್ರಕ್ಕೆ ಹೆದರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತೆ ಗುಡುಗಿದ್ದಾರೆ. ಸ್ವಗ್ರಾಮ ದೊಡ್ಡಆಲಹಳ್ಳಿಯಲ್ಲಿ ಭಾವನಾತ್ಮಕ ಭಾಷಣ ಮಾಡಿದ ಡಿ.ಕೆ. ಶಿವಕುಮಾರ್ ಇಡೀ ಊರಿನಲ್ಲಿ ಇಂಥ ಸಂಭ್ರಮ ನಾನು ನೋಡಿರಲಿಲ್ಲ. ನಿಮ್ಮಲ್ಲೆರಿಗೂ ನನ್ನ ಧನ್ಯವಾದಗಳು. ನಾನು ಜೈಲಿಗೆ ಹೋದಾಗ ನಿಮ್ಮ ಅಭಿಮಾನ ಬೆಂಬಲ ಮರೆಯೋಕೆ ಆಗಲ್ಲ. ಡಿ.ಕೆ. ಶಿವಕುಮಾರ್ ದೊಡ್ಡಆಲಹಳ್ಳಿಯ ಕನಕಪುರದವನು ಅಂತಾರೆ ಎಂದರು.
ಇದನ್ನೂ ಓದಿ: Mekedatu Padayatre ಪಾದಯಾತ್ರೆಯಲ್ಲಿದ್ದ ಸಿದ್ದರಾಮಯ್ಯಗೆ ಜ್ವರ, ಕಳವಳ ವ್ಯಕ್ತಪಡಿಸಿದ ಸಚಿವ
ತಿಹಾರ ಜೈಲಿಗೆ ಹೋಗಿದ್ದಕ್ಕೆ ಈ ಗಡ್ಡ ಬಿಟ್ಟಿದ್ದೇನೆ. ನೀವೆ ಇದಕ್ಕೆ ಮುಕ್ತಿ ಕೊಡಬೇಕು. ನಾನು ನಿಮ್ಮ ಮಗ. ನೀವೇ ಡಿ.ಕೆ. ಶಿವಕುಮಾರ್. ಕೇಂದ್ರ ಸರ್ಕಾರ ಮತ್ತೊಮ್ಮೆ ದಬ್ಬಾಳಿಕೆ ಮಾಡ್ತಿದ್ದಾರೆ. ಮತ್ತೊಮ್ಮೆ ಜೈಲಿಗೆ ಹಾಕಿಸಬೇಕು ಅಂತಾ ಷಡ್ಯಂತ್ರ ಮಾಡ್ತಿದ್ದಾರೆ. ಆದ್ರೆ ನಾನು ಈ ಷಡ್ಯಂತ್ರಕ್ಕೆ ಹೆದರೋದಿಲ್ಲ ಎಂದು ಹೇಳಿದರು.