* ಮೇಕೆದಾಟು ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ
* ಸಿದ್ದರಾಮಯ್ಯ ರೆಸ್ಟ್ ಮಾಡಿರುವುದರ ಬಗ್ಗೆ ಸ್ಪಷ್ಟನೆ ಕೊಟ್ಟ ಡಿಕೆಶಿ
* ಕಾಂಗ್ರೆಸ್ ಮೇಕೆದಾಟಿಗೆ ಜಗದೀಶ್ ಶೆಟ್ಟರ್, ಶರವಣ ಆಕ್ರೋಶ
ರಾಮನಗರ, (ಜ.09): ಮೇಕೆದಾಟು ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆಗೆ ಚಾಲನೆ ಸಿಕ್ಕಿದ್ದು, ಮೊದಲ ದಿನ ಪಾದಯಾತ್ರೆಗೆ ನಿರೀಕ್ಷೆಗೂ ಮೀರಿ ಜನ ಸೇರಿದ್ದಾರೆ.
ಆದ್ರೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸುಸ್ತಾಗಿದ್ದು, ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದುಕೊಂಡಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅವರಿಗೆ ಸ್ಟಂಟ್ ಹಾಕಲಾಗಿದೆ. ಹೀಗಾಗಿ ನಾವೇ ಅವರಿಗೆ ಬೆಟ್ಟ ಏರುವ ಸಂದರ್ಭದಲ್ಲಿ ನಡೆಯಬೇಡಿ ಎಂದಿದ್ವಿ ಎಂದು ಸ್ಪಷ್ಟಪಡಿಸಿದರು.
undefined
Mekedatu Padaytre: ಪಾದಯಾತ್ರೆ ವೇಳೆ ಸುಸ್ತು, ಕಾರನ್ನೇರಿದ ಸಿದ್ದರಾಮಯ್ಯ
ನಮ್ಮ ಪಾದಯಾತ್ರೆ ನಿಲ್ಲಿಸಲು ಸರ್ಕಾರ ಎಲ್ಲ ಪ್ರಯತ್ನ ಮಾಡಿದೆ. ವಿಡಿಯೋ ಮಾಡಿಕೊಂಡು ಪಾದಯಾತ್ರೆ ನಡೆಸುವವರ ಮೇಲೆ ಕೇಸ್ ಹಾಕುವಂತೆ ಸಚಿವರು ಸೂಚನೆ ನೀಡಿದ್ದಾರೆ ಎಂದು ಆರೋಪಿಸಿದರು.
ನಮ್ಮ ಜೊತೆ ನಡೆಯುತ್ತೇವೆ ಅಂತಾ 6 ಸಾವಿರ ಜನ ರಿಜಿಸ್ಟರ್ ಮಾಡ್ಕೊಂಡಿದ್ದರು. 2 ಸಾವಿರ ಜನ ಬರಬಹುದು ಎಂದು ಅಂದಾಜಿಸಿದ್ದೆ. ಈ ಕಾಡಲ್ಲಿ ಇಷ್ಟೊಂದು ಜನ ಬಂದು ಪಾದಯಾತ್ರೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.
Mekedatu Padayatre ಪಾದಯಾತ್ರೆಯಲ್ಲಿದ್ದ ಸಿದ್ದರಾಮಯ್ಯಗೆ ಜ್ವರ, ಕಳವಳ ವ್ಯಕ್ತಪಡಿಸಿದ ಸಚಿವ
ಜೆಡಿಎಸ್ ನವರು ನಮ್ಮ ಯಾತ್ರೆಗೆ ಬಂದು ಬೆಂಬಲ ವ್ಯಕ್ತಪಡಿಸಿದ್ದಾರೆ.ಕೊರೋನಾ ಸುಳ್ಳು ಲೆಕ್ಕ ಸರ್ಕಾರ ಕೊಡ್ತಿದೆ. ನಮ್ಮ ಜಿಲ್ಲೆಯಲ್ಲಿ ಒಬ್ರು ಕೊರೋನಾ ಸೋಂಕಿತರು ಐಸಿಯುನಲ್ಲಿ ಇಲ್ಲ. ಸರ್ಕಾರ ಹೇಳ್ತಿರುವ ಕೊರೋನಾ ಪಾಸಿಟಿವಿಟಿ ದರ ಸುಳ್ಳು. ನಾವು ಬೆಂಗಳೂರಿನವರೆಗೂ ಪಾದಯಾತ್ರೆ ಮಾಡ್ತೇವೆ.. ನಮ್ಮ ಹೋರಾಟ ನಿಲ್ಲಲ್ಲ ಎಂದು ಹೇಳಿದರು.
ಯಾತ್ರೆ ಅರ್ಧಕ್ಕೆ ಮೊಟಕುಗೊಳಿಸ್ತಾರೆ ಅನ್ನೋ ಸುದ್ದಿಗಳನ್ನ ಕೆಲವರು ಹರಡುತ್ತಿದ್ದಾರೆ. ನಾನು 10 ದಿನವೂ ಪಾದಯಾತ್ರೆ ಮಾಡ್ತೇವೆ.. ಮೇಕೆದಾಟಿಗಾಗಿ ನಮ್ಮ ಹೋರಾಟ ಮುಂದುವರಿಯುತ್ತೆ ಎಂದು ತಿಳಿಸಿದರು.
ಕಾಂಗ್ರೆಸ್ ಪಾದಯಾತ್ರೆಗೆ ಜಗದೀಶ್ ಶೆಟ್ಟರ್ ಕಿಡಿ
ಇನ್ನು ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ್ದು, ಮೇಕೆದಾಟು ಯೋಜನೆ ಬಗ್ಗೆ ಅಧಿವೇಶನದಲ್ಲಿ ಕಾಂಗ್ರೆಸ್ ಗಂಭೀರವಾದಂತ ಚರ್ಚೆಯನ್ನು ಮಾಡಿಲ್ಲ. ಪ್ರಶ್ನೆ ಕೇಳಿಲ್ಲ. ಅಲ್ಲಿ ಚರ್ಚೆ ಮಾಡಿದರೆ ಸರ್ಕಾರ ಉತ್ತರ ಕೊಡುತ್ತದೆ ಎಂಬ ಕಾರಣಕ್ಕೆ ಪ್ರಶ್ನೆ ಕೇಳಿಲ್ಲ ಎಂದು ಟಾಂಗ್ ಕೊಟ್ಟರು.
ಈಗ ರಾಜಕಾರಣ ಮಾಡುವ ಸಲುವಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಕೋವಿಡ್ ಮೂರನೇ ಅಲೆ ಎದುರಾದ ಸಂದರ್ಭದಲ್ಲಿ ಭಂಡತನದಿಂದ ಪಾದಯಾತ್ರೆಗೆ ಮುಂದಾಗಿದ್ದಾರೆ. ಕೇವಲ ರಾಜಕಾರಣ ಮಾಡಿಕೊಂಡು ಬಂದಿರುವ ಕಾಂಗ್ರೆಸ್ಸಿಗೆ ಜನರ ಹಿತ ಮುಖ್ಯವಲ್ಲ. ಪಾದಯಾತ್ರೆ ಕೇವಲ ರಾಜಕೀಯ ಪ್ರಹಸನ. ಇದರಿಂದ ಜನ ನಮಗೆ ಹೆಚ್ಚು ಮತ ಕೊಡುತ್ತಾರೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಜನ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಕಿಡಿಕಾರಿದರು.
ಕಾಂಗ್ರೆಸ್ ಡಬಲ್ ಸ್ಟ್ಯಾಂಡರ್ಡ್ ಪಾರ್ಟಿ. ಮೇಕೆದಾಟು ವಿಚಾರದಲ್ಲಿ ತಮಿಳುನಾಡಿನ ಕಾಂಗ್ರೆಸ್ ನಿಲುವೇನು ಎಂಬುದು ಸ್ಪಷ್ಟಪಡಿಸಲಿ. ಮಹದಾಯಿ ವಿಚಾರದಲ್ಲೂ ಗೋವಾ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಗೋವಾ ಬಿಜೆಪಿ ಮಹದಾಯಿಗೆ ಸಪೋರ್ಟ್ ಮಾಡಿತ್ತು ಎಂದು ಹೇಳಿದರು.
ಕಾಂಗ್ರೆಸ್ಸಿಗರು ಮಹದಾಯಿಗಾಗಿ ಪಾದಯಾತ್ರೆ ಮಾಡುತ್ತೇವೆ ಎಂದಿದ್ದಾರೆ. ಅವರು ಪಾದಯಾತ್ರೆ ಮಾಡಲಿ, ಕಾಂಗ್ರೆಸ್ಸಿಗರು ಅಧಿಕಾರದಲ್ಲಿ ಇದ್ದಾಗ ಏನು ಎಂಬುದನ್ನು ಬಿಚ್ಚಿಡುತ್ತೇವೆ. ನದಿ ವಿವಾದದಂತ ವಿಚಾರಗಳನ್ನು ಸೂಕ್ಷ್ಮವಾಗಿ ಬಗೆಹರಿಸಬೇಕು. ಅದನ್ನು ಬಿಟ್ಟು ಬೀದಿಗಿಳಿದು ಹೋರಾಟ ಮಾಡಿದರೆ ಯಾವುದೇ ಪ್ರಯೋಜನ ಆಗಲ್ಲ. ಬದಲಾಗಿ ಇನ್ನಷ್ಟು ಕ್ಲಿಷ್ಟಕರ ಆಗಲಿದೆ. ನದಿ ವಿವಾದ ಸೇರಿದಂತೆ ಯಾವುದೇ ಸಮಸ್ಯೆಯನ್ನು ಕಾಂಗ್ರೆಸ್ ಬಗೆಹರಿಸಿಲ್ಲ. ಕಳೆದ ಏಳು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಏನನ್ನೂ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಶರವಣ ಆಕ್ರೋಶ
ಮೇಕೆದಾಟು ಯೋಜನೆಯ ನೆಪದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯು ಕೋವಿಡ್ ಕಾಲ ಘಟ್ಟದ ಅತ್ಯಂತ ಹೇಯ, ಅಮಾನುಷ ಮತ್ತು ಜೀವ ವಿರೋಧಿ ಪ್ರತಿಭಟನೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಹಿರಿಯ ಜೆಡಿಎಸ್ ನಾಯಕ ಟಿ.ಎ. ಶರವಣ ಆಕ್ರೋಶ ವ್ಯಕ್ತಪಡಿದ್ದಾರೆ.
ಪ್ರಜಾಸತ್ತೆ ವ್ಯವಸ್ಥೆಯಲ್ಲಿ ಪ್ರತಿ ಭಟನೆ ನಡೆಸುವುದು ಅವರವರ ಹಕ್ಕು. ಸಂವಿಧಾನ ಈ ಹಕ್ಕು ನೀಡಿದೆ. ಆದರೆ ಇದೇ ಸಂವಿಧಾನ ಕೆಲವು ಕರ್ತವ್ಯ ಗಳನ್ನು ವಿಧಿಸಿದೆ. ಕೋವಿಡ್ ಮಹಾಮಾರಿ ಮಿತಿ ಮೀರಿದ ಈ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆಯ ಜವಾಬ್ದಾರಿಯನ್ನು ಕಾಂಗ್ರೆಸ್ ಮರೆತಿದ್ದು, ಜನರ ಜೀವವನ್ನು ಪಣಕ್ಕಿಟ್ಟು ಪಾದಯಾತ್ರೆಯ ನಾಟಕವಾಡುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಕೊವಿಡ್ ನಿಯಮಾವಳಿಗಳು ಜಾರಿಯಲ್ಲಿದ್ದರೂ ಸಾವಿರಾರು ಸಂಖ್ಯೆಯ ಕಾರ್ಯಕರ್ತರನ್ನು ಒಂದೆಡೆ ಸೇರಿಸುವ ಮೂಲಕ, ನೀತಿ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ಕಾಂಗ್ರೆಸ್ ಪಕ್ಷ ಜನ ವಿರೋಧಿ, ಬೇಜವಾಬ್ದಾರಿ ಪಕ್ಷ ಎಂಬುದನ್ನು ತೋರಿಸಿದೆ ಎಂದು ಶರವಣ ಕಿಡಿ ಕಾರಿದ್ದಾರೆ.
ಆಡಳಿತಾರೂಢ ಬಿಜೆಪಿ ಸರಕಾರ ಕೋವಿಡ್ ಗಂಭೀರ ಪರಿಸ್ಥಿತಿಯ ನಡುವೆ ಇಂಥ ಪಾದಯಾತ್ರೆ ನಡೆಸಲು ಅವಕಾಶ ನೀಡುವ ಮೂಲಕ ತಾನೊಂದು ದುರ್ಬಲ, ಅಸಹಾಯಕ ಸರಕಾರ ಎಂಬುದನ್ನು ಸಾಬೀತು ಮಾಡಿದೆ ಎಂದು ವ್ಯಂಗ್ಯವಾಡಿದ್ದಾರೆ.
ಹಾಡು ಹಗಲೇ, ಸಾವಿರಾರು ಪೊಲೀಸರ ಸಮ್ಮುಖದಲ್ಲಿ ಕೋವಿಡ್ ನಿಯಮಗಳ ಉಲ್ಲಂಘನೆ ಆದರೂ ಕಣ್ಣು ಮುಚ್ಚಿ ಮೌನಕ್ಕೆ ಶರಣಾದ ಆಡಳಿತ ಸರ್ಕಾರ ಪುಕ್ಕಲು ಸರಕಾರವೇ ಎನ್ನುವ ಗುಮಾನಿ ಬರುತ್ತದೆ ಎಂದು ಗೇಲಿ ಮಾಡಿದ್ದಾರೆ.
ರಸ್ತೆಯಲ್ಲಿ ಹೋಗುವ ಬಡವರು, ಕೂಲಿ ಕಾರ್ಮಿಕರು ಮಾಸ್ಕ್ ಹಾಕಲಿಲ್ಲ ಎಂದರೆ ಮಾನವೀಯತೆ ಇಲ್ಲದೆ ನೂರಾರು ರೂಪಾಯಿ ಸುಲಿಗೆ ಮಾಡುವ ಪೊಲೀಸರು ಇಲ್ಲಿ ಮಾತ್ರ ಬಾಯಿ ಮುಚ್ಚಿ ಮೂಕ ಪ್ರೇಕ್ಷಕರಾಗಿರುವುದು ಆಶ್ಚರ್ಯಕರ.
ಈ ಪಾದಯಾತ್ರೆ ಕೋವಿಡ್ *ಸೂಪರ್ ಸ್ಪ್ರೆಡರ್ ಯಾತ್ರೆ ಯಾಗುವುದು ನಿಶ್ಚಿತವಾಗಿದ್ದು, ಬರುವ ದಿನಗಳಲ್ಲಿ ಸಂಭವಿಸಲಿರುವ ಕೋವಿಡ್ ದುರಂತಕ್ಕೆ ಬಿಜೆಪಿ ಸರ್ಕಾರದ ನಿರ್ಲಕ್ಷ ಮತ್ತು ಕಾಂಗ್ರೆಸ್ ನ ಬೇಜವಾಬ್ದಾರಿ ತನವೇ ಕಾರಣ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಜನರ ಜೀವದ ಜೊತೆ ಚೆಲ್ಲಾಟ ಮಾಡುವ ರಾಜಕೀಯ ವನ್ನು ತಕ್ಷಣ ನಿಲ್ಲಿಸಬೇಕು ಎಂದು ಅಗ್ರಹಪಡಿಸಿದ್ದಾರೆ.