ರಾಜ್ಯ ಸರ್ಕಾರ ಎಸ್ಸಿ ಎಸ್ಟಿಗೆ ಸೇರಬೇಕಿದ್ದ 14,000 ಕೋಟಿ ರೂ. ಗ್ಯಾರಂಟಿಗೆ ಬಳಸುತ್ತಿದೆ: ಬಸವರಾಜ ಬೊಮ್ಮಾಯಿ

Published : Jul 06, 2024, 08:12 PM IST
ರಾಜ್ಯ ಸರ್ಕಾರ ಎಸ್ಸಿ ಎಸ್ಟಿಗೆ ಸೇರಬೇಕಿದ್ದ 14,000 ಕೋಟಿ ರೂ.  ಗ್ಯಾರಂಟಿಗೆ ಬಳಸುತ್ತಿದೆ:  ಬಸವರಾಜ ಬೊಮ್ಮಾಯಿ

ಸಾರಾಂಶ

ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಬಳಸಬೇಕಿದ್ದ 14,000 ಕೋಟಿ ರೂ. ಹಣವನ್ನು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಹಾವೇರಿ (ಜು.06): ರಾಜ್ಯ ಸರ್ಕಾರ ಎಸ್ಸಿ ಎಸ್ಟಿಗೆ ಮೀಸಲಿಟ್ಟಿರುವ 14,000 ಕೋಟಿ ರೂ. ಹಣವನ್ನು ಚುನಾವಣೆಗಾಗಿ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡು, ಎಸ್ಸಿ ಎಸ್ಟಿ ಸಮುದಾಯಗಳಿಗೆ ಮೋಸ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಶಿಗ್ಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ದಿವಾಳಿ ಆಗಿರೋದು ಪ್ರತಿ ಹೆಜ್ಜೆಯಲ್ಲಿ ಪ್ರದರ್ಶನ ಮಾಡುತ್ತಿದೆ. ಪೆಟ್ರೋಲ್ ಡೀಸೆಲ್ ದರ ಹೆಚ್ಚಳ ಮಾಡುವುದರಿಂದ ಹಿಡಿದು  ಎಲ್ಲಾ ದರ ಹೆಚ್ಚಳ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಅನುದಾನವನ್ನು ವರ್ಗಾಯಿಸುತ್ತಿದ್ದಾರೆ. ಎಸ್ಸಿ, ಎಸ್ಟಿ ಸಮುದಾಯಗಳಿಗೆ 14,000 ಕೋಟಿ ರೂಪಾಯಿ ಅನುದಾನ ಬಳಕೆ ಆಗಬೇಕಿತ್ತು. ಎಲ್ಲಾ ಹಣ ಗ್ಯಾರಂಟಿಗಳಿಗೆ ಹೋಗುತ್ತಿದೆ. ಎಸ್ಸಿ ಎಸ್ಟಿ ಜನಕ್ಕೂ ಗ್ಯಾರಂಟಿ ಮೂಲಕ ಅನುಕೂಲ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ‌ನವರು ಹೇಳುತ್ತಾರೆ. ಆದರೆ, ಕಾನೂನಿನಲ್ಲಿ ಅನುದಾನ ಎಸ್ಸಿ ಎಸ್ಟಿಗಳಿಗೆ ಹೋಗಬೇಕು ಅಂತ ಇದೆ. ಆ ಕಾನೂನು ಉಲ್ಲಂಘನೆ ಆಗಿದೆ ಎಸ್ಸಿ ಎಸ್ಟಿಗಳಿಗೆ ಮೀಸಲಿಟ್ಟ ಹಣ ಎಸ್ಸಿ ಎಸ್ಟಿಗಳಿಗೇ ಬಳಸುತ್ತೇವೆ ಅಂತ ಚುನಾವಣೆ ಮೊದಲು ಹೇಳಿದ್ದರು. ಕಾಂಗ್ರೆಸ್ ನವರು ಓಟಿಗಾಗಿ ಮಾಡಿದ ಯೋಜನೆಗಳಿಗೆ ಎಸ್ಸಿ ಎಸ್ಟಿ ಹಣ ಬಳಸುತ್ತಿದ್ದಾರೆ. ವಾಲ್ಮೀಕಿ ನಿಗಮದ ಹಣ ಕೂಡಾ ಲೂಟಿ ಮಾಡಿದ್ದಾರೆ. ಈ ಮೂಲಕ ಎಸ್ಸಿ ಎಸ್ಟಿ ವರ್ಗಗಳಿಗೆ ಸರ್ಕಾರ ಮೋಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ವೈಫಲ್ಯ ಮುಚ್ಚಿಕೊಳ್ಳಲು ಡೆಂಗ್ಯೂ ಸಾವಿನ ಸಂಖ್ಯೆ ಮುಚ್ಚಿಡಲಾಗುತ್ತಿದೆ: ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಡೆಂಗ್ಯೂ ಸಾವಿನ ಸಂಖ್ಯೆ ಕಡಿಮೆ ತೋರಿಸುತ್ತಿದ್ದಾರೆ. ಡೆಂಗ್ಯೂ ರೋಗಿಗಳ ಸಾವಿನ ಸಂಖ್ಯೆ ಮುಚ್ಚಿಡುತ್ತಿದ್ದಾರೆ. ಹಾವೇರಿಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಜನರು ದಾವಣಗೆರೆ ಹುಬ್ಬಳ್ಳಿಗೆ ಹೋಗಿದ್ದಾರೆ. ಸರಿಯಾದ ಚಿಕಿತ್ಸೆ ಸಿಗದೇ ರೋಗಿಗಳು ಸಾವನ್ನಪ್ಪಿದರೂ ಮುಚ್ಚಿಡುತ್ತಿದ್ದಾರೆ. ಡೆಂಗ್ಯೂ ಹೆಚ್ಚಾಗುತ್ತಿದೆ ಎಂದು ನಾನು ಮೊದಲೇ ಹೇಳಿದ್ದೆ ಆದರೆ, ಸರ್ಕಾರ ಯಾವುದೇ ವ್ಯವಸ್ಥೆ ಮಾಡಿಲ್ಲ. ರೋಗಿಗಳು ಪರದಾಡುತ್ತಿದ್ದಾರೆ. ಸಾವು ನೋವು ಹೆಚ್ಚಾಗುತ್ತಿವೆ. ಈಗಾಗಲೇ ಹಲವಾರು ಸಾವು ಆಗಿದೆ. ಇಡೀ ರಾಜ್ಯದಲ್ಲಿಯೇ ಅತಿ ಹೆಚ್ಚು ಡೆಂಗ್ಯೂ ಸಾವು ಹಾವೇರಿಯಲ್ಲಿ ಆಗಿದೆ. ಕೂಡಲೇ ಡಿ.ಹೆಚ್ ಒ ವರ್ಗಾವಣೆ ಮಾಡಬೇಕು. ಸಮರ್ಥ ಡಿ.ಹೆಚ್ ಒ ಹಾಕಬೇಕು ಯಾರನ್ನೂ ವಾಪಾಸ್ ಕಳಿಸದೇ ಚಿಕಿತ್ಸೆ ಮಾಡಬೇಕು. ಆಶಾ ಕಾರ್ಯಕರ್ತೆಯರ ಸಹಾಯ ತೆಗೆದುಕೊಂಡು ಜಾಗೃತಿ ಮೂಡಿಸಬೇಕು ಎಂದು ಆಗ್ರಹಿಸಿದರು.

ರಾಷ್ಟ್ರೀಯ ಹೆದ್ದಾರಿ ಬಗ್ಗೆ ಚರ್ಚೆ: ಸಂಸತ್ ಅಧಿವೇಶನಕ್ಕೆ ತೆರಳಿದ್ದಾಗ ಹಾವೇರಿ ವಿಭಾಗದಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಕುರಿತು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಬಳಿ ಮಾತನಾಡಿದ್ದೇನೆ. ಈ ಬಗ್ಗೆ ಚರ್ಚಿಸಲು ಅವರು ಮುಂದಿನ ವಾರ ವಿಶೇಷವಾದ ಸಮಯ ನೀಡಿದ್ದಾರೆ. ಆಮೆಗತಿಯಲ್ಲಿ ನಡೆಯುತ್ತಿರುವ ಎನ್ ಎಚ್ 4 ಕಾಮಗಾರಿ ಹಾಗೂ ಹಾನಗಲ್, ಶಿಗ್ಗಾವಿ, ಸವಣೂರು, ಲಕ್ಷ್ಮೇಶ್ವರ, ಗದಗ ಮಾರ್ಗವಾಗಿ ಹಾಯ್ದು ಹೋಗುವ ಇಳಕಲ್ ಕಾರವಾರ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡುವ ಯೋಜನೆ, ರಿಂಗ್ ರಸ್ತೆಗಳ ನಿರ್ಮಾಣ, ಆರ್ ಒಬಿ ನಿರ್ಮಾಣ ಮಾಡುವ ಕುರಿತು ಪ್ರಾಥಮಿಕ ಹಂತದ ಚರ್ಚೆ ನಡೆಸಿದ್ದೇನೆ. ಈ ಎಲ್ಲ ವಿಷಯಗಳ ಕುರಿತು ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಅಗತ್ಯ ಸಹಕಾರ ನೀಡುವುದಾಗಿ ನಿತಿನ್ ಗಡ್ಕರಿ ತಿಳಿಸಿದ್ದಾರೆ ಎಂದು ಹೇಳಿದರು.

ನಮ್ಮ 'ಡಿ ಬಾಸ್' ಸೇಫ್ ಮಾಡ್ತೀವಿ ಅಂತಾ ಪೊಲೀಸರಿಗೆ ಸರೆಂಡರ್ ಆದವರೇ ಈಗ ನಟ ದರ್ಶನ್‌ಗೆ ವಿಲನ್‌ಗಳು

ಇನ್ನು ಕೇಂದ್ರ ರೈಲ್ವೆ ಸಚಿವ  ಅಶ್ವಿನಿ ವೈಷ್ಣವ್ ಅವರ ಜೊತೆಗೆ ಶಿವಮೊಗ್ಗ ಶಿಕಾರಿಪುರ ಮಾರ್ಗವಾಗಿ ರಾಣೆಬೆನ್ನೂರು ಹೊಸ ರೈಲು ಮಾರ್ಗದ ಕುರಿತು ಚರ್ಚೆ ನಡೆಸಿದ್ದು, ಇದಕ್ಕೆ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರದ ಸಹಕಾರ ಅಗತ್ಯವಿದ್ದು, ಈ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಈ ಯೋಜನೆ ಹಾಗೂ ಯಲವಿಗಿ ಗದಗ ರೈಲು ಯೋಜನೆಯನ್ನು ಪ್ರಾರಂಭ ಮಾಡುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!
Karnataka News Live: ಬೆಂಗಳೂರು - ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!