ಯಾಸೀರ್ ಅಹಮದ್‌ಗೆ ಶಿಗ್ಗಾವಿ ಟಿಕೆಟ್ ಕೊಟ್ಟ ಕಾಂಗ್ರೆಸ್; 6ನೇ ಬಾರಿಯೂ ಮುಸ್ಲಿಮರಿಗೆ ಮಣೆ!

By Sathish Kumar KHFirst Published Oct 24, 2024, 5:45 PM IST
Highlights

ಶಿಗ್ಗಾವಿ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಯಾಸೀರ್ ಅಹಮದ್ ಖಾನ್ ಪಠಾಣ್ ಅವರಿಗೆ ಸತತ 6ನೇ ಬಾರಿಗೆ ಟಿಕೆಟ್ ಘೋಷಣೆಯಾಗಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಠಕ್ಕರ್ ಕೊಡಲು ಕಾಂಗ್ರೆಸ್ ಸಜ್ಜಾಗಿದೆ.

ಬೆಂಗಳೂರು (ಅ.24): ರಾಜ್ಯದ ಉಪ ಚುನಾವಣೆಯಲ್ಲಿ ಶಿಗ್ಗಾವಿಗೆ ಕಾಂಗ್ರೆಸ್‌ನಿಂದ ಟಿಕೆಟ್ ಘೋಷಣೆಯಾಗಿದ್ದು, ಸತತ 6ನೇ ಬಾರಿಗೆ ಮುಸ್ಲಿಂ ನಾಯಕ ಯಾಸೀರ್ ಅಹಮದ್ ಖಾನ್ ಪಠಾಣ್ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿಗೆ ಠಕ್ಕರ್ ಕೊಡಲು ಕೈ ಸಿದ್ಧತೆ ಮಾಡಿಕೊಂಡಿದೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ತೆರವಾಗಿರುವ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ತಡವಾಗಿ ಆದರೂ ಟಿಕೆಟ್ ಘೋಷಣೆ ಮಾಡಿದೆ. ಕಾಂಗ್ರೆಸ್‌ನಿಂದ ಮುಸ್ಲಿಂ ಮುಖಂಡ ಯಾಸೀರ್ ಅಹಮದ್ ಖಾನ್ ಪಠಾಣ್ ಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ ಒಟ್ಟು 6ನೇ ಬಾರಿಗೆ ಯಾಸೀರ್ ಅಹಮದ್ ಖಾನ್ ಪಠಾಣ್ ಅವರಿಗೆ ವಿಧಾನಸಭಾ ಟಿಕೆಟ್ ಅನ್ನು ನೀಡಲಾಗಿದೆ. ಇನ್ನು ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ ಹಾಗೂ ಮುಸ್ಲಿಂ ಸಮುದಾಯದ ಮತಗಳೇ ನಿರ್ಣಾಯಕ ಮತಗಳಾಗಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಲಿಂಗಾಯತ ನಾಯಕ ಬಸವರಾಜ ಬೊಮ್ಮಾಯಿ ಅವರ ಪುತ್ರನಿಗೆ ಟಿಕೆಟ್ ನೀಡಿದ ಬೆನ್ನಲ್ಲಿಯೇ ಕಾಂಗ್ರೆಸ್‌ನಿಂದ ಒಂದೇ ಒಂದು ಮತವೂ ಬೇರೆಡೆ ಹೋಗುವುದನ್ನು ತಡೆಯುವುದು ಹಾಗೂ ಮೂಲ ಕಾಂಗ್ರೆಸ್ ಕಾರ್ಯಕರ್ತರ ಮತಗಳನ್ನು ಪಡೆಯಲು ಯೋಜನೆ ರೂಪಿಸಿರುವ ಕಾಂಗ್ರೆಸ್ ಮುಸ್ಲಿಂ ನಾಯಕನಿಗೆ ಮಣೆ ಹಾಕಲಾಗಿದೆ ಎಂದು ರಾಜಕೀಯ ಮೂಲಗಳಿಂದ ತಿಳಿದುಬಂದಿದೆ.

Latest Videos

ಇದನ್ನೂ ಓದಿ: ಚನ್ನಪಟ್ಟಣದ ಸೈನಿಕನ ಚಕ್ರವ್ಯೂಹ ಬೇಧಿಸಲು ಅಭಿಮನ್ಯು ಕಳಿಸಿದ ಎನ್‌ಡಿಎ ಮೈತ್ರಿಕೂಟ!

ಯಾಸೀರ್ ಅಹ್ಮದ್ ಖಾನ್ ಪಠಾಣ್ ಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಬೆನ್ನಲ್ಲಿಯೇ ಮತ್ತೊಬ್ಬ ಮುಸ್ಲಿಂ ನಾಯಕರೂ ಆಗಿರುವ ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿಗೆ ಟಿಕೆಟ್ ನಿರಾಸೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅಜ್ಜಂಫೀರ್ ಖಾದ್ರಿ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರಾ? ಎಂಬ ಪ್ರಶ್ನೆ ಶುರುವಾಗಿದೆ. ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತರೂ ಆಗಿರುವ ಅಜ್ಜಂಫೀರ್ ‌ಖಾದ್ರಿ ಶಿಗ್ಗಾವಿ ಕಾಂಗ್ರೆಸ್ ಟಿಕೆಟ್ ‌ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಇದೀಗ ಟಿಕೆಟ್ ಮಿಸ್ ಆಗಿರುವ ಬೆನ್ನಲ್ಲಿಯೇ ಕಾಂಗ್ರೆಸ್ ನಾಯಕರು ಅಜ್ಜಂಫೀರ್ ಖಾದ್ರಿಗೆ ಸೂಕ್ತ ಸ್ಥಾನ ಮಾನದ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಕಾಂಗ್ರೆಸ್ ನಾಯಕರ ಮಾತಿಗೆ ಅಜ್ಜಂಪೀರ್ ಅವರು ಮಣಿಯುತ್ತಾರಾ? ಅಥವಾ ಬಂಡಾಯ ಏಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನು ಈ ಬಾರಿ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ಸಿಗುತ್ತದೆ ಎಂಬ ನಂಬಿಕೆಯೂ ಹುಸಿಯಾಗಿದ್ದು, ಮಾಜಿ ಎಂಎಲ್ ಸಿ ಸೋಮಣ್ಣ ಬೇವಿನ ಮರದ, ಸಂಜೀವ್ ನೀರಲಗಿ, ರಾಜು‌ಕುನ್ನೂರು ಸೇರಿದಂತೆ ಹಲವರು ಕೂಡ ಕಾಂಗ್ರೆಸ್ ಹೈಕಮಾಂಡ್ ನಡೆಯಿಂದ ಬೇಸರ ವ್ಯಕ್ತಪಡಿಸಿದ್ದಾರೆ.

ನಾಮಪತ್ರ ಸಲ್ಲಿಕೆ ಮಾಡಿದ ಭರತ್ ಬೊಮ್ಮಾಯಿ:
ಶಿಗ್ಗಾವಿಯ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಗುರುವಾರ ಮಧ್ಯಾಹ್ನ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ತಾಯಿಯ ಸೂಚನೆ ಮೇರೆಗೆ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದು, ನಾಳೆ ಪಕ್ಷದ ಹಿರಿಯ ನಾಯಕರೊಂದಿಗೆ ಮತ್ತೊಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ಸ್ವತಃ ಭರತ್ ಬೊಮ್ಮಾಯಿ ತಿಳಿಸಿದ್ದಾರೆ.

ಇದನ್ನೂ ಓದಿ: ಯೋಗೇಶ್ವರ್ ಅವರಲ್ಲಿ ಕಾಂಗ್ರೆಸ್‌ ರಕ್ತ ಹರಿಯುತ್ತಿದೆ: ಡಿ.ಕೆ.ಶಿವಕುಮಾರ್

ಶಿಗ್ಗಾವಿಯಲ್ಲಿಂದು ನಾಮಪತ್ರ ಸಲ್ಲಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಂದೆ ತಾಯಿಯವರ ಆಶೀರ್ವಾದ, ಹಿರಿಯರ ಆಶೀರ್ವಾದ, ಪಕ್ಷದ ವರಿಷ್ಠರ ಆಶೀರ್ವಾದದಿಂದ ನಾನು ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ನಾಳೆ ಬಹಿರಂಗವಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ. ನಾಳೆ ಪಕ್ಷದ ಅನೇಕ ನಾಯಕರು ಪಾಲ್ಗೊಳ್ಳಲಿದ್ದಾರೆ. ಇದುವರೆಗೂ ನಮ್ಮ ತಂದೆ ಬಸವರಾಜ ಬೊಮ್ಮಾಯಿಯವರಿಗೆ ಆಶೀರ್ವಾದ ಮಾಡುತ್ತಿದ್ದಿರಿ, ಈಗ ನನಗೆ ಆಶೀರ್ವಾದ ಮಾಡಿ ಎಂದು ಜನರಲ್ಲಿ ಮನವಿ ಮಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ನಾನು ಬಡವರು, ಯುವಕರು, ಮಹಿಳೆಯರ ಪರವಾಗಿ ಕೆಲಸ ಮಾಡುತ್ತೇನೆ. ಚುನಾವಣೆಯಲ್ಲಿ ಜಯ ಗಳಿಸಿದರೆ ಅನೇಕ ಯೋಜನೆಗಳನ್ನು ಜಾರಿಗೊಳಿಸುವ ಕುರಿತು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಿದರು.

click me!