
ಕೊಪ್ಪಳ (ಅ.06): ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾರೂ ಮಾತನಾಡಬಾರದು ಎಂಬ ಹೈಕಮಾಂಡ್ ಎಚ್ಚರಿಕೆಯ ನಡುವೆಯೂ ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಕಾಂಗ್ರೆಸ್ ನಾಯಕರ ಹೇಳಿಕೆ ಮುಂದುವರಿದಿದೆ. ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿ ಎಂದೇ ಅವರಿಗೆ ಶಾಸಕರು ಮತ ಹಾಕಿದ್ದೇವೆ. ಅವರು ಮಧ್ಯಂತರದಲ್ಲೇ ಹುದ್ದೆ ಬಿಡಬೇಕು ಎಂದು ಯಾರೂ ನಮಗೆ ತಿಳಿಸಿರಲಿಲ್ಲ ಎಂದು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಯಾರು ಬೇಕಾದರೂ ಸಿಎಂ ಆಗಬಹುದು. ಡಿ.ಕೆ.ಶಿವಕುಮಾರ್ ಕೂಡ ಸಿಎಂ ಆಗಬಹುದು. ನಾನ್ಯಾಕೆ ಸಿಎಂ ಆಗಬಾರದು? ನನ್ನ ಬೆಂಬಲಿಗರು ಕೂಡ ನಾನು ಸಿಎಂ ಆಗುವುದನ್ನು ಬಯಸುತ್ತಾರೆ. ಡಿಕೆಶಿ ಅವರು ಗೆದ್ದಷ್ಟೇ ಚುನಾವಣೆಗಳನ್ನೂ ನಾನು ಗೆದ್ದಿದ್ದೇನೆ ಎಂದರು. ರಾಜ್ಯದಲ್ಲಿ ಈಗ ಸಿಎಂ ಹುದ್ದೆ ಖಾಲಿ ಇಲ್ಲ. ಸಿದ್ದರಾಮಯ್ಯನವರೇ ಐದು ವರ್ಷವೂ ಸಿಎಂ ಆಗಿರುತ್ತಾರೆ. ಅಷ್ಟಕ್ಕೂ ಇದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಈ ಬಗ್ಗೆ ಯಾರು ಮಾತನಾಡಬಾರದು ಎಂದು ಹೈಕಮಾಂಡ್ ಹೇಳಿದೆ. ಆದಾಗ್ಯೂ ಒಂದು ವಿಷಯ ಹೇಳುತ್ತೇನೆ.
ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಿಯೇ ಹೈಕಮಾಂಡ್ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಿದೆ. ಈ ಕುರಿತು ಮತದಾನ ನಡೆದಾಗ ಸಿದ್ದರಾಮಯ್ಯ ಹಾಗೂ ಇತರರು ಸ್ಪರ್ಧೆ ಮಾಡಿದ್ದರು. ಸಿದ್ದರಾಮಯ್ಯ ಅವರು ಹೆಚ್ಚು ಮತ ಪಡೆದರು. ಅವರು ಮಧ್ಯಂತರದಲ್ಲೇ ಹುದ್ದೆ ಬಿಡಬೇಕು ಎಂದು ನಮಗೆ ಯಾರೂ ಹೇಳಿರಲಿಲ್ಲ. ಅವರು ಐದು ವರ್ಷ ಸಿಎಂ ಎಂದೇ ನಾವು ಮತ ಹಾಕಿದ್ದೇವೆ. ಅವರು ಐದು ವರ್ಷವೂ ಮುಖ್ಯಮಂತ್ರಿಯಾಗಿರುತ್ತಾರೆ. ಇನ್ನು ನವೆಂಬರ್ ಕ್ರಾಂತಿ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಯಾರು ಬೇಕಾದರೂ ಸಿಎಂ ಆಗಬಹುದು. ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿಯಾದರೂ ಸ್ವಾಗತಿಸುತ್ತೇನೆ.
ಆದರೆ, ಅವರು ಪ್ರಧಾನಿಯಾಗಲಿ ಎನ್ನುವುದು ನನ್ನ ಬಯಕೆ ಎಂದರು. ಬಿಹಾರ ಚುನಾವಣೆಯ ನಂತರ ರಾಜ್ಯದಲ್ಲಿ ಏನಾಗುತ್ತದೆ ಎಂಬುದು ಗೊತ್ತಿಲ್ಲ. ಆದರೆ, ಮುಂದಿನ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷದವರೇ ಪ್ರಧಾನಮಂತ್ರಿ ಆಗಲಿದ್ದಾರೆ. ರಾಹುಲ್ ಗಾಂಧಿಯವರೂ ಪ್ರಧಾನಿ ಆಗಬಹುದು. ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾದರೂ ಸ್ವಾಗತಿಸುತ್ತೇನೆ ಎಂದರು. ಸಚಿವ ಸಂಪುಟ ಪುನರ್ ರಚನೆ ಕುರಿತು ಪ್ರತಿಕ್ರಿಯಿಸಿ, ಸಂಪುಟ ಪುನರ್ ರಚನೆಯಾಗುತ್ತದೆ ಎನ್ನುವುದು ನನಗಿರುವ ಮಾಹಿತಿ. ಈಗಾಗಲೇ ಎರಡು ವರ್ಷ ಸಚಿವರಾದವರು ಬೇರೆಯವರಿಗೂ ಅವಕಾಶ ನೀಡಲಿ. ಬೇರೆಯವರೂ ಅಧಿಕಾರ ಅನುಭವಿಸಲಿ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.