ಪುತ್ರ ಹೇಳಿದ ಒಂದೇ ಮಾತಿಗೆ ಜಾರಿಗೊಳಿಸಿದ ಸಿಎಂ: ಇದೆಲ್ಲ ಬಸವ'ಕಲ್ಯಾಣ'ಕ್ಕಾಗಿ...!

By Suvarna NewsFirst Published Nov 14, 2020, 10:31 PM IST
Highlights

 ಮುಂಬರುವ ಬಸವಕಲ್ಯಾಣ ಬೈ ಎಲೆಕ್ಷನ್‌ ಹಿನ್ನೆಲೆಯಲ್ಲಿ ಪುತ್ರ ಬಿವೈ ವಿಜಯೇಂದ್ರ ಹೇಳಿದ ಒಂದೇ ಮಾತಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸಮ್ಮತಿ ಸೂಚಿಸಿ ಪ್ರಾಧಿಕಾರವನ್ನು ಜಾರಿಗೊಳಿಸಿದ್ದಾರೆ. 

ಬೆಂಗಳೂರು, (ನ.14): ಕಾಂಗ್ರೆಸ್ ಶಾಸಕ ನಾರಾಯಣರಾವ್ ಅವರ ನಿಧನದಿಂದ ತೆರವಾಗಿರುವ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡೆಸಿದೆ. ಇನ್ನೂ ಚುನಾವಣೆಗೆ ದಿನಾಂಕ ಪ್ರಕಟವಾಗಿಲ್ಲ, ಆಗಲೇ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅಖಾಡಕ್ಕಿಳಿದಿದ್ದಾರೆ.

ಅಲ್ಲದೇ ಬಸವಕಲ್ಯಾಣದಲ್ಲಿ ಮ್ಯಾಜಿಕ್ ಮಾಡಲು ಬಿವೈ ವಿಜಯೇಂದ್ರ ಅವರು ಹೇಳಿದ ಮರು ದಿನವೇ  ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಆದೇಶ ಹೊರಡಿಸಿದ್ದಾರೆ.

ಮತ್ತೊಂದು ಉಪಚುನಾವಣೆಗೆ ದಾಂಗುಡಿ ಇಟ್ಟು ರಣಕಹಳೆ ಮೊಳಗಿಸಿದ ವಿಜಯೇಂದ್ರ..!

ಇಂದು (ಶನಿವಾರ) ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಆದೇಶ ಹೊರಡಿಸಿರುವ ಸಿಎಂ, 50 ರೂ. ಕೋಟಿ ಮೀಸಲಿಡಲು ಸೂಚಿಸಿದ್ದಾರೆ.

ಬಸವ ಕಲ್ಯಾಣ ಕ್ಷೇತ್ರದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಜನ ಮರಾಠಿಗರು ಮತಗಳಿದ್ದು, ಇವು ನಿರ್ಣಾಯಕ ಮತಗಳಾಗಿವೆ. ಹೀಗಾಗಿ ಮರಾಠರ ಮತಗಳನ್ನ ಸೆಳೆಯುವ ಲೆಕ್ಕಾಚಾರದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಿಎಂ ಮುಂದಾಗಿದ್ದಾರೆ ಎನ್ನಲಾಗಿದೆ.

ಶಿರಾ ಉಪಚುನಾವಣೆಯಲ್ಲೂ ಇದೇ ತಂತ್ರ ಬಳಕೆಯಾಗಿದ್ದು, ಶಿರಾ ಕ್ಷೇತ್ರದಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಗೊಲ್ಲ ಸಮುದಾಯದ ಮತಗಳಿದ್ದವು, ಇದರಿಂದ ಸಿಎಂ ಯಡಿಯೂರಪ್ಪ ಗೊಲ್ಲ ಅಭಿವೃದ್ಧಿ ನಿಗಮ ಘೋಷಣೆ ಮಾಡಿ ಶಿರಾ ಗೆಲ್ಲುವಲ್ಲಿ ಸಕ್ಸಸ್ ಆಗಿದ್ದರು. ಇದೀಗ ಅದೇ ಮಾದರಿಯಲ್ಲಿ ಮರಾಠಿಗರ ಹೆಚ್ಚು ಮತಗಳಿರುವ ಬಸವಕಲ್ಯಾಣದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಆದೇಶಿಸಿದ್ದಾರೆ. 

ಶುಕ್ರವಾರ ಬಸವಕಲ್ಯಾಣಕ್ಕೆ ಭೇಟಿ ನೀಡಿರುವ ವಿಜಯೇಂದ್ರ, ಮರಾಠಿಗರ ಸಭೆ ನಡೆಸಿದ್ದರು. ಅಲ್ಲದೇ ಆ ಸಭೆಯಲ್ಲಿ ಮರಾಠಿಗರ ಹಿತ ಕಾಯುವುದಾಗಿ ಭರವಸೆ ನೀಡಿದ್ದರು. ಅದರಂತೆ ವಿಜಯೇಂದ್ರ ಅವರು ತಮ್ಮ ತಂದೆಯವರಿಂದ ಪ್ರಾಧಿಕಾರದ ತಂತ್ರ ಹೆಣೆದಿದ್ದಾರೆ.

click me!