ನಾನೊಬ್ಬ ನುರಿತ ರಾಜಕಾರಣಿ...ಮಂತ್ರಿ ಆಗೇ ಆಗ್ತೀನಿ ಎಂದ ಬಿಜೆಪಿ ಹಿರಿಯ ಶಾಸಕ

By Suvarna NewsFirst Published Nov 14, 2020, 7:05 PM IST
Highlights

ರಾಜ್ಯದ ಸಂಪುಟ ವಿಸ್ತರಣೆ ಕಸರತ್ತು ಜೋರಾಗಿದ್ದು, ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆದಿದೆ. ಇದರ ಮಧ್ಯೆ ನಾನು ಮಂತ್ರಿಯಾಗುತ್ತೇನೆ ಎಂದು ಹಿರಿಯ ಬಿಜೆಪಿ ಶಾಸಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ, (ನ.14): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನನ್ನನ್ನು ಮಂತ್ರಿ ಮಾಡೇ ಮಾಡ್ತಾರೆ. ಈ ಬಾರಿ ನಾನು ಸಚಿವನಾಗುವ ವಿಶ್ವಾಸವಿದೆ ಎಂದು ಶಾಸಕ ಉಮೇಶ್ ಕತ್ತಿ ತಿಳಿಸಿದ್ದಾರೆ.

ಇಂದು (ಶನಿವಾರ) ಬೆಳಗಾವಿಯಲ್ಲಿ ಮಾತನಾಡಿದ ಉಮೇಶ್ ಕತ್ತಿ, ಸಂಪುಟ ವಿಸ್ತರಣೆ ವೇಳೆ ನನಗೂ ಸಚಿವ ಸ್ಥಾನ ನೀಡುವ ಭರವಸೆಯಿದೆ. ನಾನೊಬ್ಬ ನುರಿತ ರಾಜಕಾರಣಿ. 8 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಹೀಗಾಗಿ ಬಿಎಸ್ ವೈ ನನಗೆ ಮಂತ್ರಿ ಸ್ಥಾನ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್: ಸಿಟಿ ರವಿಯಿಂದ ಬಹಿರಂಗ..!

ಯಡಿಯೂರಪ್ಪರಿಗೆ ನನ್ನ ಪರಿಚಯ ಇದ್ದೇ ಇದೆ, ಹೈಕಮಾಂಡ್‌ಗೂ ನನ್ನ ಅನಿಸಿಕೆ ಗೊತ್ತು. ಲಾಬಿ ಅಂದ್ರೆ ನಂಗೆ ಗೊತ್ತಿಲ್ಲ, 13 ವರ್ಷ ಮಂತ್ರಿ ಆಗಿ ಕೆಲಸ ಮಾಡಿದ್ದೀನಿ. ಮಂತ್ರಿ ಆಗುವ ಸೌಭಾಗ್ಯ ಬರುತ್ತೆ ಎಂಬುದು ನನ್ನ ಅನಿಸಿಕೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಸ್ಥಾನಕ್ಕಾಗಿ ನಾನು ಯಾರೊಬ್ಬರ ಬೆನ್ನು ಹತ್ತಿ ಹೋಗಲ್ಲ. ಸಚಿವ ಸ್ಥಾನ ನೀಡಿದರೆ ಕೆಲಸ ಮಾಡಿ ತೋರಿಸುತ್ತೇನೆ. ಇಲ್ಲವಾದಲ್ಲಿ ಶಾಸಕನಾಗೇ ಮುಂದುವರೆಯುತ್ತೇನೆ. ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದೇ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಬೆಳಗಾವಿ ಲೋಕಸಭಾ ಉಪಚುನಾವಣೆ  ಟಿಕೆಟ್ ಬಗ್ಗೆ ಪ್ರತಿಕ್ರಿಯಿಸಿದ ಕತ್ತಿ, ಸುರೇಶ್ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಿದ್ರೆ ಅವರನ್ನು ಆರಿಸಿ ತರುವ ಕೆಲಸ‌ ಮಾಡ್ತೇವೆ. ಸುರೇಶ್ ಅಂಗಡಿ ಟಿಕೆಟ್ ಕೊಡದಿದ್ರೆ ಸಹೋದರ ರಮೇಶ್ ಕತ್ತಿ ಟಿಕೆಟ್ ಕೇಳೋದು ತಪ್ಪಿಲ್ಲ. ರಮೇಶ್ ಕತ್ತಿಗೆ ಟಿಕೆಟ್ ಕೊಟ್ಟರೂ, ಬೇರೆ ಕಾರ್ಯಕರ್ತರಿಗೆ ಕೊಟ್ಟರೂ ಜವಾಬ್ದಾರಿಯಿಂದ ಕೆಲಸ ಮಾಡ್ತೇವೆ ಎಂದು ಸ್ಪಷ್ಟಪಡಿಸಿದರು.

click me!