'ವಿಜಯೇಂದ್ರ ಬಿಎಸ್​ವೈ ಉತ್ತರಾಧಿಕಾರಿ ಆಗುವ ಬಗ್ಗೆ ಪಕ್ಷ ಯೋಚಿಸಿದ್ರೆ ಸೂಕ್ತ'

By Suvarna News  |  First Published Nov 14, 2020, 7:48 PM IST

ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿನಿಂದ ಹಿಂದೆ ಸಿಎಂ ಪುತ್ರ ಇವೈ ವಿಜಯೇಂದ್ರ ಅವರ ಪಾತ್ರವಿದೆ ಎನ್ನುವುದಕ್ಕೆ ಬಿಜೆಪಿ ವಿಧಾನಪರಿಷತ್ ಸದಸ್ಯ ಪ್ರತಿಕ್ರಿಯಿಸಿದ್ದು ಹೀಗೆ.....


ಶಿವಮೊಗ್ಗ, (ನ,14): ಪಕ್ಷ, ಸಂಘಟನೆ ಮೂಲಕ ಬಿ.ವೈ.ವಿಜಯೇಂದ್ರ ಬೆಳೆದಿದ್ದು ಅವರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಉತ್ತರಾಧಿಕಾರಿ ಆಗುವ ಎಲ್ಲ ಅವಕಾಶಗಳಿವೆ. ಆದರೆ ಅದನ್ನು ಪಕ್ಷ ಯೋಚಿಸಿದರೆ ಸೂಕ್ತವೆನಿಸುತ್ತದೆ ಎಂದು ಎಂಎಲ್‌ಸಿ ಆಯನೂರು ಮಂಜುನಾಥ ಅಭಿಪ್ರಾಯಪಟ್ಟಿದ್ದಾರೆ.

ಇಂದು (ಶನಿವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆಯವರು(ಕಾಂಗ್ರೆಸ್) ಅವರ ಮಕ್ಕಳನ್ನು ತಂದು ಅಧಿಕಾರಕ್ಕೆ ಕೂರಿಸಿದರು. ಆದರೆ ಸಿಎಂ ಬಿ.ಎಸ್.ಯಡಿಯೂರಪ್ಪ ಆ ಕೆಲಸ ಮಾಡಲಿಲ್ಲ. ಸಂಘಟನೆ ಮೂಲಕ ವಿಜಯೇಂದ್ರ ಬೆಳೆದಿದ್ದು ಉತ್ತರಾಧಿಕಾರಿ ಅವಕಾಶವನ್ನು ಪಕ್ಷ ಕೊಟ್ಟರೆ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದರು.

Tap to resize

Latest Videos

'ವಿಜಯೇಂದ್ರಗೆ ಅಧ್ಯಕ್ಷ, ಇಲ್ಲ ಅದಕ್ಕಿಂತ ಹೆಚ್ಚಿನ ಜವಾಬ್ದಾರಿ ಸಿಗಬಹುದು'

ರಾಜ್ಯದಲ್ಲಿ ವಿಜಯೇಂದ್ರ ಪಕ್ಷವನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದಾರೆ. ಯುವಕರನ್ನು ಹೆಚ್ಚಾಗಿ ಸೆಳೆಯುತ್ತಿದ್ದಾರೆ. ಹೊಸ ನಾಯಕತ್ವದಿಂದ ಸಂಘಟನೆಗೆ ಜೀವಂತಿಕೆ ಬರುತ್ತಿದೆ. ಆದರೆ ವಿಜಯೇಂದ್ರ ಒಬ್ಬರೇ ಇರುವುದಿಲ್ಲ, ಎಲ್ಲರೂ ಜತೆಗಿರುತ್ತಾರೆ. ಅವರೆಲ್ಲರ ಸಹಕಾರದ ನಡುವೆ ವಿಜಯೇಂದ್ರ ಎದ್ದು ಕಾಣಿಸುತ್ತಿದ್ದಾರೆ ಎಂದು ಹೇಳಿದರು.

ಶಿರಾ ಮತ್ತು ಆರ್‌ಆರ್ ನಗರ ಉಪ ಚುನಾವಣೆಗಳನ್ನು ಗೆಲ್ಲುವ ಮೂಲಕ ಪಕ್ಷ ಹೊಸ ಬೇರು ಹಳೆ ಚಿಗುರಿನ ಸಂಮಿಶ್ರಣವಾಗಿದೆ. ಈ ಗೆಲುವು ಒಬ್ಬರ ಸಾಧನೆಯಲ್ಲ. ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಹೊಸ ನಾಯಕತ್ವ ಉಗಮದಿಂದ ಪಕ್ಷದ ಸಂಘಟನೆಯಲ್ಲಿ ಜೀವಂತಿಕೆ ವೃದ್ಧಿಸುತ್ತದೆ ಎಂದರು.

ಪಕ್ಷದಲ್ಲಿ ಅತ್ಯಂತ ಹಿರಿಯರಿದ್ದಾರೆ. ತಳಮಟ್ಟದಲ್ಲಿ ಸಂಘಟನೆಯೂ ಇದೆ. ಸೈನ್ಯ ತುಂಬಾ ಚೆನ್ನಾಗಿದ್ದು ಅದರ ನೇತೃತ್ವವನ್ನು ಹೊಸ ದಳಪತಿ ವಹಿಸಿದ್ದಾರೆ. ಕೆಲವರಿಗೆ ಭಾಗ್ಯ ರೇಖೆ ಇರುತ್ತದೆ. ಹೋದ ಕಡೆ ಗೆಲುವು ಸಿಗುತ್ತದೆ. ಅಂತಹ ಒಂದು ಭಾಗ್ಯರೇಖೆ ವಿಜಯೇಂದ್ರ ಅವರಿಗಿದೆ ಎಂದು ತಿಳಿಸಿದರು.

ಕುರುಕ್ಷೇತ್ರದಲ್ಲಿ ಗೆಲುವು ಮುಖ್ಯವಾಗಿತ್ತು. ಹಿಂದಿನ ಕುರುಕ್ಷೇತ್ರದಲ್ಲಿ ಘಟಾನುಘಟಿಗಳೇ ಇದ್ದರು. ಆದರೆ ಯುದ್ಧ ಗೆಲ್ಲಲು ಪಟ್ಟ ಕಟ್ಟಿದ್ದು ಅತ್ಯಂತ ಕಿರಿಯ ಶ್ರೀ ಕೃಷ್ಣನಿಗೆ ಎಂಬುದು ಎಲ್ಲರಿಗೂ ತಿಳಿದಿದೆ. ಅದೇ ರೀತಿ ಬಿಜೆಪಿಯಲ್ಲಿಯೂ ಸಮರ್ಥರಾದ ಭೀಮ, ಅರ್ಜುನ ಇದ್ದರೂ ಅತ್ಯಂತ ಕಿರಿಯ(ವಿಜಯೇಂದ್ರ)ನನ್ನು ಮುಂದೆ ಬಿಟ್ಟಿದ್ದೇವೆ. ಯುದ್ಧವನ್ನು ಎಲ್ಲರೂ ಸಮಾನವಾಗಿ ಎದುರಿಸುತ್ತಿದ್ದೇವೆ ಎಂದು ಹೇಳಿದರು.

click me!