
ಬೆಂಗಳೂರು : ‘ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದ ದೊಡ್ಡ ಶಕ್ತಿ’ ಎಂಬ ತಮ್ಮ ಹೇಳಿಕೆಯ ‘ವರ್ಡ್ ವಾರ್’ ಪ್ರಭಾವ ಮಸುಕಾಗುವ ಮೊದಲೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತ್ಯಾಗದ ಮಹತ್ವದ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ವರಿಷ್ಠೆ ಸೋನಿಯಾ ಗಾಂಧಿ ಅವರ ನಿದರ್ಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖವೇ ನೀಡಿರುವುದು ಕುತೂಹಲ ಮೂಡಿಸಿದೆ.
ಶುಕ್ರವಾರ ಅರಮನೆ ಮೈದಾನದಲ್ಲಿ ನಡೆದ ಅಂಗನವಾಡಿ ಸ್ಥಾಪನೆಯ 50ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಎಐಸಿಸಿ ಅಧ್ಯಕ್ಷೆಯಾಗಿದ್ದ ಸೋನಿಯಾಗಾಂಧಿ ಅವರು, 20 ವರ್ಷ ಕೆಲಸ ಮಾಡಿ ಕೇಂದ್ರದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದರು. ಅಂದಿನ ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಅವರು ಪ್ರಧಾನಿಯಾಗುವಂತೆ ಸೋನಿಯಾ ಅವರಿಗೆ ಆಹ್ವಾನ ನೀಡಿದರು. ಆಗ ಸೋನಿಯಾ ಗಾಂಧಿ ನನಗೆ ಅಧಿಕಾರ ಬೇಡ ಎಂದು ದೇಶದ ಉದ್ಧಾರಕ್ಕಾಗಿ ಆರ್ಥಿಕ ತಜ್ಞರಾಗಿದ್ದ ಮನಮೋಹನ ಸಿಂಗ್ ಅವರಿಗೆ ಪ್ರಧಾನಿ ಸ್ಥಾನ ತ್ಯಾಗ ಮಾಡಿದರು ಎಂದರು.
ನಂತರ ನಂಬಿಕೆಯ ಮಹತ್ವ ವಿವರಿಸಲು ‘ನಿಂಬೆಗಿಂ ಹುಳಿಯಿಲ್ಲ, ತುಂಬೆಗಿಂ ಕರಿಯಿಲ್ಲ, ನಂಬಿಗೆಯಿಂದಧಿಕ, ಗುಣವಿಲ್ಲ. ದೈವವುಂ ಶುಭವಿಂದಿಲ್ಲ ಸರ್ವಜ್ಞ’. ಅಂದರೆ ನಂಬಿಕೆಗಿಂತ ದೊಡ್ಡ ದೇವರಿಲ್ಲ ಎಂದು ಸರ್ವಜ್ಞ ತನ್ನ ತ್ರಿಪದಿಯಲ್ಲಿ ಹೇಳುತ್ತಾನೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ವೇಳೆ ನಮ್ಮ ತಾಯಂದಿರ ಮೇಲೆ ಅಪಾರವಾದ ನಂಬಿಕೆ ಇಟ್ಟುಕೊಂಡು ಅನೇಕ ಮಹಿಳಾಪರ ಯೋಜನೆ ಜಾರಿಗೆ ತಂದಿದೆ. ವರದಕ್ಷಿಣೆ ನಿಷೇಧ, ಬಾಲ್ಯವಿವಾಹ ತಡೆ ಕಾಯ್ದೆ, ಈಗ ಅಕ್ಕ ಪಡೆ ಯೋಜನೆ ನೀಡಿದ್ದೇವೆ. ಮಹಿಳಾ ಪರ ಆಲೋಚಿಸದ ವಿಪಕ್ಷಗಳನ್ನು ನಾನು ಟೀಕಿಸುವುದಿಲ್ಲ ಎಂದರು.
ಸೋನಿಯಾಗಾಂಧಿ ಅವರು ನನ್ನನ್ನು ಈ ರಾಜ್ಯದ ಕಾಂಗ್ರೆಸ್ ಅಧ್ಯಕ್ಷನಾಗಿ ನೇಮಕ ಮಾಡಿದಾಗ, ರಾಜ್ಯದ ಜನತೆಗೆ ಒಂದು ಮಾತು ಕೊಟ್ಟಿದ್ದೆ. ಅಂತೆಯೇ ಮಹಿಳೆಯರಿಗಾಗಿ, ಯುವಕರಿಗಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಈ ಗ್ಯಾರಂಟಿ ಯೋಜನೆಗಳನ್ನು ಸಾಕಾರಗೊಳಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಟೀಕೆ ಮಾಡಿದ್ದರು. ಇಂದು 1.26 ಕೋಟಿ ಮಹಿಳೆಯರ ಖಾತೆಗೆ ನೇರವಾಗಿ ಹಣ ಹಾಕುತ್ತಿದ್ದೇವೆ. ಈಗ ಬಿಜೆಪಿಯವರು ಬೇರೆ, ಬೇರೆ ರಾಜ್ಯಗಳಲ್ಲಿ ನಮ್ಮ ಯೋಜನೆಗಳನ್ನು ನಕಲು ಮಾಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ನಮ್ಮ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಮೂರು ಯೋಜನೆಗಳು ನೇರವಾಗಿ ಮಹಿಳೆಯರ ಬಲ ಹೆಚ್ಚಿಸಿದೆ. ಹೆಣ್ಣು ಕುಟುಂಬದ ಕಣ್ಣು ಎನ್ನುವ ಮಾತಿನ ಮೇಲೆ ನಂಬಿಕೆಯಿಟ್ಟು ಕೆಲಸ ಮಾಡುತ್ತಿದ್ದೇವೆ ಎಂದರು.
ಯಾವುದೇ ವಿಚಾರದಲ್ಲೂ ನನಗೆ ಆತುರವಿಲ್ಲ. ಎಲ್ಲವನ್ನೂ ಪಕ್ಷ ತೀರ್ಮಾನಿಸುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಅರಮನೆ ಮೈದಾನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲವನ್ನೂ ಪಕ್ಷ ನಿರ್ಧಾರ ಮಾಡುತ್ತದೆ. ದೆಹಲಿಯ ಪಕ್ಷದ ಕಚೇರಿ ನಮ್ಮ ಪಾಲಿನ ದೇವಾಲಯ. ದೆಹಲಿ ಕಚೇರಿ ನಮಗೆ ಮಾರ್ಗದರ್ಶನ ನೀಡಲಿದೆ ಎಂದರು.ದೆಹಲಿಯಲ್ಲಿ ಸಾಕಷ್ಟು ಕೆಲಸಗಳಿರುವ ಕಾರಣದಿಂದಾಗಿ ನಾನು ಹೋಗಬಹುದು. ಸಂಸತ್‌ನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ರಾಜ್ಯದ ಸಂಸದರನ್ನು ಭೇಟಿ ಮಾಡಬೇಕಿದೆ. ಮೇಕೆದಾಟು, ಮಹದಾಯಿ, ಕೃಷ್ಣಾ, ಎತ್ತಿನಹೊಳೆ ಸೇರಿ ನೀರಾವರಿ ಯೋಜನೆಗಳ ಕುರಿತು ಸಂಸದರೊಂದಿಗೆ ಚರ್ಚೆ ಮಾಡಬೇಕಿದೆ. ಈ ಕುರಿತು ಸರ್ವಪಕ್ಷ ಸಭೆ ಕರೆಯಬೇಕಿದ್ದು, ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.
ಒಕ್ಕಲಿಗರೂ ಹಿಂದುಳಿದ ಸಮುದಾಯದವರೇ:ಒಕ್ಕಲಿಗ ಸಮುದಾಯ ನಿಮ್ಮ ಪರ ನಿಂತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ನಾನು ಸಮುದಾಯದ ದೃಷ್ಟಿಕೋನ ಬಗ್ಗೆ ಚರ್ಚೆ ಮಾಡುವುದಿಲ್ಲ. ನನಗೆ ಪಕ್ಷ ಮುಖ್ಯ. ಕಾಂಗ್ರೆಸ್ ನನ್ನ ಸಮುದಾಯ. ನಾನು ಒಕ್ಕಲಿಗ ಸಮುದಾಯದಿಂದ ಬಂದಿದ್ದು, ಆ ಸಮುದಾಯದ ಜನ ನನ್ನನ್ನು ಪ್ರೀತಿಸಬಹುದು. ನನ್ನ ಬದ್ಧತೆ ಹಿಂದುಳಿದ, ಪರಿಶಿಷ್ಟ, ಅಲ್ಪಸಂಖ್ಯಾತ ಸೇರಿ ಸಮಾದ ಎಲ್ಲ ಸಮುದಾಯಗಳ ಪರವಾಗಿದೆ. ಒಕ್ಕಲಿಗರು ಕೂಡ ಹಿಂದುಳಿದ ವರ್ಗದ ಸಮುದಾಯದವರೇ ಎಂದು ಮಾರ್ಮಿಕವಾಗಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.