
ಮೈಸೂರು (ನ.29): ಹುಟ್ಟು ಕಾಂಗ್ರೆಸಿಗನಾದ ಡಿ.ಕೆ.ಶಿವಕುಮಾರ್ ಪಕ್ಷಕ್ಕಾಗಿ ಅಪಾರ ಶ್ರಮ ಹಾಕಿದ್ದಾರೆ. ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರಿಸಬೇಕು. ಇಲ್ಲವಾದರೆ ಚಾಮುಂಡಿಬೆಟ್ಟಕ್ಕೆ ಬಂದು ಅಧಿಕಾರ ಹಂಚಿಕೆ ಒಪ್ಪಂದ ಆಗಿಲ್ಲ ಎಂದು ಆಣೆ ಮಾಡಲಿ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಗ್ರಹಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಹುಟ್ಟಾ ಕಾಂಗ್ರೆಸ್ಸಿಗ. ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಡಿ.ಕೆ. ಶಿವಕುಮಾರ್‌ಅವರ ಶ್ರಮ ಅಧಿಕವಾಗಿದ್ದು, ಸಿದ್ದರಾಮಯ್ಯ ಅಧಿಕಾರ ಹಸ್ತಾಂತರಿಸಲೇಬೇಕು ಎಂದರು.
ಶಿವಕುಮಾರ್ ಸಿಎಂ ಆಗಲೇಬೇಕು. ಸಿದ್ದರಾಮಯ್ಯ ಕಾಂಗ್ರೆಸಿಗನೂ ಅಲ್ಲ, ಜೆಡಿಎಸ್ ಅಲ್ಲ, ಅಹಿಂದ ನಾಯಕನೂ ಅಲ್ಲ. ಸಿದ್ದರಾಮಯ್ಯ ತನ್ನ ಸ್ವಾರ್ಥಕ್ಕಾಗಿ ಯಾರ ಜತೆಗೆ ಬೇಕಾದರೂ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಒಂದು ವೇಳೆ ಅಧಿಕಾರ ಹಸ್ತಾಂತರದ ಒಪ್ಪಂದ ಆಗಿಲ್ಲ ಎಂದಾದರೆ ಚಾಮುಂಡಿ ಬೆಟ್ಟಕ್ಕೆ ಬಂದು 30- 30 ತಿಂಗಳು ಅಧಿಕಾರ ಹಂಚಿಕೆ ಆಗಿಲ್ಲ ಎಂದು ಆಣೆ ಮಾಡಲಿ. ಚಾಮುಂಡಿ ತಾಯಿಯ ಮುಂದೆ ನಾನೇ 5 ವರ್ಷ ಸಿಎಂ ಎಂದು ಹೇಳಲಿ ನೋಡೋಣ ಎಂದು ಅವರು ಸವಾಲು ಹಾಕಿದರು.
ಅಧಿಕಾರ ಹಸ್ತಾಂತರ ವಿಚಾರದಲ್ಲಿ ಕೊಟ್ಟ ಮಾತಿನಂತೆ ನಡೆಯದೇ ಏನೇನೋ ಕೇಳಿ ಬರುತ್ತಿದೆ. ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿಯನ್ನು ಟಾರ್ಗೆಟ್ ಮಾಡಿಕೊಂಡು ಯತೀಂದ್ರ ಮಾತನಾಡಿರುವುದು ಸರಿಯಲ್ಲ. ಸಿದ್ದರಾಮಯ್ಯ ಪರವಾಗಿ ನಿರಂಜನಾನಂದಪುರಿ ಸ್ವಾಮೀಜಿ ಕೂಡ ಮಾತನಾಡಿದ್ದಾರೆ. ಹಾಗಾಗಿ ನಿರ್ಮಲಾನಂದನಾಥ ಸ್ವಾಮೀಜಿ ಗುರಿಯಾಗಿಸಿಕೊಂಡು ಯತೀಂದ್ರ ಮಾತನಾಡಬಾರದಿತ್ತು. ಪಕ್ಷಗಳ ನಡುವಿನ ಸಂಘರ್ಷ ಸಾಮಾನ್ಯ. ಆದರೆ, ಜಾತಿ ಸಂಘರ್ಷ ಅಪಾಯಕಾರಿ. ಸಿದ್ದರಾಮಯ್ಯ ಪರವಾಗಿ ಯತೀಂದ್ರ ಹೊರತುಪಡಿಸಿ ಯಾರೊಬ್ಬರೂ ಮಾತನಾಡುತ್ತಿಲ್ಲ ಎಂದರು.
ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಗೆ ಕರೆತಂದಾಗ ಈ ದುರಂಹಕಾರಿಯನ್ನು ಏಕೆ ಕರೆ ತರುತ್ತಿದ್ದೀರಿ ಎಂದು ಹಲವಾರು ಮಂದಿ ನಾಯಕರು ಹೇಳಿದರು. ಆದರೆ ಕಾಂಗ್ರೆಸ್ ಗೆ ಕರೆತಂದವರನ್ನೇ ಸಿದ್ದರಾಮಯ್ಯ ಮುಗಿಸಿದರು. ಅಲ್ಲದೆ ಸಿದ್ದರಾಮಯ್ಯ ಕಾಂಗ್ರೆಸ್ ಸೇರಲು ಡಿ.ಕೆ. ಶಿವಕುಮಾರ್ ಪಾತ್ರ ಪ್ರಮುಖ. ರಾಜಕೀಯವಾಗಿ ಬೆಳೆಸಿದ ಎಚ್.ಡಿ. ದೇವೇಗೌಡರನ್ನು ಧಿಕ್ಕರಿಸಿದ ಸಿದ್ದರಾಮಯ್ಯಗೆ ಕೃತಜ್ಞತೆ ಇಲ್ಲ. ಸಿದ್ದರಾಮಯ್ಯ ಕೃತಜ್ಞತಾ ಹೀನ ಎಂದು ಅವರು ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.