ವಿದೇಶ ಪ್ರವಾಸಕ್ಕೆ ತೆರಳಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಲ್ಲಿಂದ ವಾಪಸಾದ ನಂತರ ದೆಹಲಿಗೆ ತೆರಳಿ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ನಿರ್ಗಮಿತ ಅಧ್ಯಕ್ಷ ಅಮಿತ್ ಶಾ ಮತ್ತಿತರರೊಂದಿಗೆ ಚರ್ಚಿಸಿಯೇ ಸಂಪುಟ ವಿಸ್ತರಣೆ ಮಾಡಲಿದ್ದಾರೆ
ಬೆಂಗಳೂರು [ಜ.20]: ಆರು ದಿನಗಳ ವಿದೇಶ ಪ್ರವಾಸಕ್ಕೆ ತೆರಳಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಲ್ಲಿಂದ ವಾಪಸಾದ ನಂತರ ದೆಹಲಿಗೆ ತೆರಳಿ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ನಿರ್ಗಮಿತ ಅಧ್ಯಕ್ಷ ಅಮಿತ್ ಶಾ ಮತ್ತಿತರರೊಂದಿಗೆ ಚರ್ಚಿಸಿಯೇ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆಯಿದೆ.
ನಡ್ಡಾ ಅವರು ನೂತನ ಅಧ್ಯಕ್ಷರಾಗುವ ಹಿನ್ನೆಲೆಯಲ್ಲೇ ಶನಿವಾರ ರಾಜ್ಯಕ್ಕೆ ಆಗಮಿಸಿದ್ದ ಅಮಿತ್ ಶಾ ಅವರು ಸಂಪುಟ ವಿಸ್ತರಣೆ ಬಗ್ಗೆ ಯಡಿಯೂರಪ್ಪ ಅವರು ಪ್ರಸ್ತಾಪಿಸಿದರೂ ಅಂತಿಮ ತೀರ್ಮಾನ ಹೇಳಲಿಲ್ಲ. ಬದಲಾಗಿ, ವಿದೇಶ ಪ್ರವಾಸದಿಂದ ವಾಪಸ್ ಬಂದ ನಂತರ ಮತ್ತೊಮ್ಮೆ ಮಾತುಕತೆ ನಡೆಸಿ ಅಂತಿಮಗೊಳಿಸೋಣ ಎಂಬ ಮಾತನ್ನು ಹೇಳಿದರು ಎಂದು ತಿಳಿದು ಬಂದಿದೆ.
ಆದರೂ ನಡ್ಡಾ ಅವರೊಬ್ಬರೇ ಸಂಪುಟ ವಿಸ್ತರಣೆ ಬಗ್ಗೆ ನಿರ್ಧಾರ ಕೈಗೊಳ್ಳುವ ಸಂಭವ ಕಡಿಮೆ. ಅಮಿತ್ ಶಾ ಹಾಗೂ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರೂ ಸಲಹೆಗಳನ್ನು ನೀಡಲಿದ್ದಾರೆ ಎನ್ನಲಾಗಿದೆ.
20 ದಿನದಲ್ಲಿ 5000 ರ‍್ಯಾಲಿಗೆ ಬಿಜೆಪಿ ಮೆಗಾ ಪ್ಲಾನ್!...
ಈ ನಡುವೆ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಸ್ವಿಜರ್‌ಲೆಂಡ್‌ನ ದಾವೋಸ್‌ಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ಪ್ರವಾಸ ಮುಗಿಸಿ ಬಂದ ನಂತರ ಎರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಕೈಗೊಳ್ಳಲಾಗುವುದು ಎಂಬ ವಿಶ್ವಾಸದ ಮಾತುಗಳನ್ನಾಡಿದರು.
ಅಮಿತ್ ಶಾ ಅವರೊಂದಿಗೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದೇನೆ. ಉತ್ತಮ ಸ್ಪಂದನೆ ಸಿಕ್ಕಿದೆ. ಇದಕ್ಕೆ ಯಾವುದೇ ಅಡ್ಡಿ ಆತಂಕ ಇಲ್ಲ. ಮಾಧ್ಯಮಗಳಲ್ಲಿ ಬರುವ ಸುದ್ದಿಗಳು ಸರಿಯಲ್ಲ ಎಂದು ಹೇಳಿದರು.
ದಾವೋಸ್ ಪ್ರವಾಸದಿಂದ ವಾಪಸಾದ ನಂತರ ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ತೆರಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಸ್ವಾಭಾವಿಕ ಎಂದು ತಿಳಿಸಿದರು.
ಸಂಪುಟ ವಿಸ್ತರಣೆ ವಿಚಾರವಾಗಿ ಹೆಚ್ಚಿನ ಸ್ಪಷ್ಟತೆಗೆ ಮತ್ತೆ ಚರ್ಚೆ ಮಾಡಬೇಕಾದ ಕಾರಣ ಪ್ರಕ್ರಿಯೆ ಕೊಂಚ ವಿಳಂಬವಾಗಿದೆ. ಮುಖ್ಯಮಂತ್ರಿಗಳು ವಿದೇಶದಿಂದ ವಾಪಸ್ ಬಂದ ತಕ್ಷಣ ಸಂಪುಟ ವಿಸ್ತರಣೆ ಆಗಲಿದೆ.
ಅಶ್ವಥ್ ನಾರಾಯಣ್, ಡಿಸಿಎಂ