ಪಕ್ಷ, ಭವಿಷ್ಯ ಮುಖ್ಯ ಅಂದುಕೊಂಡವರು ಇರಲಿ, ರಾಜೀನಾಮೆ ನೀಡಿದರೆ 5 ನಿಮಿಷದಲ್ಲೇ ಅಂಗೀಕಾರ: ಸಿಎಂ ಖಡಕ್ ವಾರ್ನಿಂಗ್!

Published : Aug 04, 2026, 11:46 AM IST
DK Shivakumar

ಸಾರಾಂಶ

ಸಚಿವ ಸ್ಥಾನ ಸಿಗದ ಕಾರಣ ಅಸಮಾಧಾನಗೊಂಡಿರುವ ಶಾಸಕರಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ರಾಜೀನಾಮೆ ತಂದರೆ ಐದೇ ನಿಮಿಷದಲ್ಲಿ ಅಂಗೀಕರಿಸುವುದಾಗಿ ಹೇಳಿದ್ದು, ತಾಳ್ಮೆಯಿಂದಿರಲು ತಮ್ಮ ಹಾಗೂ ಹಿರಿಯ ನಾಯಕರ ಉದಾಹರಣೆ ನೀಡಿದ್ದಾರೆ. ಅಲ್ಲದೆ, ನಿಗಮ-ಮಂಡಳಿಗಳ ಅಧ್ಯಕ್ಷರಿಗೆ ತಕ್ಷಣ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ.

ಬೆಂಗಳೂರು: ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡು ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿರುವ ನಾಯಕರು ಹಾಗೂ ಶಾಸಕರಿಗೆ ಮುಖ್ಯಮಂತ್ರಿಗಳು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಖಡಕ್ ವಾರ್ನಿಂಗ್ ನೀಡಿದ್ದಾರೆ. "ಯಾರಾದರೂ ರಾಜೀನಾಮೆ ತಂದುಕೊಟ್ಟರೆ ಕ್ಷಣಮಾತ್ರದಲ್ಲಿ, ಅಂದರೆ ಐದೇ ನಿಮಿಷದಲ್ಲಿ ಅದನ್ನು ಅಂಗೀಕರಿಸುತ್ತೇನೆ" ಎಂದು ಸಿಎಂ ಡಿಕೆ ಶಿವಕುಮಾರ್ ಎಚ್ಚರಿಸಿದ್ದಾರೆ.

ರಾಜೀನಾಮೆ ಬೆದರಿಕೆಗೆ ಮುಖ್ಯಮಂತ್ರಿಗಳ ತಿರುಗೇಟು

ಸಚಿವಾಕಾಂಕ್ಷಿಗಳು ಹಾಗೂ ಅವಕಾಶವಂಚಿತ ಶಾಸಕರ ಅಸಮಾಧಾನದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ರಾಜಕೀಯದಲ್ಲಿ ಇಂತಹ ಬೆಳವಣಿಗೆಗಳು ಸಹಜ , ಯಾರನ್ನೂ ತಡೆಯಲು ಸಾಧ್ಯವಿಲ್ಲ "ರಾಜೀನಾಮೆ ಕೊಡುವುದು, ಬೆದರಿಕೆ ಹಾಕುವುದು ರಾಜಕೀಯದಲ್ಲಿ ನಡೆಯುತ್ತಲೇ ಇರುತ್ತದೆ. ರಾಜೀನಾಮೆ ನೀಡಲು ನಿರ್ಧರಿಸಿದವರನ್ನು ಯಾರಿಂದಲೂ ತಡೆಯಲು ಆಗುವುದಿಲ್ಲ. ಆದರೆ, ಅವರಿಗೆ ಪಕ್ಷ ಮತ್ತು ತಮ್ಮ ರಾಜಕೀಯ ಭವಿಷ್ಯ ಮುಖ್ಯ ಅನಿಸಿದರೆ ಪಕ್ಷದಲ್ಲೇ ಇರಲಿ. ಪಕ್ಷ ಇದ್ದರೆ ಮಾತ್ರ ನಮಗೆಲ್ಲಾ ಭವಿಷ್ಯ ಎಂದು ಖಡಕ್ ಆಗಿ ಹೇಳಿದರು.

ನನ್ನ ಉದಾಹರಣೆಯೇ ಇದೆ

ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಸಿಎಂ, "ನನಗೂ ಸಚಿವ ಸ್ಥಾನ ತಪ್ಪಿದಾಗ ನಾನು ರಾಜೀನಾಮೆ ಕೊಡಬಹುದಿತ್ತಲ್ಲವೇ? ಧರ್ಮಸಿಂಗ್ ಹಾಗೂ ಸಿದ್ದರಾಮಯ್ಯ ಅವರ ಸಚಿವ ಸಂಪುಟ ರಚನೆ ವೇಳೆ ನನಗೂ ಸ್ಥಾನ ಸಿಕ್ಕಿರಲಿಲ್ಲ. ಆಗ ನಾನು ಮತ್ತು ಜಿ. ಪರಮೇಶ್ವರ್ ಇಬ್ಬರೂ ತಾಳ್ಮೆಯಿಂದ ಇರಲಿಲ್ಲವೇ?" ಎಂದು ಪ್ರಶ್ನಿಸಿದರು.

ಹಿರಿಯ ನಾಯಕರ ತಾಳ್ಮೆಯನ್ನು ಉದಾಹರಿಸಿದ ಸಿಎಂ

ಇತಿಹಾಸವನ್ನು ಉದಾಹರಣೆಯಾಗಿ ನೀಡಿದ ಸಿಎಂ, ತಾಳ್ಮೆಯಿಂದಿದ್ದ ನಾಯಕರಿಗೆ ನಂತರದ ದಿನಗಳಲ್ಲಿ ಉನ್ನತ ಅಧಿಕಾರ ಸಿಕ್ಕಿದ್ದನ್ನು ಸಚಿವಾಕಾಂಕ್ಷಿಗಳಿಗೆ ನೆನಪಿಸಿಕೊಟ್ಟರು. ವೀರೇಂದ್ರ ಪಾಟೀಲ್ ಅವರ ಕಾಲದಲ್ಲಿ ಬಂಗಾರಪ್ಪ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಧರ್ಮಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಸಾಹೇಬರಿಗೂ ಆರಂಭದಲ್ಲಿ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದರೆ ಅವರೆಲ್ಲರೂ ತಾಳ್ಮೆಯಿಂದ ಕಾದಿದ್ದಕ್ಕೆ ಮುಂದೆ ಮುಖ್ಯಮಂತ್ರಿಗಳಾಗಲಿಲ್ಲವೇ? ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಾಳ್ಮೆಯಿಂದ ಇರುವುದು ಅತ್ಯಗತ್ಯ. ನಮಗೆ ವ್ಯಕ್ತಿಗಿಂತ ಪಕ್ಷವೇ ಪ್ರಮುಖ ಎಂದರು.

ಬೋರ್ಡ್, ಕಾರ್ಪೊರೇಷನ್ ಅಧ್ಯಕ್ಷರ ರಾಜೀನಾಮೆಗೆ ಸೂಚನೆ

ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರು ಹಾಗೂ ಮಂತ್ರಿಗಳ ಅಧಿಕಾರಾವಧಿಯ ಕುರಿತು ಸ್ಪಷ್ಟನೆ ನೀಡಿದ ಸಿಎಂ, ಪೂರ್ವನಿರ್ಧಾರಿತ ನಿಯಮಗಳಂತೆ ನಡೆದುಕೊಳ್ಳಲು ಸೂಚಿಸಿದ್ದಾರೆ. ಬೋರ್ಡ್ ಹಾಗೂ ಕಾರ್ಪೊರೇಷನ್ ಅಧ್ಯಕ್ಷರಿಗೆ 2.5 ವರ್ಷಗಳ ಕಾಲ ಮಾತ್ರ ಅಧಿಕಾರ ಎಂದು ಮೊದಲೇ ಸ್ಪಷ್ಟಪಡಿಸಲಾಗಿತ್ತು. ಈ ವಿಷಯವನ್ನು ಸಚಿವರಿಗೂ ಮುಂಚಿತವಾಗಿಯೇ ತಿಳಿಸಲಾಗಿತ್ತು. ನಿಗಮ-ಮಂಡಳಿಗಳ ಹಾಲಿ ಅಧ್ಯಕ್ಷರು ತಕ್ಷಣವೇ ತಮ್ಮ ರಾಜೀನಾಮೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ಮೊದಲು ಕಾರ್ಯಕರ್ತರಿಗೆ ಆದ್ಯತೆ

ಮೊದಲು ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡುತ್ತೇನೆ. ತದನಂತರ ಅಸಮಾಧಾನಗೊಂಡಿರುವ ಶಾಸಕರನ್ನು ಕರೆದು ಅವರ ಕುಂದುಕೊರತೆಗಳನ್ನು ಆಲಿಸುತ್ತೇನೆ. ಅಲ್ಲದೆ, "ನಿನ್ನೆ ರಾತ್ರಿಯೇ ನಾನು ಹೇಳಬೇಕಾದ ಎಲ್ಲ ವಿಷಯಗಳನ್ನು ಸ್ಪಷ್ಟವಾಗಿ ಹೇಳಿದ್ದೇನೆ. ಹೊಸದಾಗಿ ಏನೂ ಇಲ್ಲ. ಇಂದು ನ್ಯಾನೋ ಕಾನ್ಫರೆನ್ಸ್ ಹಾಗೂ ಪ್ರಮುಖ ಪರಿಶೀಲನಾ ಸಭೆಗಳು (Reviews) ಇವೆ. ಪ್ರಸ್ತುತ ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ, ಕೂಡಲೇ ಬರ ಪರಿಹಾರ ಕಾಮಗಾರಿಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಎಲ್ಲ ಸಚಿವರಿಗೆ ಸೂಚಿಸಿದ್ದೇನೆ ಎಂದು ಸಿಎಂ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
ಪಕ್ಷ ಕಟ್ಟಲು ನಾವೇ ಬೇಕು, ಅವಕಾಶ ನೀಡುವಾಗ ತಾರತಮ್ಯ, ಸುರ್ಜೇವಾಲ ಮುಂದೆ ಯಶವಂತರಾಯಗೌಡ ಪಾಟೀಲ್ ನೇರ ನುಡಿ!