ಸಂಪುಟ ವಿಳಂಬಕ್ಕೆ ವಿಪಕ್ಷಗಳ ಆಕ್ರೋಶ : ಕರ್ನಾಟಕಕ್ಕೆ ಅಂಟಿದ ಶಾಪ ಎಂದ HDK

By Kannadaprabha NewsFirst Published Jul 31, 2021, 7:35 AM IST
Highlights
  • ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ವಿಳಂಬ
  • ಸಂಪುಟ ವಿಸ್ತರಣೆ ವಿಳಂಬಕ್ಕೆ ಅಸಮಾಧಾನ ಹೊರಹಾಕಿದ ವಿಪಕ್ಷಗಳು
  • ಇದೊಂದು ಕರ್ನಾಟಕಕ್ಕೆ ಅಂಟಿದ ಶಾಪ ಎಂದ ಎಚ್‌ಡಿಕೆ

ರಾಮ​ನ​ಗರ/ಹುಬ್ಬಳ್ಳಿ (ಜು.31): ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದರೂ ಸಚಿವ ಸಂಪುಟ ವಿಸ್ತರಣೆ ವಿಳಂಬ ಹಾಗೂ ಸಚಿವ ಸ್ಥಾನಕ್ಕಾಗಿ ಹೆಚ್ಚುತ್ತಿರುವ ಲಾಬಿ ಕುರಿತು ಪ್ರತಿಪಕ್ಷ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿಯಲ್ಲಿ ಸಂಪುಟ ರಚನೆ ವಿಳಂಬವಾಗುತ್ತಿರುವುದು ಕರ್ನಾಟಕಕ್ಕೆ ಅಂಟಿದ ಶಾಪ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದರೆ, ನೆರೆ ಹಾವಳಿಯಿಂದ ಜನ ಸಂಕಷ್ಟದಲ್ಲಿದ್ದರೂ ಯಾರೂ ಕೇಳುವವರಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕಿಡಿಕಾರಿದ್ದಾರೆ.

ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿ ಎರಡು ದಿನವಾದರೂ ಇನ್ನೂ ಸಚಿವ ಸಂಪುಟ ರಚನೆ ಆಗಿಲ್ಲ. ರಾಜ್ಯವು ಪ್ರವಾಹ, ಕೋವಿಡ್‌ನಿಂದ ಕಂಗೆಟ್ಟಿರುವ ಈ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಏಕಾಂಗಿಯಾಗಿ ಕಾರ್ಯನಿರ್ವಹಿಸಬೇಕಿದೆ. ಈ ಬಗ್ಗೆ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿರುವ ಪ್ರತಿಪಕ್ಷಗಳು ಇದೀಗ ಮತ್ತೊಮ್ಮೆ ಸಂಪುಟ ರಚನೆ ವಿಳಂಬ ಕುರಿತು ಕಿಡಿಕಾರಿವೆ.

ಯಾರು ಇನ್? ಯಾರು ಔಟ್...? ಬೊಮ್ಮಾಯಿಗೆ ಕೇಂದ್ರ ನಾಯಕರ ಶುಭಾಶಯ

ಎಚ್‌ಡಿಕೆ ಹೇಳಿದ್ದೇನು?:  ಈ ಹಿಂದೆ ಬಿ.ಎಸ್‌. ಯಡಿ​ಯೂ​ರ​ಪ್ಪ ಮುಖ್ಯ​ಮಂತ್ರಿ ಆಗಿ​ದ್ದಾ​ಗಲೂ ಹಲವು ಸಮಯ ಏಕಾಂಗಿ​ಯಾಗಿ ಕೆಲಸ ಮಾಡಿ​ದ್ದರು. ಈಗ ಬಸ​ವ​ರಾಜ ಬೊಮ್ಮಾಯಿ ಅವರಿಗೂ ಅದೇ ​ಸ್ಥಿತಿ ಬಂದಿದೆ. ಇದು ಕನ್ನಡ ನಾಡಿನ ದುರಾ​ದೃಷ್ಟಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಮನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸಂಪುಟ ರಚನೆ ಬಸ​ವ​ರಾಜ ಬೊಮ್ಮಾ​ಯಿ ಪಾಲಿಗೆ ಸವಾ​ಲಿನ ಕೆಲಸ. ಅವರು ದೆಹಲಿ ವರಿ​ಷ್ಠ​ರೊಂದಿಗೆ ಚರ್ಚಿಸಿ, ಬಿಜೆಪಿ ಶಾಸ​ಕರ ಮನ​ವೊ​ಲಿಸಿ ಸಮ​ಸ್ಯೆಗೆ ಅವ​ಕಾಶ ನೀಡ​ದಂತೆ ಆದಷ್ಟುಬೇಗ ಸಂಪುಟ ರಚ​ನೆ​ ಮಾಡ​ಲಿ. ನೆರೆ ಹಾವಳಿ ಹಾಗೂ ಕೋವಿಡ್‌ ನಿಯಂತ್ರ​ಣ​ದತ್ತ ಗಮನ ಹರಿ​ಸಲಿ ಎಂದು ಸಲಹೆ ನೀಡಿದ್ದಾರೆ.

ಈ ಮಧ್ಯೆ, ಡಿ.ಕೆ.ಶಿವಕುಮಾರ್‌ ಮಾತ್ರ ನೆರೆಯಿಂದ ಜನ ಸಂಕಷ್ಟಅನುಭವಿಸುತ್ತಿದ್ದರೂ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವೇ ಆಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಮುಖ್ಯಮಂತ್ರಿ ಹಾಗೂ ಬಿಜೆಪಿಯವರಿಗೆ ಜನಹಿತ ಬೇಕಾಗಿಲ್ಲ. ಬದಲಿಗೆ ಅಧಿಕಾರ ಬೇಕಾಗಿದೆ. ಬಿಜೆಪಿಯವರು ಬಹಳ ಆತುರದಲ್ಲಿದ್ದಾರೆ. ಅವರಿಗೆ ಜನಪರ ಕಾಳಜಿಯೇ ಇಲ್ಲ. ವಲಸಿಗ ಶಾಸಕರು ಸೇರಿ ಹಲವರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲು ದೆಹಲಿ ಸೇರಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

click me!