ಬೆಂಗಳೂರು (ಜು.31): ಇನ್ನೊಂದು ವಾರದೊಳಗೆ ತಮ್ಮ ಸಚಿವ ಸಂಪುಟ ರಚನೆ ಆಗುವ ವಿಶ್ವಾಸವನ್ನು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸಂಜೆ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊರೋನಾ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ಶೀಘ್ರ ಸಚಿವ ಸಂಪುಟ ರಚನೆಯಾಗಬೇಕು ಎಂಬ ಅಂಶವನ್ನು ಪಕ್ಷದ ಹೈಕಮಾಂಡ್‌ಗೆ ತಿಳಿಸಿದ್ದೇನೆ. ಇದಕ್ಕೆ ಸಕಾರಾತ್ಮಕವಾದ ಸ್ಪಂದನೆ ದೊರೆತಿದೆ. ಶನಿವಾರದ ವೇಳೆಗೆ ಸಂಪುಟ ರಚನೆ ಕುರಿತಾಗಿ ಹೈಕಮಾಂಡ್‌ನಿಂದ ಸ್ಪಷ್ಟಮಾಹಿತಿ ಬರುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.
ಬಸವರಾಜ ಬೊಮ್ಮಾಯಿ ದಿಲ್ಲಿ ಪ್ರವಾಸ: ದಿನ 1..ಡ್ರೆಸ್ 3, ಗಮನಸೆಳೆದ ಸಿಎಂ ಡ್ರೆಸ್ ಕೋಡ್
‘ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿ ದೆಹಲಿಗೆ ಭೇಟಿ ನೀಡಿದ್ದೇನೆ. ಪ್ರಧಾನಮಂತ್ರಿಗಳು, ಕೇಂದ್ರ ಸಚಿವರು ಹಾಗೂ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ್ದೇನೆ. ಪ್ರಧಾನಿಯವರಂತೂ ಸುಮಾರು 30ರಿಂದ 40 ನಿಮಿಷಗಳ ಕಾಲ ಅನೇಕ ವಿಷಯಗಳ ಬಗ್ಗೆ ನನ್ನೊಂದಿಗೆ ಮಾತುಕತೆ ನಡೆಸಿ ಕಿವಿಮಾತು ಹೇಳಿದ್ದಾರೆ. ರಾಜ್ಯದ ಕೆಲ ಯೋಜನೆಗಳು, ಸರ್ಕಾರಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದೇನೆ. ಸಚಿವ ಸಂಪುಟ ರಚನೆ ಕುರಿತಾಗಿ ಯಾವುದೇ ಸಮಾಲೋಚನೆ ನಡೆದಿಲ್ಲ. ಆ ಬಗ್ಗೆ ಪ್ರತ್ಯೇಕವಾಗಿ ಚರ್ಚಿಸಲಿದ್ದೇವೆ’ ಎಂದು ಸ್ಪಷ್ಟಪಡಿಸಿದರು.
ಸಂಪುಟ ರಚನೆ ವಿಳಂಬವಾಗುತ್ತಿರುವ ಬಗ್ಗೆ ಭಾರೀ ಟೀಕೆ ವ್ಯಕ್ತವಾಗುತ್ತಿದೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಚಿವರ ಪಟ್ಟಿಅಂತಿಮಗೊಳಿಸುವ ಬಗ್ಗೆ ಬಿಜೆಪಿ ವರಿಷ್ಠರಿಂದ ಶನಿವಾರದೊಳಗೆ ಸಂದೇಶ ಬರಲಿದೆ. ನಾನು ಮತ್ತೊಮ್ಮೆ ದೆಹಲಿಗೆ ಭೇಟಿ ನೀಡಬಹುದು ಅಥವಾ ಬೆಂಗಳೂರಿನಿಂದಲೇ ದೂರವಾಣಿ ಮೂಲಕ ಸಮಾಲೋಚನೆ ನಡೆಸಬಹುದು. ಒಟ್ಟಾರೆಯಾಗಿ ಇನ್ನೊಂದು ವಾರದೊಳಗೆ ಸಂಪುಟ ರಚನೆ ನಿಶ್ಚಿತ. ಈ ಬಗ್ಗೆ ಯಾವುದೇ ಅನುಮಾನ ಬೇಡ’ ಎಂದು ಬೊಮ್ಮಾಯಿ ಹೇಳಿದರು.