ಅನರ್ಹರು ಅರ್ಹರಾಗಿರುವ 11 ನೂತನ ಶಾಸಕರಿಗೆ ಸಚಿವರಾಗಲು ಭರ್ಜರಿ ತರಾತುರಿಯಲ್ಲಿದ್ದಾರೆ. ಇದರ ನಡುವೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆಗೆ ಒಂದು ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅವರೇ ಬಾಯಿಬಿಟ್ಟು ಹೇಳಿದ್ದಾರೆ. ಯಾವಾಗ..?
ಬೆಂಗಳೂರು, [ಡಿ.13]: ಉಪಸಮರ ಗೆದ್ದ 11 ಶಾಸಕರು ಸಚಿವರಾಗಲು ತುದಿಗಾಗಲ್ಲಲ್ಲಿ ನಿಂತಿದ್ದಾರೆ. ಚುನಾವಣೆಗೂ ಮುನ್ನ ಸಿಎಂ ಮಾತು ಕೊಟ್ಟಂತೆ, ಎಲ್ಲರನ್ನೂ ಮಂತ್ರಿ ಮಾಡೋದು ನಿಶ್ಚಿತ. ಆದ್ರೆ, ಸಂಪುಟ ವಿಸ್ತರಣೆಗೆ ಯಾವಾಗ ಅನ್ನೋದು ಮಾತ್ರ ಇನ್ನು ನಿಖರವಾಗಿಲ್ಲ.
ಸಿಎಂ ಯಡಿಯೂರಪ್ಪ ಹೈಕಮಾಂಡ್ ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಜಾರ್ಖಂಡ್ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆಗೆ ಇನ್ನೂ ಮುಹೂರ್ತ ಕೂಡ ಬಂದಿಲ್ಲ. ಈ ನಡುವೆ ಒಂದು ವಾರದ ಬಳಿಕ ಸಚಿವ ಸಂಪುಟ ವಿಸ್ತರಣೆ ಎಂದು ಬಿಎಸ್ ವೈ ಹೇಳಿದ್ದಾರೆ.
BSYಯಿಂದ ಶ್ರೀರಾಮುಲು ಅಂತರ ಕಾಯ್ದುಕೊಳ್ತಿರೋದೇಕೆ?: ಇಲ್ಲಿವೆ 7 ಕಾರಣಗಳು
ಬೆಂಗಳೂರಿನಲ್ಲಿ ಇಂದು [ಶುಕ್ರವಾರ] ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ನಾವು ಭರವಸೆ ಕೊಟ್ಟಂತೆ ಎಲ್ಲರಿಗೂ ಮಂತ್ರಿ ಮಾಡುವುದು ಖಾತ್ರಿ. ಇದರಲ್ಲಿ ಯಾವುದೇ ಗೊಂದಲವಿಲ್ಲ. ನಾನು ದೆಹಲಿಗೆ ಹೋಗಲಿಕ್ಕೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ಅಮಿತ್ ಶಾರವರು ಚುನಾವಣೆ ಸೇರಿದಂತೆ ಹಲವು ವಿಚಾರಗಳಲ್ಲಿ ಬ್ಯುಸಿ ಇದ್ದಾರೆ. ಹಾಗಾಗಿ ಒಂದು ವಾರದ ನಂತರ ಬಿಟ್ಟು ಬನ್ನಿ ಎಂದಿದ್ದಾರೆ” ಎಂದು ಸ್ಪಷ್ಟಪಡಿಸಿದರು.
ಗೆದ್ದ ತಕ್ಷಣವೇ ಮಂತ್ರಿ ಮಾಡಲಾಗುವುದು ಎಂದು ಯಡಿಯೂರಪ್ಪನವರು ಘೋಷಿಸಿದ್ದರು. ಅದಕ್ಕಾಗಿ 16 ಸಚಿವ ಸ್ಥಾನಗಳನ್ನು ಖಾಲಿ ಸಹ ಉಳಿಸಿಕೊಂಡಿದ್ದರು.ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಡಿಸೆಂಬರ್ 22ನೇ ತಾರೀಖಿನ ನಂತರ ಮಂತ್ರಿಮಂಡಲ ವಿಸ್ತರಣೆ ಆಗಬಹುದು ಎಂದು ಒಂದು ಸುಳಿವು ನೀಡಿದರು.
ಇಬ್ಬರ ತಲೆದಂಡ: ಸೋತ್ರೂ ಎಂಟಿಬಿ-ವಿಶ್ವನಾಥ್‌ಗೆ ಮಂತ್ರಿ ಭಾಗ್ಯ?
ಯಡಿಯೂರಪ್ಪನವರು ಬಾಯಿಮಾತಿಗೆ 22ರ ನಂತರ ಸಚಿವ ಸಂಪುಟ ವಿಸ್ತರಣೆ ಎಂದು ಹೇಳುತ್ತಿದ್ದಾರೆ. ಆದ್ರೆ, ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಾಗ ಮಾತ್ರ ಸಂಪುಟ ವಿಸ್ತರಣೆಯಾಗಲಿದೆ. ಅಲ್ಲಿವರೆಗೂ ಯಾರು ಮಿಸುಗಾಡುವಂತಿಲ್ಲ. ಅಮಿತ್ ಶಾ ಮಾಟೇ ಶಾಸನಂ.
ಅಷ್ಟೇ ಅಲ್ಲದೇ ಡಿಸೆಂಬರ್ 20ರ ನಂತರ ಧರ್ನುಮಾಸ ಇರುವುದರಿಂದ ನೂತನ ಶಾಸಕರಿಗೆ ಮಂತ್ರಿ ಭಾಗ್ಯ ಸಿಗುವುದು ಮುಂದಿನ ವರ್ಷಕ್ಕೆ ಅಂದ್ರೆ ಜನವರಿ, 2020ರಲ್ಲಿಯೇ ಎನ್ನುವುದು ರಾಜಕೀಯ ವಿಶ್ಲೇಷಕರ ಮಾತು.
ಮುಹೂರ್ತ, ಮಾಸಗಳನ್ನು ಬಿಎಸ್ ಯಡಿಯೂರಪ್ಪನವರು ಬಹಳಷ್ಟು ನಂಬಿಕೆ ಇಟ್ಟುಕೊಂಡವರು. ಹಿನ್ನೆಲೆಯಲ್ಲಿ ಅನರ್ಹರಾಗಿ ಬೈ ಎಲೆಕ್ಷನ್ ನಲ್ಲಿ ಗೆದ್ದು ಅರ್ಹರಾಗಿರುವ 11 ನೂತನ ಶಾಸಕರಿಗೆ 2020, ಜನವರಿ ವರೆಗೂ ಕಾಯಿರಿ ಎಂದೂ ಹೇಳಿದರೂ ಅಚ್ಚರಿ ಪಡಬೇಕಿಲ್ಲ.