ಖಾತೆ ಬೆನ್ನಲ್ಲೇ ಸಿಡಿದ ಅತೃಪ್ತಿ!| ಬಯಸಿದ ಖಾತೆ ಸಿಗದ್ದಕ್ಕೆ ಸುಧಾಕರ್, ಬಿ.ಸಿ.ಪಾಟೀಲ್ ಬೇಸರ, ಕುಮಟಳ್ಳಿಯೂ ಕೆಂಡ| ಡಿಕೆಶಿ ವಿರುದ್ಧ ಜಿದ್ದಿಗೆ ಬಿದ್ದ ಜಾರಕಿಹೊಳಿಗೆ ಒಲಿದ ಜಲಸಂಪನ್ಮೂಲ| ಬೈರತಿಗೆ ನಗರಾಭಿವೃದ್ಧಿ, ಸೋಮಶೇಖರ್‌ಗೆ ಸಹಕಾ| ಮಂಡ್ಯದಲ್ಲಿ ಕಮಲ ಅರಳಿಸಿದ ನಾರಾಯಣಗೌಡರಿಗೆ ಪೌರಾಡಳಿತ ಜೊತೆಗೆ ತೋಟಗಾರಿಕೆ ಹಾಗೂ ರೇಷ್ಮೆ ಖಾತೆ ಬೋನಸ್| ಬೆಂಗಳೂರು ನಗರಾಭಿವೃದ್ಧಿ ಖಾತೆ ಯಾರಿಗೂ ಕೊಡದ ಬಿಎಸ್‌ವೈ
ಬೆಂಗಳೂರು[ಫೆ.11]: ಪ್ರಮಾಣ ವಚನ ಸ್ವೀಕರಿಸಿದ ನಾಲ್ಕು ದಿನಗಳ ನಂತರ ಸೋಮವಾರ ನೂತನ ಸಚಿವರಿಗೆ ಅಳೆದೂ ತೂಗಿ ಖಾತೆಗಳ ಹಂಚಿಕೆ ಮಾಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಒಂದು ಹಂತದ ನಿಟ್ಟುಸಿರು ಬಿಟ್ಟಬೆನ್ನಲ್ಲೇ ಅಸಮಾಧಾನದ ಹೊಗೆಯೂ ಸಣ್ಣದಾಗಿ ಕಾಣಿಸಿಕೊಂಡಿದೆ.
ಕಳೆದ ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಪತನಕ್ಕೆ ಮುನ್ನುಡಿ ಬರೆದಿದ್ದ ರಮೇಶ್ ಜಾರಕಿಹೊಳಿ ಅವರಿಗೆ ಅವರು ಬಯಸಿದಂತೆ ಜಲಸಂಪನ್ಮೂಲ ಖಾತೆಯನ್ನೇ ನೀಡಲಾಗಿದೆ. ಜಾರಕಿಹೊಳಿ ಅವರಿಗೆ ಜಲಸಂಪನ್ಮೂಲ ಖಾತೆ ಹಂಚಿಕೆ ಮಾಡುವ ಕುರಿತು ಗೊಂದಲ ಉದ್ಭವಿಸಿದ್ದರ ಪರಿಣಾಮವೇ ಇಡೀ ಖಾತೆ ಹಂಚಿಕೆ ಪ್ರಕ್ರಿಯೆ ವಿಳಂಬವಾಯಿತು ಎಂದು ತಿಳಿದು ಬಂದಿದೆ.
ಸಿದ್ದುಗೆ ಕಾನೂನು ಪಾಠ ಹೇಳಿ ಸಚಿವರಾದ ಮೇಲೆ ಕಾಂಗ್ರೆಸ್ ಬಿಟ್ಟ ಕಾರಣ ಹೇಳಿದ 'ಕೌರವ'!
ಬೇರೊಂದು ಪ್ರಮುಖ ಖಾತೆಯನ್ನು ನೀಡುವ ಮುಖ್ಯಮಂತ್ರಿಗಳ ಪ್ರಸ್ತಾವನೆಯನ್ನು ಜಾರಕಿಹೊಳಿ ಅವರು ಸುತಾರಾಂ ಒಪ್ಪದೇ ಇದ್ದಾಗ ಜಲಸಂಪನ್ಮೂಲ ಖಾತೆಯನ್ನೇ ನೀಡುವ ತೀರ್ಮಾನಕ್ಕೆ ಬರಲಾಯಿತು. ಕಾಂಗ್ರೆಸ್ಸಿನ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಸಡ್ಡು ಹೊಡೆದು ಸಮ್ಮಿಶ್ರ ಸರ್ಕಾರದ ಪತನಕ್ಕೆ ಕೈಹಾಕಿದ್ದ ಜಾರಕಿಹೊಳಿ ಅವರು ಡಿಕೆಶಿ ಮೇಲಿನ ಜಿದ್ದಿನಿಂದಾಗಿ ಅವರು ನಿಭಾಯಿಸುತ್ತಿದ್ದ ಖಾತೆಯನ್ನೇ ಪಡೆಯುವ ಬಗ್ಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲೇ ಸ್ಪಷ್ಟಪಡಿಸಿದ್ದರು. ಹೀಗಾಗಿ, ಅವರು ಬೇರೆ ಯಾವುದೇ ಖಾತೆಯನ್ನು ಪಡೆಯಲು ಸಿದ್ಧರಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಜಾರಕಿಹೊಳಿ ಅವರನ್ನು ಹೊರತುಪಡಿಸಿ ನೋಡುವುದಾದರೆ ಉಳಿದ ನೂತನ ಸಚಿವರ ಪೈಕಿ ಎಲ್ಲರೂ ತಮಗೆ ಹಂಚಿಕೆಯಾಗಿರುವ ಖಾತೆಗಳ ಬಗ್ಗೆ ಪೂರ್ಣ ಪ್ರಮಾಣದ ಸಮಾಧಾನ ಹೊಂದಿಲ್ಲ.
ಇಂಧನ ಖಾತೆಯ ನಿರೀಕ್ಷೆಯಲ್ಲಿದ್ದ ಡಾ.ಕೆ.ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆ ಸಿಕ್ಕಿರುವುದು ಬೇಸರ ತರಿಸಿದೆ. ತಾವು ಹಿಂದೆ ಪೊಲೀಸ್ ಅಧಿಕಾರಿಯಾಗಿದ್ದೆ ಎಂಬ ಕಾರಣಕ್ಕಾಗಿ ತಮಗೆ ಗೃಹ ಖಾತೆಯೇ ಸಿಗಬಹುದು ಎಂಬ ಭರವಸೆಯಲ್ಲಿದ್ದ ಬಿ.ಸಿ.ಪಾಟೀಲ್ ಅವರಿಗೆ ಅರಣ್ಯ ಖಾತೆ ಲಭಿಸಿರುವುದು ಸಮಾಧಾನ ತಂದಿಲ್ಲ. ಇವರಿಬ್ಬರೂ ತಮ್ಮ ಆಪ್ತರ ಬಳಿ ಅಸಮಾಧಾನವನ್ನು ಹೊರಹಾಕಿದ್ದಾರೆ. ಪಾಟೀಲ್ ಅವರು ಸೋಮವಾರ ಸಂಜೆಯೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಮ್ಮ ಅತೃಪ್ತಿಯನ್ನು ತಲುಪಿಸಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಖಾತೆಗಳ ಹಂಚಿಕೆ ಬೆನ್ನಲ್ಲೇ ಸಚಿವ ಸ್ಥಾನದಿಂದ ವಂಚಿತಗೊಂಡಿದ್ದ ಮಹೇಶ್ ಕುಮಟಳ್ಳಿ ಅವರನ್ನು ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಆದರೆ, ಸಚಿವ ಸ್ಥಾನವಿಲ್ಲದಿದ್ದರೂ ಪ್ರಮುಖ ನಿಗಮ- ಮಂಡಳಿಯ ಅಧ್ಯಕ್ಷಗಿರಿಯ ನಿರೀಕ್ಷೆಯಲ್ಲಿದ್ದ ಕುಮಟಳ್ಳಿ ಈ ಬೆಳವಣಿಗೆಯಿಂದ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ. ತಮಗೆ ಎಂಎಸ್‌ಐಎಲ್ ಅಧ್ಯಕ್ಷ ಸ್ಥಾನ ಬೇಡ ಎಂದು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಹಾಲಿ ಸಚಿವರ ಮೂಲ ಖಾತೆ ಬದಲಿಲ್ಲ:
ಹಾಲಿ ಸಚಿವರ ಬಳಿಯಿದ್ದ ಹೆಚ್ಚುವರಿ ಖಾತೆಗಳನ್ನೇ ಹಂಚಿಕೆ ಮಾಡಿರುವ ಮುಖ್ಯಮಂತ್ರಿಗಳು ಯಾವುದೇ ಮೂಲ (ಮೊದಲಿಗೆ ಹಂಚಿಕೆಯಾಗಿದ್ದ) ಖಾತೆಗಳನ್ನು ಬದಲಾಯಿಸುವ ಪ್ರಯತ್ನ ಮಾಡಿಲ್ಲ. ಬಜೆಟ್ ಪೂರ್ವಭಾವಿ ಸಿದ್ಧತೆ ನಡೆಯುತ್ತಿರುವ ಈ ಹಂತದಲ್ಲಿ ಹಾಲಿ ಸಚಿವರ ಮೂಲ ಖಾತೆಗಳನ್ನು ಬದಲಾಯಿಸಿದಲ್ಲಿ ಅದು ಬಜೆಟ್ ಮೇಲೆಯೇ ಪರಿಣಾಮ ಬೀರಬಹುದು ಎಂಬ ಕಾರಣವೂ ಇದ್ದಿರಬಹುದು.
ಖಾತೆ ಅಂತಿಮ, ಯಾರ ಬಳಿ ಇದ್ದಿದ್ದು ಯಾರಿಗೆ, ಲಾಭ ನಷ್ಟದ ಲೆಕ್ಕಾಚಾರ!
ಜಲಸಂಪನ್ಮೂಲದ ನಂತರ ಸಾಕಷ್ಟುಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದ ಇಂಧನ ಖಾತೆಯನ್ನು ಮುಖ್ಯಮಂತ್ರಿಗಳು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಈ ಖಾತೆಗಾಗಿ ಮೂರ್ನಾಲ್ಕು ಸಚಿವರು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆದರೆ, ಅಂತಿಮವಾಗಿ ಯಾರೊಬ್ಬರಿಗೂ ನೀಡುವುದು ಬೇಡ ಎಂಬ ನಿಲುವಿಗೆ ಬಂದ ಯಡಿಯೂರಪ್ಪ ಅವರು ಈಗಿರುವಂತೆಯೇ ತಾವೇ ಇಟ್ಟುಕೊಂಡಿದ್ದಾರೆ.
ಬೆಂಗಳೂರು ನಗರ ಅಭಿವೃದ್ಧಿ ಖಾತೆಯ ಮೇಲೆ ಆಸೆ ಇರಿಸಿಕೊಂಡಿದ್ದ ಎಸ್.ಟಿ. ಸೋಮಶೇಖರ್ ಅವರಿಗೆ ಅವರು ಇದುವರೆಗೆ ಕೆಲಸ ಮಾಡಿಕೊಂಡು ಬಂದಿರುವ ಸಹಕಾರ ಇಲಾಖೆ ನೀಡಲಾಗಿದೆ. ಆ ಬಗ್ಗೆ ಅವರಿಗೆ ಬೇಸರವೇನೂ ಇಲ್ಲ. ಇನ್ನು ಬೈರತಿ ಬಸವರಾಜು ಅವರಿಗೆ ಬಯಸಿದಂತೆ ನಗರಾಭಿವೃದ್ಧಿ ಖಾತೆಯನ್ನೇ ನೀಡಲಾಗಿದೆ. ಕೆ.ಗೋಪಾಲಯ್ಯ ಅವರಿಗೆ ಸಣ್ಣ ಕೈಗಾರಿಕೆ ಜೊತೆಗೆ ಸಕ್ಕರೆ ಖಾತೆ ನೀಡಿರುವುದು ಅಚ್ಚರಿ ಮೂಡಿಸಿದೆ. ಶಿವರಾಂ ಹೆಬ್ಬಾರ್ ಅವರಿಗೆ ಕಾರ್ಮಿಕ ಖಾತೆ ಕೊಡಲಾಗಿದೆ. ಆನಂದ್ ಸಿಂಗ್ ಅವರಿಗೆ ಆಹಾರ ಮತ್ತು ನಾಗರಿಕ ಪೂರೈಕೆಯಂಥ ಜವಾಬ್ದಾರಿಯುತ ಖಾತೆ ನೀಡಲಾಗಿದೆ. ರಮೇಶ್ ಜಾರಕಿಹೊಳಿ ಅವರ ಆಪ್ತರು ಎಂದು ಗುರುತಿಸಲ್ಪಟ್ಟಿರುವ ಶ್ರೀಮಂತ್ ಪಾಟೀಲ್ ಅವರಿಗೆ ಜವಳಿ ಖಾತೆ ಲಭಿಸಿದೆ.
ಎಲ್ಲವನ್ನೂ ಮೀರಿ ಹೆಬ್ಬಾರ್‌ಗೆ ಮಂತ್ರಿಗಿರಿ ಸಿಕ್ಕಿದ್ದು ಹೇಗೆ! ದೇಶಪಾಂಡೆ ಅಧ್ಯಾಯ ಕೊನೆ?
ಬೊಮ್ಮಾಯಿಗೆ ‘ಕೃಷಿ’ ಕೊಡುಗೆ
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪರಮಾಪ್ತ ಸಚಿವರಾಗಿರುವ ಬಸವರಾಜ ಬೊಮ್ಮಾಯಿ ಅವರಿಗೆ ಹಾಲಿ ಇರುವ ಗೃಹ ಖಾತೆ ಜೊತೆಗೆ ಕೃಷಿ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಇದುವರೆಗೆ ಬೊಮ್ಮಾಯಿ ಅವರಿಗೆ ಗೃಹ ಖಾತೆ ಜೊತೆಗೆ ಸಹಕಾರ ಖಾತೆ ಹೆಚ್ಚುವರಿಯಾಗಿ ನೀಡಲಾಗಿತ್ತು. ಇದೀಗ ಸಹಕಾರ ಖಾತೆಯನ್ನು ನೂತನ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ನೀಡಿರುವುದರಿಂದ ಅದರ ಬದಲಿಗೆ ಕೃಷಿ ಖಾತೆ ದಯಪಾಲಿಸಲಾಗಿದೆ. ಗೃಹ ಖಾತೆಯ ಬಗ್ಗೆ ಅಷ್ಟೇನೂ ಸಮಾಧಾನ ಹೊಂದಿರದಿದ್ದ ಬೊಮ್ಮಾಯಿ ಅವರು ತಾವು ಹಿಂದೆ ನಿಭಾಯಿಸಿದ್ದ ಜಲಸಂಪನ್ಮೂಲ ಖಾತೆ ನೀಡುವಂತೆ ಮುಖ್ಯಮಂತ್ರಿಗಳ ಬಳಿ ಬೇಡಿಕೆ ಇರಿಸಿದ್ದರು. ಆದರೆ, ರಮೇಶ್ ಜಾರಕಿಹೊಳಿ ಅವರಿಗೆ ಜಲಸಂಪನ್ಮೂಲ ಖಾತೆ ನೀಡುವುದು ಅನಿವಾರ್ಯವಾಗಿದ್ದರಿಂದ ಬೊಮ್ಮಾಯಿ ಅವರಿಗೆ ಇದೀಗ ಗೃಹ ಖಾತೆ ಜೊತೆಗೆ ಹೆಚ್ಚುವರಿಯಾಗಿ ಕೃಷಿ ಖಾತೆ ಭಾಗ್ಯ ಕಲ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.