
ಬೆಂಗಳೂರು/ಶಿಕಾರಿಪುರ [ಜ.15]: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿದೇಶ ಪ್ರವಾಸಕ್ಕೂ ಮೊದಲೇ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಕ್ಷೀಣಿಸಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳು ಮತ್ತಷ್ಟುಕಾಲ ಕಾಯುವುದು ಅನಿವಾರ್ಯವಾಗುವುದು ಬಹುತೇಕ ಖಚಿತವಾಗಿದೆ.
ವಿದೇಶ ಪ್ರವಾಸ ಮುಗಿಸಿ ವಾಪಸಾದ ನಂತರವೇ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಖುದ್ದು ಯಡಿಯೂರಪ್ಪ ಅವರೇ ಹೇಳಿದ್ದಾರೆ.
ಮಂಗಳವಾರ ತಮ್ಮ ಸ್ವಕ್ಷೇತ್ರ ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿನ ನಿವಾಸದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಇದೇ ತಿಂಗಳ 18ರಂದು ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಆ ವೇಳೆ ಅವರೊಂದಿಗೆ ಸಂಪುಟ ವಿಸ್ತರಣೆ ಕುರಿತಂತೆ ಸಮಾಲೋಚನೆ ನಡೆಸುತ್ತೇನೆ. ವಿದೇಶ ಪ್ರವಾಸ ಮುಗಿಸಿ ಬಂದ ನಂತರ ಸಂಪುಟ ವಿಸ್ತರಣೆ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಜ.21ರಿಂದ 24ರವರೆಗೆ ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ ಶೃಂಗಕ್ಕೆ ತೆರಳಬಾರದು ಎಂದು ನಿರ್ಧರಿಸಿದ್ದೆ. ಆದರೆ ಪ್ರಧಾನಿ ಸೂಚನೆ ಮೇರೆಗೆ ರಾಜ್ಯಕ್ಕೆ ಹೆಚ್ಚು ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಅನಿವಾರ್ಯವಾಗಿ ದಾವೋಸ್ ಪ್ರವಾಸ ಮಾಡಲು ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.
ಬಹಿರಂಗ ವೇದಿಕೆಯಲ್ಲೇ ಪಂಚಮಸಾಲಿ ಸ್ವಾಮೀಜಿ-BSY ನಡುವೆ ಮಾತಿನ ಚಕಮಕಿ.
ಸಂಪುಟ ವಿಸ್ತರಣೆ ಸಂಬಂಧ ಅಮಿತ್ ಶಾ ಅವರೊಂದಿಗೆ ಸಮಾಲೋಚನೆ ನಡೆಸಲು ಯಡಿಯೂರಪ್ಪ ಅವರು ಹಲವು ಬಾರಿ ದೆಹಲಿಗೆ ತೆರಳಲು ಪ್ರಯತ್ನಿಸಿ ಕೈಬಿಟ್ಟಿದ್ದಾರೆ. ಅಮಿತ್ ಶಾ ಅವರು ಭೇಟಿಗೆ ಸಮಯ ನೀಡದೇ ಇರುವುದರಿಂದ ಅಂತಿಮವಾಗಿ 18ರಂದು ಹುಬ್ಬಳ್ಳಿಗೆ ಆಗಮಿಸಿದಾಗಲೇ ಭೇಟಿ ಮಾಡಿ ಚರ್ಚಿಸಲು ಮುಂದಾಗಿದ್ದಾರೆ. ಈ ನಡುವೆ ಅರ್ಹ ಶಾಸಕರು ಆದಷ್ಟುಬೇಗ ಸಂಪುಟ ವಿಸ್ತರಣೆ ಮಾಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ.
ನಾಳೆ ಬಿಜೆಪಿ ಕೋರ್ ಕಮಿಟಿ ಸಭೆ
ಶನಿವಾರ ಅಮಿತ್ ಶಾ ಅವರು ಆಗಮಿಸುತ್ತಿರುವ ಹಿನ್ನೆಲೆ ಗುರುವಾರ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್‌ಕುಮಾರ್ ಕಟೀಲ್ ಅವರು ಗುರುವಾರ ಮಧ್ಯಾಹ್ನ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಮೊದಲ ಕೋರ್ ಕಮಿಟಿ ಸಭೆ ನಡೆಯಲಿದೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ವಿಸ್ತರಣೆಯ ಅಗತ್ಯತೆಯನ್ನು ಮನವರಿಕೆ ಮಾಡಿಕೊಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.