ಸಂಪುಟ ವಿಸ್ತರಣೆ: ವಲಸಿಗರಿಗೆ ಸಚಿವ ಸ್ಥಾನ ಸಿಗುವ ಸಂಭವ

By Kannadaprabha NewsFirst Published Dec 25, 2020, 9:03 AM IST
Highlights

ಜ.15ಕ್ಕೆ ರಾಜ್ಯಕ್ಕೆ ಅಮಿತ್‌ ಶಾ ಭೇಟಿ | ಈ ವೇಳೆ ಸಂಪುಟ ವಿಸ್ತರಣೆಗೆ ಸಮ್ಮತಿ? | ವಲಸಿಗರಿಗೆ ಸಚಿವ ಸ್ಥಾನ ಸಿಗುವ ಸಂಭವ

ನವದೆಹಲಿ(ಡಿ.25): ಸಚಿವ ಸಂಪುಟ ವಿಸ್ತರಣೆಗೆ ಕಾತರದಿಂದ ಕಾಯುತ್ತಿರುವ ಆಕಾಂಕ್ಷಿಗಳಿಗೆ ಸದ್ಯದಲ್ಲೇ ಸಿಹಿಸುದ್ದಿ ಸಿಗುವ ಲಕ್ಷಣಗಳು ಕಾಣಿಸುತ್ತಿವೆ. ಧನುರ್ಮಾಸ ಮುಗಿದು ಸಂಕ್ರಮಣ ಆರಂಭವಾಗುತ್ತಿದ್ದಂತೆ ಸಂಪುಟ ವಿಸ್ತರಣೆ ಕಸರತ್ತು ನಡೆಸುವ ಸಾಧ್ಯತೆ ದಟ್ಟವಾಗುತ್ತಿದೆ.

"

ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಎರಡು ದಿನಗಳ ಭೇಟಿಗೆ ಕರ್ನಾಟಕಕ್ಕೆ ಬರುತ್ತಿದ್ದು, ಈ ಸಂದರ್ಭದಲ್ಲಿ ಸಂಪುಟ ವಿಸ್ತರಣೆಗೆ ಅಂತಿಮ ಒಪ್ಪಿಗೆ ಮುದ್ರೆ ನೀಡುವ ನಿರೀಕ್ಷೆ ಇದೆ ಎನ್ನುತ್ತಿವೆ ಬಿಜೆಪಿ ಉನ್ನತ ಮೂಲಗಳು.

32 ಲಕ್ಷ ಗ್ರಾಹಕರನ್ನು ವಂಚಿಸಿದ ಅಗ್ರಿಗೋಲ್ಡ್‌ನ 4109 ಕೋಟಿ ರು. ಆಸ್ತಿ ಜಪ್ತಿ

ಸಂಪುಟ ಕಸರತ್ತಿಗೆ ಪೂರಕ ಎಂಬಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸಚಿವಾಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್‌ಗೆ ರವಾನಿಸಿದ್ದಾರೆ ಎನ್ನಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ‘ನಿಮ್ಮನ್ನು ಮಂತ್ರಿ ಮಾಡುತ್ತೇವೆ’ ಎಂದು ಬಹಿರಂಗವಾಗಿ ಭರವಸೆ ನೀಡಿದ ಬಹುತೇಕ ಎಲ್ಲರಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಬಿಜೆಪಿ ವರಿಷ್ಠರು ಮುಖ್ಯಮಂತ್ರಿ ಪಟ್ಟಿಯಲ್ಲಿರುವ ಹೆಸರುಗಳಿಗೇ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ. ಬಿಜೆಪಿಗೆ ವಲಸೆ ಬಂದಿರುವ ಎಂ.ಟಿ.ಬಿ.ನಾಗರಾಜ್‌, ಸಿ.ಪಿ.ಯೋಗೇಶ್ವರ್‌, ಆರ್‌.ಶಂಕರ್‌ ಜತೆಗೆ ಉಮೇಶ್‌ ಕತ್ತಿ ಅವರಿಗೆ ಮಂತ್ರಿಗಿರಿ ಸಿಗುವ ಸಂಭವ ಹೆಚ್ಚಾಗಿದೆ.

"

ಕೆಲವರಿಗೆ ಕೊಕ್‌: ಸಂಪುಟ ಸರ್ಕಸ್‌ ವೇಳೆ ಕೆಲವರನ್ನು ಕೈಬಿಡುವ ಸಾಧ್ಯತೆಯೂ ಇದೆ. ಹಾಲಿ ಇರುವ ಕೆಲ ಮಂತ್ರಿಗಳನ್ನು ಕೈ ಬಿಟ್ಟು ಅವರ ಜಾಗಕ್ಕೆ ಹೊಸಬರಿಗೆ ಅಂದರೆ ಪಕ್ಷದ ನಿಷ್ಠರಿಗೆ ಆದ್ಯತೆ ನೀಡುವಂತೆ ಹೈಕಮಾಂಡ್‌ ಸೂಚಿಸಿದೆ ಎನ್ನಲಾಗಿದೆ.

ಜ.1ರಿಂದ ಪಿಯು ಕ್ಲಾಸ್‌ ಆರಂಭಕ್ಕೆ ಮಾರ್ಗಸೂಚಿ: ಯಾವೆಲ್ಲಾ ರೂಲ್ಸ್‌ ಫಾಲೋ ಮಾಡ್ಬೇಕು?

ವಿಜಯೇಂದ್ರ-ಅರುಣ್‌ ಸಿಂಗ್‌ ಭೇಟಿ : ಸಂಪುಟ ವಿಸ್ತರಣೆ ಕುರಿತ ವಿದ್ಯಮಾನಗಳು ಭಾರೀ ಚರ್ಚೆಯಲ್ಲಿರುವಾಗಲೇ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ರಾಜ್ಯದ ವಿದ್ಯಮಾನಗಳು, ಪಕ್ಷ ಸಂಘಟನೆ ಕುರಿತಾಗಿ ಅರುಣ್‌ ಸಿಂಗ್‌ ಅವರಿಗೆ ವಿಜಯೇಂದ್ರ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.

9 ಮಂದಿಗೆ ಸಿಗುತ್ತಾ ಅವಕಾಶ?

ಮುಖ್ಯಮಂತ್ರಿ. ಬಿ.ಎಸ್‌.ಯಡಿಯೂರಪ್ಪ ಸಂಪುಟದಲ್ಲಿ ಹೊಸದಾಗಿ 9 ಮಂದಿಗೆ ಸ್ಥಾನ ಸಿಗುವ ಸಾಧ್ಯತೆ ಇದೆ. ಖಾಲಿರುವ ಏಳೂ ಸ್ಥಾನಗಳನ್ನು ತುಂಬುವ ಜತೆಗೆ ಹಾಲಿ ಸಚಿವರಿಬ್ಬರಿಗೆ ಕೊಕ್‌ ನೀಡಿ ಒಟ್ಟು 9 ಮಂದಿ ಹೊಸಬರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಜನವರಿಗೆ ಭದ್ರಾವತಿ, ಹೊಸಪೇಟೆಗೆ ಅಮಿತ್‌ ಶಾ ಭೇಟಿ

ಸಂಪುಟ ಕಸರತ್ತು ತೀವ್ರಗೊಳ್ಳುತ್ತಿರುವ ಈ ಹೊತ್ತಿನಲ್ಲೇ ಇದೀಗ ರಾಜ್ಯಕ್ಕೆ ಎರಡು ದಿನಗಳ ಭೇಟಿಗಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಗಮಿಸುತ್ತಿದ್ದಾರೆ. ಅವರು ಜ.15 ರಿಂದ ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು ಭದ್ರಾವತಿಯಲ್ಲಿ ಸಿಆರ್‌ಪಿಎಫ್‌ ಘಟಕದ ಕಾರ್ಯಕ್ರಮ ಹಾಗೂ ಹೊಸಪೇಟೆಯಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಸಂಪುಟಕ್ಕೆ ಅಂತಿಮ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ.

click me!