ಉಪಚುನಾವಣೆ ಕಣದಲ್ಲಿ ರಾಜಾರೋಷವಾಗಿ ಕಾಂಗ್ರೆಸ್ ಹಣ ಹಂಚಿಕೆ, 500 ರೂ ಸಾಕಾಗೊಲ್ಲ, ವೈರಲ್ ಆಯ್ತು ವಿಡಿಯೋ!

Published : Apr 09, 2026, 02:49 PM IST
Karnataka Bypolls Cash Distribution

ಸಾರಾಂಶ

ಬಾಗಲಕೋಟೆ ಉಪಚುನಾವಣೆ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಣ ಹಂಚಿಕೆ ಆರೋಪ ಕೇಳಿಬಂದಿದ್ದು, ಸಂಬಂಧಿತ ವಿಡಿಯೋಗಳು ವೈರಲ್ ಆಗಿವೆ. ಹಣಕ್ಕಾಗಿ ಜನರು ಮುಗಿಬಿದ್ದ ದೃಶ್ಯಗಳು ಸೆರೆಯಾಗಿದ್ದು, ಇದೇ ರೀತಿ ದಾವಣಗೆರೆಯಲ್ಲೂ ಹಣ ಹಂಚಿಕೆ ಆರೋಪಗಳು ಕೇಳಿಬಂದಿವೆ. ಈ ಘಟನೆಗಳ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ರಾಜಕೀಯ ಮುಖಂಡರು ತಿಳಿಸಿದ್ದಾರೆ.

ಬಾಗಲಕೋಟೆ: ಉಪಚುನಾವಣೆ ಹಿನ್ನೆಲೆ ಬಾಗಲಕೋಟೆಯಲ್ಲಿ ರಾಜಕೀಯ ಕಾವು ತಾರಕ್ಕೇರಿದ್ದು, ಮತದಾನದ ದಿನವೇ ಹಣ ಹಂಚಿಕೆ ಆರೋಪಗಳು ಗಂಭೀರ ಚರ್ಚೆಗೆ ಕಾರಣವಾಗಿವೆ. ನಗರದ ನವನಗರದ ವಾಂಬೆ ಕಾಲೋನಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಸ್ಥಳೀಯರ ಪ್ರಕಾರ, ಮತದಾರರನ್ನು ಆಕರ್ಷಿಸಲು ₹500 ಮುಖಬೆಲೆಯ ನೋಟುಗಳನ್ನು ಹಂಚಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹಣ ಪಡೆಯಲು ಜನರು ಮುಗಿಬಿದ್ದಿದ್ದು, ಮಹಿಳೆಯರ ನಡುವೆ ನೂಕುನುಗ್ಗಲು ಉಂಟಾದ ದೃಶ್ಯಗಳು ಕೂಡಾ ವಿಡಿಯೋದಲ್ಲಿ ಕಾಣಿಸುತ್ತಿವೆ. ಕೆಲ ಮಹಿಳೆಯರು ಕೇವಲ ಐದು ನೂರು ರೂಪಾಯಿ ಮಾತ್ರ ಕೊಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿರುವುದು ಗಮನ ಸೆಳೆದಿದೆ. ಅಲ್ಲದೇ, ಕಾಂಗ್ರೆಸ್ ಕಾರ್ಯಕರ್ತರು ಹಣ ನೀಡಿದ್ದಾರೆ ಎಂದು ಹೇಳುತ್ತಾ ನೋಟುಗಳನ್ನು ತೋರಿಸುತ್ತಿರುವ ದೃಶ್ಯಗಳೂ ವೈರಲ್ ಆಗಿವೆ.

ಹಣಕ್ಕಾಗಿ ಕಾಂಗ್ರೆಸ್ ಮುಖಂಡ ಸಂತೋಷ ಕಾರು ಸುತ್ತುವರೆದ ಜನ

ಈ ಘಟನೆ ಹಿನ್ನೆಲೆ ಪರಿಸ್ಥಿತಿ ತೀವ್ರಗೊಂಡಿದ್ದು, ಕಾಂಗ್ರೆಸ್ ಮುಖಂಡರು ಸಂಚರಿಸುತ್ತಿದ್ದ ಕಾರಿಗೆ ಸ್ಥಳೀಯರು ಮುತ್ತಿಗೆ ಹಾಕಿದ ಘಟನೆ ಕೂಡ ನಡೆದಿದೆ. ಹಣ ಹಂಚಿಕೆ ಮಾಡುತ್ತಿದ್ದಾರೆ ಎಂಬ ಆರೋಪದ ಮೇರೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಮುಖಂಡ ಸಂತೋಷ ಅವರು ಇದ್ದ ಕಾರು ಸುತ್ತುವರೆದಿದ್ದಾರೆ ಎನ್ನಲಾಗಿದೆ.

ಈ ಬೆಳವಣಿಗೆಗೆ ರಾಜಕೀಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಿಜೆಪಿ ವಿಧಾನ ಪರಿಷತ್ ಸದಸ್ಯ ಪಿ.ಹೆಚ್. ಪೂಜಾರ್ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ. “ಮತದಾನದ ವೇಳೆ ಹಣ ಹಂಚಿಕೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧ. ಈ ಕುರಿತು ಚುನಾವಣಾ ಆಯೋಗದ ಗಮನಕ್ಕೆ ತಂದು ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇವೆ” ಎಂದು ಅವರು ತಿಳಿಸಿದ್ದಾರೆ.

ದಾವಣಗೆರೆಯಲ್ಲೂ ಮತದಾನದ ವೇಳೆ ಹಣ ಹಂಚಿಕೆ ಆರೋಪ

ಇದೇ ವೇಳೆ, ದಾವಣಗೆರೆಯಲ್ಲೂ ಮತದಾನದ ವೇಳೆ ಹಣ ಹಂಚಿಕೆ ಆರೋಪ ಕೇಳಿಬಂದಿದೆ. ಬಾಷಾ ನಗರ ಮುಖ್ಯರಸ್ತೆಯಲ್ಲಿ ನಡೆದ ಘಟನೆಯ ಬಗ್ಗೆ SDPI ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಪ್ರತಿಕ್ರಿಯೆ ನೀಡಿದ್ದು, ನಮ್ಮ ಪಕ್ಷದಿಂದ ಹಣ ಅಥವಾ ಸೀರೆ ಹಂಚಿಕೆ ನಡೆಯುವುದಿಲ್ಲ. ನಮ್ಮನ್ನು ಪ್ರೀತಿಸುವ ಮತದಾರರು ಸ್ವಯಂ ಪ್ರೇರಿತವಾಗಿ ಸಹಾಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ನಾನು ಎಲ್ಲಾ ವಾರ್ಡ್‌ಗಳಿಗೆ ಭೇಟಿ ನೀಡುತ್ತಿದ್ದು, ಹೆಚ್ಚಿನ ಕಡೆಗಳಲ್ಲಿ ಶಾಂತಿಯುತ ಮತದಾನ ನಡೆಯುತ್ತಿದೆ. ಆದರೆ ಬಾಷಾ ನಗರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಗೊಂದಲದ ವಾತಾವರಣ ಇದೆ. ಕೆಲವೆಡೆ ಬಹಿರಂಗವಾಗಿ ಹಣ ಹಂಚಿಕೆ ನಡೆಯುತ್ತಿರುವುದನ್ನು ಗಮನಿಸಿ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ, ನಲವತ್ತು ವರ್ಷಗಳಿಂದ ಕೆಲವರು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಪರೋಕ್ಷವಾಗಿ ಶಾಮನೂರು ಕುಟುಂಬದ ವಿರುದ್ಧ ಟೀಕಿಸಿದ ಅಫ್ಸರ್ ಕೊಡ್ಲಿಪೇಟೆ, ಮತದಾನದ ವೇಳೆ ಹಣ ಹಂಚಿಕೆ ಮಾಡುವವರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ. ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ವಿಷಯವನ್ನು ತಂದು, ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ” ಎಂದು ಹೇಳಿದ್ದಾರೆ. ಒಟ್ಟಿನಲ್ಲಿ, ಬಾಗಲಕೋಟೆ ಹಾಗೂ ದಾವಣಗೆರೆಯಲ್ಲಿ ಕೇಳಿಬಂದ ಹಣ ಹಂಚಿಕೆ ಆರೋಪಗಳು ಉಪಚುನಾವಣೆಯ ಸ್ವಚ್ಛತೆ ಕುರಿತು ಪ್ರಶ್ನೆಗಳನ್ನು ಎಬ್ಬಿಸಿದ್ದು, ಸಂಬಂಧಿಸಿದ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಅಗತ್ಯತೆ ಮೂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Women's Reservation Bill: ಮಹಿಳಾ ಮೀಸಲಾತಿ ಮಸೂದೆ: ತಿದ್ದುಪಡಿ ಪ್ರತಿ ತೋರಿಸಿ, ಆಮೇಲೆ ಚರ್ಚೆ ಎಂದ ಶಶಿ ತರೂರ್
Karnataka Bypolls: ಎರಡೂ ಕಡೆ ದೊಡ್ಡ ಅಂತರದಲ್ಲಿ ಕಾಂಗ್ರೆಸ್ ಗೆಲ್ಲುತ್ತೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ