ಬೆಳಗಾವಿ, ಮಸ್ಕಿ, ಬಸವಕಲ್ಯಾಣದಲ್ಲಿ ಮತ ಎಣಿಕೆ ಶುರು!

Published : May 02, 2021, 06:49 AM ISTUpdated : May 02, 2021, 08:55 AM IST
ಬೆಳಗಾವಿ, ಮಸ್ಕಿ, ಬಸವಕಲ್ಯಾಣದಲ್ಲಿ ಮತ ಎಣಿಕೆ ಶುರು!

ಸಾರಾಂಶ

3 ಕ್ಷೇತ್ರಗಳ ಉಪ ಕದನ ರಿಸಲ್ಟ್‌ ಇಂದು| ಬೆಳಗಾವಿ, ಮಸ್ಕಿ, ಬಸವಕಲ್ಯಾಣದಲ್ಲಿ ಮತ ಎಣಿಕೆಗೆ ಕ್ಷಣಗಣನೆ| ಬಿಜೆಪಿ-ಕಾಂಗ್ರೆಸ್‌ ಮಧ್ಯೆ ತೀವ್ರ ಪೈಪೋಟಿ: ಪ್ರತಿಷ್ಠೆಯ ಕದನ

ಬೆಂಗಳೂರು(ಮೇ.02): ರಾಜ್ಯದಲ್ಲಿ ಕೋವಿಡ್‌ ಅಟ್ಟಹಾಸದ ನಡುವೆಯೇ ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಭಾನುವಾರ ನಡೆಯಲಿದ್ದು, ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ಉಪಚುನಾವಣೆಯ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.

ಭಾನವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದ್ದು, ಚುನಾವಣಾ ಆಯೋಗವು ಕೋವಿಡ್‌ ಮಾರ್ಗಸೂಚಿಯನ್ವಯ ಮುಂಜಾಗ್ರತಾ ಕ್ರಮಗಳೊಂದಿಗೆ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಆಡಳಿತಾರೂಢ ಬಿಜೆಪಿಗೆ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ತೀವ್ರ ಪೈಪೋಟಿ ನೀಡಿದೆ. ಬಸವಕಲ್ಯಾಣ ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಉಪಚುನಾವಣೆಯ ಫಲಿತಾಂಶ ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯಲ್ಲೂ ಪರಿಣಾಮ ಬೀರುವುದಿಲ್ಲ. ಆದರೆ, ಪಕ್ಷದ ವರ್ಚಸ್ಸಿನ ಮೇಲೆ ಪರಿಣಾಮ ಬೀರುತ್ತದೆ.

ಬೆಳಗಾವಿ ಲೋಕಸಭಾ ಕ್ಷೇತ್ರವು ಬಿಜೆಪಿಯ ಮುಷ್ಠಿಯಲ್ಲಿದ್ದು, ಕ್ಷೇತ್ರವನ್ನು ಉಳಿಸಿಕೊಳ್ಳುವ ವಿಶ್ವಾಸ ಬಿಜೆಪಿಗೆ ಇದೆ. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಕೋವಿಡ್‌ನಿಂದ ಮೃತಪಟ್ಟಕಾರಣ ಪತ್ನಿ ಮಂಗಲಾ ಅಂಗಡಿ ಬಿಜೆಪಿ ಅಭ್ಯರ್ಥಿಯಾದರೆ, ಶಾಸಕ ಸತೀಶ್‌ ಜಾರಕಿಹೊಳಿ ಕಾಂಗ್ರೆಸ್‌ನ ಹುರಿಯಾಳಾಗಿದ್ದಾರೆ. ಇಲ್ಲಿ ಎಂಇಎಸ್‌ ಸಹ ಸ್ಪರ್ಧಿಸಿರುವುದರಿಂದ ಮರಾಠಿ ಮತಗಳು ಯಾರಿಗೆ ಹೋಗಿವೆ ಎಂಬುದರ ಮೇಲೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಅಭ್ಯರ್ಥಿಗಳೇ ಇದ್ದು, ಪಕ್ಷವನ್ನು ಅದಲು ಬದಲು ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ನಿಂದ ಹೊರಬಂದ ಪ್ರತಾಪ್‌ಗೌಡ ಪಾಟೀಲ್‌ ಬಿಜೆಪಿ ಅಭ್ಯರ್ಥಿಯಾಗಿ ಅಖಾಡದಲ್ಲಿದ್ದಾರೆ. ಇವರ ಗೆಲುವಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪುತ್ರ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡು ಟೊಂಕಕಟ್ಟಿಓಡಾಡಿದ್ದರು. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಸನಗೌಡ ತುರ್ವಿಹಾಳ್‌ ಕಣಕ್ಕಿಳಿದಿದ್ದಾರೆ. ಹೀಗಾಗಿ ಈ ಕ್ಷೇತ್ರದ ಫಲಿತಾಂಶ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಬಸವಕಲ್ಯಾಣ ಕ್ಷೇತ್ರದಲ್ಲಿ ಶಾಸಕರಾಗಿದ್ದ ನಾರಾಯಣರಾವ್‌ ಕೋವಿಡ್‌ ಸೋಂಕಿನಿಂದಾಗಿ ನಿಧನರಾದ ಕಾರಣ ಅವರ ಪತ್ನಿ ಮಾಲಾ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದು, ಬಿಜೆಪಿಯಿಂದ ಹೊಸ ಮುಖ ಶರಣು ಸಲಗರ್‌ ಕಣದಲ್ಲಿದ್ದಾರೆ. ಜೆಡಿಎಸ್‌ನಿಂದ ಸೈಯದ್‌ ಯಸ್ರಬ್‌ ಅಲಿ ಸ್ಪರ್ಧಿಸಿದ್ದಾರೆ. ತಮಗೆ ಟಿಕೆಟ್‌ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಬಿಜೆಪಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖೂಬಾ ಸಹ ಅಖಾಡದಲ್ಲಿದ್ದಾರೆ. ಖೂಬಾ ಅವರು ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಾಬಲ್ಯ ಹೊಂದಿದ್ದು, ಅವರು ಪಡೆಯುವ ಮತಗಳ ಆಧಾರದ ಮೇಲೆ ಯಾರ ಗೆಲುವು ಎಂಬುದು ಗೊತ್ತಾಗಲಿದೆ.

ಮತ ಎಣಿಕೆಗೆ ಕೋವಿಡ್‌ ಮಾರ್ಗಸೂಚಿ

ಮೂರು ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆಯು ಭಾನವಾರ ಬೆಳಗ್ಗೆ 8 ಗಂಟೆಯಿಂದ ಎಣಿಕೆ ನಡೆಯಲಿದ್ದು, ಕೋವಿಡ್‌ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮತ ಎಣಿಕೆ ಕೊಠಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಮತ ಎಣಿಕೆಯು ಆರ್‌ಪಿಡಿ ಕಾಲೇಜಿನಲ್ಲಿ ನಡೆಯಲಿದ್ದು, 17 ಕೊಠಡಿಗಳಲ್ಲಿ ಮತ ಎಣಿಕೆ ವ್ಯವಸ್ಥೆ ಮಾಡಲಾಗಿದೆ. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು ಬಿವಿಬಿ ಕಾಲೇಜಿನಲ್ಲಿ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು ಎಸ್‌ಆರ್‌ಪಿಎಸ್‌ ಕಾಲೇಜಿನಲ್ಲಿ ಜರುಗಲಿದೆ. ಎರಡು ಕಾಲೇಜಿನಲ್ಲಿಯೂ ತಲಾ ಮೂರು ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ಮತ ಎಣಿಕೆ ಕೇಂದ್ರದ ಸುತ್ತ ಯಾವುದೇ ಜನರನ್ನು ಸೇರುವಂತಿಲ್ಲ. ಅಲ್ಲದೇ, ಯಾವುದೇ ರೀತಿಯಾದ ಮೆರವಣಿಗೆ, ವಿಜಯೋತ್ಸವ ಆಚರಣೆ ಮಾಡುವಂತಿಲ್ಲ. ಮತ ಎಣಿಕೆಯ ಬಳಿಕ ಗೆಲುವು ಸಾಧಿಸಿದ ಅಭ್ಯರ್ಥಿಯ ಜತೆ ಇಬ್ಬರಿಗೆ ಮಾತ್ರ ಪ್ರಮಾಣ ಪತ್ರ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಮಾಧ್ಯಮದವರಿಗೂ ಇದೇ ಮಾರ್ಗಸೂಚಿ ಅನ್ವಯವಾಗಲಿದೆ. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ ಕಾನೂನು ಪ್ರಕಾರ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಆಯೋಗವು ಸ್ಪಷ್ಟವಾಗಿ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಾ ಜಿ ಪರಮೇಶ್ವರ ರಾಜ್ಯದ ಸಿಎಂ ಆಗಬೇಕು, ರಾಜಕೀಯದಲ್ಲಿ ಸಂಚಲನ ಮೂಡಿಸೋ ಹೇಳಿಕೆ ಕೊಟ್ಟ ಕೇಂದ್ರ ಸಚಿವ ವಿ. ಸೋಮಣ್ಣ!
ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!