ರಾಜ್ಯದಲ್ಲಿ ಸೂಕ್ತ ಸಮಯಕ್ಕೆ ಆಸ್ಪತ್ರೆಯ ಬೆಡ್ ಆಕ್ಸಿಜನ್, ಔಷಧಿ ಇಲ್ಲದೇ ಕೊರೋನಾ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಆದ್ರೆ, ಇತ್ತ ಬಿಜೆಪಿ ಶಾಸಕರೊಬ್ಬರು ಫೋನ್ ಬಳಕೆಯಿಂದ ಸೋಂಕಿತರು ಸಾಯುತ್ತಿದ್ದಾರೆ ಎಂದಿದ್ದಾರೆ.
ಕೊಪ್ಪಳ, (ಮೇ.01): ಸ್ಮಾರ್ಟ್ ಫೋನ್ ಬಳಕೆಯಿಂದ ಕೊರೋನಾ ಸೋಂಕಿತರು ಮೃತಪಡುತ್ತಿದ್ದಾರೆ ಎಂದು ಕೊಪ್ಪಳ ಜಿಲ್ಲೆ ಕನಕಗಿರಿ ಶಾಸಕ ಬಸವರಾಜ್ ದಢೇಸುಗೂರ ಹೇಳಿದ್ದಾರೆ.
ಇಂದು (ಶನಿವಾರ) ಗಂಗಾವತಿಯ ಕೋವಿಡ್19 ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಅನೌಪಚಾರಿಕವಾಗಿ ವೈದ್ಯರೊಂದಿಗೆ ಮಾತನಾಡುವ ವೇಳೆ ಈ ರೀತಿ ಹೇಳಿಕೆ ನೀಡಿದ್ದಾರೆ.
undefined
ಕೋಲಾರದಲ್ಲಿ ವೆಂಟಿಲೇಟರ್ ಸಿಗದೇ 8 ಮಂದಿ ಸಾವು
ಬೆಡ್ ಸಿಗದೆ, ಆಕ್ಸಿಜನ್ ಸಿಗದೇ ಸೋಂಕಿತರು ಸಾಯುತ್ತಿಲ್ಲ, ಸ್ಮಾರ್ಟ್ಫೋನ್ ನೋಡಿ ಭಯದಿಂದಲೇ ಜನರು ಸಾಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರಿಗೆ ಸ್ಮಾರ್ಟ್ಫೋನ್ ಕೊಡಬೇಡಿ. ಎಂಪಿ, ಎಂಎಲ್ಎ ಹೇಳಿದರೂ ಸ್ಮಾರ್ಟ್ಫೋನ್ ಕೊಡಬೇಡಿ ಎಂದು ಬಿಜೆಪಿ ಶಾಸಕ ಬಸವರಾಜ್ ವೈದ್ಯರಿಗೆಯೇ ಪಾಠ ಹೇಳಿದರು.
ಚಿಕಿತ್ಸೆ ಪಡೆಯುತ್ತಿರುವ ಕರೋನ ರೋಗಿಗಳಿಗೆ ಸ್ಮಾರ್ಟ್ ಫೋನ್ ಬಳಕೆ ನಿಷೇಧಿಸಬೇಕು. ಆಗ ಮಾತ್ರ ರೋಗಿಗಳು ಗುಣಮುಖ ಆಗುತ್ತಾರೆ. ಸ್ಮಾರ್ಟ್ ಫೋನ್ ನಲ್ಲಿ ಕೊರೋನಾಕ್ಕೆ ಸಂಬಂಧಿಸಿದ ಸುದ್ದಿಗಳನ್ನು, ಸಾವು ನೋವು ನೋಡಿ ಮತ್ತಷ್ಟು ಆತಂಕಕ್ಕೆ ಒಳಗಾಗುತ್ತಾರೆ. ಹೀಗಾಗಿ ಭಯದಿಂದ ಕೊರೋನಾ ರೋಗಿಗಳು ಮೃತಪಡುತ್ತಿದ್ದಾರೆ ಎಂದಿದ್ದಾರೆ.
ಮನೆಯವರೊಂದಿಗೆ ಮಾತಾಡಲು ಬೇಸಿಕ್ ಮೊಬೈಲ್ನ್ನಷ್ಟೇ ಕೊಡಿ. ನೀವು ಏನೇ ಹೇಳಿದರೂ ಸ್ಮಾರ್ಟ್ಫೋನ್ ನೋಡಿದರೆ ಮುಗಿಯಿತು. ಸ್ಮಾರ್ಟ್ಫೋನ್ ನೋಡಿ ಭಯದಿಂದ ಜನರು ಸಾಯುತ್ತಿದ್ದಾರೆ ಎಂದು ಅವರು ವೈದ್ಯರಿಗೆ ಸಲಹೆ ನೀಡಿದರು.