
ಮೈಸೂರು[ನ.18]: ನಾನು ಸಾಮಾಜಿಕ ನ್ಯಾಯದ ಪರ ಇರುವುದರಿಂದಲೇ ಬಿಜೆಪಿ, ಜೆಡಿಎಸ್ ಮತ್ತು ಈಗಿನ ಎಲ್ಲ ಅನರ್ಹ ಶಾಸಕರೂ ನನ್ನನ್ನು ಬೈಯ್ಯುತ್ತಿದ್ದಾರೆ. ಅವರು ಏನು ಬೇಕಾದರೂ ಬೈದುಕೊಳ್ಳಲಿ, ಈ ಉಪಚುನಾವಣೆಯಲ್ಲಿ ಅನರ್ಹರನ್ನು ಸೋಲಿಸುವುದೇ ನಮ್ಮ ಗುರಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಭೋವಿ ಸಮುದಾಯದ ವಿದ್ಯಾರ್ಥಿ ನಿಲಯ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಮ್ಮ ಕಾಂಗ್ರೆಸ್ ಸರ್ಕಾರವಿದ್ದಾಗ ಎಸ್ಸಿ, ಎಸ್ಟಿಜನಾಂಗದವರಿಗೆ ಜನಸಂಖ್ಯೆಗೆ ಅನುಗುಣವಾಗಿ 24.1 ರಂತೆ ಎಸ್‌ಸಿಪಿ- ಟಿಎಸ್‌ಪಿ ಯೋಜನೆಗೆ ಹಣ ಮೀಸಲಿಟ್ಟೆ. ಗುತ್ತಿಗೆ ಪದ್ಧತಿಯಲ್ಲಿ ಮೀಸಲಾತಿ ಜಾರಿಗೆ ತಂದೆ. ಬಡ್ತಿ ಮೀಸಲಾತಿ ಮುಖಾಂತರ ನ್ಯಾಯ ಒದಗಿಸಿದೆ. ಆದರೆ, ಮೈತ್ರಿ ಸರ್ಕಾರದ ಕುಮಾರಸ್ವಾಮಿಯಾಗಲೀ ಹಾಗೂ ಈಗಿನ ಸಿಎಂ ಬಿ.ಎಸ್.ಯಡಿಯೂರಪ್ಪ ಸರ್ಕಾರವಾಗಲೀ ಗುತ್ತಿಗೆ ಮೀಸಲು ಪದ್ಧತಿಯನ್ನು ಜಾರಿಗೊಳಿಸಿಲ್ಲ. ಇದನ್ನೆಲ್ಲ ಕೇಳುವವರು ಯಾರು. ವಿಧಾನಸಭೆಯಲ್ಲಿ ಯಾರು ಕೇಳುತ್ತಾರೋ ಅಂತವರನ್ನು ನೀವು ಬೆಂಬಲಿಸಬೇಕಲ್ಲವೇ ಎಂದು ಸಭಿಕರನ್ನು ಪ್ರಶ್ನಿಸಿದರು.
ಉಪ ಚುನಾವಣೆಗೆ ಸ್ಪರ್ಧಿಸಿರುವ ಅನರ್ಹರೆಲ್ಲರೂ ವಿಚಲಿತರಾಗಿದ್ದಾರೆ. ಪರಿಣಾಮ ಏನೇನೋ ಮಾತನಾಡುತ್ತಿದ್ದಾರೆ. ಚುನಾವಣೆಯಲ್ಲಿ ಗೆದ್ದು ಬಂದು ಮಂತ್ರಿಯಾಗ್ತೀವಿ. ಕ್ಷೇತ್ರ ಅಭಿವೃದ್ಧಿ ಮಾಡುತ್ತೇವೆ ಎಂದೆಲ್ಲ ಅನರ್ಹರು ಭರವಸೆ ನೀಡುತ್ತಿದ್ದಾರೆ. ಆದರೆ, ಜನ ಇವರ ಮಾತಿಗೆ ಮರುಳಾಗುವುದಿಲ್ಲ ಎಂದರು.
ಮಂದಿರದಿಂದ ಹೊಟ್ಟೆ ತುಂಬಲ್ಲ:
ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲಿ, ಬೇಡ ಅನ್ನಲ್ಲ. ಆದರೆ ಮಂದಿರ, ಮನ್ ಕೀ ಬಾತ್‌ನಿಂದಲೇ ಹೊಟ್ಟೆತುಂಬುವುದಿಲ್ಲ. ಜನಪರ ಸರ್ಕಾರಗಳು ಸಾರ್ವಜನಿಕರ ಹೊಟ್ಟೆ, ಬಟ್ಟೆ, ಸೂರು ಕಲ್ಪಿಸಲು ಮುಂದಾಗಬೇಕು. ಇಲ್ಲದಿದ್ದರೆ ಕೇವಲ ಮಂದಿರಗಳಿಂದ ಏನು ಪ್ರಯೋಜನವಿಲ್ಲ ಎಂದು ಹೇಳಿದರು.
ಶಿವಸೇನೆ ಕೋಮುವಾದಿಯಾಗಿ ಉಳಿದಿಲ್ಲ:
ಎನ್‌ಡಿಎಯಿಂದ ಶಿವಸೇನೆ ಹೊರಬಂದಿದ್ದು, ಈಗ ಅದು ಕೋಮುವಾದಿ ಪಕ್ಷವಲ್ಲ. ಹಾಗಾಗಿ ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆಗೆ ಎನ್‌ಸಿಪಿ ಮತ್ತು ಕಾಂಗ್ರೆಸ್ ಕೈಜೋಡಿಸಿದೆ. ಒಂದು ವೇಳೆ ಶಿವಸೇನೆ ಮತ್ತೊಮ್ಮೆ ಎನ್‌ಡಿಎ ಜತೆ ಹೋದರೆ ನಾವೂ ದೂರವಾಗುತ್ತೇವೆ ಎಂದು ತಿಳಿಸಿದರು.
ವಿಶ್ವನಾಥ್ ಗಿಮಿಕ್ ವರ್ಕೌಟ್ ಆಗಲ್ಲ:
ವಿಶ್ವನಾಥ್ ಅನರ್ಹರಾಗಿರುವುದರಿಂದ ಚುನಾವಣೆಯಲ್ಲಿ ಗೆಲ್ಲಲು ಆಗುವುದಿಲ್ಲ. ಹಾಗಾಗಿ ಹುಣಸೂರನ್ನು ಪ್ರತ್ಯೇಕ ಜಿಲ್ಲೆ ಮಾಡುವುದಾಗಿ ಗಿಮಿಕ್ ಮಾಡುತ್ತಿದ್ದಾರೆ. ಆದರೆ, ಇದು ಚುನಾವಣೆಯಲ್ಲಿ ವರ್ಕೌಟ್ ಆಗುವುದಿಲ್ಲ. ಇಷ್ಟುವರ್ಷ ಕಾಲ ಯಾಕೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿಲ್ಲ. ಈಗ ಯಾಕೆ ಹುಣಸೂರನ್ನು ಪ್ರತ್ಯೇಕ ಜಿಲ್ಲೆ ಮಾಡುತ್ತೇನೆ ಎನ್ನುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.