ರಾಜ್ಯದ 15 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ನಾಳೆ [ನ.18] ಕಡೆಯ ದಿನವಾಗಿದೆ. ಆದ್ರೆ, ರಾತ್ರೋರಾತ್ರಿ ಜೆಡಿಎಸ್ ತನ್ನ ಚಿಕ್ಕಬಳ್ಳಾಪುರ ಅಭ್ಯರ್ಥಿ ಕೆ.ಪಿ ಬಚ್ಚೇಗೌಡ ಜತೆಗೆ ಮತ್ತೊಂದು ಅಭ್ಯರ್ಥಿಯ ಹೆಸರನ್ನು ತೇಲಿಬಿಟ್ಟಿದೆ. ಯಾರದು ಹೊಸ ಅಭ್ಯರ್ಥಿ..?
ಚಿಕ್ಕಬಳ್ಳಾಪುರ, [ನ.17]: ಚಿಕ್ಕಬಳ್ಳಾಪುರ ವಿಧಾನಸಭಾ ಉಪಚುನಾವಣೆಗೆ ಜೆಡಿಎಸ್ ತನ್ನ ಅಭ್ಯರ್ಥಿ ಕೆ.ಪಿ ಬಚ್ಚೇಗೌಡ ಅವರನ್ನು ಬದಲಾವಣೆ ಮಾಡಲು ಮುಂದಾಗಿದ್ದು, ರಾಧಾಕೃಷ್ಣ ಅವರನ್ನ ಅಂತಿಮಗೊಳಿಸಲು ಚಿಂತನೆ ನಡೆಸಿದೆ.
ಈ ಮೊದಲು ಮಾಜಿ ಶಾಸಕ ಕೆ.ಪಿ ಬಚ್ಚೇಗೌಡ ಚಿಕ್ಕಬಳ್ಳಾಪುರ ಅಭ್ಯರ್ಥಿ ಎಂದು ಜೆಡಿಎಸ್ ಹೈಕಮಾಂಡ್ ಫೈನಲ್ ಮಾಡಿ ಪಟ್ಟಿ ಪ್ರಕಟಿಸಿತ್ತು. ಆದ್ರೆ, ಇದೀಗ ಏಕಾಏಕಿ ಕೆ.ಪಿ ಬಚ್ಚೇಗೌಡ ಜತೆಗೆ ಶಿಡ್ಲಘಟ್ಟದ ನಾಗಮಂಗಲ ನಿವಾಸಿ ರಾಧಾಕೃಷ್ಣ ಅವರನ್ನು ಸಹ ಅಭ್ಯರ್ಥಿಯನ್ನಾಗಿ ಮಾಡಿದೆ.
ಕರ್ನಾಟಕ ಉಪ ಚುನಾವಣೆ : 11 ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಅಂದಹಾಗೆ ರಾಧಾಕೃಷ್ಣ ಬೇರೆ ಯಾರೂ ಅಲ್ಲ. ಶಾಸಕಿ ಅನಿತಾ ಕುಮಾರಸ್ವಾಮಿ ಸೋದರಿಯ ಪತಿ. ಸೋಮವಾರ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಜತೆ ಸೇರಿ ಬಚ್ಚೇಗೌಡ ಹಾಗೂ ರಾಧಾಕೃಷ್ಣ ಇಬ್ಬರೂ ಸಹ ನಾಮಪತ್ರ ಸಲ್ಲಿಸಲಿದ್ದು, ಬಳಿಕ ಯಾರಾದ್ರೂ ಒಬ್ಬರು ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎಂದು ಜೆಡಿಎಸ್ ಮೂಲಗಳಿಂದ ತಿಳಿದಬಂದಿದೆ.
ಎರಡು ನಾಮಪತ್ರ ಏಕೆ..?
ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಬಚ್ಚೇಗೌಡ ಅವರು ಆರಂಭದಲ್ಲಿ ಹಿಂದೇಟು ಹಾಕಿದ್ದು, ಬಳಿಕ ಜೆಡಿಎಸ್ ವರಿಷ್ಠರು ಮನವೊಲಿಸಿದ್ದಾರೆ. ಆದ್ರೆ, ಕೊನೆಘಳಿಗೆಯಲ್ಲಿ ರಿಸ್ಕ್ ಬೇಡ ಎಂದು ಜೆಡಿಎಸ್, ಬಚ್ಚೇಗೌಡರಿಗೆ ಪರ್ಯಾಯವಾಗಿ ರಾಧಕೃಷ್ಣ ಅವವರಿಗೂ ಸಹ ಸಿ ಫಾರಂ ನೀಡಿ ನಾಮಪತ್ರ ಸಲ್ಲಿಸಲು ಹೇಳಿದ್ದಾರೆ ಎನ್ನುವುದನ್ನು ಉನ್ನತ ಮೂಲಗಳು ತಿಳಿಸಿವೆ.
ಚಿಕ್ಕಬಳ್ಳಾಪುರದಲ್ಲಿ ತಾನು ಗೆಲ್ಲದಿದ್ದರೂ ಪರವಾಗಿಲ್ಲ ಬದ್ಧ ವೈರಿ ಎಂದೇ ಹೇಳಲಾಗಿರುವ ಸುಧಾಕರ್ ಅವರನ್ನು ಮಣಿಸಲು ದೊಡ್ಡಗೌಡ್ರು ಹಾಊ ಕುಮಾರಸ್ವಾಮಿ ಅವರ ತಂತ್ರಗಾರಿಕೆ ಇದು. ಬೇರೆ ಕ್ಷೇತ್ರ ನಾಯಕನನ್ನು ಚಿಕ್ಕಬಳ್ಳಾಪುರಕ್ಕೆ ಕರೆತಂದಿರುವ ಜೆಡಿಎಸ್ ನಡೆ ತೀವ್ರ ಕುತೂಹಲ ಮೂಡಿಸಿದೆ.
ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.