ಕೊಟ್ಟಮಾತು ಉಳಿಸಲು ಪ್ರಾಣ ಕೊಡಲೂ ಸಿದ್ಧ| ಉಪಚುನಾವಣೆ: ಬೆಳಗಾವಿ ಜಿಲ್ಲೆಯ 3 ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಬಿರುಸಿನ ಪ್ರಚಾರ| ಕುಮಟಳ್ಳಿ, ಸವದಿ ಇಬ್ಬರೂ ಸಂಪುಟದಲ್ಲಿರುತ್ತಾರೆ| ಮೂರೂವರೆ ವರ್ಷವೂ ಸವದಿ ಡಿಸಿಎಂ: ಯಡಿಯೂರಪ್ಪ
ಅಥಣಿ[ನ.24]: ಕೊಟ್ಟಮಾತು ಈಡೇರಿಸಲು ಯಡಿಯೂರಪ್ಪ ಪ್ರಾಣ ಬೇಕಾದರೂ ಕೊಡುತ್ತಾನೆ ಎಂದು ಘೋಷಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಮಹೇಶ ಕುಮಟಳ್ಳಿ ಸಚಿವ ಸ್ಥಾನ ನೀಡುವುದರೊಂದಿಗೆ ಲಕ್ಷ್ಮಣ ಸವದಿ ಸಹ ಉಪಮುಖ್ಯಮಂತ್ರಿ ಪಟ್ಟದಲ್ಲಿಯೇ ಮುಂದುವರಿಯುವುದಾಗಿ ವಾಗ್ದಾನ ಮಾಡಿದ್ದಾರೆ. ಈ ಮೂಲಕ ಮಹೇಶ್ ಕುಮಟಳ್ಳಿ ಗೆದ್ದರೂ ಒಂದೇ ಕ್ಷೇತ್ರದ ಇಬ್ಬರಿಗೆ ಸಚಿವ ಸ್ಥಾನ ನೀಡಲು ಯಾವುದೇ ಅಡ್ಡಿ ಇಲ್ಲ ಎಂಬುದನ್ನು ನೇರವಾಗಿಯೇ ತಿಳಿಸಿದ್ದಾರೆ.
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯವರ ಸ್ವಕ್ಷೇತ್ರವಾದ ಅಥಣಿಯಿಂದ ಶನಿವಾರ ಉಪಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದ ಅವರು, ಮುಂದಿನ ಮೂರೂವರೆ ವರ್ಷಗಳ ಕಾಲವೂ ಲಕ್ಷ್ಮಣ ಸವದಿ ಅವರು ಉಪಮುಖ್ಯಮಂತ್ರಿ ಆಗಿರುತ್ತಾರೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ಭರವಸೆ ನೀಡಿದ್ದಾರೆ. ಜತೆಗೆ ಬೆಳಗಾವಿ ಜಿಲ್ಲಾ ಉಸ್ತುವಾರಿಯನ್ನಾಗಿ ಮಾಡಲಾಗುತ್ತದೆ. ಕೊಟ್ಟಮಾತು ಈಡೇರಿಸಲು ಯಡಿಯೂರಪ್ಪ ಪ್ರಾಣ ಬೇಕಾದರೂ ಕೊಡುತ್ತಾನೆ. ಒಮ್ಮೆ ಮಾತು ಕೊಟ್ಟರೆ ಅದನ್ನು ಈಡೇರಿಸದೇ ಬಿಡಲ್ಲ. ಅದರಂತೆಯೇ ಮಹೇಶ ಕುಮಟಳ್ಳಿ ಮತ್ತು ಸವದಿ ಇಬ್ಬರೂ ಸಚಿವರಾಗುತ್ತಾರೆ. ಹೀಗಾಗಿ ಅಥಣಿ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಮುಂದಿನ ತಿಂಗಳು 9ರ ನಂತರ ಇಬ್ಬರು ಸಚಿವರ ಜೊತೆಗೆ ಬರುತ್ತೇನೆ ಎಂದು ಅವರು ಹೇಳಿದರು.
ಅಥಣಿಯಲ್ಲಿ ಪ್ರಾರಂಭದಲ್ಲಿ ಸ್ವಲ್ಪ ಅಸಮಾಧಾನ ಇದ್ದಿದ್ದು ನಿಜವಾದರೂ ಈಗ ಅದೆಲ್ಲ ಇಲ್ಲ. ಲಕ್ಷ್ಮಣ ಸವದಿ ಮತ್ತು ಮಹೇಶ ಕುಮಟಳ್ಳಿ ಇಂದಿನಿಂದಲೇ ಒಟ್ಟಿಗೆ ಸೇರಿ ಚುನಾವಣೆಯ ಪ್ರಚಾರ ಮಾಡುತ್ತಾರೆ. ಬರುವ ಡಿ.2ರಂದು ಬೃಹತ್ ಕಾರ್ಯಕರ್ತರ ಸಭೆಯನ್ನು ಆಯೋಜಿಸುತ್ತಾರೆ. ಅಲ್ಲಿ ಸೇರುವ ಜನರೇ ಫಲಿತಾಂಶ ಹೇಳಲಿದ್ದು, ಆ ಜನಸಮೂಹ ಕಂಡು ವಿರೋಧಿಗಳಲ್ಲಿ ಡವ ಡವ ಪ್ರಾರಂಭವಾಗುತ್ತದೆ ಎಂದರು.