ನಾನು ಪೆದ್ದ; ಖರ್ಗೆ, ಪರಂರನ್ನು ತುಳಿದ ಸಿದ್ದು ಮಹಾ ಬುದ್ಧಿವಂತ| ತಮ್ಮನ್ನು ಪೆದ್ದ ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಶ್ರೀರಾಮುಲು ತಿರುಗೇಟು
ಹೊಸಪೇಟೆ[ನ.23]: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಆರೋಗ್ಯ ಸಚಿವ ಬಿ. ಶ್ರೀರಾಮುಲು, ‘ಕಾಂಗ್ರೆಸ್‌ನಲ್ಲಿದ್ದ ದಲಿತ-ಹಿಂದುಳಿದ ನಾಯಕರನ್ನು ತುಳಿದು ಸಿದ್ದರಾಮಯ್ಯ ಆ ಪಕ್ಷವನ್ನೇ ನಿರ್ನಾಮ ಮಾಡಿದ್ದಾರೆ. ದೊಡ್ಡ ದೊಡ್ಡ ನಾಯಕರನ್ನು ತುಳಿದು ಮೇಲೆ ಬಂದ ಅವರು ನಿಜಕ್ಕೂ ಬುದ್ಧಿವಂತ’ ಎಂದು ತಿರುಗೇಟು ನೀಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ಪರ ಶುಕ್ರವಾರ ನಗರದಲ್ಲಿ ಪ್ರಚಾರ ನಡೆಸುವ ವೇಳೆ ತಮ್ಮನ್ನು ಪೆದ್ದ ಎಂದ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಜಿಗಿದು ಹೋಗಿ ಆ ಪಕ್ಷದಲ್ಲಿದ್ದ ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಹಾಗೂ ಪರಮೇಶ್ವರ ಅವರನ್ನು ತುಳಿದರು. ಈ ಮಾತನ್ನು ಬರೀ ನಾನಷ್ಟೇ ಹೇಳುತ್ತಿಲ್ಲ. ಕಾಂಗ್ರೆಸ್‌ನವರೇ ಹೇಳುತ್ತಾರೆ ಎಂದರು.
ಶ್ರೀರಾಮುಲು ಪೆದ್ದ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಬುದ್ಧಿವಂತರಾಗಿ ಮಾಡಿದ್ದೇನು? ದಲಿತ ನಾಯಕರನ್ನು ತುಳಿಯುವುದು ಅವರ ಬುದ್ಧಿವಂತಿಕೆಯೇ? ಪಕ್ಷವನ್ನು ಆರಂಭದಿಂದ ಕಟ್ಟಿಬೆಳೆಸಿದವರನ್ನು ಮೂಲೆಗುಂಪು ಮಾಡಲು ಯತ್ನಿಸುವುದು ಬುದ್ಧಿವಂತಿಕೆಯೇ ಎಂದು ಪ್ರಶ್ನಿಸಿದರಲ್ಲದೆ, ಈ ಬುದ್ಧಿವಂತನ ಜತೆ ಯಾರಿದ್ದಾರೆ? ಮಲ್ಲಿಕಾರ್ಜುನ ಖರ್ಗೆ ಇಲ್ಲ. ಪರಮೇಶ್ವರ ಇಲ್ಲ. ಬಿ.ಕೆ. ಹರಿಪ್ರಸಾದ್ ಸಹ ಇಲ್ಲ ಎಂದು ವ್ಯಂಗ್ಯವಾಡಿದರು.
ಭ್ರಷ್ಟಾಚಾರದಲ್ಲೂ ಬುದ್ಧಿವಂತಿಕೆ:
ನನ್ನನ್ನು ಪೆದ್ದ ಎನ್ನುವ ಸಿದ್ದರಾಮಯ್ಯ ತಮ್ಮ ಅಧಿಕಾರ ಅವಧಿಯಲ್ಲಿ ಆ ಪರಿ ಭ್ರಷ್ಟಾಚಾರ ಮಾಡಿ ಬುದ್ಧಿವಂತ ಎನಿಸಿಕೊಂಡಿದ್ದಾರೆ. ಅವರು ಮಾಡಿದ ಭ್ರಷ್ಟಾಚಾರವನ್ನು ಎಂಟಿಬಿ ನಾಗರಾಜ್, ಮುನಿರತ್ನ ಅವರಂತಹ ನಾಯಕರು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ನಂಬಿದವರಿಗೆ ಅನ್ಯಾಯ ಮಾಡುತ್ತಲೇ ಮೇಲೆ ಬಂದ ಬುದ್ಧಿವಂತರಾಗಿದ್ದಾರೆ ಎಂದು ಪಂಚ್ ಮೇಲೆ ಪಂಚ್ ಕೊಟ್ಟರು.
ಜಾತಿವಾರು ಸಂಘರ್ಷ ಸಲ್ಲದು:
ಸಿದ್ದರಾಮಯ್ಯ ಅವರಷ್ಟುನಾನು ಪಾಪುಲರ್ ಅಲ್ಲದಿರಬಹುದು. ಜನರು ನನ್ನನ್ನು ಬೆಳೆಸಿ ಈ ಮಟ್ಟಕ್ಕೆ ತಂದಿದ್ದಾರೆ. ಹತಾಶರಾಗಿ ಹೇಳಿಕೆ ನೀಡುವುದನ್ನು ಬಿಡಬೇಕು. ಹೋರಾಟ ಸಿದ್ದರಾಮಯ್ಯ ವರ್ಸಸ್ ರಾಮುಲು ಆಗಿರಲಿ. ವೈಯಕ್ತಿಕವಾಗಿ ಟೀಕೆ ಮಾಡಲಿ, ಅದು ಬಿಟ್ಟು, ಜಾತಿವಾರು ಸಂಘರ್ಷ ಆಗಬಾರದು. ಕುರುಬ ಹಾಗೂ ನಾಯಕರ ನಡುವಿನ ಟೀಕೆಗೆ ಕಾರಣವಾಗಬಾರದು ಎಂದರು.
ನಾಲಿಗೆ ಬಿಗಿ ಹಿಡಿದು ಮಾತಾಡಲಿ:
ಸಿದ್ದರಾಮಯ್ಯನವರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಪ್ರತಿಪಕ್ಷ ನಾಯಕರಾಗಿ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ನಮ್ಮಂಥವರಿಗೆ ಅವರು ಮಾದರಿಯಾಗಬೇಕಿತ್ತು. ಆದರೆ, ಅವರ ನಡೆಯಿಂದ ಸಣ್ಣವರಾಗುತ್ತಿದ್ದಾರೆ. ನಮ್ಮಂತಹವರನ್ನು ಟೀಕಿಸಿದರೆ ಅವರು ಸಣ್ಣಮನುಷ್ಯನಾಗುತ್ತಾರೆಯೇ ಹೊರತು, ದೊಡ್ಡ ಮನುಷ್ಯ ಎಂದು ಯಾರೂ ಕರೆಯುವುದಿಲ್ಲ ಎಂದು ಹೇಳಿದರು.