ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷೇತ್ರವಾದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಬಜೆಟ್‌ನಲ್ಲಿ ಬಂಪರ್ ಅನುದಾನ ಘೋಷಿಸಿದ್ದಾರೆ.
ಬೆಂಗಳೂರು, (ಮಾ.08): ಈ ಬಾರಿಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಮ್ಮ ತವರು ಶಿವಮೊಗ್ಗ ಜಿಲ್ಲೆಗೆ ಭರ್ಜರಿ ಕೊಡುಗೆ ನೀಡಿದ್ದಾರೆ. ಇದರ ಮಧ್ಯೆ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಬಾದಾಮಿ ಕ್ಷೇತ್ರಕ್ಕೂ ಭರ್ಜರಿ ಅನುದಾನ ಕೊಟ್ಟಿದ್ದಾರೆ.
ಜನೇವರಿ 11ರಂದು 50 ಕೋಟಿ ವೆಚ್ಚದಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ ಸಿದ್ದರಾಮಯ್ಯ ಮನವಿ ಮಾಡಿದ್ದರು. ಅವರ ಮನವಿ ಪುರಸ್ಕರಿಸಿದ ಸಿಎಂ ಯಡಿಯೂರಪ್ಪ ಗುಳೇದಗುಡ್ಡದಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ ಅಸ್ತು ಎಂದಿದ್ದಾರೆ.
ಸಿದ್ದರಾಮಯ್ಯ ಕ್ಷೇತ್ರವಾದ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಜವಳಿ ಪಾರ್ಕ್ ಸ್ಥಾಪಿಸುವಂತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈ ಹಿಂದೆ ಮನವಿ ಸಲ್ಲಿಸಿದ್ದರು. ಇದೀಗ ಈ ಬಜೆಟ್‌ನಲ್ಲಿ ಬಿಎಸ್‌ವೈ, ಸಿದ್ದರಾಮಯ್ಯನವರ ಈ ಬೇಡಿಕೆಯನ್ನು ಈಡೇರಿಸಿದ್ದಾರೆ.
ಬಜೆಟ್‌ನಲ್ಲಿ ತವರು ಜಿಲ್ಲೆ ಶಿವಮೊಗ್ಗಕ್ಕೆ ಬಂಪರ್ ಕೊಡುಗೆ ಕೊಟ್ಟ ಸಿಎಂ
ಇದೊಂದೇ ಯೋಜನೆಯಲ್ಲದೇ ಈ ಬಾರಿ ಬಜೆಟ್‌ನಲ್ಲಿ ಬಾದಾಮಿ ಕ್ಷೇತ್ರಕ್ಕೆ ಇನ್ನೊಂದು ಯೋಜನೆ ಘೋಷಣೆಯಾಗಿದೆ. ಬಾದಾಮಿ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ಬೈಕ್, ಟ್ಯಾಕ್ಸಿ, ಯೋಜನೆ ಆರಂಭಿಸಲು 25 ಕೋಟಿಯನ್ನು ರಾಜ್ಯ ಸರ್ಕಾರ ಒದಗಿಸಲಿದೆ.
ಇನ್ನು ಸಿದ್ದರಾಮಯ್ಯ ಸರ್ಕಾರದ ಅವಧಿಯ 'ಅನುಗ್ರಹ ಯೋಜನೆ' ಮುಂದುವರಿಯಲಿದ್ದು, ಕುರಿ, ಮೇಕೆ ಆಕಸ್ಮಿಕವಾಗಿ ಸತ್ತರೆ ಪರಿಹಾರ ನೀಡುವ ಅನುಗ್ರಹ ಯೋಜನೆ ಮುಂದುವರಿಕೆ ಮಾಡಲಾಗಿದೆ ಎಂದು ಸಿಎಂ ಹೇಳಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಆರಂಭಿಸಿದ ಯೋಜನೆಯನ್ನು ಮುಂದುವರೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀರ್ಮಾನಿಸಿದ್ದಾರೆ.
'ಅನುಗ್ರಹ ಯೋಜನೆ'ಯನ್ನು ಬಿಎಸ್ ಯಡಿಯೂರಪ್ಪನವರ ಸರ್ಕಾರ ರದ್ದು ಮಾಡಿತ್ತು. ಬಳಿಕ ಸಿದ್ದರಾಮಯ್ಯ ಅವರು ಸಿಎಂಗೆ ಪತ್ರ ಬರೆದಿದ್ದರು. ಅಲ್ಲದೇ ಕುರಿಗಾಯಿಗಳು ನಡೆಸಿದ್ದ ಪ್ರತಿಭಟನೆಯಲ್ಲಿ ಸಿದ್ದು ಭಾಗಿಯಾಗಿ 'ಅನುಗ್ರಹ ಯೋಜನೆ' ಮುಂದುವರಿಸಬೇಕೆಂದು ಒತ್ತಾಯಿಸಿದ್ದರು.