* 2023ರಲ್ಲಿ 150 ಸ್ಥಾನ ಗೆಲ್ಲಬೇಕೆಂದರೆ ಈಗಿನಿಂದಲೇ ತಯಾರಿ ಅಗತ್ಯ
* ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಖಡಕ್ ಎಚ್ಚರಿಕೆ
* ಇಂದು ಹಾವೇರಿ-ಗದಗ ಜಿಲ್ಲೆಗಳ ಸಭೆ
ಹುಬ್ಬಳ್ಳಿ(ಏ.26): ವಿಧಾನಸಭೆ ಚುನಾವಣೆ(Karnataka Assembly Election) ಹತ್ತಿರ ಬರುತ್ತಿದೆ. ಯಾವುದೇ ಕಾರಣಕ್ಕೂ ಪದಾಧಿಕಾರಿಗಳು ನಿಷ್ಕ್ರೀಯರಾಗುವಂತಿಲ್ಲ. ಅಂತವರನ್ನು ಬದಲಿಸಬೇಕಾಗುತ್ತದೆ! ಇದು ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ಬಿಜೆಪಿ(BJP) ಕೋರ್ ಕಮಿಟಿ ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ನೀಡಿರುವ ಖಡಕ್ ಎಚ್ಚರಿಕೆಯ ಸಂದೇಶ.
ಮಿಷನ್ 150(Misson 150) ಗುರಿಯೊಂದಿಗೆ ಬೆನ್ನು ಹತ್ತಿರುವ ಬಿಜೆಪಿ, ಮೊದಲು ಸಂಘಟನೆಯನ್ನು ಇನ್ನಷ್ಟುಗಟ್ಟಿ ಮಾಡಿಕೊಳ್ಳಲು ಯೋಚಿಸಿದೆ. ಅದಕ್ಕಾಗಿ ನಿಷ್ಕ್ರೀಯಯಗೊಂಡ ಪದಾಧಿಕಾರಿಗಳನ್ನು ಆ ಜವಾಬ್ದಾರಿಯಿಂದ ಕಿತ್ತು ಬೇರೆಯವರಿಗೆ ನೀಡಲು ನಿರ್ಧರಿಸಿದೆ. ಜತೆಗೆ 2023ರ ಚುನಾವಣೆಯಲ್ಲಿ ಅಭಿವೃದ್ಧಿಯೊಂದೇ ಮಂತ್ರವಾಗಬೇಕು. ಬಿಜೆಪಿ ಸೋತಿರುವ ಕ್ಷೇತ್ರಗಳನ್ನು ಯಾವ ರೀತಿ ಕಮಲಮಯವನ್ನಾಗಿ ಮಾಡಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯಿತು. 150 ಕ್ಷೇತ್ರಗಳಲ್ಲಿ ಗೆಲ್ಲಬೇಕೆಂದರೆ ಈಗಿನಿಂದಲೇ ತಯಾರಿ ನಡೆಸಬೇಕು. ಯಾವುದೇ ಕಾರಣಕ್ಕೂ ಮೈಮರೆಯಬಾರದು. ಸಂಘಟನೆಗೆ ಒತ್ತು ನೀಡಬೇಕೆಂಬ ಸ್ಪಷ್ಟಸಂದೇಶವನ್ನು ಪದಾಧಿಕಾರಿಗಳಿಗೆ ನೀಡಲಾಯಿತು.
Election ಗುವಾಹಟಿ ಪಾಲಿಕೆ ಚುನಾವೆ, 60 ಸ್ಥಾನ ಪೈಕಿ 58ರಲ್ಲಿ ಗೆದ್ದು ಬಿಜೆಪಿ ಕೂಟ ದಾಖಲೆ!
ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯೂ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಧಾರವಾಡ ಗ್ರಾಮಾಂತರ, ಹುಬ್ಬಳ್ಳಿ-ಧಾರವಾಡ ಮಹಾನಗರ, ಹಾವೇರಿ, ಗದಗ ಜಿಲ್ಲೆಗಳ ಕೋರ್ ಕಮಿಟಿ ಹಾಗೂ ಪದಾಧಿಕಾರಿಗಳ ಸಭೆಯನ್ನು ಆಯೋಜಿಸಿದೆ.
ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣಕುಮಾರ(Arun Kumar) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಲ ಪದಾಧಿಕಾರಿಗಳ ನಿಷ್ಕ್ರೀಯರಾಗಿದ್ದಾರೆ. ತಮಗೆ ಕೊಟ್ಟಿರುವ ಜವಾಬ್ದಾರಿಯನ್ನು ಮರೆತು ಬರೀ ನಾಯಕರ ಹಿಂದೆ ಅಲೆದಾಡುವ ಕೆಲಸ ಮಾಡುತ್ತಿದ್ದಾರೆ. ಹೀಗೆ ನಾಯಕರ ಹಿಂದೆ ಬಿದ್ದರೆ ಪಕ್ಷದ ಸಂಘಟನೆಯಾಗುವುದು ಯಾವಾಗ? ಹೀಗಾಗಿ ಅಂಥ ಪದಾಧಿಕಾರಿಗಳ ಜವಾಬ್ದಾರಿಯನ್ನು ಕಸಿದುಕೊಳ್ಳಬೇಕು. ಈಗಲೇ ಎಚ್ಚೆತ್ತುಕೊಳ್ಳಿ ಎಂಬ ಸ್ಪಷ್ಟಸಂದೇಶವನ್ನು ಸಭೆಯಲ್ಲಿ ರವಾನಿಸಲಾಯಿತು.
ಚುನಾವಣೆ ತಯಾರಿ ಯಾವ ರೀತಿ ಇರಬೇಕು. ಯಾವ ರೀತಿ ತಂತ್ರಗಾರಿಕೆ ಮಾಡಿದರೆ ಚುನಾವಣೆಯಲ್ಲಿ ಗೆಲ್ಲಬಹುದು. ಸದ್ಯ ಸಂಘಟನೆ ಯಾವ ರೀತಿಯಿದೆ. ಯಾವ್ಯಾವ ಘಟಕಗಳು ಎಷ್ಟುಸಕ್ರಿಯವಾಗಿವೆ. ಯಾವ್ಯಾವ ಪದಾಧಿಕಾರಿಗಳು ನಿಷ್ಕ್ರೀಯರಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆಯಲಾಯಿತು.
ಈಗ ಬಿಜೆಪಿ ಶಾಸಕರಿರುವ ಕ್ಷೇತ್ರಗಳ್ಯಾವವು. ಅಲ್ಲಿ ಸದ್ಯ ಯಾವ ರೀತಿ ಪಕ್ಷದ ಸಂಘಟನೆಯಿದೆ. ಇನ್ನಷ್ಟುಗಟ್ಟಿಮಾಡಿಕೊಳ್ಳಬೇಕೆಂದರೆ ಏನೇನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚಿಸಲಾಯಿತು. ಜತೆಗೆ ಯಾವ್ಯಾವ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿಲ್ಲ. ಅಲ್ಲಿ ಬಾರದಿರುವುದಕ್ಕೆ ಕಾರಣವೇನು? ಅಲ್ಲಿರುವ ಆಕಾಂಕ್ಷಿಗಳ್ಯಾರು? ಅವರ ತಯಾರಿ ಯಾವ ರೀತಿ ನಡೆದಿದೆ. ಈ ಸಲ ಆ ಕ್ಷೇತ್ರದಲ್ಲಿ ಗೆಲ್ಲಬೇಕೆಂದರೆ ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು. ಪೇಜ್ ಪ್ರಮುಖರ ನೇಮಕಾತಿ, ಬೂತ್ ಮಟ್ಟದ ಕಮಿಟಿಗಳ ಕಾರ್ಯವೈಖರಿ ಬಗ್ಗೆ ಚರ್ಚೆ ನಡೆಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳನ್ನು ಯಾವ ರೀತಿ ಜನರಿಗೆ ಮನದಟ್ಟು ಮಾಡಬೇಕು. ಸಂಘಟನೆ ಯಾವ ರೀತಿ ಮಾಡಿದರೆ ಉತ್ತಮ ಎಂಬ ಬಗ್ಗೆ ಸಲಹೆ ನೀಡಲಾಯಿತು.
ಚುನಾವಣೆಯಲ್ಲಿ ಕಾಂಗ್ರೆಸ್ ಯಾವ ರೀತಿ ತಂತ್ರಗಾರಿಕೆ ಮಾಡಿಕೊಳ್ಳಬಹುದು. ಅದಕ್ಕೆ ಪ್ರತಿತಂತ್ರಗಳೇನು?. ಕಾಂಗ್ರೆಸ್ ಟೀಕೆಗಳಿಗೆ ಯಾವ ರೀತಿ ಪ್ರತ್ಯುತ್ತರ ನೀಡಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.
ಕೇಂದ್ರ ಸಮಿತಿ ನೀಡಿರುವ ಮಿಷನ್ 150 ಗುರಿ ಸಾಧನೆಗೆ ಯಾವ ರೀತಿ ನಮ್ಮ ಹೆಜ್ಜೆ ಇರಬೇಕು. ಉತ್ತರ ಪ್ರದೇಶ, ಉತ್ತರಾಖಂಡ ಸೇರಿದಂತೆ ಇತ್ತೀಚಿಗೆ ಪಂಚರಾಜ್ಯ ಚುನಾವಣೆಯಲ್ಲಿ 4 ರಾಜ್ಯಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಪಕ್ಷ ಯಾವ ತಂತ್ರಗಾರಿಕೆ ಅನುಸರಿಸಿತ್ತು. ಅದನ್ನೇ ಇಲ್ಲೂ ಮುಂದುವರಿಸಬೇಕು. ನಮ್ಮದು ಅಭಿವೃದ್ಧಿಯೊಂದೇ ಮಂತ್ರವಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಜನಪರ ಯೋಜನೆಗಳ ಪ್ರಚಾರ ಕಟ್ಟಕಡೆಯ ಮತದಾರರಿನಿಗೂ ಮುಟ್ಟುವಂತೆ ಮಾಡುವ ಜವಾಬ್ದಾರಿ ಪದಾಧಿಕಾರಿಗಳದ್ದು,. ಪದಾಧಿಕಾರಿಗಳು ತಮಗೆ ಕೊಟ್ಟಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂಬ ಎಚ್ಚರಿಕೆಯನ್ನೂ ಸಭೆಯಲ್ಲಿ ನೀಡಲಾಗಿದೆ ಎಂದು ಹೇಳಲಾಗಿದೆ.
ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ನಾವು ತಲೆ ತಗ್ಗಿಸುವಂತಾಗಿದೆ: ಡಿಕೆಶಿ
ಸಭೆಯಲ್ಲಿ ಸಚಿವರಾದ ವಿ. ಸೋಮಣ್ಣ, ಶಂಕರ ಪಾಟೀಲ ಮುನೇನಕೊಪ್ಪ, ಹಾಲಪ್ಪ ಆಚಾರ, ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಸೇರಿದಂತೆ ಹಲವರಿದ್ದರು.
ಇಂದು ಹಾವೇರಿ-ಗದಗ ಜಿಲ್ಲೆಗಳ ಸಭೆ
ಮೊದಲ ದಿನ ಧಾರವಾಡ ಗ್ರಾಮಾಂತರ ಹಾಗೂ ಹುಬ್ಬಳ್ಳಿ-ಧಾರವಾಡ(Hubballi-Dharwad) ಮಹಾನಗರ ಜಿಲ್ಲಾ ಘಟಕಗಳ ಕೋರ್ ಕಮಿಟಿ ಹಾಗೂ ಪದಾಧಿಕಾರಿಗಳ ಸಭೆ ನಡೆದಿದೆ. ಇನ್ನೂ ಮಂಗಳವಾರ (ಏ.26) ಹಾವೇರಿ ಹಾಗೂ ಗದಗ ಜಿಲ್ಲೆಗಳ ಸಭೆ ನಡೆಯಲಿದೆ.
ಪಕ್ಷದ ಸಂಘಟನಾತ್ಮಕವಾಗಿ ಸಭೆ ಕರೆಯಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳ ಪ್ಲಸ್, ಮೈನಸ್‌ಗಳ ಬಗ್ಗೆ ಚರ್ಚೆ ನಡೆಯಲಿದೆ. ಮಂಗಳವಾರವೂ ಸಭೆ ಮುಂದುವರಿಯಲಿದೆ. ಪಕ್ಷದ ಸಂಘಟನೆಗಾಗಿ ನಡೆಸುತ್ತಿರುವ ಸಭೆ ಇದಾಗಿದೆ. ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ ಅಂತ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.