Karnataka Politics: ಮಗನಿಗೆ ಕಾಂಗ್ರೆಸ್ ಟಿಕೆಟ್, ಅಪ್ಪನಿಗೆ ಪಕ್ಷದ ಜವಾಬ್ದಾರಿಯಿಂದ ಬಿಜೆಪಿ ಕೊಕ್

By Suvarna NewsFirst Published Nov 23, 2021, 7:30 PM IST
Highlights

* ಕರ್ನಾಟಕದಲ್ಲಿ ರಂಗೇರಿದ ವಿಧಾನ ಪರಿಷತ್ ಚುನಾವಣೆ
* ಬಿಜೆಪಿ ನಾಯಕನ ಮಗನಿಗೆ ಕಾಂಗ್ರೆಸ್ ಪರಿಷತ್ ಟಿಕೆಟ್
* ಅಪ್ಪನಿಗೆ ಪಕ್ಷದ ಜವಾಬ್ದಾರಿಯಿಂದ ಬಿಜೆಪಿ ಕೊಕ್

ಬೆಂಗಳೂರು/ಹಾಸನ, (ನ.23): ರಾಜ್ಯದಲ್ಲಿ ಎದುರಾಗಿರುವ ವಿಧಾನಪರಿಷತ್ ಚುನಾವಣೆಗೆ (MLC Elections) ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, ಪರಿಷತ್ ಕಾವು ರಂಗೇರಿದೆ. 

ಅಚ್ಚರಿ ಎನ್ನುವಂತೆ ಕಾಂಗ್ರೆಸ್(Congress), ಬಿಜೆಪಿ(BJP) ನಾಯಕನ ಪುತ್ರನಿಗೆ ಮಣೆ ಹಾಕಿದೆ. ಇದರಿಂದ ಬಿಜೆಪಿ ತಂದೆಗೆ ಪಕ್ಷದ ಜವಾಬ್ದಾರಿಯಿಂದ ಕೊಕ್ ನೀಡಿದೆ.

MLC Election: ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ನಿಂದ ಕುಟುಂಬ ಕಲ್ಯಾಣ

ಹೌದು...ಹಾಸನ ಬಿಜೆಪಿ ನಾಯಕ ಎ.ಮಂಜು(A Manju) ಅವರ ಪುತ್ರನಿಗೆ ಕಾಂಗ್ರೆಸ್ ವಿಧಾನಪರಿಷತ್ ಟಿಕೆಟ್ ನೀಡಿದೆ.  ಅವರ ಪುತ್ರ ಡಾ. ಮಂಥರ್ ಗೌಡಗೆ ಕಾಂಗ್ರೆಸ್ ಬಿಫಾರಂ ನೀಡಿದ್ದು, ಕೊಡಗು ಜಿಲ್ಲೆಯ(Kodagu District) ವಿಧಾನ ಪರಿಷತ್ತಿನ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಥರ್ ಗೌಡ ಇಂದು(ನ.23) ನಾಮಪತ್ರ ಸಲ್ಲಿಸಿದ್ದಾರೆ.

ಪಕ್ಷದ ಜವಾಬ್ದಾರಿಯಿಂದ ಮಂಜುಗೆ ಕೊಕ್
ಯೆಸ್...ಪುತ್ರ ಕೊಡಗು ಕ್ಷೇತ್ರದಲ್ಲಿ ಮಂಥನಗೌಡಗೆ ಕಾಂಗ್ರೆಸ್ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಇತ್ತ ಎ ಮಂಜು‌ ಮೇಲೆ ಸಂಶಯ ವ್ಯಕ್ತಪಡಿಸಿರುವ ಬಿಜೆಪಿ, ವಹಿಸಲಾಗಿದ್ದ ಎಲ್ಲಾ ಜವಾಬ್ದಾರಿಗಳಿಂದ ಬಿಡುಗಡೆಗೊಳಿಸಿದೆ.

ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಅವರು ಈ ಬಗ್ಗೆ ಆದೇಶ ಹೊಡಿಸಿದ್ದು, ಮಂಡ್ಯ ಉಸ್ತುವಾರಿ ಸೇರಿದಂತೆ ಪಕ್ಷದ ಜವಾಬ್ದಾರಿಯನ್ನು ಮುಕ್ತಗೊಳಿಸಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಸೇರುವ ಸುದ್ದಿ
ಮತ್ತೆ ಕಾಂಗ್ರೆಸ್​ಗೆ ಸೇರ್ಪಡೆಯಾಗಲು ಮನಸು ಮಾಡಲು ಹಲವು ಕಾರಣಗಳು ಇವೆ. ಪ್ರಸ್ತುತ ಹಾಸನ ಜಿಲ್ಲಾ ಬಿಜೆಪಿಯಲ್ಲಿ ಎ ಮಂಜು ಲಿಸ್ಟ್ ಗೆ ಇಲ್ಲ ಎನ್ನುವಂತಾಗಿದೆ. ಇದಕ್ಕೆ ಕಾರಣ ಶಾಸಕ ಪ್ರೀತಂಗೌಡ. ಹಾಸನ ಜಿಲ್ಲಾ ಬಿಜೆಪಿಯಲ್ಲಿ ಹಿಡಿತ ಸಾಧಿಸಿರುವ ಶಾಸಕ ಪ್ರೀತಂಗೌಡ ರಾಜಕೀಯ ಹೊಡೆತಕ್ಕೆ ಎ ಮಂಜು ತತ್ತರಿಸಿದ್ದಾರೆ. ಇತ್ತ ರಾಜ್ಯ ಬಿಜೆಪಿ ನಾಯಕರು ಎ ಮಂಜುಗೆ ಕ್ಯಾರೇ ಎನ್ನುತ್ತಿಲ್ಲ. ಪ್ರಜ್ವಲ್ ರೇವಣ್ಣ ಎದುರು ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋತ ಮೇಲೆ ಮಂಜು ರಾಜಕೀಯವಾಗಿ ಕಳೆದು ಹೋಗುತ್ತಿದ್ದಾರೆ. ಹೀಗಾಗಿ 2023ರ ವಿಧಾನಸಭೆ ಚುನಾವಣೆಯದ್ದೆ ಎ ಮಂಜುಗೆ ಚಿಂತನೆ ನಡೆಸಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು.

ಕಾಂಗ್ರೆಸ್ ಸೇರುವ ವಿಚಾರವನ್ನು ನಿರಾಕರಿಸಿದ್ದ ಮಂಜು
ಸ್ವಾಭಾವಿಕವಾಗಿ ಕಾಂಗ್ರೆಸ್ ಸೇರುವ ವಿಚಾರವನ್ನು ಎ.ಮಂಜು ನಿರಾಕರಿಸಿದ್ದರು. 1999ರಲ್ಲಿ ಬಿಜೆಪಿಯಿಂದ ನಾನು ಶಾಸಕನಾಗಿ ಗೆದ್ದಿದ್ದೇನೆ. ಜಿಲ್ಲೆಯಲ್ಲಿ ಅಂದು ನಾಲ್ಕು ಮಂದಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದರು. ಆ ಸಂದರ್ಭದಲ್ಲಿ ಮೋದಿ, ಅಮಿತ್‌ ಶಾ ಇರಲಿಲ್ಲ. ಇಂದು ಅವರೆಲ್ಲರೂ ಇದ್ದಾರೆ. ಇಂತಹವರ ಸಹಕಾರ ಹಾಗೂ ಕ್ಷೇತ್ರದ ಎಲ್ಲರ ನೆರವಿನೊಂದಿಗೆ ಮುಂದೆ ಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ವೇಳೆ ಕ್ಷೇತ್ರದಲ್ಲಿಇದ್ದು, ಹೆಚ್ಚು ಮಂದಿ ಗೆಲ್ಲಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವ ಭರವಸೆಯನ್ನು ಹೊಂದಿದ್ದೇನೆ ಎಂದು ಹೇಳಿದ್ದರು.

ನಾನು ಕಾಂಗ್ರೆಸ್‌ ಪಕ್ಷ ಸೇರುವ ವದಂತಿಯನ್ನು ನನ್ನ ವಿರೋಧಿಗಳು ಮಾಧ್ಯಮಗಳಿಗೆ ಹರಿಬಿಡುತ್ತಿದ್ದಾರೆ. ನಾನು ಕ್ಷೇತ್ರದ ಜನರ ವಿಶ್ವಾಸ ಪಡೆದು ಹಂತಹಂತವಾಗಿ ರಾಜಕೀಯವಾಗಿ ಮೇಲೆ ಬಂದಿದ್ದೇನೆ. ಜಿಲ್ಲೆಯ ರಾಜಕಾರಣದಲ್ಲಿಅರಕಲಗೂಡು ಕ್ಷೇತ್ರ ತುಂಬಾ ವಿಭಿನ್ನವಾಗಿದೆ. ಇಲ್ಲಿನ ಮತದಾರರ ನಿರ್ಧಾರವನ್ನು ಯಾರೂ ಅರಿಯಲು ಸಾಧ್ಯವಿಲ್ಲ. ಇದನ್ನು ಬಲವಾಗಿ ನಂಬಿರುವ ನನಗೆ ಕ್ಷೇತ್ರದ ಎಲ್ಲಾ ಮತದಾರರು ಮುಂದಿನ ಚುನಾವಣೆಯಲ್ಲಿ ಸಹಕಾರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಕೊಕೆ ಕೊಟ್ಟ ಮೇಲೆ ಕೈ ಹಿಡಿಯುತ್ತಾರಾ?
ಯೆಸ್...ಈ ಮೊದಲು ಬಿಜೆಪಿ ಬಿಟ್ಟು ವಾಪಸ್ ಕಾಂಗ್ರೆಸ್‌ಗೆ ಬರುತ್ತಾರೆ ಎನ್ನುವ ಸುದ್ದಿಯನ್ನು ಮಂಜು ನಿರಾಕರಿಸಿದ್ದರು. ಇದೀಗ ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಿಗೊಳಿಸಿರುವುದರಿಂದ ಈಗ ಬಿಜೆಪಿ ಬಿಡುತ್ತಾರಾ?  ಎನ್ನುವ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ನಂಬಿಕೆ ಇಲ್ಲದೇ ಎಲ್ಲಾ ಕಿತ್ತುಕೊಂಡ ಮೇಲೆ ಇಲ್ಲಿ ಏಕೆ ಇರಬೇಕು? ಬೆಲೆ ಇಲ್ಲ ಎಂದು ಬಿಜೆಪಿಯಿಂದ ಆಚೆ ಬರಹುದು. ಇಲ್ಲ ಮುಂಬರುವ ವಿಧಾನಸಭಾ ಚುನಾವಣೆ ವರೆಗೂ ಕಾದು ನೋಡುವ ತಂತ್ರ ಅನುಸರಿಸಬಹುದು. 

click me!