ಲೋಕಸಭೆ ಚುನಾವಣೆ ಫಲಿತಾಂಶ ಬಳಿಕ ಕಾಂಗ್ರೆಸ್ ನಲ್ಲಿನ ಅಸಮಾಧಾನದ ಬಗ್ಗೆ ಎಲ್ಲರಿಗೂ ಗೊತ್ತಾಗುತ್ತದೆ. ಆ ಕಾಲ ಬಹಳ ಹತ್ತಿರ ಬಂದಿದೆ. ನಮ್ಮ ಪಕ್ಷದಲ್ಲಿ ಒಂದಷ್ಟು ಅಸಮಾಧಾನ ಇರುವುದು ಸತ್ಯ. ಅದನ್ನು ಬಗೆಹರಿಸಿಕೊಳ್ಳುತ್ತೇವೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
ಮೈಸೂರು(ನ.21): ಬಿಜೆಪಿ ಪರಿಸ್ಥಿತಿ ಮಾತಿರಲಿ. ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಪರಿಸ್ಥಿತಿ ಏನಾಗುತ್ತದೆ ಎಂಬುದು ಗೊತ್ತಾಗುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪರಿಸ್ಥಿತಿ ಏನಾಗುತ್ತದೆ ಕಾದುನೋಡಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಲೋಕಸಭೆ ಚುನಾವಣೆ ಫಲಿತಾಂಶ ಬಳಿಕ ಕಾಂಗ್ರೆಸ್ ನಲ್ಲಿನ ಅಸಮಾಧಾನದ ಬಗ್ಗೆ ಎಲ್ಲರಿಗೂ ಗೊತ್ತಾಗುತ್ತದೆ. ಆ ಕಾಲ ಬಹಳ ಹತ್ತಿರ ಬಂದಿದೆ. ನಮ್ಮ ಪಕ್ಷದಲ್ಲಿ ಒಂದಷ್ಟು ಅಸಮಾಧಾನ ಇರುವುದು ಸತ್ಯ. ಅದನ್ನು ಬಗೆಹರಿಸಿಕೊಳ್ಳುತ್ತೇವೆ ಎಂದರು.
ಬಿಜೆಪಿಯಲ್ಲಿ ದೊಡ್ಡ ಮಟ್ಟದ ಅಸಮಾಧಾನ ಇಲ್ಲ. ಸಣ್ಣಪುಟ್ಟ ಅಸಮಾಧಾನ ಸಹಜ. ಬಸವವನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ್ ಬೆಲ್ಲದ್ ಅವರು ಕೂಡ ತಮ್ಮ ಅಭಿಪ್ರಾಯ ತಿಳಿಸಿದ ನಂತರವಷ್ಟೇ ಬಿಜೆಪಿ ಸಭೆಯಿಂದ ಹೊರ ನಡೆದಿದ್ದಾರೆ. ಅವರೆಲ್ಲರೂ ನಮ್ಮ ಪಕ್ಷದ ಹಿರಿಯ ನಾಯಕರು. ಅವರನ್ನು ಶೀಘ್ರದಲ್ಲೇ ಭೇಟಿಯಾಗಿ ಮಾತುಕತೆ ನಡೆಸುತ್ತೇನೆ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಮತ್ತೆ ಬಿಜೆಪಿಗೆ ಕರೆ ತರಲು ಪ್ರಯತ್ನಿಸುತ್ತೇನೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಕೆಲಸವನ್ನು ರಾಜ್ಯಾಧ್ಯಕ್ಷನಾಗಿ ನಾನು ಮಾಡುತ್ತೇನೆ. ಹಿರಿಯ ನಾಯಕರನ್ನು ಭೇಟಿ ಮಾಡುವುದು ನನ್ನ ಜವಾಬ್ದಾರಿ. ಶೀಘ್ರದಲ್ಲೇ ಹೋಗಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ ಎಂದರು.
undefined
ಸಮಯ ಬಂದ್ರೆ ದತ್ತಮಾಲೆ ಹಾಕುತ್ತೇನೆ; ಎಚ್‌ಡಿಕೆ ಹೇಳಿಕೆಗೆ ಬಜರಂಗದಳ ವಿಶ್ವಹಿಂದು ಪರಿಷತ್ ಸ್ವಾಗತ!
ಕೇಂದ್ರದ ವರಿಷ್ಠರು ಅತ್ಯಂತ ಮಹತ್ವದ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯನ್ನು ನನಗೆ ನೀಡಿದ್ದಾರೆ. ಈ ಹುದ್ದೆಯ ಮಹತ್ವವನ್ನು ಅರಿತುಕೊಂಡು ಪಕ್ಷದ ಹಿರಿಯ ನಾಯಕರು ಹಾಗೂ ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷದ ಬಲವರ್ಧನೆಗೆ ಶ್ರಮಿಸುತ್ತೇನೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28ಕ್ಕೆ 28 ಕ್ಷೇತ್ರವನ್ನು ಗೆಲ್ಲುವುದು ನಮ್ಮ ಮೊದಲ ಗುರಿ ಎಂದು ಅವರು ಹೇಳಿದರು.
ದಕ್ಷಿಣ ಭಾರತದಲ್ಲಿ ಬಿಜೆಪಿ ಭದ್ರಕೋಟೆಯಾಗಿರುವ ಕರ್ನಾಟಕದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವುದು ಎರಡನೇ ಗುರಿ. ಲೋಕಸಭೆ, ವಿಧಾನಸಭೆ ಚುನಾವಣೆಗೆ ನೀಡುವ ಮಹತ್ವವನ್ನು ಜಿಪಂ ಮತ್ತು ತಾಪಂ ಚುನಾವಣೆಗೂ ನೀಡುತ್ತೇವೆ ಎಂದು ಅವರು ತಿಳಿಸಿದರು.
ನಾನು ಈಗ ಶಿಕಾರಿಪುರ ಕ್ಷೇತ್ರದ ಶಾಸಕ. ಆದರೆ ನನ್ನನ್ನು ರಾಜಕೀಯವಾಗಿ ಗುರುತಿಸಿದ್ದು, ವರುಣ ಕ್ಷೇತ್ರ. ನನಗೆ ರಾಜಕೀಯ ಅಡಿಪಾಯ ಹಾಕಿಕೊಟ್ಟಿದ್ದು ವರುಣ ಕ್ಷೇತ್ರ. ಮೈಸೂರು, ಚಾಮರಾಜನಗರ ಜಿಲ್ಲೆಯ ಜನರ ಆಶೀರ್ವಾದ ನನ್ನ ಮೇಲಿದೆ. ಮುಂಬರುವ ದಿನಗಳಲ್ಲಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲಗೊಳಿಸಲು ಹೆಚ್ಚು ಆದ್ಯತೆ ನೀಡುವುದಾಗಿ ಅವರು ಹೇಳಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ನೀಡುತ್ತಿದ್ದ 4 ಸಾವಿರ ಅನುದಾನವನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದನಂತರ ಕಡಿತಗೊಳಿಸಲಾಗಿದೆ. ಇದು ರೈತ ವಿರೋಧಿ ನೀತಿ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಕುಂಠಿತವಾಗಿವೆ. ರೈತರ ಪ್ರತಿಭಟನೆ ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯನವರ ಸ್ವಂತ ಜಿಲ್ಲೆಯಲ್ಲೇ ರೈತರ ಪ್ರತಿಭಟನೆ ಹತ್ತಿಕ್ಕುವ ಕೆಲಸ ನಡೆದಿದೆ ಎಂದು ಅವರು ಟೀಕಿಸಿದರು.
ತೆಲಂಗಾಣ ಚುನಾವಣೆ ಪ್ರಚಾರದ ವೇಳೆ ಸಚಿವ ಜಮೀರ್ ಅಹಮದ್ ಖಾನ್ ಸ್ಪೀಕರ್ ಸ್ಥಾನಕ್ಕೆ ಅವಮಾನ ಆಗುವಂತೆ ಹೇಳಿಕೆ ನೀಡಿದ್ದಾರೆ. ಸ್ಪೀಕರ್ ಸ್ಥಾನದ ಬಗ್ಗೆ ಬೇಜವಾಬ್ದಾರಿಯುತ ಹೇಳಿಕೆಯನ್ನು ಸಚಿವ ಜಮೀರ್ ಅಹಮದ್ ಖಾನ್ ನೀಡಿದ್ದಾರೆ. ಇದೇ ರೀತಿ ಸಚಿವ ಪ್ರಿಯಾಂಕ್ ಖರ್ಗೆ ಕೂಡ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅಧಿಕಾರದ ಅಮಲಿನಲ್ಲಿ ತೇಲಾಡುತ್ತಾ ಏನು ಮಾಡಿದರೂ ನಡೆಯುತ್ತದೆ ಎಂದು ಸಚಿವರು ಅಂದುಕೊಂಡಿದ್ದಾರೆ ಎಂದು ಅವರು ದೂರಿದರು.
ಸಚಿವರಾದ ಜಮೀರ್ ಅಹಮದ್ ಖಾನ್ ಹಾಗೂ ಪ್ರಿಯಾಂಕ್ ಖರ್ಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರು ರಾಜೀನಾಮೆ ನೀಡದಿದ್ದರೇ ಮುಖ್ಯಮಂತ್ರಿಗಳೇ ಅವರಿಬ್ಬರ ರಾಜೀನಾಮೆ ಪಡೆಯುವ ಕೆಲಸ ಮಾಡಬೇಕು. ಇವರಂತೆ ಬೇರೆಯವರು ಹೇಳಿಕೆ ನೀಡಿದ್ದರೆ ಮುಖ್ಯಮಂತ್ರಿಗಳು ಸುಮ್ಮನಾಗುತ್ತಿದ್ದರೇ ಎಂದು ವಿಜಯೇಂದ್ರ ಪ್ರಶ್ನಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ಗೂಂಡಾಗಿರಿ ಜೋರಾಗಿದೆ. ರಾಜಕೀಯ ಪುಡಾರಿಗಳನ್ನು ಮುಂದೆ ಬಿಟ್ಟು ನಮ್ಮ ಮುಖಂಡ ಮಣಿಕಂಠ ರಾಠೋಡ್ ಮೇಲೆ ಹಲ್ಲೆ ಮಾಡಿಸಿದ್ದಾರೆ. ಸಿಎಂ ಕೂಡಲೇ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಬೇಕು ಎಂದು ಅವರು ಆಗ್ರಹಿಸಿದರು.
ಬರಗಾಲ ಸಂಬಂಧ ಒಬ್ಬರೇ ಒಬ್ಬ ಸಚಿವರು ಪ್ರವಾಸ, ಸಭೆ ಮಾಡಿಲ್ಲ. ರೈತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ಮಧ್ಯಂತರ ಪರಿಹಾರ, ಬೆಳೆವಿಮೆಯ ಕುರಿತು ಚರ್ಚಿಸಿಲ್ಲ. ಮೇವು ಸಂಗ್ರಹಿಸಿಲ್ಲ. ವಿದ್ಯುತ್ ಕೊರತೆ ಮಿತಿಮೀರಿದೆ ಎಂದರು. ಹಿಂದೆ ಗರಿಷ್ಠ ಸಂಕಷ್ಟಗಳಿದ್ದರೂ ಯಡಿಯೂರಪ್ಪ ಅವರ ಸರ್ಕಾರ 7 ಗಂಟೆ ವಿದ್ಯುತ್ ಅನ್ನು ರೈತರಿಗೆ ಕೊಟ್ಟಿತ್ತು ಎಂದು ನೆನಪಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಸಂಸದ ಪ್ರತಾಪಸಿಂಹ, ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ನಗರ ಬಿಜೆಪಿ ಅಧ್ಯಕ್ಷ ಮತ್ತು ಶಾಸಕ ಟಿ.ಎಸ್. ಶ್ರೀವತ್ಸ, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಮಾಜಿ ಸಚಿವರಾದ ಎಂ,. ಶಿವಣ್ಣ, ಸಿ.ಎಚ್. ವಿಜಯಶಂಕರ್, ಎನ್. ಮಹೇಶ್, ಮಾಜಿ ಶಾಸಕರಾದ ನಾಗೇಂದ್ರ, ಎಸ್. ಬಾಲರಾಜ್, ಬಿ. ಹರ್ಷವರ್ಧನ್, ಸಿ.ಎಸ್. ನಿರಂಜನ್ ಕುಮಾರ್ ಇದ್ದರು.
ಸರ್ಕಾರದ ಬಗ್ಗೆ ಜನರಿಗೆ ಅಸಮಾಧಾನ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾಗಿದೆ. ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಜನರಿಗೆ ಭ್ರಮ ನಿರಸನವಾಗಿದೆ. ಶಾಸಕರು ಮತ್ತು ಸಚಿವರ ನಡುವೆ ಸಮನ್ವಯದ ಕೊರತೆ ಕಾಡುತ್ತಿದೆ. ಪರಸ್ಪರ ಕಾಲೆಳೆಯುವುದರಲ್ಲಿ ನಿರತರಾಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದನ್ನೇ ಡಿ.ಕೆ. ಶಿವಕುಮಾರ್ ಗುರಿಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಹಾಗಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಜನವಿರೋಧಿ ಸರ್ಕಾರ. ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ದಿನ ಬೆಳಗಾದರೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಅವರು ದೂರಿದರು.
ಹೆಚ್ಚಿದ ಜನಾಕ್ರೋಶ
136 ಶಾಸಕರೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಆದರೆ, ಅವರು ಜನರ ಆಸೆಯನ್ನು ನಿರಾಸೆಗೊಳಿಸಿದ್ದಾರೆ. ರಾಜ್ಯದಲ್ಲಿ ಜನಾಕ್ರೋಶ ಹೆಚ್ಚಾಗಿದೆ. ಚುನಾವಣೆಗೆ ಮೊದಲು ಜೋಡೆತ್ತುಗಳಂತಿದ್ದ ಸಿದ್ದರಾಮಯ್ಯ- ಡಿ.ಕೆ. ಶಿವಕುಮಾರ್ ಅವರ ವಿಚಾರ ಜನರ ನಡುವೆ ಚರ್ಚೆಗೆ ಗ್ರಾಸವಾಗಿದೆ. ಸಿಎಂ ಕುರ್ಚಿ ಸಂಬಂಧ ಡಿ.ಕೆ. ಶಿವಕುಮಾರ್ ಕಾತರದಿಂದ ಕಾಯುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಅಧಿಕಾರ ಕಡಿಮೆ ಮಾಡಲು ಎಷ್ಟು ಡಿಸಿಎಂ ಹುದ್ದೆ ಸೃಷ್ಟಿಸಬಹುದೆಂದು ರಾಜಕೀಯ ಹುನ್ನಾರ ನಡೆದಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಕಳೆದ 6 ತಿಂಗಳಲ್ಲಿ ಕಾಂಗ್ರೆಸಿಗರು ಮಾಡಿದ್ದೇನು? ಹೊಸ ಯೋಜನೆಗಳೇನು? ನಿಮ್ಮ ಪಕ್ಷದ ಶಾಸಕರು ಕೂಡ ತಲೆ ಎತ್ತಿಕೊಂಡು ಕ್ಷೇತ್ರದಲ್ಲಿ ಓಡಾಡಲಾಗದ ಪರಿಸ್ಥಿತಿ ನಿರ್ಮಿಸಿದ್ದೀರಿ. ಭೀಕರ ಬರಗಾಲ ಇದ್ದರೂ, ಕೆಲಸ ಮಾಡದೆ ದಿನನಿತ್ಯ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಸಾಧನೆಯನ್ನಷ್ಟೇ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಅವರು ಟೀಕಿಸಿದರು.
ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ ಇಬ್ಬರು ನಾಯಕರ ಭೇಟಿ
ಸಿಎಂ ಸಂದೇಶವೇನು?
ಸಿಎಂ ಜನತೆಗೆ ಯಾವ ಸಂದೇಶ ನೀಡುತ್ತಿದ್ದಾರೆ? ಕೋಲಿ ಸಮಾಜದ ಯುವಕ ಆತ್ಮಹತ್ಯೆ ಮಾಡಿಕೊಂಡಾಗ ಎಫ್ಐಆರ್ ಮಾಡಲು ಮೀನಮೇಷ ಎಣಿಸುತ್ತಾರೆ. ಎಫ್ಐಆರ್ ನಲ್ಲಿ ಬೇನಾಮಿ ಹೆಸರುಗಳನ್ನು ಸೇರಿಸಿದ್ದಾರೆ ಎಂದು ಆಕ್ಷೇಪಿಸಿದರು. ಒಟ್ಟಾರೆಯಾಗಿ ರೈತರ ವಿಚಾರದಲ್ಲಿ ರಾಜ್ಯ ಸರ್ಕಾರದ ನಡವಳಿಕೆ, ದಲಿತ ವಿರೋಧಿ ಕಾರ್ಯವೈಖರಿ ಖಂಡನೀಯ ಎಂದು ಅವರು ಟೀಕಿಸಿದರು.
ಕಾಂಗ್ರೆಸ್ ಬಗ್ಗೆ ಜನರಿಗೆ ನಿರಾಶೆ ಉಂಟಾಗಿದೆ. ಇದಕ್ಕೆ ಪರ್ಯಾಯ ಎಂದರೆ ಬಿಜೆಪಿ ಮಾತ್ರ ಎಂಬುದು ಗೊತ್ತಾಗಿದೆ. ಬಿಜೆಪಿ ಮಾತ್ರ ಬಡಜನತೆ ಮತ್ತು ರೈತರ ಪರವಾಗಿ ಕೆಲಸ ಮಾಡಲು ಸಾಧ್ಯ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಈ ದೇಶದ ಭವಿಷ್ಯದ ದೃಷ್ಟಿಯಿಂದ ಮತ್ತೊಮ್ಮೆ ಮೋದಿ ಅವರಿಗೆ ಸಂಪೂರ್ಣ ಬೆಂಬಲ ಕೊಡಬೇಕು. ರಾಜ್ಯದಲ್ಲಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲುವಂತೆ ಶ್ರಮಿಸಬೇಕು ಎಂದು ಅವರು ಹೇಳಿದರು. ಯಾವುದೇ ಚುನಾವಣೆ ಬಂದರೂ ಬಿಜೆಪಿಗೆ ಕರ್ನಾಟಕವು ಸುಭದ್ರ ಕೋಟೆ ಆಗುವಂತೆ ನೋಡಿಕೊಳ್ಳಲಾಗುವುದು. ಅದು ನಮ್ಮ ಕಾರ್ಯಕರ್ತರ ಚುನಾವಣೆ. ಅದನ್ನೂ ಈಗಿನಿಂದಲೇ ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಅವರು ಹೇಳಿದರು.