ಚುನಾವಣೆ ಮುಗಿದು ಹೊಸದಾಗಿ ಆಯ್ಕೆ ಆಗಿ ಬಂದ ಮಡಿಕೇರಿ ಶಾಸಕ ಮಂತರ್ ಗೌಡ ಅವರು ಅನುಮೋದನೆ ಸಿಕ್ಕಿರುವ ಕಾಮಗಾರಿಗಳನ್ನು ಬದಲಾಯಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ದಾಖಲೆ ಸಹಿತ ಆರೋಪಿಸಿದ ಅಪ್ಪಚ್ಚು ರಂಜನ್
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ ಕೊಡಗು
ಕೊಡಗು(ನ.21): ರಾಜಕೀಯ ಅಂದರೆ ಆರೋಪ, ಪ್ರತ್ಯಾರೋಪ ಇವೆಲ್ಲಾ ಇದ್ದಿದ್ದೇ ಬಿಡಿ. ಆದರೆ ಅಭಿವೃದ್ಧಿ ಕೆಲಸಗಳಲ್ಲೂ ರಾಜಕೀಯ ಮಾಡಿದ್ರೆ ಜನರ ಅಭಿವೃದ್ಧಿ ಆಗುವುದಾದರೂ ಹೇಗೆ ಹೇಳಿ. ಅಂತಹದ್ದೊಂದು ಅಸಹ್ಯ ರಾಜಕೀಯ ಕೊಡಗಿನಲ್ಲಿ ಶುರುವಾಗಿದೆ ಎಂದು ಮಾಜಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
undefined
ಕೊಡಗು ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ಸಾಕಷ್ಟು ಮಳೆ ಸುರಿಯುತ್ತಿರುವುದು ಗೊತ್ತೇ ಇದೆ. ಅಷ್ಟೊಂದು ಮಳೆ ಸುರಿಯುವುದರಿಂದಲೇ ಕೊಡಗು ಜಿಲ್ಲೆಗೆ ಮಳೆಹಾನಿಯಿಂದಾದವುಗಳ ಕೆಲಸಗಳ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನವೂ ಬಿಡುಗಡೆಯಾಗುತ್ತದೆ. ಹಿಂದಿನ ಬಿಜೆಪಿ ಸರ್ಕಾರದಿಂದಲೂ ಜಿಲ್ಲೆಗೆ 14 ಕೋಟಿ ಬಿಡುಗಡೆಯಾಗಿತ್ತು. ಈ ಅನುದಾನ ಬಳಸಿ ಮಡಿಕೇರಿ ಮತ್ತು ವಿರಾಜಪೇಟೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಏಳು ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಸರ್ಕಾರದಿಂದ ಅನುಮೋದನೆಯೂ ಸಿಕ್ಕಿತ್ತು. ಹೀಗಾಗಿ ಕಳೆದ ವಿಧಾನಸಭಾ ಚುನಾವಣೆಗೂ ಮುನ್ನವೇ ಅಂದಿನ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಭೂಮಿ ಪೂಜೆಯನ್ನು ನೆರವೇರಿಸಿದ್ದರು.
ಅಧಿಕಾರಿಗಳ ನಿರ್ಲಕ್ಷ್ಯ..ಅರ್ಧಕ್ಕೆ ನಿಂತ ಮನೆ ಕಾಮಗಾರಿ: ಗುಡಿಸಲುಗಳಲ್ಲೇ ದಿನದೂಡುತ್ತಿರುವ ಆದಿವಾಸಿ ಕುಟುಂಬ
ಚುನಾವಣೆ ಮುಗಿದು ಹೊಸದಾಗಿ ಆಯ್ಕೆ ಆಗಿ ಬಂದ ಮಡಿಕೇರಿ ಶಾಸಕ ಮಂತರ್ ಗೌಡ ಅವರು ಅನುಮೋದನೆ ಸಿಕ್ಕಿರುವ ಕಾಮಗಾರಿಗಳನ್ನು ಬದಲಾಯಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ದಾಖಲೆ ಸಹಿತ ಅಪ್ಪಚ್ಚು ರಂಜನ್ ಆರೋಪಿಸಿದ್ದಾರೆ. ಸೋಮವಾರಪೇಟೆ, ಕುಶಾಲನಗರ ಮತ್ತು ಮಡಿಕೇರಿ ಸೇರಿದಂತೆ ನಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗರ್ವಾಲೆ, ಮಾದಾಪುರ ಆಲೂರುಸಿದ್ದಾಪುರ, ಹಂಡ್ಲಿ ಸೇರಿದಂತೆ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳನ್ನು ಆರಂಭಿಸಲಾಗಿತ್ತು. ಕುಶಾಲನಗರ ವ್ಯಾಪ್ತಿಯಲ್ಲಿ ಪ್ರವಾಹ ತಪ್ಪಿಸಲು ಕಾವೇರಿ ನದಿಗೆ ತಡೆಗೋಡೆ ನಿರ್ಮಾಣಕ್ಕೂ ಚಾಲನೆ ನೀಡಲಾಗಿತ್ತು. ಆದರೆ ಹೊಸದಾಗಿ ಆಯ್ಕೆಯಾಗಿ ಬಂದ ಶಾಸಕರು ಅದೇ ಅನುದಾನ ಬಳಸಿ ಬೇರೆ ಕಾಮಗಾರಿಗಳನ್ನು ಮಾಡಲು ಅನುಮೋದಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹೀಗೆ ಆದರೆ ನಾವು ಕಾನೂನು ಹೋರಾಟ ನಡೆಸಬೇಕಾಗುತ್ತದೆ. ಜೊತೆಗೆ ಪ್ರತೀ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಾಸಕರ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ಶಾಸಕ ಮಂತರ್ ಗೌಡ ಅವರು ಮುಖ್ಯಮಂತ್ರಿಯವರ ಪರಿಹಾರ ನಿಧಿ ಪ್ರಕೃತಿ ವಿಕೋಪ ನಿಧಿಯಡಿ ಉಲ್ಲೇಖಿಸಿದ ಅನುಮೋದನೆಗೊಂಡ ಕಾಮಗಾರಿಗಳನ್ನು ಪರಿಷ್ಕರಿಸಿ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಕೋರಿ ಅಕ್ಟೋಬರ್ 26 ರಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹಿಂದೆ ಯಾವೆಲ್ಲಾ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿತ್ತೋ ಅವುಗಳನ್ನು ಬದಲಾಯಿಸಿ ಅದೇ ಅನುದಾನ ಬಳಸಿ ಬೇರೆ ಕಾಮಗಾರಿ ಮಾಡಲು ಪತ್ರ ಬರೆದಿದ್ದಾರೆ. ಹೀಗಾಗಿ ಕೊಡಗಿನ ಇಬ್ಬರು ಮಾಜಿ ಶಾಸಕರು ಹಾಲಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಡಗು: ಕಾಫಿ ಎಸ್ಟೇಟ್‌ಗಳಲ್ಲಿ ಧೂಳೆಬ್ಬಿಸಿದ ಕಾರು ರ್‍ಯಾಲಿ..!
ಈ ಕುರಿತು ಮಾಜಿ ಸ್ವೀಕರ್ ವಿರಾಜಪೇಟೆ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರು ಮಾತನಾಡಿ, ನಮ್ಮ ಸರ್ಕಾರದ ಸಂದರ್ಭದಲ್ಲಿ ಅನುದಾನ ಬಿಡುಗಡೆಯಾಗಿ ಕೆಲಸಗಳು ಆರಂಭವಾಗಿದ್ದರೂ ಅಂತಹವುಗಳ ಕಾಮಗಾರಿಯನ್ನು ನಿಲ್ಲಿಸಲಾಗಿದೆ. ಭಾಗಮಂಡಲದಲ್ಲಿ ಹೂಳೆತ್ತುವ ಕೆಲಸಕ್ಕೆ ಚಾಲನೆ ನೀಡಲಾಗಿತ್ತು. ಅದನ್ನೂ ತಡೆಹಿಡಿಯಲಾಗಿದೆ. ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಕೊಡಗು ಅಭಿವೃದ್ಧಿ ನಿಗಮ ಘೋಷಿಸಿ ಅದಕ್ಕಾಗಿ 10 ಕೋಟಿ ಬಿಡುಗಡೆ ಮಾಡಲಾಗಿತ್ತು. ಇದೀಗ ಆ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡುತ್ತಿಲ್ಲ. 2004 ರಲ್ಲಿ ಧರ್ಮಸಿಂಗ್ ಅವರು ಸಿಎಂ ಆಗಿದ್ದಾಗಿನಿಂದ ಇದುವರೆಗೆ ಸಿಎಂ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ಎಷ್ಟು ಅನುದಾನ ನೀಡಿದ್ದಾರೆ ಎಂಬುದನ್ನು ಶ್ವೇತಪತ್ರ ಹೊರಡಿಸಲಿ ಎಂದು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಎರಡುವರೆ ದಶಕಗಳಿಂದ ಬಿಜೆಪಿ ಶಾಸಕರೇ ಇದ್ದರು. ಇದೀಗ ಕಾಂಗ್ರೆಸ್ ಶಾಸಕರು ಆಯ್ಕೆಯಾಗುತ್ತಿದ್ದಂತೆ ಅಭಿವೃದ್ಧಿ ಕೆಲಸಗಳಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿರುವುದು ವಿಪರ್ಯಾಸವೇ ಸರಿ.