ಹಾಸನ (ಜು.10): ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ಪಕ್ಷ ಸಂಘಟನೆಗೆ ಮುಂದಾಗಿರುವ ಬಿಜೆಪಿಯ ಎರಡು ದಿನಗಳ ರಾಜ್ಯ ಪದಾಧಿಕಾರಿಗಳ ಸಭೆ ಶನಿವಾರದಿಂದ ನಗರದಲ್ಲಿ ಆರಂಭವಾಗಿದೆ. ಸಭೆ ಹಿನ್ನೆಲೆಯಲ್ಲಿ ಹಾಸನ ನಗರ ಸಂಪೂರ್ಣವಾಗಿ ಕೇಸರಿಮಯವಾಗಿದ್ದು, ಪ್ರತಿ ಗಲ್ಲಿ, ಬಡಾವಣೆ ಹಾಗೂ ಮುಖ್ಯರಸ್ತೆಗಳಲ್ಲಿ ಕೇಸರಿ ಬಾವುಟ ರಾರಾಜಿಸುತ್ತಿದೆ ಹಾಗೂ ಪಕ್ಷದ ನಾಯಕರನ್ನು ಸ್ವಾಗತಿಸುವ ಬ್ಯಾನರ್‌ಗಳು, ಕಟೌಟ್‌ಗಳು ಎದ್ದು ಕಾಣುತ್ತಿವೆ.
ನಗರದ ಖಾಸಗಿ ಹೋಟೆಲೊಂದರಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿ ಕೆಲ ಮಾಜಿ ಸಚಿವರು, ಸಂಸದರೂ ಪಾಲ್ಗೊಂಡಿದ್ದಾರೆ. ಈ ಸಭೆಯ ಮೂಲಕ ರಾಜ್ಯಾದ್ಯಂತ ಪಕ್ಷದ ಬೇರನ್ನು ಮತ್ತಷ್ಟುಭದ್ರಪಡಿಸುವ ಮತ್ತು ಹಾಸನ ಜಿಲ್ಲೆಯಲ್ಲೂ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವ ಕುರಿತು ವಿಚಾರ-ಮಂಥನ ನಡೆಸಲಾಗುತ್ತಿದೆ. ಜೆಡಿಎಸ್ ಭದ್ರಕೋಟೆಯಾಗಿರುವ ಹಾಸನದಲ್ಲಿ ನಡೆಸುತ್ತಿರುವ ಈ ಶಕ್ತಿಪ್ರದರ್ಶನ ತೀವ್ರ ಕುತೂಹಲ ಮೂಡಿಸಿದೆ.
ಪಕ್ಷ ವಿರೋಧಿ ಚಟುವಟಿಕೆ: ಜೆಡಿಎಸ್‌ನಿಂದ ನಾಲ್ವರ ಉಚ್ಚಾಟನೆ
ಎರಡು ದಿನಗಳ ಹಿಂದೆಯಷ್ಟೇ ಕೇಂದ್ರ ಸಚಿವ ಕ್ರಿಶನ್ ಪಾಲ್ ಅವರು ಹಾಸನಕ್ಕೆ ಭೇಟಿ ನೀಡಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಪಕ್ಷ ಸಂಘಟನೆ ವಿಚಾರವಾಗಿ ಬಿಜೆಪಿ ನಾಯಕರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಹೋಗಿದ್ದರು. ಅದರ ಬೆನ್ನಲ್ಲೇ ಇದೀಗ ಈ ಸಭೆ ನಡೆಯುತ್ತಿದೆ.
ಹಾಸನದಲ್ಲಿ ಕಳೆದ ಚುನಾವಣೆಯಲ್ಲಿ ಒಂದು ಕ್ಷೇತ್ರವನ್ನು ಗೆದ್ದು ಬಿಜೆಪಿ ಅಚ್ಚರಿ ಮೂಡಿಸಿತ್ತು. ಮುಂದಿನ ಚುನಾವಣೆಯಲ್ಲಿ ಜಿಲ್ಲಾ ಜೆಡಿಎಸ್ ನಾಯಕರ ನಡುವಿನ ಒಡಕಿನ ಲಾಭ ಪಡೆದು ಇನ್ನಷ್ಟುಸ್ಥಾನ ಗೆಲ್ಲಲು ಏನೇನು ತಂತ್ರಗಾರಿಕೆ ರೂಪಿಸಬೇಕೆಂಬುದು ಕೂಡ ಈ ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆ ಇದೆ.
ಬಿಜೆಪಿಗೆ 150 ಸೀಟು ಸಿಗುತ್ತೆ ಅಂತ ಸಮೀಕ್ಷೆ ಬಂದಿವೆ: ಕಟೀಲ್
ಶನಿವಾರದ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಸಂಸದ ಪ್ರತಾಪ್ ಸಿಂಹ, ಶಾಸಕ ಪ್ರೀತಮ್ ಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಮಾಜಿ ಸಚಿವ ಲಕ್ಷ್ಮಣ್ ಸವದಿ, ಮಾಲೀಕಯ್ಯ ಗುತ್ತೇದಾರ್ ಸೇರಿ 30ಕ್ಕೂ ಹೆಚ್ಚು ರಾಜ್ಯ ಹಾಗೂ ಕೇಂದ್ರ ನಾಯಕರು, 180 ಮಂದಿ ಪದಾಧಿಕಾರಿಗಳು ಭಾಗವಹಿಸಿದ್ದರು.
ಕಾಂಗ್ರೆಸ್‌ನಿಂದ ಬಿಜೆಪಿ ಸಭೆಗೆ ಮುತ್ತಿಗೆ ಯತ್ನ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್‌ನಿಂದ ಶನಿವಾರ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆಯಿತು. ಈ ವೇಳೆ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದು ವಾಪಸ್ ಕಳುಹಿಸಿದರು.
Lok Sabha election 2024; ‘ಪಸ್ಮಾಂದಾ’ ಮುಸ್ಲಿಮರ ಮೇಲೆ ಬಿಜೆಪಿ ಕಣ್ಣು!
ಇಂಧನ, ಗ್ಯಾಸ್, ಅಡುಗೆ ಎಣ್ಣೆ ಸೇರಿ ಇನ್ನಿತರ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ನಗರದ ಹೇಮಾವತಿ ಪ್ರತಿಮೆ ಬಳಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ನಂತರ ನಂತರ ಬಿ.ಎಂ.ರಸ್ತೆ ಮೂಲಕ ತೆರಳುತ್ತಿದ್ದಾಗ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯುತ್ತಿದ್ದ ಹೋಟೆಲ್‌ಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಕೆಲಕಾಲ ವಾಗ್ವಾದವೂ ನಡೆಯಿತು.