ತಮಿಳುನಾಡು ಮೇಕೆದಾಟು ಕಿರಿಕ್‌ಗೆ ಬಿಜೆಪಿ ಆಕ್ರೋಶ: ವಿಜಯೇಂದ್ರ ಹೇಳಿದ್ದೇನು?

By Kannadaprabha News  |  First Published Mar 22, 2024, 9:13 AM IST

ಮೇಕೆದಾಟು ಯೋಜನೆ ಕುರಿತು ಕಾಂಗ್ರೆಸ್‌ ಮಿತ್ರಪಕ್ಷವಾದ ನೆರೆಯ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡಿರುವ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಬೆಂಗಳೂರು (ಮಾ.22): ಮೇಕೆದಾಟು ಯೋಜನೆ ಕುರಿತು ಕಾಂಗ್ರೆಸ್‌ ಮಿತ್ರಪಕ್ಷವಾದ ನೆರೆಯ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡಿರುವ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ನಿಲುವನ್ನು ತಿಳಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದ್ದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕನ್ನಡಿಗರಾಗಿ ಅವರ ಮೈತ್ರಿಕೂಟದ ಹೆಸರಿನಲ್ಲಿ ಬಿಡುಗಡೆಯಾಗಿರುವ ಪ್ರಣಾಳಿಕೆಯಲ್ಲಿನ ಕರ್ನಾಟಕ ವಿರೋಧಿ ಭರವಸೆಯನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಕಿಡಿಕಾರಿರುವ ವಿಜಯೇಂದ್ರ, ಮೇಕೆದಾಟು ಯೋಜನೆ ವಿಚಾರದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿರುವುದನ್ನು ಗಮನಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಷ್ಟು ದುರ್ಬಲ ಎಂಬುದನ್ನು ಪರಿಪೂರ್ಣವಾಗಿ ಮನಗಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಸ್ಟ್ರಾಂಗ್‌ ಎಂಬುದನ್ನು ಸ್ವಬಣ್ಣನೆ ಮಾಡಿಕೊಳ್ಳುತ್ತಾರೆ. ವಿಪರ್ಯಾಸವೆಂದರೆ ತಮಿಳುನಾಡು ಮುಖ್ಯಮಂತ್ರಿಗಳು ಅವರೆಷ್ಟು ವೀಕ್‌ ಎಂಬುದನ್ನು ಮನಗಂಡಿದ್ದು, ಮೈತ್ರಿಕೂಟ ಗೆದ್ದರೆ ಮೇಕೆದಾಟ ಯೋಜನೆಗೆ ಅವಕಾಶ ನೀಡುವುದಿಲ್ಲ ಎಂದು ಘೋಷಿಸಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.

Tap to resize

Latest Videos

ಕಾಂಗ್ರೆಸ್‌ ಬ್ಯಾಂಕ್‌ ಖಾತೆ ಸ್ಥಗಿತಕ್ಕೆ ಸಿಎಂ ಆಕ್ರೋಶ: ದುಷ್ಟಶಕ್ತಿ ಕೈವಾಡ ಎಂದ ಸಿದ್ದರಾಮಯ್ಯ!

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜತೆಗೂಡಿ ಮೇಕೆದಾಟು ಯೋಜನೆಗೆ ನಡೆಸಿದ ಪಾದಯಾತ್ರೆಗೆ ಕಾಂಗ್ರೆಸ್‌ ವರಿಷ್ಠರು ಕನಿಷ್ಠ ಕಿಮ್ಮತ್ತು ನೀಡಿಲ್ಲ ಎಂಬುದು ಡಿಎಂಕೆ ಪ್ರಣಾಳಿಕೆ ಸಾಕ್ಷಿ ನುಡಿದಿದೆ. ಅವರ ಬೂಟಾಟಿಕೆಯ ಮೇಕೆದಾಟು ಹೋರಾಟ ‘ಮೊಸಳೆ ಕಣ್ಣೀರಿನದು’ ಎಂಬುದು ರಾಜ್ಯದ ಜನತೆಗೆ ಮನವರಿಕೆಯಾಗಿದೆ. ಗೋಕಾಕ್ ಚಳವಳಿ, ಕಾವೇರಿ ಚಳವಳಿಗಳನ್ನು ಈ ಹಿಂದೆಯೂ ಹತ್ತಿಕ್ಕಲು ಯತ್ನಿಸಿರುವ ಕುಖ್ಯಾತಿ ಹೊಂದಿರುವ ಕಾಂಗ್ರೆಸ್ ಕನ್ನಡನಾಡು, ನುಡಿ, ಜನರ ಹಿತಾಸಕ್ತಿಯ ಪರ ಎಂದೂ ನಿಂತಿಲ್ಲ, ನಿಲ್ಲವುದೂ ಇಲ್ಲ ಎಂಬುದು ಇದೀಗ ಸಾಬೀತಾಗಿದೆ ಎಂದು ಕಿಡಿಕಾರಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕನ್ನಡಿಗರಾಗಿ ಅವರ ಮೈತ್ರಿಕೂಟದ ಹೆಸರಿನಲ್ಲಿ ಬಿಡುಗಡೆಯಾಗಿರುವ ಪ್ರಣಾಳಿಕೆಯಲ್ಲಿನ ಕರ್ನಾಟಕ ವಿರೋಧಿ ಭರವಸೆಯನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ? ಕರುನಾಡಿನ ಆರೂವರೆ ಕೋಟಿ ಜನರಿಗೆ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ. ಗುರುವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅಶೋಕ್‌, ಡಿಎಂಕೆ ಪ್ರಣಾಳಿಕೆ ವಿಚಾರದಲ್ಲಿ ಮೈತ್ರಿ ಮುಖ್ಯವೋ ಅಥವಾ ರಾಜ್ಯದ ಹಿತ ಮುಖ್ಯವೋ ಎಂಬುದನ್ನು ಬಹಿರಂಗಪಡಿಸಬೇಕು. ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದರು. ಆದರೆ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಮ್ಮ ಪ್ರಣಾಳಿಕೆಯಲ್ಲಿ ಮೇಕೆದಾಟು ಯೋಜನೆ ಜಾರಿಯಾಗಲು ಬಿಡಲ್ಲ ಎಂದು ಘೋಷಿಸಿದ್ದಾರೆ. 

ಬಿಜೆಪಿ ರೆಬೆಲ್ಸ್‌ ಎಸ್ಟಿಎಸ್‌, ಹೆಬ್ಬಾರ್‌ರಿಂದ ಡಿ.ಕೆ.ಶಿವಕುಮಾರ್‌ ಭೇಟಿ

ಅಂದು ಡಿ.ಕೆ.ಶಿವಕುಮಾರ್ ಮೇಕೆದಾಟುವಿನಲ್ಲಿ ಸ್ನಾನ ಮಾಡಿದ್ದರು. ಆದರೀಗ ಸ್ನಾನಕ್ಕಲ್ಲ, ಮುಖ ತೊಳೆಯಲು ಕೂಡ ನೀರಿಲ್ಲ ಎಂದು ಲೇವಡಿ ಮಾಡಿದರು. ಕಾಂಗ್ರೆಸ್ ನಾಯಕರು ಕೂಡಲೇ 136 ಶಾಸಕರನ್ನು ತಮಿಳುನಾಡಿಗೆ ಕರೆದುಕೊಂಡು ಹೋಗಿ, ಅಲ್ಲಿ ಪ್ರತಿಭಟನೆ ಮಾಡಲಿ. ರಾಜ್ಯದ ಕಾಂಗ್ರೆಸ್ಸಿಗರಿಗೆ ಮೈತ್ರಿ ಮುಖ್ಯವೋ? ಅಥವಾ ರಾಜ್ಯದ ಹಿತ ಮುಖ್ಯವೋ? ಎಂಬುದನ್ನು ಸಾಬೀತುಪಡಿಸಬೇಕು. ಕಾಂಗ್ರೆಸ್‌ಗೆ ಧೈರ್ಯವಿದ್ದರೆ ಡಿಎಂಕೆ ಪ್ರಣಾಳಿಕೆಯಿಂದ ಮೇಕೆದಾಟು ಅಂಶವನ್ನು ತೆಗೆದುಹಾಕಿಸಲು ಪ್ರಯತ್ನ ಮಾಡಬೇಕು. ಅಲ್ಲಿಯವರೆಗೂ ಕೇಂದ್ರ ಸರ್ಕಾರದ ಬಗ್ಗೆ ಆರೋಪ ಮಾಡುವ ನೈತಿಕತೆ ಕಾಂಗ್ರೆಸ್ ನಾಯಕರಿಗಿಲ್ಲ ಎಂದು ಟೀಕಾಪ್ರಹಾರ ನಡೆಸಿದರು. ಸಿದ್ದು ದುರ್ಬಲ ಸಿಎಂ ಎನ್ನುವುದನ್ನು ಮನಗಂಡಿದ್ದಾರೆ.

click me!