
ಬೆಂಗಳೂರು (ಮಾ.22): ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ನಡುವೆ ಬಿಜೆಪಿಯ ಇಬ್ಬರು ರೆಬೆಲ್ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಗುರುವಾರ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈಗಾಗಲೇ ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿದ್ದಾರೆ ಎನ್ನಲಾಗಿರುವ ಇಬ್ಬರೂ ಶಾಸಕರು ಸದಾಶಿವನಗರದ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ಒಂದೇ ಕಾರಿನಲ್ಲಿ ಆಗಮಸಿ ಕೆಲ ಕಾಲ ಚರ್ಚೆ ನಡೆಸಿದ್ದು ಕುತೂಹಲ ಸೃಷ್ಟಿಸಿದೆ. ಕಳೆದ ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಒಬ್ಬರ ಅಡ್ಡಮತದಾನ ಮತ್ತು ಮತ್ತೊಬ್ಬರ ಗೈರು ಹಾಜರಾಗಿದ್ದಕ್ಕೆ ಬಿಜೆಪಿ ಶೋಕಾಸ್ ನೋಟಿಸ್ ಕೂಡ ನೀಡಿತ್ತು.
ಈಗ ಇಬ್ಬರೂ ಶಾಸಕರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಲೇ ಕಾಂಗ್ರೆಸ್ ಸೇರ್ಪಡೆಯಾಗುವುದೇ ಅಥವಾ ಚುನಾವಣೆ ಬಳಿಕ ಸೇರುವುದೇ ಎಂಬ ಬಗ್ಗೆ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ಬರು ಶಾಸಕರು, ತಮ್ಮ ಕ್ಷೇತ್ರದಲ್ಲಿನ ನೀರಿನ ಸಮಸ್ಯೆ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದ್ದಾಗಿ ಹೇಳಿದರು. ಬಿಜೆಪಿ ಪಕ್ಷದ ಅನರ್ಹತೆ ನೋಟಿಸ್ ಕುರಿತ ಪ್ರಶ್ನೆಗೆ ಉತ್ತರಿಸಿದ ಎಸ್.ಟಿ.ಸೋಮಶೇಖರ್, ನನಗೆ ಹಾಗೂ ಶಿವರಾಮ್ ಹೆಬ್ಬಾರ್ ಅವರಿಗೆ ಒಂದು ಪುಟ ನೋಟಿಸ್ ನೀಡಿದ್ದರು. ಅದಕ್ಕೆ ನಾವು 170 ಪುಟಗಳ ಉತ್ತರ ನೀಡಿದ್ದೇವೆ. ಏನು ಮಾಡ್ತಾರೆ ನೋಡೋಣ ಎಂದರು.
ದಾರಿ ತಪ್ಪಿಸುವ ಜಾಹೀರಾತು: ಸುಪ್ರೀಂ ಮುಂದೆ ಬೇಷರತ್ ಕ್ಷಮೆ ಯಾಚಿಸಿದ ಬಾಬಾ ರಾಮ್‌ದೇವ್‌ರ ಪತಂಜಲಿ!
ಡ್ಯಾಂ ನಿರ್ಮಾಣ ಖಚಿತ: ‘ತಮಿಳುನಾಡು ರಾಜ್ಯದಲ್ಲಿ ಅವರು ಏನಾದರೂ ಮಾಡಿಕೊಳ್ಳಲಿ. ನಾನು ಮೇಕೆದಾಟು ಕಟ್ಟಲೆಂದೇ ಜಲಸಂಪನ್ಮೂಲ ಇಲಾಖೆ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ತಮಿಳುನಾಡು ಕೂಡ ಮೇಕೆದಾಟು ಯೋಜನೆಯ ಪರವಾಗಿ ಮಾತನಾಡುವ ಒಳ್ಳೆಯ ಕಾಲ ಬರಲಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇಂಡಿಯಾ ಮೈತ್ರಿಕೂಟದ ಅಂಗಪಕ್ಷವಾಗಿರುವ ತಮಿಳುನಾಡಿನ ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ, ಮೇಕೆದಾಟು ಅಣೆಕಟ್ಟು ಕಟ್ಟಲು ಬಿಡುವುದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್‌ಗೆ ಉಂಟುಮಾಡಿದ್ದ ಮುಜುಗರಕ್ಕೆ ಪ್ರತ್ಯುತ್ತರ ನೀಡಿದ ಅವರು, ‘ಅವರ ರಾಜ್ಯದಲ್ಲಿ ಅವರು ಏನಾದರೂ ಮಾಡಿಕೊಳ್ಳಲಿ. ನಾನು ಮೇಕೆದಾಟು ಕಟ್ಟಲೆಂದೇ ಜಲ ಸಂಪನ್ಮೂಲ ಇಲಾಖೆ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಅವರ ಹೋರಾಟ ಅವರು ಮಾಡಲಿ. ಕಾವೇರಿ ನೀರು ನಿರ್ವಹಣಾ ಸಮಿತಿಗೆ ನೀರಿನ ಸಮಸ್ಯೆಯ ಅರಿವಿದೆ. ಅವರು ನಮಗೆ ನ್ಯಾಯ ಕೊಡಲೇ ಬೇಕು. ಕೋರ್ಟಿನಲ್ಲೂ ನಮಗೆ ನ್ಯಾಯ ಸಿಗುತ್ತದೆ’ ಎಂದು ಹೇಳಿದರು.
ಭಾರತದಲ್ಲೇ ಉಳಿವ ಹಕ್ಕು: ರೋಹಿಂಗ್ಯಾ ನಿರಾಶ್ರಿತರ ಬೇಡಿಕೆ ತಿರಸ್ಕರಿಸಿದ ಕೇಂದ್ರ ಸರ್ಕಾರ
ಮೇಕೆದಾಟು ಯೋಜನೆ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ. ಎರಡೂ ರಾಜ್ಯಗಳಿಗೆ ಉಪಯೋಗವಾಗುತ್ತದೆ. ಇಡೀ ದೇಶದ ಜನರು ಕರ್ನಾಟಕದಲ್ಲಿ ಇದ್ದಾರೆ. ಈ ಯೋಜನೆಯಿಂದ ಇಡೀ ದೇಶದ ಜನರಿಗೆ ಉಪಯೋಗವಾಗುತ್ತದೆ. ನಮ್ಮ ತಮಿಳುನಾಡು ಸಹೋದರರು ಬೆಂಗಳೂರಿನಲ್ಲೂ ಇದ್ದಾರೆ. ಮೇಕೆದಾಟು ಯೋಜನೆಯ ಪರವಾಗಿ ತಮಿಳುನಾಡು ಮಾತನಾಡುವ ಒಳ್ಳೆಯ ಕಾಲ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.