
ಬೆಂಗಳೂರು (ಡಿ.24): ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರಿಗೆ ರಕ್ಷಣೆ ನೀಡುವಂತೆ ಕೋರಿ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕೆಂಬುದು ನಮ್ಮ ಆಗ್ರಹ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ರಾಜ್ಯಪಾಲರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಶಾಸಕ ಸಿ.ಟಿ.ರವಿ ಅವರಿಗೆ ಮಾಡಿದ ಅಪಮಾನದ ಬಗ್ಗೆ ತಿಳಿಸಲಾಗಿದೆ. ಸಿ.ಟಿ.ರವಿ ಅವರಿಗೆ ಮುಸ್ಲಿಂ ಉಗ್ರವಾದಿ ಹಾಗೂ ನಕ್ಸಲರಿಂದ ಬೆದರಿಕೆ ಇದೆ. ಹೀಗಿದ್ದರೂ ಅವರನ್ನು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿರುವುದು ಅನುಮಾನ ತಂದಿದೆ. ಒಬ್ಬ ಪೊಲೀಸ್ ಅಧಿಕಾರಿ ಸುರಕ್ಷತೆ ದೃಷ್ಟಿಯಿಂದ ಅವರನ್ನು ಗದ್ದೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದ್ದಾರೆ. ಅಂದರೆ ಪೊಲೀಸ್ ಠಾಣೆ ಸುರಕ್ಷಿತವಲ್ಲ ಎಂದರ್ಥ. ಪೊಲೀಸ್ ಠಾಣೆ ಸುರಕ್ಷಿತವಲ್ಲ ಎಂದು ಈ ಸರ್ಕಾರ ಜನರಿಗೆ ತಿಳಿಸಿದೆ ಎಂದರು.
ಸಿ.ಟಿ.ರವಿ ಅವರಿಗೆ ಹೀಗಾದರೆ ಇನ್ನು ಸಾರ್ವಜನಿಕರ ಪಾಡೇನು ಎಂಬ ಪ್ರಶ್ನೆ ಮೂಡುತ್ತದೆ. ಇದು ರಾಜ್ಯ ಸರ್ಕಾರಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ. ಅದಕ್ಕಾಗಿ ರಾಜ್ಯಪಾಲರು ಸಂವಿಧಾನವನ್ನು ರಕ್ಷಣೆ ಮಾಡಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ . ಸಿ.ಟಿ.ರವಿ ಎಲ್ಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಶ್ನಿಸುತ್ತಾರೆ. ಸಿಎಂ ಸಿದ್ದರಾಮಯ್ಯ ಸುರಕ್ಷತೆಯ ಕಾರಣ ನೀಡುತ್ತಾರೆ. ಇದು ಬಫೂನ್ ಸರ್ಕಾರವಾಗಿದ್ದು, ಇಷ್ಟು ಕೆಟ್ಟದಾಗಿ ಯಾರೂ ಸರ್ಕಾರ ನಡೆಸಿಲ್ಲ. ಪೊಲೀಸ್ ಆಯುಕ್ತರಿಗೆ ನಿರಂತರವಾಗಿ ಫೋನ್ ಕರೆ ಬರುತ್ತಿತ್ತು. ಇವರಿಗೆ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಕರೆ ಮಾಡುತ್ತಿದ್ದರೇ ಎಂಬುದು ಗೊತ್ತಾಗಬೇಕು. ಇದರ ತನಿಖೆಯನ್ನು ನಿಷ್ಪಕ್ಷಪಾತವಾಗಿ ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಡಿ.ಕೆ. ಸುರೇಶ್ ತಂಗಿ ಎಂದೇಳಿ 14 ಕೆಜಿ ಬಂಗಾರಕ್ಕೆ ಪಂಗನಾಮ ಹಾಕಿದ ಐಶ್ವರ್ಯಾ ಗೌಡ; ನಟ ಧರ್ಮೇಂದ್ರನೂ ಸಾಥ್!
ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಯಾಗಿ ಬದಲಾಗಿದೆ. ಎಲ್ಲ ತನಿಖೆಯನ್ನು ಪೊಲೀಸರೇ ಮಾಡುತ್ತಾರೆ ಎಂದರೆ ಸಿಒಡಿಗೆ ಕೊಟ್ಟರೂ ಮತ್ತೊಬ್ಬರಿಗೆ ಕೊಟ್ಟರೂ ಒಂದೇ. ಪೊಲೀಸರು ಜವಾಬ್ದಾರಿಯಿಂದ ನಡೆದುಕೊಂಡಿಲ್ಲ. ಅದಕ್ಕಾಗಿ ನ್ಯಾಯಾಂಗ ತನಿಖೆಗೆ ಆಗ್ರಹಿಸಲಾಗುತ್ತಿದೆ. ನ್ಯಾಯಾಂಗ ತನಿಖೆಯಲ್ಲಿ ಯಾವುದೇ ತೀರ್ಪು ಬಂದರೂ ಒಪ್ಪಿಕೊಳ್ಳುತ್ತೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.